ಅದಾನಿಗೆ ಮಂಗಳೂರು ವಿಮಾನ ನಿಲ್ದಾಣ ಮಾರಿಲ್ಲ!!
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇನ್ನು ಅದಾನಿ ಏರ್ಪೋರ್ಟ್ ಆಗುತ್ತದೆ ಎನ್ನುವ ರೂಮರ್ಸ್ ಎಲ್ಲಾ ಕಡೆ ಹರಿದಾಡುತ್ತಿದೆ. ಅದಕ್ಕೆ ಸರಿಯಾಗಿ ಹಾಗೆ ಬರೆದ ಬೋರ್ಡ್ ಎಲ್ಲೆಡೆ ಹರಿದಾಡುತ್ತಿದೆ. ಇಲ್ಲಿ ವಿಷಯ ಏನೆಂದರೆ ಮಂಗಳೂರು ವಿಮಾನ ನಿಲ್ದಾಣದ ಹೆಸರು ಅದಾನಿ ಏರ್ಪೋರ್ಟ್ ಎಂದು ಬದಲಾಗಿಲ್ಲ. ಇದನ್ನು ನಾನು ಮೊದಲೇ ಸ್ಪಷ್ಟಪಡಿಸುತ್ತೇನೆ. ಹಾಗಂತ ವಿಮಾನ ನಿಲ್ದಾಣದ ಪ್ರವೇಶದ್ವಾರದಲ್ಲಿಯೇ ಅದಾನಿ ಏರ್ಪೋರ್ಟ್ ಎಂದು ಬರೆಯಲಾಗಿದೆಯಲ್ಲ ಎಂದು ಕೆಲವರು ಕೇಳಬಹುದು.
ಆದರೆ ಅದು ಬದಲಾದ ಮಂಗಳೂರಿನ ವಿಮಾನ ನಿಲ್ದಾಣದ ಹೆಸರಲ್ಲ. ಅವರು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಬರೆದ ಬೋರ್ಡ್ ನಲ್ಲಿಯೇ ಒಂದು ಪಕ್ಕದಲ್ಲಿ ಹಾಗೆ ನಿರ್ವಹಣೆ ಮಾಡುವ ಕಂಪೆನಿಯ ಅಂಗಸಂಸ್ಥೆಯ ಹೆಸರಾಗಿ ಬರೆದಿರಬಹುದು. ಅದರ ಅರ್ಥ ಅವರು ಮಂಗಳೂರು ವಿಮಾನ ನಿಲ್ದಾಣದ ಹೆಸರು ಬದಲಾಯಿಸಿದ್ದಾರೆ ಎಂದರ್ಥವಲ್ಲ. ಇನ್ನು ಇದು ಗೌತಮ್ ಅದಾನಿಯವರಿಗೆ ನರೇಂದ್ರ ಮೋದಿಯವರು ಒಂದು ದಿನ ಬೆಳಿಗ್ಗೆ ಫೋನ್ ಮಾಡಿ ” ಬೆಳಿಗ್ಗೆ ಚಾ ಕುಡಿಯಲು ಬನ್ನಿ, ಹಾಗೆ ಮಂಗಳೂರು ವಿಮಾನ ನಿಲ್ದಾಣ ಕೂಡ ನಿಮಗೆ ಕೊಡುತ್ತೇನೆ, ನೋಡ್ಕೋಳ್ಳಿ” ಎಂದು ಹೇಳಿದ್ದಲ್ಲ.
ಅದಕ್ಕೆ ಸಾಕಷ್ಟು ಪ್ರಕ್ರಿಯೆಗಳಿರುತ್ತವೆ. ವಿಮಾನ ನಿಲ್ದಾಣದ ನಿರ್ವಹಣೆ, ಆಡಳಿತ ಮತ್ತು ಅಭಿವೃದ್ಧಿಯನ್ನು ನೋಡಿಕೊಳ್ಳುವ ಗುತ್ತಿಗೆಯನ್ನು ಮಾತ್ರ ಖಾಸಗಿಯವರಿಗೆ ಕೊಡುವ ಮಾಡುವ ಮೂಲಕ ಕೇಂದ್ರ ಸರಕಾರ ಹೊಸ ಪ್ರಕ್ರಿಯೆಯನ್ನು ಶುರು ಮಾಡಿದೆ. ಹಾಗಂತ ಅದಾನಿಯವರು ಚೀನಾ ಅಥವಾ ಪಾಕಿಸ್ತಾನದವರಲ್ಲ. ಅವರು ಭಾರತದ ಇತರ ಪ್ರತಿಷ್ಟಿತ ಕಂಪೆನಿಗಳೊಂದಿಗೆ ಬಿಡ್ ನಲ್ಲಿ ಭಾಗವಹಿಸಿದ್ದಾರೆ. ಅವರು ಕಡಿಮೆ ಬಿಡ್ ಮಾಡಿದ ಕಾರಣ ಅವರಿಗೆ ಅದು ಸಿಕ್ಕಿದೆ. ಆ ಒಪ್ಪಂದದ ಹೆಸರೇ ಕನ್ಸೇಷನ್ ಅಗ್ರಿಮೆಂಟ್.
ಇದರಿಂದ ಮುಂದಿನ ದಿನಗಳಲ್ಲಿ ಅದಾನಿ ಏರ್ಪೋರ್ಟ್ ನವರು ವಿಮಾನ ನಿಲ್ದಾಣವನ್ನು ಅಭಿವೃದ್ಧಿ ಮಾಡಲಿದ್ದಾರೆ. ಅದರೊಂದಿಗೆ ನಿರ್ವಹಣೆ ಮತ್ತು ಆಡಳಿತ ಕೂಡ ಮಾಡಲಿದ್ದಾರೆ. ಇದೆಲ್ಲವೂ ಶಿಸ್ತುಬದ್ಧವಾಗಿ ನಡೆಯುವುದಾದರೆ ಅದರಲ್ಲಿ ತಪ್ಪೇನಿದೆ. ಹಾಗಂತ ಅದಾನಿಯವರು ಏನೂ ಅಭಿವೃದ್ಧಿ ಮಾಡದೇ ಈಗ ಇರುವುದಕ್ಕಿಂತ ಕನಿಷ್ಟಕ್ಕೆ ವಿಮಾನ ನಿಲ್ದಾಣವನ್ನು ಇಳಿಸಿದರೆ ಆಗ ನಾವು ಈ ಬಗ್ಗೆ ವಿರೋಧ ವ್ಯಕ್ತಪಡಿಸಬಹುದು. ಅದು ಬಿಟ್ಟು ನಾವು ಸರಕಾರದ ಆಡಳಿತ ಇರುವಾಗ ವಿಮಾನ ನಿಲ್ದಾಣದಲ್ಲಿ ಎಷ್ಟೋ ಕಿರಿಕಿರಿ ಅನುಭವಿಸಿರಬಹುದು. ಅದೇ ಖಾಸಗಿಯವರು ನಿರ್ವಹಣೆ ಮಾಡುವಾಗ ಉತ್ತಮ ಸೌಕರ್ಯ ಸಿಗುವ ಸಾಧ್ಯತೆ ಇರುತ್ತದೆ. ಎಲ್ಲಾ ಸಂದರ್ಭಗಳಲ್ಲಿ ಇದು ಸರಿ ಎಂದು ನಾನು ಹೇಳುವುದಿಲ್ಲ. ಈಗ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಸ ಸಂಗ್ರಹ ಮತ್ತು ನಿರ್ವಹಣೆಗೆ ಖಾಸಗಿ ಕಂಪೆನಿ ಆಂಟೋನಿ ವೇಸ್ಟ್ ಮ್ಯಾನೇಜಮೆಂಟ್ ನವರಿಗೆ ಕೊಟ್ಟಿದ್ದಾರೆ. ಆದರೆ ಅದು ವಿಫಲವಾಗಿದೆ. ಇಲ್ಲಿಯೂ ಹೀಗೆ ಆದರೆ ಆಗ ನಾವು ಈ ಬಗ್ಗೆ ವಿರೋಧ ವ್ಯಕ್ತಪಡಿಸಬಹುದು. ಇನ್ನು ನಮಗೆ ಎಲ್ಲಾ ಕಡೆ ಉತ್ತಮ ಸೌಲಭ್ಯ ಸಿಗಬೇಕು ಎಂದರೆ ನಾವು ಸ್ವಲ್ಪ ಖರ್ಚು ಮಾಡಲು ಕೂಡ ರೆಡಿ ಇರಬೇಕು. ಇಲ್ಲಿಯೂ ಹಾಗೆ. ವಿಮಾನದ ಪ್ರಯಾಣಿಕರಿಗೆ ಉತ್ತಮ ಅನುಕೂಲತೆಗಳು ಸಿಗುವಂತಿದ್ದರೆ ಅದಕ್ಕೆ ಸ್ವಲ್ಪ ಹೆಚ್ಚು ನೀಡಲು ತಯಾರಿರಬೇಕಾಗುತ್ತದೆ.
ಇನ್ನು ಹೆಸರಿನ ವಿವಾದ. ತುಳುನಾಡಿನ ಪುಣ್ಯಪುರುಷರಾದ ಕೋಟಿ ಚೆನ್ನಯ್ಯ ಅವರ ಹೆಸರನ್ನು ವಿಮಾನ ನಿಲ್ದಾಣಕ್ಕೆ ಇಡಬೇಕು ಎಂದು ಮಿಥುನ್ ರೈ ಟ್ವೀಟ್ ಮಾಡಿದ್ದಾರೆ. ಒಳ್ಳೆಯ ವಿಷಯ. ಆದರೆ ಇದು ಸಮಸ್ತ ತುಳುನಾಡಿನ ಜನರ ಅನಿಸಿಕೆಯಾಗಿ ಹೊರಹೊಮ್ಮಬೇಕು. ಕೆಲವರು ವೀರರಾಣಿ ಅಬ್ಬಕ್ಕ ಹೆಸರು ಇಡೋಣ ಎಂದು ಹೇಳಿರುವುದು ಉಂಟು. ಇನ್ನು ಕೆಲವರು ಮಂಗಳೂರಿಗೆ ವಿಮಾನ ನಿಲ್ದಾಣ ತಂದವರು ಯು.ಎಸ್ ಮಲ್ಯ ಅವರ ಹೆಸರು ಇಡೋಣ. ಕೆಲವರು ಕಾರ್ನಾಡ್ ಸದಾಶಿವ ರಾವ್ ಇಡೋಣ ಹೀಗೆ ಬೇರೆ ಬೇರೆ ಸಲಹೆಗಳು ಬರಬಹುದು. ಮಂಗಳೂರಿನ ಲೇಡಿಹಿಲ್ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರು ಇಡುವಾಗ ಕೆಲವರು ಅಷ್ಟು ಚಿಕ್ಕ ವೃತ್ತಕ್ಕೆ ಇಡುವ ಬದಲು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ಇಟ್ಟರೆ ಉತ್ತಮ. ಕೇರಳದ ಪ್ರಯಾಣಿಕರು ಅಲ್ಲಿ ಬರುವುದರಿಂದ ನಾರಾಯಣ ಗುರುಗಳ ಹೆಸರು ಚಿಕ್ಕ ವೃತ್ತಕ್ಕೆ ಬೇಡಾ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ನಾರಾಯಣ ಗುರುಗಳ ಹೆಸರನ್ನು ನೆಹರೂ ಮೈದಾನಕ್ಕೆ ಇಡೋಣ ಎಂದದ್ದು ಇದೆ. ಹಾಗೆ ಕೋಟಿ ಚೆನ್ನಯ್ಯನವರ ಹೆಸರು ಯಾವುದಕ್ಕೆ ಇಡೋಣ ಎಂದು ಒಂದಿಬ್ಬರು ನಿರ್ಧಾರ ಮಾಡಿದರೆ ಆಗುವುದಿಲ್ಲ. ಅದಕ್ಕಾಗಿ ಉತ್ತಮ ಎಂದರೆ ಈ ವಿಷಯದ ಕುರಿತು ಸಂಸದರ ನೇತೃತ್ವದಲ್ಲಿ ಎಲ್ಲಾ ಹಿರಿಯ ಚಿಂತಕರ ಸಭೆಯನ್ನು ಕರೆದು ಅವರವರ ವಿಚಾರಧಾರೆಯ ಬಗ್ಗೆ ಮಂಥನಾ ನಡೆದು ಅಂತಿಮವಾಗಿ ಮಂಗಳೂರಿನ ಯಾವುದಕ್ಕೆ ಯಾವ ಹೆಸರನ್ನು ಇಡಬೇಕು ಎಂದು ಅಖೈರು ಮಾಡುವುದು ಉತ್ತಮ ಅಲ್ವೇ!
Leave A Reply