ಹಸಿರು ಪಟಾಕಿ ಮಾರಾಟದ ಅಂಗಡಿ ನೀವೆ ತೆರೆಯಿರಿ ಯಡಿಯೂರಪ್ಪ!!
ಈ ಬಾರಿಯ ದೀಪಾವಳಿಯಲ್ಲಿ ಕೇವಲ ಹಸಿರು ಪಟಾಕಿಯನ್ನು ಮಾತ್ರ ಹೊಡೆಯಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರು ಆದೇಶ ಹೊರಡಿಸಿ ಮೂರ್ನಾಕು ದಿನಗಳಾಗಿವೆ. ತುಂಬಾ ಜನರಿಗೆ ಈ ಹಸಿರು ಪಟಾಕಿಯೆಂದರೆ ಏನು ಎನ್ನುವುದೇ ಒಂದು ಆಶ್ಚರ್ಯವಾಗಿದೆ. ಹೆಚ್ಚು ಮಾಲಿನ್ಯವಲ್ಲದ ಈ ಪಟಾಕಿ ಕೇವಲ 30 ಶೇಕಡಾದಷ್ಟು ಪ್ರಮಾಣದಲ್ಲಿ ಹೊಗೆ ಬಿಡುತ್ತದೆ. ಸಾಮಾನ್ಯ ಪಟಾಕಿಗಳಿಗಿಂತ ಇದು ದುಬಾರಿ. ಇಲ್ಲಿ ಈಗ ಇರುವ ವಿಷಯ ಏನೆಂದರೆ ರಾಷ್ಟ್ರದಲ್ಲಿ ದಿನವೊಂದಕ್ಕೆ 40 ಕೋಟಿಯಷ್ಟು ಸಿಗರೇಟ್ ಸುಡಲ್ಪಡುತ್ತದೆ. ಆ 40 ಕೋಟಿಯಷ್ಟು ಸಿಗರೇಟು ಸುಡುವುದರಿಂದ ಪ್ರಕೃತಿಗೆ ಎಷ್ಟು ಹಾನಿಯಾಗುತ್ತದೆ ಎಂದು ಯಾವ ಆಡಳಿತ ಲೆಕ್ಕ ಹಾಕಿದೆ. ಹಾಗಾದರೆ ಸಿಗರೇಟು ನಮ್ಮ ದೇಶದಲ್ಲಿ ನಿಷೇಧ ಮಾಡಬಹುದಲ್ಲ. ಸಿಗರೇಟಿನಿಂದ ಪರಿಸರ ಮಾತ್ರವಲ್ಲ, ಸೇದುವವನ ಪಕ್ಕದಲ್ಲಿ ಕುಳಿತ ಮನುಷ್ಯನ ಶ್ವಾಸಕೋಶಕ್ಕೂ ಹಾನಿ ಸಂಭವಿಸುತ್ತದೆ. ಕೊರೊನಾ ಸಮಯದಲ್ಲಿ ನಾವು ಸಿಗರೇಟು ನಿಷೇಧ ಮಾಡುತ್ತೇವೆ. ಮುಂದಿನ ಜನವರಿ ತನಕ ನಮ್ಮ ರಾಜ್ಯದಲ್ಲಿ ಸಿಗರೇಟು ಮಾರಾಟ ಮತ್ತು ಸೇವನೆ ಇಲ್ಲ ಎಂದು ಸಿಎಂ ಹೇಳಬಹುದಲ್ವಾ? ಇನ್ನು ಫ್ಯಾಕ್ಟರಿಗಳು ಹೊರಗೆ ಬಿಡುವ ಹೊಗೆಯಿಂದ ಹಾಗುವ ಪರಿಸರ ಹಾನಿಯನ್ನು ಯಾವ ಸರಕಾರ ಗಂಭೀರವಾಗಿ ತೆಗೆದುಕೊಂಡಿದೆ. ಯಾವ ಫ್ಯಾಕ್ಟರಿಯೊಳಗೆ ಹೋಗಿ ಅವರು ನಿಯಮಗಳನ್ನು ಪಾಲಿಸುತ್ತಿದ್ದಾರಾ ಎಂದು ನೋಡಿದೆಯಾ? ಅವರಿಗೆ ಮಾನದಂಡ ವಿಧಿಸಿದೆಯಾ? ಮುಂದಿನ ಜನವರಿ ತನಕ ನೋ ಫ್ಯಾಕ್ಟರಿ ಎಂದು ಸಿಎಂ ಹೇಳಿದ್ದಾರಾ? ಇನ್ನು ಹೋಟೇಲುಗಳಲ್ಲಿ ಗೇರುಸಿಪ್ಪೆಯಿಂದ ಬೆಂಕಿ ಉತ್ಪಾದಿಸಿ ಆಹಾರ ತಯಾರಿಸುತ್ತಾರೆ. ಇದರಿಂದ ಉಂಟಾದ ಹೊಗೆಯಿಂದ ಪರಿಸರಕ್ಕೆ ನಾಶವಾಗುವುದು ಯಾರಾದರೂ ತಡೆಹಿಡಿದಿದ್ದಾರಾ? ಕೆಲವು ಕಾರ್ಖಾನೆಗಳು ಬಿಡುವ ದಟ್ಟವಾದ ಕಪ್ಪು ಹೊಗೆ ಇಡೀ ವರ್ಷ ಹೊರಗೆ ಬರುತ್ತಲೇ ಇರುತ್ತದೆ. ಇದರಲ್ಲಿ ಎಷ್ಟೋ ಕೇಂದ್ರ ಸರಕಾರದ ಅಧೀನದಲ್ಲಿರುವ ಫ್ಯಾಕ್ಟರಿಗಳು ಇವೆ. ಎಷ್ಟೋ ಕಾರ್ಖಾನೆಗಳು ಪಕ್ಷಾತೀತವಾಗಿ ಎಲ್ಲ ರಾಜಕಾರಣಿಗಳದ್ದು ಇರುತ್ತವೆ. ಅದೆಲ್ಲಾ ಏನು ಮಾಡಿದ್ರೂ ನಡೆಯುತ್ತವೆ. ಅದೇ ವರ್ಷದಲ್ಲಿ ಮೂರು ದಿನ ರಾತ್ರಿ ಕೆಲವು ಗಂಟೆಗಳಿಗೆ ಮಾತ್ರ ಪಟಾಕಿ ಹೊಡೆದರೆ ಎಲ್ಲವೂ ಅಡಿಮೇಲಾಗುತ್ತಾ ಎನ್ನುವುದನ್ನು ಇವರು ಹೇಳಬೇಕು. ಇನ್ನು ದೀಪಾವಳಿ ಇರುವುದು ಮೂರು ದಿನವಾದರೂ ನಮಗೆ ಕೆಲವು ದಿನಗಳ ನಂತರ ಬರುವ ನಮ್ಮ ಪಾಲಿನ ದೊಡ್ಡ ಹಬ್ಬ ತುಳಸಿ ಹಬ್ಬ. ಈ ದಿನದಂದು ತುಳಸಿ ಪೂಜೆ ಆಗುವಾಗ ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರು ಸ್ವಲ್ಪ ಪಟಾಕಿ ಹೊಡೆದು ಸಂಭ್ರಮಿಸುತ್ತಾರೆ. ಆದರೆ ನವೆಂಬರ್ 16 ರ ಬಳಿಕ ಪಟಾಕಿ ಮಾರಾಟವೇ ಬಂದ್ ಎಂದು ಸಿಎಂ ಹೇಳಿಯಾಗಿದೆ. ತುಳಸಿ ಹಬ್ಬ ಬರುವುದು ನವೆಂಬರ್ 27 ರಂದು. ಆಗ ಪಟಾಕಿ ಎಲ್ಲಿ ಖರೀದಿಸುವುದು. ನವೆಂಬರ್ 16 ರ ಒಳಗೆ ಖರೀದಿಸಿ ಇಡಬೇಕಾ? ಒಮ್ಮೆಲ್ಲೇ ದೀಪಾವಳಿ ಮತ್ತು ತುಳಸಿ ಪೂಜೆಗೆ ದುಬಾರಿ ಹಸಿರು ಪಟಾಕಿ ಖರೀದಿಸಲು ಮಧ್ಯಮ ವರ್ಗದವರ ಬಳಿ ಹಣ ಇದೆಯಾ?
ಆದರೆ ಯಡಿಯೂರಪ್ಪನವರ ರಾಜ್ಯಾಭಾರದಲ್ಲಿ ಮೊದಲು ಕಣ್ಣಿಗೆ ಬೀಳುವುದು ಹಿಂದೂಗಳ ಹಬ್ಬ. ಇವರಿಗೆ ದೀಪಾವಳಿ ಎಂದರೆ ಪಟಾಕಿ ಹೊಡೆಯಬಾರದು ಎಂದು ಘೋಷಿಸುವುದು ಸುಲಭ. ಅದೇ ಧೈರ್ಯ ಕ್ರಿಸ್ಮಸ್ ಮತ್ತು ಡಿಸೆಂಬರ್ 31 ರಾತ್ರಿ ಹೊಸ ವರ್ಷ ಆಚರಿಸುವ ವ್ಯಕ್ತಿಗಳಿಗೆ ಸಿಎಂ ಹೇಳುತ್ತಾರಾ? ಇನ್ನು ಒಂದು ಧರ್ಮದಲ್ಲಿ ಭಕ್ರೀದ್, ರಮ್ಜಾನ್ ಸಹಿತ ಕೆಲವು ಹಬ್ಬಗಳಿಗೆ ಕುರಿ, ಆಡುಗಳ ಸಹಿತ ಕೆಲವು ಮೂಲ ಪ್ರಾಣಿಗಳ ಮಾರಣಹೋಮ ನಡೆಯುತ್ತದೆಯಲ್ಲ, ಅದನ್ನು ನಿಷೇಧಿಸುವ ಧೈರ್ಯ ಯಡಿಯೂರಪ್ಪನವರಿಗೆ ಇದೆಯಾ? ಇನ್ನು ಪಟಾಕಿ ಸಿಡಿಸುವುದು ಪರಿಸರದ ಜೊತೆಗೆ ಜನರ ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತದೆ ಎಂದು ಹೋದ ಗುರುವಾರವಷ್ಟೇ ತಜ್ಞರು ವರದಿ ಸಲ್ಲಿಸಿದ್ದರು ಎಂದು ಹೇಳಲಾಗುತ್ತದೆ. ಆ ವರದಿ ನೋಡಿದ ತಕ್ಷಣ ಮರುದಿನ ಸಿಎಂ ಪಟಾಕಿ ಹೊಡೆಯುವ ನಿಷೇಧವನ್ನು ಘೋಷಿಸಿದ್ದಾರೆ. ಇದೇ ವೇಗವನ್ನು ಅವರು ಬೇರೆ ವಿಷಯಗಳಲ್ಲಿಯೂ ತೆಗೆದುಕೊಳ್ಳುತ್ತಾರಾ? ಉದಾಹರಣೆಗೆ ವಕ್ಫ್ ಆಸ್ತಿಯನ್ನು ಕಾಂಗ್ರೆಸ್ಸಿನ ಹಿರಿಯ ರಾಜಕಾರಣಿಗಳು ನುಂಗಿ ನೀರು ಕುಡಿದಿರುವ ವರದಿಯನ್ನು ಬಿಜೆಪಿಯವರದ್ದೇ ಪಕ್ಷದ ಅನ್ವರ್ ಮಾಣಿಪ್ಪಾಡಿ ಸಲ್ಲಿಸಿದ್ದಾರೆ. ಬಿಜೆಪಿ ಈ ಬಾರಿ ಅಧಿಕಾರಕ್ಕೆ ಬಂದು ಒಂದೂವರೆ ವರ್ಷಗಳಾಗುತ್ತಾ ಬರುತ್ತಿದೆ. ಯಾಕೆಂದರೆ ಈ ಬಗ್ಗೆ ಇನ್ನೂ ಕ್ರಮ ಇಲ್ಲ. ಇನ್ನು ಜನರ ಆರೋಗ್ಯದ ದೃಷ್ಟಿಯಿಂದ ಈ ನಿಷೇಧ ಎಂದು ಸಿಎಂ ಹೇಳುತ್ತಿದ್ದಾರೆ. ಹಾಗಾದರೆ ಜನರ ಆರೋಗ್ಯದ ದೃಷ್ಟಿಯಿಂದ ಮಾಡಬೇಕಾದ ಎಲ್ಲಾ ಕೆಲಸಕಾರ್ಯಗಳನ್ನು ಇವರು ಮಾಡುತ್ತಾರಾ? ಇದೆಲ್ಲವನ್ನು ನೋಡಿದರೆ ಮುಖ್ಯಮಂತ್ರಿಯವರಿಗೆ ವಯಸ್ಸಿನ ಅರಳು ಮರಳು ಆಗಿರುವುದು ಕಾಣಿಸುತ್ತಿದೆ. ಯಾಕೆಂದರೆ ಮೂರ್ಖತನ ಮಾಡುವುದಕ್ಕೂ ಒಂದು ಲಿಮಿಟ್ಟಿದೆ. ಈ ಬಾರಿ ಕೊರೊನಾ ನಿರ್ವಹಣೆಯಲ್ಲಿ ರಾಜ್ಯದ ಯುವ ಸಚಿವರು, ಶಾಸಕರು ಸರಿಯಾಗಿ ಕೆಲಸ ಮಾಡಿದ ಕಾರಣ ರಾಜ್ಯ ಸರಕಾರದ ಮರ್ಯಾದೆ ಬಚಾವ್ ಆಗಿತ್ತು. ಆದರೆ ಯಡಿಯೂರಪ್ಪನವರನ್ನೇ ಬಿಟ್ಟರೆ ಅವರು ಪಟಾಕಿ ವಿಷಯದಲ್ಲಿ ತೆಗೆದುಕೊಂಡ ನಿರ್ಧಾರದ ತರಹವೇ ಎಲ್ಲವನ್ನು ಮಾಡಿಬಿಡುತ್ತಿದ್ದರು. ನಾಳೆ ಮದುವೆ ಎಂದಾಗ ಇವತ್ತು ರಾತ್ರಿ ಮದುಮಗ ಓಡಿ ಹೋದ ಹಾಗೆ ಮುಂದಿನ ವಾರ ದೀಪಾವಳಿ ಎಂದಾಗ ಈ ಸಲ ಪಟಾಕಿ ಹೊಡೆಯಬಾರದು ಎನ್ನುವುದೇ ಮೂರ್ಖತನ. ಮುಂದಿನ ಎರಡು ವರ್ಷಗಳಲ್ಲಿ ಇನ್ನೇನೂ
ನೋಡಲು ಇದೆಯೋ. ಒಟ್ಟಿನಲ್ಲಿ ಕೇಳಿದ್ದನ್ನು ಕೊಡುವ ಕಾಮಧೇನು ಎಂದು ಕರೆಸಿಕೊಂಡಿರುವ ಯಡಿಯೂರಪ್ಪನವರು ಪಾಪದವರಿಗಾಗಿ ಸಬ್ಸಿಡಿ ದರದಲ್ಲಿ ಕಡಿಮೆ ಬೆಲೆಗೆ ಹಸಿರು ಪಟಾಕಿ ಅಂಗಡಿ ತೆರೆದರೆ ಹೆಚ್ಚಿನವರಿಗೆ ಅನುಕೂಲವಾಗುತ್ತಿತ್ತು. ತೆರೆಯುತ್ತಾರಾ!
Leave A Reply