ಮೋದಿಜಿ, ಏಳಿ, ಎದ್ದೇಳಿ, ಒಟಿಟಿ ಮುಗಿಸದೇ ನಿಲ್ಲದಿರಿ!!
ಕಲಾವಿದರಿಗೂ ಒಂದು ಸಾಮಾಜಿಕ ಬದ್ಧತೆ ಎನ್ನುವುದು ಇರಬೇಕು. ಇಲ್ಲದೇ ಹೋದರೆ ಅವರು ತಮಗೆ ಗೊತ್ತಾಗದಂತೆ ಒಂದು ಕೆಟ್ಟ ತಲೆಮಾರನ್ನು ಸೃಷ್ಟಿಸುತ್ತಾ ಹೋಗುತ್ತಾರೆ. ಯುವ ಜನಾಂಗ ತಮ್ಮ ಪೋಷಕರು ಹೇಳಿದ್ದನ್ನು ಕೇಳುತ್ತಾರೋ ಇಲ್ವೋ, ಗುರುಗಳ ಮಾತುಗಳನ್ನು ಆಲಿಸುತ್ತಾರೋ ಇಲ್ವೋ ಆದರೆ ಸಿನೆಮಾ ಸ್ಟಾರ್ ಗಳನ್ನು ಖಂಡಿತ ಫಾಲೋ ಮಾಡುತ್ತಾರೆ. ಆದ್ದರಿಂದ ಹುಟ್ಟಿಸಿದವರಿಗಿಂತ, ವಿದ್ಯೆ ಕಲಿಸಿದವರಿಗಿಂತ ಒಬ್ಬ ನಾಯಕ ನಟನ ಜವಾಬ್ದಾರಿ ಹೆಚ್ಚಿರುತ್ತದೆ. ಆತ, ಆಕೆ ತೆರೆಯ ಮೇಲೆ ಏನು ಮಾಡುತ್ತಾನೆ/ಳೆ ಎನ್ನುವುದನ್ನು ಲಕ್ಷಾಂತರ ಕಣ್ಣುಗಳು ಗಮನಿಸುತ್ತಲೇ ಇರುತ್ತವೆ. ಕೆಲವು ನಟರು ತೆರೆಯ ಮೇಲೆ ಸಂತನ ಪಾತ್ರ ಮಾಡಿ ನಿರ್ದೇಶಕ ಕಟ್ ಎಂದ ಕೂಡಲೇ ವಿಸ್ಕಿ ಬಾಟಲು ಹೊರಗೆ ತೆಗೆದು ಕುಡಿಯಲು ಕುಳಿತುಕೊಳ್ಳುವಂತವರು ಇದ್ದಾರೆ. ನಟರುಗಳು ತೆರೆಯ ಮೇಲೆ ಮಾತ್ರವಲ್ಲ, ತೆರೆಯ ಹೊರಗೂ ಉತ್ತಮ ಮಾದರಿ ಜೀವನ ನಡೆಸಬೇಕಾಗುತ್ತದೆ. ಅದಕ್ಕೆ ಉದಾಹರಣೆ ಆಗಿದ್ದವರು ಡಾ.ರಾಜ್ ಕುಮಾರ್. ರಾಜ್ ಒಮ್ಮೆ ಏನೇ ಒತ್ತಾಯ ಮಾಡಿದರೂ ಮದ್ಯದಂಗಡಿಯೊಂದನ್ನು ಉದ್ಘಾಟಿಸಲು ಒಪ್ಪಲೇ ಇಲ್ಲ. ಕುಡಿಯುವುದು ಬಿಡಿ, ಬಾರ್ ಉದ್ಘಾಟನೆ ಮಾಡುವುದು ಕೂಡ ತಮಗೆ ಒಪ್ಪುವುದಿಲ್ಲ, ಅಭಿಮಾನಿಗಳಿಗೆ ಕೆಟ್ಟ ಪರಂಪರೆ ಹಾಕಿಕೊಡುವುದಿಲ್ಲ ಎಂದು ರಾಜ್ ಹೇಳಿದ್ದರಂತೆ. ಆದರೆ ಈಗಿನ ಕಾಲದಲ್ಲಿ ಸ್ಟಾರ್ ಗಳು ಹಣ ಕೊಟ್ಟರೆ ಏನೂ ಮಾಡಲು ತಯಾರಾಗಿ ಹೋಗುತ್ತಾರೆ. ಒಂದಿಬ್ಬರು ಅದಕ್ಕೆ ಅಪವಾದ ಇರಬಹುದು. ಆದರೆ ಕಾಂಚಣ ಎಲ್ಲರನ್ನು ಏನಾದರೂ ಮಾಡಲು ಪ್ರೇರೆಪಿಸುತ್ತದೆ. ಅದಕ್ಕೆ ಈಗ ತಾಜಾ ಉದಾಹರಣೆ ಸೈಫ್ ಅಲಿ ಖಾನ್. ಅವರ ತಾಂಡವ್ ಸಿನೆಮಾ ಹಿಂದೂ ವಿರೋಧಿ ನೀತಿಗಳಿಂದ ವಿವಾದದಲ್ಲಿದೆ.
ಈಗ ವಿವಾದ ಆಗಿರುವುದರಿಂದ ಸಿನೆಮಾ ನಿರ್ಮಾಪಕರು ಲಿಖಿತವಾಗಿ ಕ್ಷಮೆ ಕೋರಿದ್ದಾರೆ. ಆದರೆ ವಿಷಯ ಅಲ್ಲಿಗೆ ಮುಗಿಯುವುದಿಲ್ಲ. ಒಂದು ಸಿನೆಮಾದಲ್ಲಿ ಜನರಿಗೆ ಏನು ತೋರಿಸಬೇಕು, ಏನು ತೋರಿಸಬಾರದು ಎನ್ನುವುದನ್ನು ನಿರ್ಧರಿಸುವುದು ಸೆನ್ಸಾರ್ ಮಂಡಳಿ. ಆದರೆ ಅದು ಸಿನೆಮಾ ಥಿಯೇಟರ್ ನಲ್ಲಿ ಬಿಡುಗಡೆಯಾಗುವ ಸಿನೆಮಾಗಳಿಗೆ ಮಾತ್ರ ನಿರ್ಭಂದಿಸುವ ಹಕ್ಕನ್ನು ಹೊಂದಿದೆ. ಆದರೆ ಈಗ ಕೊರೊನಾ ಕಾಲದಲ್ಲಿ ಥಿಯೇಟರ್ ಗಳು ಬಂದಾಗಿದ್ದ ಕಾರಣ ಮತ್ತು ಇಷ್ಟು ಸಮಯವಾದರೂ ಥಿಯೇಟರ್ ಗಳಲ್ಲಿ ಶೋಗಳು ಬಹಳ ಪ್ರಯಾಸದಿಂದ ನಡೆಯುತ್ತಿರುವುದರಿಂದ ಅಂತಿಮವಾಗಿ ಕೆಲವು ದೊಡ್ಡ ಬಜೆಟ್ ಸಿನೆಮಾಗಳು ಕೂಡ ಒಟಿಟಿ(ಒವರ್ ದಿ ಟಾಪ್) ಫ್ಲಾಟ್ ಫಾರಂನಲ್ಲಿ ಬಿಡುಗಡೆಯಾಗುತ್ತಿವೆ. ಇದರಿಂದ ನೀವು ಮನೆಯ ಒಳಗೆ ಟಾಯ್ಲೆಟ್ ನಲ್ಲಿ ಕುಳಿತು ಬೇಕಾದರೂ ಸೈಫ್ ಅಲಿ ಖಾನ್ ಅಬ್ಬರವನ್ನು ವೀಕ್ಷಿಸಬಹುದು.
ಹಿಂದೆ ಯಾವುದಾದರೂ ಸಿನೆಮಾ ಬಂದಾಗ ಬೀದಿ ಬದಿಯ ಗೋಡೆಗಳಲ್ಲಿ ಪೋಸ್ಟರ್ ಬೀಳುತ್ತಿದ್ದವು. ಅದರಲ್ಲಿ ಮನೆ ಮಂದಿ ಒಟ್ಟಿಗೆ ಕುಳಿತುಕೊಂಡು ನೋಡುವಂತಹ ಸಿನೆಮಾ ಎಂದು ದಪ್ಪ ಅಕ್ಷರಗಳಲ್ಲಿ ಬರೆಯುತ್ತಿದ್ದರು. ಆ ಮೂಲಕ ತಮ್ಮ ಸಿನೆಮಾ ನೋಡಲು ಇಡೀ ಕುಟುಂಬ ಬರಲಿ ಎಂದು ನಿರ್ಮಾಪಕರು ಆಶಿಸುತ್ತಿದ್ದರು. ಈಗ ಏನಾಗಿದೆ ಎಂದರೆ ಕುಟುಂಬಗಳು ನೋಡುವಂತಹ ಸಿನೆಮಾಗಳೇ ಒಟಿಟಿಯಲ್ಲಿ ಬರುತ್ತಿವೆ. ಆದರೆ ಇಡೀ ಕುಟುಂಬ ಒಟ್ಟಿಗೆ ನೋಡಲು ಆಗದಂತಹ ಸಿನೆಮಾ ಅವಾಗಿರುತ್ತವೆ. ಈಗ ಏನಿದ್ದರೂ ಹೆಂಡತಿ ಇಳಿಸಂಜೆಯಲ್ಲಿ, ಗಂಡ ರಾತ್ರಿ ಮಲಗುವ ಸಮಯದಲ್ಲಿ, ಮಕ್ಕಳು ರಜೆ ಇರುವುದರಿಂದ ಆನ್ ಲೈನ್ ಕ್ಲಾಸ್ ಆದ ಕೂಡಲೇ ನೋಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಯಾಕೆ ಒಟ್ಟಿಗೆ ನೋಡಲಾಗುವುದಿಲ್ಲ ಎಂದರೆ ಸಿನೆಮಾದಲ್ಲಿ ಪಾತ್ರಧಾರಿಗಳು ಮಾತನಾಡುವ ಬೈಗುಳ ಭಾಷೆ, ಅಶ್ಲೀಲತೆ. ನೀವೆನೆ ಹೇಳಿ, ನಮ್ಮ ಮನಸ್ಸು ಒಂದು ಸಿನೆಮಾ ನೋಡುವಾಗ ಅದರಲ್ಲಿನ ಕೆಟ್ಟ ಮ್ಯಾನರೀಸಂ ಅನ್ನು ಮೊದಲು ಸೆಳೆದುಕೊಳ್ಳುತ್ತದೆ. ರಜನಿಕಾಂತ್ ಸಿಗರೇಟನ್ನು ಮೇಲಕ್ಕೆ ಚಿಮ್ಮಿಸಿ ಬಾಯಿಗೆ ಎಳೆದುಕೊಳ್ಳುವುದನ್ನು ಎಷ್ಟೋ ಪಡ್ಡೆ ಹುಡುಗರು ವಾರಗಟ್ಟಲೆ ಪ್ರಾಕ್ಟೀಸ್ ಮಾಡಿಕೊಳ್ಳುತ್ತಿದ್ದವು. ಈಗ ಅದಕ್ಕಿಂತಲೂ ಕೆಟ್ಟದಾಗಿ ಒಟಿಟಿಯಲ್ಲಿ ಕೆಟ್ಟ ಬೈಗುಳಗಳು ಬಳಕೆಯಾಗುತ್ತಿವೆ. ಕೆಟ್ಟ ಬೈಗುಳ, ಕುಡಿತ, ಅಶ್ಲೀಲತೆ ಇಲ್ಲದೆ ಸಿನೆಮಾ ಮಾಡುವುದಿಲ್ಲ ಎಂದು ಒಟಿಟಿ ಸಿನೆಮಾ ನಿರ್ದೇಶಕರು, ನಿರ್ಮಾಪಕರು ಶಪಥ ಹಾಕಿಕೊಂಡಂತೆ ಕಾಣುತ್ತದೆ. ಹಿಂದೆ ಹೆಂಗಸರ ಹಣೆಯ ಮೇಲೆ ಕಾಸಗಲ ಕುಂಕುಮ ರಾರಾಜಿಸುತ್ತಿತ್ತು. ಈಗ ಪೀನ ಮಸೂರ ಹಿಡಿದು ಹಣೆ ಹುಡುಕಬೇಕು. ಇದಕ್ಕೆಲ್ಲ ಪರಿಹಾರ ಇಲ್ಲವೇ?
ಇದೆ. ನಮ್ಮ ದೇಶವನ್ನು ನಮ್ಮ ಸನಾತನ ಸಂಸ್ಕೃತಿಯ ರಕ್ಷಕರು ಆಳುತ್ತಿದ್ದಾರೆ. ಅವರು ದೇಶದ ಯುವ ಪೀಳಿಗೆಯ ಬಗ್ಗೆ ಕಾಳಜಿ ತೋರಿಸಿ ಈ ಒಟಿಟಿಯ ಮೇಲೆ ತಕ್ಷಣ ಕಡಿವಾಣ ಹಾಕಬೇಕು. ಕಾಂಗ್ರೆಸ್ ಅಥವಾ ಕಮ್ಯೂನಿಸ್ಟ್ ಸರಕಾರ ಇದ್ದಿದ್ದರೆ ನಾನು ಅವರಲ್ಲಿ ವಿನಂತಿ ಮಾಡುತ್ತಿರಲಿಲ್ಲ. ಆದರೆ ಈಗ ದೇಶದ ರಕ್ಷಕರು ಆಳುತ್ತಿದ್ದಾರೆ. ಅವರು ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಏನೇನೋ ಕಾರ್ಯಕ್ರಮ ಮಾಡುತ್ತಾರೆ. ಭಾಷಣ ಹೊಡೆಯುತ್ತಾರೆ. ವಿಡಿಯೋ ಮಾಡಿ ಸಂಸ್ಕೃತಿ ರಕ್ಷಿಸುತ್ತಿದ್ದಾರೆ. ಅವರಲ್ಲಿ ನಾನು ಕೇಳಿಕೊಳ್ಳುವುದೇನೆಂದರೆ ನೀವು ಆದಷ್ಟು ಬೇಗ “”ಏಳಿ, ಏದ್ದೇಳಿ, ಒಟಿಟಿಯನ್ನು ಮುಗಿಸದೇ ನಿಲ್ಲದಿರಿ”
Leave A Reply