ಮೋದಿಯ ಮಾತಿಗಿಂತ ಮೌನ ಹೆಚ್ಚು ತೀಕ್ಣ ಎಂದು ದೆಹಲಿಯಲ್ಲಿ ಗೊತ್ತಾಗಿದೆ.
ಎರಡು ತಿಂಗಳಿನಿಂದ ಹೋರಾಟಕ್ಕೆ ಕುಳಿತಿದ್ದ ರೈತ ಸಂಘಟನೆಗಳ ಒಕ್ಕೂಟದಲ್ಲಿ ಈಗ ಬಿರುಕು ಮೂಡಿದೆ. ಎರಡು ಸಂಘಟನೆಗಳು ನಾವು ಪ್ರತಿಭಟನೆಯಿಂದ ಹಿಂದೆ ಸರಿಯುತ್ತಿರುವುದಾಗಿ ಘೋಷಿಸಿವೆ. ಹೀಗೆ ಹೇಳಿದ ಕೂಡಲೇ ನಾನು ರೈತರ ಹೋರಾಟಕ್ಕೆ ಹಿನ್ನಡೆಯಾಯಿತು ಎಂದು ಭಾವಿಸುವುದಿಲ್ಲ. ಆದರೆ ಹೋರಾಟ ಈ ರೀತಿ ದಾರಿ ತಪ್ಪಿರುವುದಕ್ಕೆ ನಿಜವಾಗಿಯೂ ನೈಜ ರೈತರಿಗೆ ನೋವಾಗಿದೆ ಎನ್ನುವುದು ಗ್ಯಾರಂಟಿ. ರೈತರನ್ನು ಮುಂದಿಟ್ಟು ಕೇಂದ್ರದ ವಿರುದ್ಧ ಜನಾಕ್ರೋಶ ಉಂಟು ಮಾಡಲು ರೈತರ ಹೆಸರಿನಲ್ಲಿರುವ ಕೆಲವು ರಾಷ್ಟ್ರೀಯ ನಾಯಕರುಗಳೆನಿಸಿಕೊಂಡವರು ಪ್ರಯತ್ನಿಸಿದ್ದರು. ಪವಾರ್, ಸಿಂಗ್ ಗಳು ಸುರಿದ ಕೋಟ್ಯಾಂತರ ರೂಪಾಯಿ ಹಣದಿಂದ ಹೋರಾಟ ಎರಡು ತಿಂಗಳು ನಡೆದಂತೆಯೂ ಆಯಿತು. ಆದರೆ ಈ ನಡುವೆ ರೈತರ ವೇಷದಲ್ಲಿದ್ದ ಖಲಿಸ್ತಾನಿಗಳು ಯಾವಾಗ ಕೆಂಪುಕೋಟೆಯ ಮೇಲೆ ಏರಿ ಭಾರತದ ರಾಷ್ಟ್ರಧ್ವಜಕ್ಕಿಂತ ತಮ್ಮ ಧರ್ಮದ ಧ್ವಜ ಮೇಲೆ ಹಾಕಿದ್ರೋ ಅದರ ನಂತರ ರೈತರ ಮೇಲಿದ್ದ ಜನಸಾಮಾನ್ಯರ ಅನುಕಂಪವೂ ಹೊರಟು ಹೋಯಿತು. ಇಲ್ಲಿ ನೈಜ ರೈತರದ್ದು ತಪ್ಪಿಲ್ಲ. ಆದರೆ ರೈತರ ಅಮಾಯಕತೆಯನ್ನು ಬಳಸಿ ಕೆಲವರು ತಮ್ಮ ಬೇಳೆ ಬೇಯಿಸಿಕೊಳ್ಳಲು ಯತ್ನಿಸಿದರಲ್ಲ, ಅವರೀಗ ದೇಶದ ಮುಂದೆ ಬೆತ್ತಲಾಗಿ ಹೋಗಿದ್ದಾರೆ. ಎಷ್ಟು ಬೇಗ ಆಗುತ್ತೋ ಅಷ್ಟು ಬೇಗ ದೆಹಲಿ-ಘಾಜೀಪುರ ಗಡಿಯಿಂದ ತಮ್ಮ ತಮ್ಮ ಊರಿಗೆ ಹಿಂತಿರುಗುವಂತೆ ಉತ್ತರ ಪ್ರದೇಶ ಸರಕಾರ ಅಲ್ಲಿ ಟೆಂಟ್ ಹಾಕಿ ಕುಳಿತಿದ್ದ ಪ್ರತಿಭಟನಾಕಾರರಿಗೆ ಸಂದೇಶ ನೀಡಿದೆ. ದೆಹಲಿ ಗಡಿ ಪ್ರವೇಶಿಸದಂತೆ ಉತ್ತರ ಪ್ರದೇಶ ಗಡಿಯಲ್ಲಿ ಪ್ರತಿಭಟನಾಕಾರರನ್ನು ತಡೆಹಿಡಿಯಲಾಗಿತ್ತು. ಅದಕ್ಕಾಗಿ ಅಲ್ಲಿಯೇ ಟೆಂಟ್, ಬೆಡ್ ಹಾಕಿ ಪ್ರತಿಭಟನಾಕಾರರು ಕುಳಿತಿದ್ದರು. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿತ್ತು. ಆದರೆ ರೈತರಿಗಾಗಿ ನಾಗರಿಕರು ಎರಡು ತಿಂಗಳಿನಿಂದ ಇದನ್ನು ಸಹಿಸಿಕೊಂಡು ಬರುತ್ತಿದ್ದರು. ಆದರೆ ಯಾವಾಗ ಪ್ರತಿಭಟನಾಕಾರರು ದೆಹಲಿಯಲ್ಲಿ ಕುದುರೆ ಏರಿ ತಲವಾರು ಬೀಸುತ್ತಾ ನೂರಾರು ಪೊಲೀಸರನ್ನು ಗಾಯಾಳುಗೊಳಿಸಿದರೋ ಆಗಿನಿಂದ ನಾಗರಿಕರು ಪ್ರತಿಭಟನಾಕಾರರ ಮೇಲೆ ತಿರುಗಿ ಬಿದ್ದಿದ್ದಾರೆ. ಪೊಲೀಸರು ತಮ್ಮ ಪ್ರಾಣ ಉಳಿಸಲು ಅಂಗಲಾಚಿಸುವ ಫೋಟೋ, ವಿಡಿಯೋ ವೈರಲ್ ಆಯಿತೋ ರೈತರ ಹೋರಾಟವನ್ನು ಗಂಭೀರವಾಗಿ ತೆಗೆದುಕೊಳ್ಳದೇ ಇದ್ದ ಜನರು ಕೂಡ ಇವರು ರೈತರಾ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಸರಿಯಾಗಿ ಈ ಹೋರಾಟದ ಮುಂಚೂಣಿಯಲ್ಲಿದ್ದ ರಾಕೇಶ್ ಟಿಕಾಯತ್ ಎನ್ನುವವರ ಮೇಲೆ ಎಫ್ ಐಆರ್ ಆಗಿದೆ. ದೇಶದ್ರೋಹದ ಕೇಸ್ ದಾಖಲಾಗಿದೆ. ಇದನ್ನೆಲ್ಲ ನೋಡಿದ ಜನರಿಗೆ ರೈತರ ಸೋಗಿನಲ್ಲಿದ್ದವರ ಮೇಲೆ ಆಕ್ರೋಶ ಸಹಜವಾಗಿ ಮೂಡಿದೆ. ತಾನು ಪೊಲೀಸರಿಗೆ ಸರೆಂಡರ್ ಆಗುತ್ತೇನೆ, ಪೊಲೀಸರ ಮೇಲೆ ದ್ವೇಷವಿಲ್ಲ, ಪೊಲೀಸರ ಮೇಲೆ ದಾಳಿ ಆದದ್ದಕ್ಕೆ ವಿಷಾದವಿದೆ ಎಂದು ಆತ ಹೇಳಿದ್ದನ್ನು ಜನ ನಂಬುತ್ತಿಲ್ಲ.
ಸದ್ಯ ಯುಪಿ ಗಡಿಯಲ್ಲಿ ಏನಾಗಿದೆ ಎಂದರೆ ನಾಗರಿಕರು ಕೈಯಲ್ಲಿ ರಾಷ್ಟ್ರಧ್ವಜವನ್ನು ಹಿಡಿದು ದೇಶದ ಪರವಾಗಿ ಘೋಷಣೆಗಳನ್ನು ಕೂಗಿದ್ದಾರೆ. ಈ ಪ್ರತಿಭಟನಾಕಾರರನ್ನು ಆದಷ್ಟು ಬೇಗ ತೆರವು ಮಾಡಲು ಯುಪಿ ಸರಕಾರದ ಮೇಲೆ ಒತ್ತಡ ಹಾಕುತ್ತಿದ್ದಾರೆ. ನಾವು ರೈತರನ್ನು ಬೆಂಬಲಿಸಿದ್ವಿ, ದೇಶದ್ರೋಹಿಗಳನ್ನು ಅಲ್ಲ ಎಂದು ಜನ ಘೋಷಣೆ ಕೂಗುತ್ತಿದ್ದಾರೆ. ಜನರ ಆಗ್ರಹವನ್ನು ಮನ್ನಿಸಿ ರಾಜ್ಯ ಸರಕಾರ ಕಾರ್ಯಾಚರಣೆಗೆ ಇಳಿದಿದೆ. ಜಾಗವನ್ನು ತೆರವು ಮಾಡದಿದ್ದರೆ ಘೋರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ನಕಲಿಗಳಿಗೆ ಎಚ್ಚರಿಕೆ ನೀಡಿದೆ. ಆರಂಭದ ಹೆಜ್ಜೆಯಾಗಿ ಗಡಿಯಲ್ಲಿ ಟೆಂಟ್ ಗೆ ವಿದ್ಯುತ್ ಬಳಸಿಕೊಳ್ಳುತ್ತಿದ್ದ, ನಿಶ್ಚಿಂತೆಯಾಗಿ ಮಲಗಿ ಸರಕಾರಕ್ಕೆ ತಲೆನೋವಾಗಿದ್ದವರ ವಿರುದ್ಧ ಕ್ರಮ ಕೈಗೊಳ್ಳುವ ಸಲುವಾಗಿ ವಿದ್ಯುತ್ ಹಾಗೂ ನೀರಿನ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಅಲ್ಲಿ ಸಿಐಎಫ್, ಆರ್ ಎಎಫ್ ಹಾಗೂ ಪೊಲೀಸರನ್ನು ನಿಯೋಜಿಸಿ ಎಲ್ಲರನ್ನು ಎಬ್ಬಿಸಿ ಕಳುಹಿಸಿಕೊಡಲಾಗಿದೆ. ಈ ಒಟ್ಟು ಘಟನೆಯಲ್ಲಿ ಮೆಚ್ಚಬೇಕಾಗಿರುವುದು ನರೇಂದ್ರ ಮೋದಿಯ ಒಂದೊಂದು ನಡೆಯನ್ನು. ಅವರಿಗೆ ಯಾವಾಗ ಹತ್ತು-ಹನ್ನೆರಡು ಮೀಟಿಂಗ್ ಆದ ಬಳಿಕವೂ ರೈತರು ಒಂದೇ ವಾಕ್ಯದಲ್ಲಿ ಹಟ ಹಿಡಿದು ಕುಳಿತಿರುವುದು ಗೊತ್ತಾಯಿತೋ ಈ ಹೋರಾಟ ದಾರಿ ತಪ್ಪಿರುವುದು ಅವರಿಗೆ ಅರ್ಥವಾಗಿತ್ತು. ರೈತರ ಹಿಂದಿನ ಕುತಂತ್ರವನ್ನು ಯಾರು ಮಾಡಿಸುತ್ತಿದ್ದಾರೆ ಎನ್ನುವುದನ್ನು ತಿಳಿಯಲು 15 ವರ್ಷಕ್ಕೂ ಹೆಚ್ಚು ಕಾಲ ಗುಜರಾತಿನಂತಹ ರಾಜ್ಯವನ್ನು ಆಳಿ, ಆರು ವರ್ಷಗಳಿಂದ ದೆಹಲಿಯ ಪ್ರತಿ ಆಳ ಅಗಲವನ್ನು ಅರಿತಿರುವ ಮೋದಿಯವರಿಗೆ ಕಷ್ಟವಾಗಿರಲಿಲ್ಲ. ಅವರು ಇದಕ್ಕಿಂತ ಭೀಕರವಾದ ದಂಗೆ ನೋಡಿಯೇ ಗುಜರಾತ್ ಸಿಂಹಾಸನದಲ್ಲಿ ಕುಳಿತವರು. ಅವರಿಗೆ ನೈಜ ಹೋರಾಟ ಮತ್ತು ದಾರಿ ತಪ್ಪಿದವರ ಷಡ್ಯಂತ್ರದ ನಡುವಿನ ಅಂತರ ತಿಳಿಯುವುದು ಕಷ್ಟವಾಗಿರಲಿಲ್ಲ. ಒಂದಲ್ಲ ಒಂದು ದಿನ ತಾಳ್ಮೆ ಕಳೆದುಕೊಳ್ಳುವ ದೇಶದ್ರೋಹಿಗಳು ಮುಖವಾಡ ಕಳಚಿ ರಣಾಂಗಣಕ್ಕೆ ಇಳಿಯುತ್ತಾರೆ ಎಂದು ಮೋದಿಗೆ ಗೊತ್ತಿತ್ತು. ಅವರು ಸಮಯ ಕಾಯುತ್ತಿದ್ದರು. ಅಷ್ಟಾಗಿಯೂ ಮೋದಿ ಕೊನೆಯ ಹಂತದ ತನಕ ದುಡುಕಿನ ಹೆಜ್ಜೆ ಇಡಲೇ ಇಲ್ಲ. ಈ ಮೂಲಕ ವಿರೋಧಿಗಳಿಗೆ ಏನು ನಿರೀಕ್ಷೆ ಇತ್ತೋ ಅದು ವಿಫಲವಾಗಿದೆ. ಮೋದಿ ಮೌನದಿಂದಲೇ ಗೆದ್ದಿದ್ದಾರೆ. ವಿರೋಧಿಗಳು ಕೆಂಪುಕೋಟೆಯ ಎದುರು ನೈತಿಕವಾಗಿ ನಗ್ನರಾಗಿದ್ದಾರೆ!
Leave A Reply