ವಿಪಕ್ಷಗಳು ಏನೂ ಮಾಡಿದರೂ ಅಂತ್ಯದಲ್ಲಿ ಮೋದಿಗೆ ಲಾಭವಾಗುತ್ತಿರುವುದೇ ಆಶ್ಚರ್ಯ!!
ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣಕ್ಕೆ ವಿಶ್ವ ಹಿಂದೂ ಪರಿಷತ್-ಬಜರಂಗದಳ ಹಾಗೂ ಸಂಘ ಪರಿವಾರದ ಯುವಕರು ದೇಣಿಗೆ ಸಂಗ್ರಹ ಮಾಡುತ್ತಿದ್ದಾರೆ. ನಿಮಗೆ ಮನಸ್ಸಿದ್ದರೆ ಧಾರಾಳವಾಗಿ ಕೊಡಬಹುದು. ಕೊಡಲು ಮನಸ್ಸು ಇಲ್ಲದಿದ್ದರೆ ನಿರಾಕರಿಸಬಹುದು. ಹಾಗಂತ ನೀವು ಕೊಡಲು ಒಪ್ಪದಿದ್ದರೆ ಯಾರೂ ನಿಮ್ಮನ್ನು ಬಲವಂತ ಮಾಡುವುದಿಲ್ಲ. ಯಾಕೆಂದರೆ ದೇಣಿಗೆ ಸ್ವೀಕರಿಸಲು ಬರುವವರು ಗೂಂಡಾ ಎಲಿಮೆಂಟ್ ಅಲ್ಲ. ಅವರಿಗೆ ಸಂಘದ ಶಿಕ್ಷಣ ಇದೆ. ಪ್ರೀತಿಯಿಂದ ನೀಡಿದರೆ ಚೆಂದವಾಗಿ ಸ್ವೀಕರಿಸಿ ಅದಕ್ಕೆ ತಕ್ಕದಾಗಿರುವ ರಸೀದಿ ನೀಡುತ್ತಾರೆ. ಇದು ರಾಷ್ಟ್ರವ್ಯಾಪಿ ನಡೆಯುತ್ತಿದೆ. ಶನಿವಾರ ಹೀಗೆ ಬೆಂಗಳೂರಿನಲ್ಲಿ ವಾಹನವನ್ನು ದೇಣಿಗೆ ಸ್ವೀಕರಿಸುವ ಸಲುವಾಗಿ ಅತ್ಯಾಕರ್ಷಕವಾಗಿ ಸಿಂಗರಿಸಿ ಹೋಗುತ್ತಿದ್ದ ಯುವಕರ ಮೇಲೆ ಕನಿಷ್ಟ 200 ಜನರಿದ್ದ ಪುಂಡರು ಹಠಾತ್ತನೆ ದಾಳಿ ಮಾಡಿದ್ದಾರೆ. ವಾಹನವನ್ನು ಹಾಳು ಮಾಡಲು ಯತ್ನಿಸಿದ್ದಾರೆ. ಯುವಕರ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿದ್ದಾರೆ. ಇದು ಏನನ್ನು ಸೂಚಿಸುತ್ತದೆ? ಅಪ್ಪಟ ಗಲಾಟೆಗೆ ಸಂಚು ನಡೆಯುತ್ತಿದೆ ಎನ್ನುವುದು ಯಾರಿಗಾದರೂ ಅರ್ಥವಾಗದೇ ಇರುವುದಿಲ್ಲ. ಯಾರಿಗಾದರೂ ರಾಮ ಮಂದಿರ ನಿರ್ಮಾಣವಾದರೆ ಇದರಿಂದ ಭಾರತೀಯ ಜನತಾ ಪಾರ್ಟಿಗೆ ಅನುಕೂಲವಾಗುತ್ತದೆ ಎನ್ನುವ ಭಾವನೆ ಇದ್ರೆ ಅದನ್ನು ಮೊದಲು ಮನಸ್ಸಿನಿಂದ ತೊಡೆದು ಹಾಕಬೇಕು. ಯಾಕೆಂದರೆ ಈ ವಿಷಯವನ್ನೇ ತಲೆಯಲ್ಲಿ ತುಂಬಿಕೊಂಡಿರುವ ಬಿಜೆಪಿ ವಿರೋಧಿ ಪಕ್ಷಗಳು ಗಲಾಟೆ ಎಬ್ಬಿಸಲು ಮುಂದಾಗುವುದರಿಂದ ಬಿಜೆಪಿಗೆ ಅನುಕೂಲವಾಗುತ್ತದೆ ಎನ್ನುವುದು ಬಿಟ್ಟರೆ ಅವರು ಹಣ ಒಟ್ಟು ಮಾಡಿದರೆ ನಾವು ಕೂಡ ಒಟ್ಟು ಮಾಡಿ ಕೊಡೋಣ ಎನ್ನುವ ಸಕರಾತ್ಮಕ ನಿಲುವಿಗೆ ಎಲ್ಲ ಪಕ್ಷಗಳು ಬರಲು ಏನಿದೆ ತೊಂದರೆ.
ತೊಂದರೆ ಏನು ಎಂದರೆ ಕಾಂಗ್ರೆಸ್ ನವರು ದೇಣಿಗೆ ಸಂಗ್ರಹಿಸಲು ಹೋದರೆ ಜನ ನಂಬುವುದಿಲ್ಲ. ಆ ರೀತಿಯ ವಾತಾವರಣವನ್ನು ಕಾಂಗ್ರೆಸ್ಸಿಗರೇ ಸೃಷ್ಟಿಸಿಕೊಂಡಿದ್ದಾರೆ. ಆದ್ದರಿಂದ ಹೆದರಿರುವ ಕಾಂಗ್ರೆಸ್ ಮತ್ತು ಅದರ ಕಸಿನ್ ಪಕ್ಷಗಳು ಬಿಜೆಪಿಗೆ ದೇಣಿಗೆ ಸಂಗ್ರಹದ ಮೈಲೇಜ್ ಹೋಗಬಾರದು ಎನ್ನುವ ಜಿದ್ದಿಗೆ ಬಿದ್ದಿವೆ. ಅದಕ್ಕಾಗಿ ಗಲಾಟೆಗಳು ಮುಂದಿನ ದಿನಗಳಲ್ಲಿ ಆದರೆ ಸಂಶಯವೇ ಬೇಡಾ, ಬಿಜೆಪಿಗೆ ಇದರ ಲಾಭ ಈಗಿನಕ್ಕಿಂತ ದುಪ್ಪಟ್ಟು ಸಿಗಲಿದೆ.
ಇನ್ನು ರೈತರ ಹೋರಾಟ ಎನ್ನುವ ಪ್ರತಿಭಟನಾಕಾರರ ಡ್ರಾಮಕ್ಕೆ ಬರೋಣ. ಮೊನ್ನೆಯ ತನಕ ಮೋದಿಯ ಇಷ್ಟು ವರ್ಷಗಳ ದೆಹಲಿ ರಾಜಕೀಯದಲ್ಲಿ ಹೆಚ್ಚು ಬಿಸಿ ಮುಟ್ಟಿಸಿದ್ದು ಇದೇ ಹೋರಾಟ ಎನ್ನುವಂತೆ ಎಲ್ಲಾ ಕಡೆ ಬಿಂಬಿತವಾಗುತ್ತಿತ್ತು. ಕೊನೆಗೂ ಮೋದಿಗೆ ಹಿನ್ನಡೆ ಆಗಲು ಶುರುವಾಯಿತು ಎಂದೇ ಎಲ್ಲಾ ವಿಪಕ್ಷಗಳು ಭ್ರಮಿಸಲು ಆರಂಭಿಸಿಕೊಂಡಿದ್ದವು. ಆದರೆ ಒಂದೇ ಒಂದು ಗಲಭೆಯಿಂದ ಏನಾಗಿದೆ ಎಂದರೆ ದೆಹಲಿ-ಹರ್ಯಾಣ ಗಡಿಯಲ್ಲಿ ಎರಡು ತಿಂಗಳಿನಿಂದ ಪ್ರತಿಭಟನೆಗೆ ಟೆಂಟ್ ಹಾಕಿ ಕುಳಿತಿದ್ದ ಪ್ರತಿಭಟನಾಕಾರರಿಗೆ ಅಲ್ಲಿನ ಸ್ಥಳೀಯರೇ ಬಿಸಿ ಮುಟ್ಟಿಸಿದ್ದಾರೆ. ಸಿಂಧೂ ಎನ್ನುವ ಗ್ರಾಮದ ಕಥೆ ಏನೆಂದರೆ ಅಲ್ಲಿ ದೆಹಲಿ-ಹರ್ಯಾಣದ ಗಡಿಯ ಎರಡೂ ಕಡೆಗಳಲ್ಲಿ ಅನೇಕ ಕೈಗಾರಿಕಾ ಪ್ರದೇಶಗಳಿವೆ. ಎರಡೂ ಕಡೆಯ ಜನರು ಗಡಿಯಾಚೆಗೆ ಹೋಗಿ ಬರುವುದು ಸರ್ವೇ ಸಾಮಾನ್ಯ. ಅಲ್ಲಿ ಇರುವ ನೂರಾರು ಕಾರ್ಖಾನೆಗಳಲ್ಲಿ ಎರಡೂ ರಾಜ್ಯಗಳ ಗಡಿಯಲ್ಲಿರುವ ಅಸಂಖ್ಯಾತ ನಾಗರಿಕರು ಗಂಡಸು, ಹೆಂಗಸು ಎನ್ನದೇ ಕೆಲಸ ಮಾಡಿ, ಕೂಲಿಗೀಲಿ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಇದೇ ಗಡಿಯನ್ನು ಈ ಪ್ರತಿಭಟನಾಕಾರರ ನಿರಂತರ ಪ್ರತಿಭಟನೆಯಿಂದ ಅನಿರ್ದಿಷ್ಟಾವಧಿಗೆ ಮುಚ್ಚಲಾಗಿತ್ತು. ಇದರಿಂದ ರಿಕ್ಷಾಗಳು, ಮಿನಿ ಬಸ್ಸುಗಳು, ಲಾರಿ, ಟೆಂಪೋಗಳು ಗಡಿಯ ಆಚೀಚೆ ಹೋಗಲು ಕಷ್ಟಸಾಧ್ಯವಾಗಿತ್ತು. ಇದರಿಂದ ಕಾರ್ಖಾನೆಗಳಲ್ಲಿ ಕೆಲಸ ಮಾಡಲು ಕಾರ್ಮಿಕರು ಹೋಗಿ ಬರಲಾಗದೇ ಒದ್ದಾಡುತ್ತಿದ್ದರು. ಆದರೆ ಕೆಲವರು ಅನಿರ್ದಿಷ್ಟಾವಧಿಯ ಈ ಅಘೋಷಿತ ಬಂದ್ ಪರಿಣಾಮ ಸುತ್ತಿ ಬಳಸಿ ಕೆಲಸಕ್ಕೆ ಹೋಗುತ್ತಿದ್ದರು. ಅನೇಕ ಮನೆಗಳಲ್ಲಿ ಜೀವನಕ್ಕೂ ಕಷ್ಟವಾಗುತ್ತಿತ್ತು. ಆದರೆ ನಮ್ಮ ರೈತರು ನಮ್ಮ ಅನ್ನದಾತರು, ಅವರಿಗೆ ಕಷ್ಟ ಬಂದಾಗ ನಾವು ನಿಲ್ಲಬೇಕು ಎನ್ನುವ ಕಾರಣಕ್ಕೆ ಎಲ್ಲವನ್ನು ಸಹಿಸಿ ಜನರು ರೈತರ ಬೆಂಬಲಕ್ಕೆ ನಿಂತಿದ್ದರು. ಆದರೆ ಈಗ ಏನಾಗಿದೆ ಎಂದರೆ ಈ ಗಡಿಯಲ್ಲಿ ಸೇವೆಗೆ ನಿಂತಿದ್ದ ಒಬ್ಬ ಪೊಲೀಸ್ ಅಧಿಕಾರಿಯ ಮೇಲೆ ಏರಿ ಹೋದ ಪ್ರತಿಭಟನಾಕಾರ ರಕ್ಷಣೆಗೆ ಪೊಲೀಸ್ ಕೈ ಅಡ್ಡ ಹಾಕಿದಾಗ ಬೀಸಿದ ತಲವಾರು ಪೊಲೀಸರ ಕೈಯ ಬೆರಳುಗಳನ್ನು ನಿಸ್ತೇಜ ಮಾಡಿಬಿಟ್ಟಿದೆ. ಇದರಿಂದ ನಿಜಕ್ಕೂ ನೋವು ಅನುಭವಿಸುತ್ತಿರುವುದು ಜನಸಾಮಾನ್ಯ. ಒಂದು ಕಡೆ ಉದ್ಯೋಗ ಇಲ್ಲ. ಅಂಗಡಿಗಳಿಗೆ ವ್ಯಾಪಾರವಿಲ್ಲ. ರಿಕ್ಷಾಗಳಿಗೆ ಬಾಡಿಗೆ ಇಲ್ಲ. ಕೈಗಾರಿಕೆಗಳಿಗೆ ಜನರಿಲ್ಲ. ಇಷ್ಟಿದ್ದರೂ ರೈತರಿಗಾಗಿ ಇದನ್ನೆಲ್ಲ ಸಹಿಸಿಕೊಂಡಿದ್ದ ನಾಗರಿಕರು ಈಗ ಪ್ರತಿಭಟನಾಕಾರರ ಮೇಲೆ ಮುಗಿ ಬಿದ್ದಿದ್ದಾರೆ. ಅಲ್ಲಲ್ಲಿ ಗಲಾಟೆಯಾಗುತ್ತಿದೆ. ಇದರಿಂದ ಕಂಗಾಲಾಗಿರುವ ಪೊಲೀಸರು ಮಧ್ಯೆ ಬಂದು ಅಲ್ಲಲ್ಲಿ ಘರ್ಷಣೆಗಳನ್ನು ನಿಲ್ಲಿಸಲು ಯತ್ನಿಸಿದ್ದಾರೆ. ಇದರಿಂದ ಏನಾಗಿದೆ ಎಂದರೆ ರೈತರ ಹೆಸರಿನಲ್ಲಿದ್ದ ಸ್ವಾರ್ಥಿ ದುರುಳರು ಮೋದಿಯ ಮೇಲೆ ವೈಯಕ್ತಿಕ ದ್ವೇಷಕ್ಕೆ ರೈತರನ್ನು ಬಳಸಿಕೊಂಡರು ಎಂದು ಜನರಿಗೆ ಗ್ಯಾರಂಟಿಯಾಗಿದೆ. ಇದು ಕೂಡ ಹಿನ್ನಡೆಯಾಗುತ್ತದೆ ಎಂದುಕೊಂಡಿದ್ದವರಿಗೆ ಬಿಜೆಪಿಗೆ ಅನುಕೂಲವಾಗುತ್ತಿರುವುದು ಭ್ರಮನಿರಸನವಾಗಿದೆ. ಒಟ್ಟಿನಲ್ಲಿ ವಿಪಕ್ಷಗಳ ಗ್ರಹಚಾರ ಸರಿಯಿಲ್ಲ. ಅವುಗಳು ಏನು ಮಾಡಿದ್ರು ಅಂತ್ಯದಲ್ಲಿ ಮೋದಿಗೆ ಲಾಭವಾಗುತ್ತಿದೆ!
Leave A Reply