ಹೋರ್ಡಿಂಗ್ಸ್ ಗುತ್ತಿಗೆದಾರರ ಮೇಲಿರುವ ಪ್ರೀತಿಯ ಕಾಲಾಂಶ ಜನರ ಮೇಲೆಯೂ ಇರಲಿ!!
ನೀವು ಮಂಗಳೂರು ನಗರದ ಉದ್ದಗಲಕ್ಕೆ ಹೋರ್ಡಿಂಗ್ಸ್ ನೋಡಿರುತ್ತೀರಿ. ಪುಡಿಗಾಸನ್ನು ಪಾಲಿಕೆಗೆ ಕಟ್ಟಿ ಕೋಟ್ಯಾಂತರ ರೂಪಾಯಿ ಬಾಚಿಕೊಳ್ಳುವ ಬೃಹತ್ ಉದ್ಯಮ ಅದು. ಹಲವಾರು ವರ್ಷಗಳಿಂದ ನಿರಂತರವಾಗಿ ಹಣವನ್ನು ದಂಡಿಯಾಗಿ ತುಂಬಿಸಿಕೊಳ್ಳುತ್ತಿರುವ ಹೋರ್ಡಿಂಗ್ಸ್ ಗುತ್ತಿಗೆದಾರರಿಗೆ ಈಗ ವಿನಾಯಿತಿ ಬೇಕಂತೆ. ನಮಗೆ 2019-20 ಹಾಗೂ 2020-21 ನೇ ಸಾಲಿನಲ್ಲಿ ಹೋರ್ಡಿಂಗ್ಸ್ ಬಾಡಿಗೆ ಮತ್ತು ಟ್ಯಾಕ್ಸ್ ತೆಗೆದುಕೊಳ್ಳಬಾರದಾಗಿ ಇವರು ಪಾಲಿಕೆಗೆ ಬೇಡಿಕೆ ಇಟ್ಟಿದ್ದಾರೆ. ಅದಕ್ಕೆ ಅವರು ಕೊಡುವ ಕಾರಣ ಏನೆಂದರೆ ಕೊರೊನಾ. ಲಾಕ್ ಡೌನ್ ಇದ್ದ ಕಾರಣ ಜನ ನೋಡಲಿಲ್ಲ ಎಂದು ಜಾಹೀರಾತುದಾರರು ಹಣ ಕೊಡಲು ಹಿಂಜರಿಯುತ್ತಿದ್ದಾರೆ, ಅದಕ್ಕಾಗಿ ನಮ್ಮಿಂದ ಬಾಡಿಗೆ ತೆಗೆದುಕೊಳ್ಳಬೇಡಿ ಎಂದು ಮನವಿ. ಇವರು ಯಥೇಚ್ಚವಾಗಿ ಹಣವನ್ನು ತಮ್ಮ ತಿಜೋರಿಗೆ ತುಂಬಿಕೊಳ್ಳುವಾಗ ಅವರಿಂದ ಒಂದು ರೂಪಾಯಿ ಹೆಚ್ಚು ಬಾಡಿಗೆ ತೆಗೆದುಕೊಳ್ಳದ ನಮ್ಮ ಪಾಲಿಕೆ ಈಗ ಅವರು ಮನವಿ ಕೊಡುತ್ತಿದ್ದಂತೆ ತಕ್ಷಣ ಎಚ್ಚೆತ್ತುಕೊಂಡು ಅವರ ಕಲ್ಯಾಣಕ್ಕಾಗಿ ಶ್ರಮಿಸುವ ಪಣ ತೊಟ್ಟಿದೆ. ನಾಚಿಕೆ ಆಗಬೇಕು ನಮ್ಮ ಪಾಲಿಕೆಯ ಮನಪಾ ಸದಸ್ಯರಿಗೆ. ಹೋರ್ಡಿಂಗ್ಸ್ ಗುತ್ತಿಗೆದಾರರು ತಮ್ಮದೇ ಕಸಿನ್ ಬ್ರದರ್ಸ್ ತರಹ ಎಂದುಕೊಂಡಂತೆ ಕಾಣುತ್ತಿರುವ ಮನಪಾ ಸದಸ್ಯರು ಅವರ ಬೇಡಿಕೆಯನ್ನು ತಕ್ಷಣ ಹಣಕಾಸು ಸ್ಥಾಯಿ ಸಮಿತಿಗೆ ವರ್ಗಾಯಿಸಿ “ಪಾಪ, ಏನಾದರೂ ಆಗುತ್ತಾ ನೋಡೋಣ” ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ಆದರೆ ಹೀಗೆ ಹೋರ್ಡಿಂಗ್ಸ್ ಗುತ್ತಿಗೆದಾರರಿಗೆ ಯಾವುದೇ ರೀತಿಯ ವಿನಾಯಿತಿ ಕೊಡುವ ಅವಕಾಶ ಹಾಗೂ ಅಧಿಕಾರ ಪಾಲಿಕೆಯ ಸ್ಥಾಯಿ ಸಮಿತಿಗೆ ಇಲ್ಲ. ಅವರು ನಮ್ಮಿಂದ ಆಗಲ್ಲ, ಯಾರಿಗೂ ಗೊತ್ತಾಗದಂತೆ ಕೊಟ್ಟರೆ ನಾಳೆ ಯಾರಿಗಾದರೂ ಗೊತ್ತಾಗಿ ವಿಷಯ ಬಹಿರಂಗವಾದರೆ ಮರ್ಯಾದೆ ಮೂರು ಕಾಸು ಆಗುತ್ತೆ ಎಂದು ಹೆದರಿ ಇದರ ಉಸಾಬರಿಯೇ ಬೇಡಾ ಎಂದು ಹೇಳಿಬಿಟ್ಟಿದ್ದಾರೆ. ಆದರೆ ಪಾಲಿಕೆಯ ಕೆಲವು ಸದಸ್ಯರಿಗೆ ಇದೊಂದು ಪ್ರತಿಷ್ಟೆಯ ಪ್ರಶ್ನೆ. ಹೇಗಾದರೂ ಮಾಡಿ ಹೋರ್ಡಿಂಗ್ಸ್ ಗುತ್ತಿಗೆದಾರರಿಗೆ ಸಹಾಯ ಮಾಡಿ ತಾವು ಮುಂದೆ ಏನಾದರೂ ಗಿಟ್ಟಿಸಿಕೊಳ್ಳೋಣ ಎನ್ನುವ ಆಸೆ ಇರಬಹುದು. ಅವರು ಪಾಲಿಕೆಯ ಕಮೀಷನರ್ ಅವರಿಂದ ಏನಾದರೂ ಮಾಡಲು ಆಗುತ್ತಾ ಎಂದು ನೋಡಿದ್ದಾರೆ. ಅಲ್ಲಿಯೂ ಕಮೀಷನರ್ ನಿರಾಕರಿಸಿದ್ದಾರೆ.
ನಿಮಗೆ ಒಂದು ವಿಷಯ ಗೊತ್ತಿರಲಿ ಎನ್ನುವ ಕಾರಣಕ್ಕೆ ಹೇಳುತ್ತಿದ್ದೇನೆ. ಮನಪಾ ವ್ಯಾಪ್ತಿಯಲ್ಲಿ ಒಟ್ಟು 1431 ಸಕ್ರಮ ಹೋರ್ಡಿಂಗ್ಸ್ ಗಳಿವೆ. ಅದರಲ್ಲಿ ಅರ್ಧದಷ್ಟು ಹೋರ್ಡಿಂಗ್ಸ್ ಮಾಲೀಕತ್ವ ಇರುವುದು ಒಬ್ಬ ಕಾಂಗ್ರೆಸ್ ಕುಳದ ಕೈಯಲ್ಲಿ. ಆದರೆ ಹೋರ್ಡಿಂಗ್ಸ ವಿಷಯ ಬಂದಾಗ ಕಾಂಗ್ರೆಸ್ ನವರೊಂದಿಗೆ ಭಾರತೀಯ ಜನತಾ ಪಾರ್ಟಿಯವರು ಕೂಡ ಒಂದಾಗುತ್ತಾರೆ. ಈ ವಿಷಯವನ್ನು ಪಾಲಿಕೆಯ ಕೌನ್ಸಿಲ್ ಸಭೆಗೂ ಹಾಕಿದ್ದಾರೆ. ಇವರು ಎಲ್ಲಿಯ ತನಕ ಕಿಲಾಡಿಗಳು ಎಂದರೆ ಬಜೆಟಿನಲ್ಲಿ ಜನಸಾಮಾನ್ಯರ ಮನೆ ತೆರಿಗೆಯನ್ನು ಹೆಚ್ಚು ಮಾಡಿದ್ದಾರೆ. ಹಾಗೆ ಮಾಡುವಾಗ ಹಿಂದೆ ಮುಂದೆ ನೋಡಲಿಲ್ಲ. ಜನಸಾಮಾನ್ಯರ ಕುಡಿಯುವ ನೀರಿನ ಶುಲ್ಕವನ್ನು ಕಡಿಮೆ ಮಾಡುತ್ತೇವೆ ಎಂದು ಭರವಸೆ ಕೊಟ್ಟಿದ್ರು. ಆದರೆ ಅದನ್ನು ರಾಜ್ಯ ಸರಕಾರಕ್ಕೆ ಪ್ರಪೋಸಲ್ ಕಳುಹಿಸಿ ಕೈ ತೊಳೆದುಕೊಂಡು ಕುಳಿತಿದ್ದಾರೆ. ರಾಜ್ಯ ಹಾಗೂ ಪಾಲಿಕೆಯಲ್ಲಿ ಇವರದ್ದೇ ಸರಕಾರ ಇದೆ. ಇಷ್ಟಾಗಿಯೂ ನೀರಿನ ಶುಲ್ಕದ ವಿಷಯದಲ್ಲಿ ಇವರಿಂದ ಏನೂ ಕಿಸಿಯಲು ಆಗಲಿಲ್ಲ. ಹಾಗೇ ಉದ್ದಿಮೆ ಪರವಾನಿಗೆ ಶುಲ್ಕವನ್ನು ಹೆಚ್ಚಳ ಮಾಡಿದ್ದಾರೆ. ಅದನ್ನು ಜಾಸ್ತಿ ಮಾಡಲು ಇವರಿಗೆ ಏನೂ ಬೇಸರವಾಗಲಿಲ್ಲ. ಮನೆ ತೆರಿಗೆ, ನೀರಿನ ಶುಲ್ಕದ ಇದೆಲ್ಲ ಜನಸಾಮಾನ್ಯರ ವಿಷಯ. ಅದನ್ನು ಯಾರೂ ಕೇಳುವುದಿಲ್ಲ ಎನ್ನುವ ಧೈರ್ಯ ಪಾಲಿಕೆಯದ್ದು. ಅದೇ ಹೋರ್ಡಿಂಗ್ಸ್ ಕಮರ್ಷೀಯಲ್ ವಿಷಯ. ಲಾಭ ಇಲ್ಲದೆ ಇಷ್ಟು ವರ್ಷ ಹೋರ್ಡಿಂಗ್ಸ್ ಗುತ್ತಿಗೆದಾರರು ಜನಸೇವೆಗೆ ಕುಳಿತಿಲ್ಲ. ಅವರಿಗೆ ಹೋರ್ಡಿಂಗ್ಸ್ ಶುಲ್ಕ ಓಬಿರಾಯನ ಕಾಲದ್ದೇ ಇದೆ. ಇಷ್ಟೆಲ್ಲ ಇರುವಾಗ ಇಲ್ಲಿಯ ತನಕ ನಿಶ್ಚಿಂತೆಯಾಗಿ ಗೋಣಿಯಲ್ಲಿ ಹಣ ಒಟ್ಟು ಮಾಡುತ್ತಿದ್ದವರಿಗೆ ಕೆಲವು ದಿನ ಹೋರ್ಡಿಂಗ್ಸ್ ನಲ್ಲಿ ಸ್ವಲ್ಪ ಆದಾಯ ಕೊರತೆ ಆದರೆ ಇಡೀ ಪಾಲಿಕೆಗೆ ಬೆಂಕಿ ಬಿದ್ದಂತೆ ಇಲ್ಲಿ ಸದಸ್ಯರು ವರ್ತಿಸುತ್ತಿದ್ದಾರೆ. ಕಾನೂನಾತ್ಮಕವಾಗಿ ಹಾಗೆ ಎರಡು ವರ್ಷಗಳಿಗೆ ಹೋರ್ಡಿಂಗ್ಸ್ ಗುತ್ತಿಗೆದಾರರಿಗೆ ಹಣ ಕಟ್ಟುವುದರಿಂದ ಬಿಡುಗಡೆ ಸಾಧ್ಯವಿಲ್ಲ ಎನ್ನುವುದು ಅಲ್ಲಿರುವ ಸದಸ್ಯರಿಗೆ ಗೊತ್ತಿರಬೇಕು. ಇದ್ದದ್ದರಲ್ಲಿಯೇ ಕಾಂಗ್ರೆಸ್ ಕಾರ್ಪೋರೇಟರ್ ನವೀನ್ ಡಿಸೋಜಾ ಸ್ವಲ್ಪ ಬೆಟರ್. ಅವರು ಹೀಗೆ ಮಾಡುವುದು ಸರಿಯಲ್ಲ ಎಂದು ಲಿಖಿತವಾಗಿ ಬರೆದುಕೊಟ್ಟಿದ್ದಾರೆ. ಆದರೆ ಉಳಿದ ಸದಸ್ಯರಿಗೆ ಯಾಕೆ ಹೀಗೆ ಧೈರ್ಯದಿಂದ ಮಾಡಲು ಆಗುವುದಿಲ್ಲ. ಜನಸಾಮಾನ್ಯರ ಬಗ್ಗೆ ಕಾಳಜಿ ಇಲ್ಲದವರಿಗೆ ಹೋರ್ಡಿಂಗ್ಸ್ ಗುತ್ತಿಗೆದಾರರ ಮೇಲೆ ಪ್ರೀತಿ ಬರಲು ಕಾರಣ ಏನು? ಕೆಲವು ಸಂದರ್ಭದಲ್ಲಿ ಇವರ ಪಕ್ಷದ ಏನಾದರೂ ಕಾರ್ಯಕ್ರಮ ಇದ್ದಾಗ ಇದೇ ಗುತ್ತಿಗೆದಾರರು ನಾಲ್ಕು ದಿನ ಫ್ರೀಯಾಗಿ ಹೋರ್ಡಿಂಗ್ಸ್ ಬಿಟ್ಟುಕೊಡುವುದರಿಂದ ಆ ಋಣ ನೆನಪಿಟ್ಟುಕೊಂಡು ಅವರ ಪರವಾಗಿ ಕೈಕಾಲು ಹೊಡೆಯಲಾಗುತ್ತಿದೆ. ಅದಕ್ಕೆ ಹೇಳುವುದು ಯಾರದ್ದಾದರೂ ಸಾಸಿವೆ ತಿನ್ನುವ ಮೊದಲು ನಾಳೆ ಅವನು ಬಾಳೆಹಣ್ಣು ಕೇಳಿದಾಗ ಕೊಡದೇ ಇದ್ದರೆ ಸರಿಯಾಗುತ್ತಾ? ಹಾಗಿದೆ ಪಾಲಿಕೆಯ ಈಗಿನ ಪರಿಸ್ಥಿತಿ!
Leave A Reply