ರೇಡ್ ಆಗಿದೆ ಎಂದರೆ ಮೇಲೆ ಕುಳಿತವರ್ಯಾರಿಗೋ ಹಸಿವೆ ಆಗಿದೆ ಎಂದರ್ಥ!!
ಮಂಗಳೂರು ಮಹಾನಗರ ಪಾಲಿಕೆಯ ನಗರ ಯೋಜನಾ ವಿಭಾಗದ ಜಂಟಿ ನಿರ್ದೇಶಕ ಜಯರಾಜ್ ಮೇಲೆ ಸಿಸಿಬಿ ರೇಡ್ ಆಗಿರುವ ವಿಷಯ ನಿಮಗೆ ಗೊತ್ತೆ ಇದೆ. ನನಗೆ ಇದರಲ್ಲಿ ಆಶ್ಚರ್ಯ ಏನೂ ಅನಿಸುವುದಿಲ್ಲ. ಇದು ಯಾವತ್ತೋ ಆಗಬೇಕಿತ್ತು. ಭ್ರಷ್ಟ ಅಧಿಕಾರಿಗಳ ಪಾಪದ ಕೊಡ ತುಂಬಿದ ದಿನ ಅವರ ಮೇಲೆ ರೇಡ್ ಆಗುತ್ತದೆ ಎಂದು ಅಂದುಕೊಳ್ಳಬಹುದು. ಅಪರೂಪಕ್ಕೆ ಇಂತಹ ರೇಡ್ ಆಗುವುದು ಸರ್ವೇ ಸಾಮಾನ್ಯ. ಮಂಗಳೂರಿನಲ್ಲಿ ಮಾತ್ರವಲ್ಲ. ಮಂಗಳವಾರ ರಾಜ್ಯದ ಏಳು ಅಧಿಕಾರಿಗಳ ಮೇಲೆ ಸಿಸಿಬಿ
ಅಧಿಕಾರಿಗಳು ದಾಳಿ ಮಾಡಿದ್ದಾರೆ. ಪ್ರತಿಯೊಬ್ಬರಿಂದಲೂ ನಿರೀಕ್ಷೆಗೂ ಮೀರಿ ಅಕ್ರಮ ಸಂಪತ್ತನ್ನು ಪತ್ತೆ ಹಚ್ಚಿದ್ದಾರೆ. ಹಾಗಂತ ರಾಜ್ಯದಲ್ಲಿ ಇಷ್ಟೇ ಏಳು ಜನ ಭ್ರಷ್ಟರು ಇದ್ದರು ಎಂದರ್ಥವಲ್ಲ. ಸರಕಾರಿ ಕಚೇರಿಗಳಲ್ಲಿರುವ 99% ಜನ ಭ್ರಷ್ಟರು. ಅವರು ಇವತ್ತು ಮಾಧ್ಯಮದ ಮುಂದೆ ರೇಡು ಆದ ಕಾರಣ ಪ್ರಚಾರಕ್ಕೆ ಬಂದಿರಬಹುದು. ಹಾಗಂತ ಸರಕಾರಿ ವ್ಯವಸ್ಥೆಯಲ್ಲಿ ಅವರದ್ದೇನೂ ಮಾನ ಮರ್ಯಾದೆ ಹೋಗುವುದಿಲ್ಲ. ಸರಕಾರಿ ವ್ಯವಸ್ಥೆಯಲ್ಲಿ ಇದು ಕಾಮನ್. ಯಾಕೆಂದರೆ ಆಯಕಟ್ಟಿನ ಜಾಗಗಳಲ್ಲಿ ಬಂದು ಕೂರುವ ಪ್ರತಿ ಅಧಿಕಾರಿ ಅಧಿಕಾರದಲ್ಲಿರುವ ಸರಕಾರದ ಕೆಲವರಿಗೆ ಇಂತಿಷ್ಟು ದೊಡ್ಡ ಗಂಟು ಆಯಾ ಹುದ್ದೆಗೆ ಸರಿಯಾಗಿ ಕೊಟ್ಟೇ ಬಂದಿರುತ್ತಾನೆ. ಬಂದ ನಂತರ ಒಂದು ಕೋಟಿ ಕೊಟ್ಟಿದ್ದರೆ ನಾಲ್ಕು ಕೋಟಿ ಮಾಡಿಯೇ ಮಾಡುತ್ತಾನೆ. ಅಷ್ಟೇ ಅಲ್ಲ ಕಾಲಕಾಲಕ್ಕೆ ಮತ್ತಿಷ್ಟು ಹಣ ಅವನು ಸಂದಾಯ ಮಾಡಿಯೇ ಮಾಡಬೇಕು. ಕೊಡಲಿಲ್ಲವೋ ಲೋಕಾಯುಕ್ತ, ಸಿಸಿಬಿ ಅಧಿಕಾರದಲ್ಲಿರುವ ಸರಕಾರದ ಕೈಲಿ ಇರುವುದೇಕೆ? ಅವನು ಲೆಕ್ಕಕ್ಕಿಂತ ಜಾಸ್ತಿ ಮಾಡುತ್ತಾ ಇದ್ದಾನೆ. ನಮಗೆ ತಲುಪಿಸಬೇಕಾದ್ದು ಮರೆತುಬಿಟ್ಟಿದ್ದಾನೆ. ಒಂದು ಸಲ ರೇಡು ಮಾಡಿ ಅವನ ಗ್ರಹಚಾರ ಬಿಡಿಸಿ ಎಂದು ಮೇಲಿನಿಂದ ಆದೇಶ ಬಂತೋ ಬ್ರಹ್ಮಾಂಡ ಭ್ರಷ್ಟ ಅಧಿಕಾರಿಗಳಿಗೆ ಟಿವಿಯಲ್ಲಿ, ಪತ್ರಿಕೆಯಲ್ಲಿ ಬಿರುದು ಬಾವಲಿಯೊಂದಿಗೆ ಮರ್ಯಾದೆ ಹರಾಜಿಗೆ ಹಾಕಲು ಕಾಲ ಕೂಡಿ ಬಂದಿದೆ ಎಂದೇ ಅರ್ಥ.
ನಮ್ಮ ಪಾಲಿಕೆಯಲ್ಲಿಯೇ ಈಗ ನಗರ ಯೋಜನಾ ವಿಭಾಗದಲ್ಲಿ 31 ವರ್ಷದಿಂದ ಇರುವ ಒಬ್ಬ ಅಧಿಕಾರಿ ಇದ್ದಾರೆ. ಅವರ ಮೇಲೆ ರೇಡ್ ಮಾಡಿದರೆ ಹಣ, ಬಂಗಾರ, ಭೂಮಿ ಲೆಕ್ಕ ಹಾಕಲು ಒಂದೆರಡು ದಿನ ಸಾಕಾಗಲಿಕ್ಕಿಲ್ಲ. ಅವರು ಕಾಂಗ್ರೆಸ್ ಸರಕಾರ ಇದ್ದಾಗಲೂ ಇದ್ದರು. ಭ್ರಷ್ಟರನ್ನು ವಿರೋಧಿಸುವ ಪಕ್ಷದವರಾದ ಭಾರತೀಯ ಜನತಾ ಪಾರ್ಟಿಯವರು ಅಧಿಕಾರಕ್ಕೆ ಬಂದ ಮೇಲೆಯೂ ಇದ್ದಾರೆ. ಹಾಗಾದರೆ ಕಾಂಗ್ರೆಸ್ ಮತ್ತು ಬಿಜೆಪಿಗೆ ವ್ಯತ್ಯಾಸ ಏನು? ನಾವು ಅಧಿಕಾರಕ್ಕೆ ಬಂದ ಕೂಡಲೇ ಭ್ರಷ್ಟ ವ್ಯವಸ್ಥೆಯನ್ನು ಪಾಲಿಕೆಯಿಂದ ಓಡಿಸುತ್ತೇವೆ ಎಂದು ಮೈಕಿನಲ್ಲಿ ಕಿರುಚಿ ಕಿರುಚಿ ಅಧಿಕಾರಕ್ಕೆ ಬಂದ ಬಳಿಕವೂ ಟೌನ್ ಪ್ಲಾನಿಂಗ್ ವಿಭಾಗದ ಅಧಿಕಾರಿಯನ್ನು ಬಿಡಿ, ಒಂದು ಕಡ್ಡಿಯನ್ನು ಕೂಡ ಅಲ್ಲಾಡಿಸಲಾಗದ ಬಿಜೆಪಿಯ ಬಗ್ಗೆ ಏನು ಹೇಳಿದರೂ ಪ್ರಯೋಜನವಿಲ್ಲ. ಅದಕ್ಕಾಗಿ ನಾನು ಹೇಳುವುದೇನೆಂದರೆ ನಮ್ಮ ಜನರೇ ಸರಿಯಾಗಬೇಕು. ನಾನು ಯಾವುದೇ ತಪ್ಪು ಮಾಡಿಲ್ಲ. ಆದ್ದರಿಂದ ಭ್ರಷ್ಟರಿಗೆ ಲಂಚ ಕೊಡಲ್ಲ ಎಂದು ಧೃಡ ನಿಲುವು ತಳೆಯಬೇಕು. ನಾವು ಕೊಡಲು ಮುಂದಾಗದಿದ್ದರೆ ಅವರು ನಮ್ಮ ಪರ್ಸನ್ನು ಕಸಿದು ಹಣ ತೆಗೆಯಲು ಆಗುತ್ತಾ? ಒಂದು ವೇಳೆ ಅವರು ಹಣ ಕೊಡದಿದ್ದರೆ ಕೆಲಸ ಮಾಡಲು ಸಾಧ್ಯವಿಲ್ಲ ಎಂದರೆ ಅದನ್ನು ಪಾಲಿಕೆ ಕಮೀಷನರ್ ಅವರಿಗೆ ಲಿಖಿತವಾಗಿ ನೀಡಿ. ಮಾಧ್ಯಮಗಳಿಗೆ ನೀಡಿ. ಈ ಬಗ್ಗೆ ಜಾಗೃತಿ ಮೂಡಿಸಿ. ಅದನ್ನು ಬಿಟ್ಟು ನೀವು ನಿಮ್ಮ ಕೆಲಸ ಆಗಲು ಹಣ ಕೊಟ್ಟು ಭ್ರಷ್ಟರನ್ನು ಓಡಿಸಬೇಕು ಎಂದು ಹೇಳಿದರೆ ಪ್ರಯೋಜನವಿಲ್ಲ. ಇನ್ನು ವಾಟ್ಸಪ್ ಗಳಲ್ಲಿ ಅಭಿಪ್ರಾಯ ಬರೆದು ಹಾಕುವ ಗ್ರೂಪುಗಳಿಂದ ಏನೂ ಪ್ರಯೋಜನವಾಗುವುದಿಲ್ಲ. ಇನ್ನು ಇವತ್ತು, ನಿನ್ನೆ ಅಥವಾ ನಾಳೆ ಯಾವುದೇ ಅಧಿಕಾರಿಯ ಮೇಲೆ ರೇಡ್ ಆದರೆ ಅವರು ಭ್ರಷ್ಟಾಚಾರ ನಿಲ್ಲಿಸುತ್ತಾರೆ ಎಂದು ಅಂದುಕೊಳ್ಳಬೇಡಿ. ಕೆಲವು ತಿಂಗಳು ರೆಸ್ಟ್ ಮಾಡಿ ಆತ ಮತ್ತೆ ಒಂದಿಷ್ಟು ಕೋಟಿ ಯಾರಿಗೆ ನೀಡಬೇಕೋ ನೀಡಿ ಅದಕ್ಕಿಂತ ದೊಡ್ಡ ಪೋಸ್ಟಿಗೆ ಮರಳುತ್ತಾನೆ. ಅವನಿಗೂ ಗೊತ್ತು, ನಾನು ರೇಡ್ ಗೆ ಒಳಗಾದದ್ದೇ ಯಾರಿಗೋ ಹೆಚ್ಚು ಹಸಿವಾಗಿದೆ ಎನ್ನುವ ಕಾರಣಕ್ಕೆ. ಅವರಿಗೆ ಹಣ ಕೊಟ್ಟು ಬಂದರೆ ಮತ್ತೆ ಕೆಲವು ವರ್ಷ ಆರಾಮವಾಗಿ ಕೆಸರುಗುಂಡಿಯಲ್ಲಿ ತ್ಯಾಜ್ಯದೊಂದಿಗೆ ಹೊರಳಾಡಬಹುದು.
ಇವತ್ತು ಟಿವಿಯಲ್ಲಿ ನೋಡುವಾಗ, ಪತ್ರಿಕೆಯಲ್ಲಿ ಓದುವಾಗ ಜನಸಾಮಾನ್ಯರಿಗೆ ಏನೋ ಒಳಗೊಳಗೆ ಖುಷಿ. ಅವನಿಗೆ ಹಾಗೆ ಆಗಬೇಕು. ನನ್ನಿಂದಲೂ ಆವತ್ತು ಲಂಚ ಪಡೆದಿದ್ದ ಎಂದು ಕೊಟ್ಟವರು ಖುಷಿ ಪಡುತ್ತಾರೆ. ಸಿಕ್ಕಿಬಿದ್ದದ್ದಕ್ಕೆ ಸಂಭ್ರಮಿಸುತ್ತಾರೆ. ನನ್ನಿಂದ ಲಂಚ ಪಡೆದುಕೊಂಡದ್ದಕ್ಕೆ ದೇವರು ಬಿಡುತ್ತಾನಾ? ಸರಿಯಾದ ಶಿಕ್ಷೆ ಕೊಟ್ಟ ಎಂದು ಅಂದುಕೊಳ್ಳುತ್ತೇವೆ. ಆದರೆ ಅದೇ ನಾವು ಅವನಿಗೆ ಲಂಚ ಕೊಟ್ಟು ಅಪರಾಧಕ್ಕೆ ಪರೋಕ್ಷವಾಗಿ ಕಾರಣರಾದೆವು ಎಂದು ಅಂದುಕೊಳ್ಳುವುದಿಲ್ಲ. ನಾವು ಆವತ್ತೆ ಅವನ ವಿರುದ್ಧ ಧ್ವನಿ ಎತ್ತಿದ್ದರೆ ಅವನು ಕೂಡ ಪಾಪ ಮಾಡುವುದರಿಂದ ರಕ್ಷಿಸಿದಂತೆ ಆಗುತ್ತಿತ್ತು ಎಂದು ಯಾಕೆ ಅಂದುಕೊಳ್ಳುವುದಿಲ್ಲ. ಆದರೆ ಯಾರಿಗೂ ಕೆಟ್ಟವರಾಗುವುದು ಇಷ್ಟವಿಲ್ಲ. ಎಲ್ಲರಿಗೂ ಶಿವಾಜಿ ಪಕ್ಕದ ಮನೆಯಲ್ಲಿಯೇ ಹುಟ್ಟಬೇಕು. ನಾವು ಮಾತ್ರ ಆವತ್ತು ಅವನು ಲಂಚ ತೆಗೆದುಕೊಂಡು ಕೆಲಸ ಮಾಡಿದ್ದಕ್ಕೆ ಶಪಿಸಿರುತ್ತೇವೆ. ಇವತ್ತು ಅವನು ಸಿಕ್ಕಿಬಿದ್ದದ್ದಕ್ಕೆ ಸಂಭ್ರಮಿಸುತ್ತೇವೆ. ಹೋರಾಟ ದೂರದ ಮಾತು!
Leave A Reply