ಗೋವುಗಳಿಗೆ ಸೂರಿಲ್ಲ, ಕಾರಣ ಯಾರ ಹಟ!!
Posted On March 5, 2021
ಮರವೂರು-ಪೇಜಾವರ-ಕೆಂಜಾರಿನಲ್ಲಿ ಇದ್ದ ಕಪಿಲಾ ಗೋಆಶ್ರಮದ ಗೋವುಗಳ ವಿಷಯವೇ ಇಡೀ ಜಿಲ್ಲೆಯಲ್ಲಿ ಸಾಕಷ್ಟು ಚರ್ಚೆಯಲ್ಲಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ತಮಗೆ ತೋಚುತ್ತಿರುವ ವಿಷಯನ್ನೇ ಬರೆಯುತ್ತಿದ್ದಾರೆ. ಈ ಕುರಿತು ನಾನು ಮೂಲ್ಕಿ-ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಅವರ ಬಳಿ ಫೋನಿನಲ್ಲಿ ಮಾತನಾಡಿದ್ದೇನೆ. ಇದೊಂದು ಬಹಳ ಸೂಕ್ಷ್ಮ ವಿಷಯ. ಅದನ್ನು ಯಥಾವತ್ತಾಗಿ ಶಾಸಕ ಕೋಟ್ಯಾನ್ ವಿಡಿಯೋ ಮಾಡಿದ್ದಾರೆ. ಅದರಲ್ಲಿ ಅವರು ಹೇಳಿರುವ ಅಂಶಗಳತ್ತ ಗಮನ ಹರಿಸೋಣ. ಮುಖ್ಯವಾಗಿ ಆ ಭಾಗದಲ್ಲಿ ಕೇಂದ್ರ ಸರಕಾರದ ಕೋಸ್ಟ್ ಗಾರ್ಡ್ ಅಕಾಡೆಮಿ ಬರಲಿದೆ. ಅದು ನಮ್ಮ ಜಿಲ್ಲೆಯ ಮಟ್ಟಿಗೆ ಬಹಳ ದೊಡ್ಡ ವಿಷಯ. ಕೇರಳಕ್ಕೆ ಹೋಗುತ್ತಿದ್ದ ಕೋಸ್ಟ್ ಗಾರ್ಡ್ ಅಕಾಡೆಮಿಯನ್ನು ಸಂಸದ, ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಮ್ಮ ಕ್ಷೇತ್ರಕ್ಕೆ ತರುವಲ್ಲಿ ಮುಖ್ಯಮಂತ್ರಿಗಳ ಸಹಕಾರದೊಂದಿಗೆ ಯಶಸ್ವಿಯಾಗಿದ್ದಾರೆ. ಇಲ್ಲಿಯ ತನಕ ಆ ಪ್ರದೇಶದಲ್ಲಿ ಬೇರೆ ಬೃಹತ್ ಕೈಗಾರಿಕೆಗಳು ಬರುತ್ತವೆ ಎನ್ನುವ ಅಭಿಪ್ರಾಯ ಇತ್ತು. ಏಕೆಂದರೆ ನಾಗಾರ್ಜುನ ಕಂಪೆನಿಗಾಗಿ ಆ ಭಾಗದ ಭೂಮಿಯನ್ನು ಕೆಐಎಡಿಬಿ ಅಲ್ಲಿನ ಜನರಿಗೆ ಸೂಕ್ತ ಪರಿಹಾರ ನೀಡಿ ಸ್ವಾಧೀನಪಡಿಸಿಕೊಂಡಿತ್ತು. ಅದು ಅಂದಾಜು 940 ಎಕರೆ ಭೂಪ್ರದೇಶ. ಆದರೆ ನಿಗದಿತ ಸಮಯದೊಳಗೆ ಅಲ್ಲಿ ಯೋಜನೆ ಆರಂಭಿಸಲು ನಾಗಾರ್ಜುನ ಕಂಪೆನಿಗೆ ಸಾಧ್ಯವಾಗಲೇ ಇಲ್ಲ. ಆದ್ದರಿಂದ ಅದನ್ನು ಬೇರೆ ಯೋಜನೆಗೆ ಕೊಡುವುದೆಂದು ಸರಕಾರದ ಮಟ್ಟದಲ್ಲಿ ನಿಶ್ಚಯವಾಯಿತು. ಆದರೆ ಇದು ಸರಿಯಲ್ಲ ಎಂದು ನಾಗಾರ್ಜುನ ಕಂಪೆನಿ ನ್ಯಾಯಾಲಯದಿಂದ ಸ್ಟೇ ತಂದಿತ್ತು. ಅದರ ನಂತರ ಸರಕಾರವಾಗಲಿ, ಕೆಐಎಡಿಬಿಯಾಗಲಿ, ನಾಗಾರ್ಜುನವಾಗಲಿ ಆ ಕಡೆ ಗಮನ ನೀಡಿರಲಿಲ್ಲ. ಈ ನಡುವೆ ಅಲ್ಲಿದ್ದ 17 ಸೆಂಟ್ಸ್ ಜಾಗವನ್ನು ಅದರ ಮಾಲಕಿ ಓರ್ವ ಹೆಂಗಸು ತನ್ನ ಜಾಗವನ್ನು ಬೇರೆಯವರಿಗೆ ಜಿಪಿ ಮಾಡಿ ಕೊಟ್ಟಿದ್ದರು. ಜಿಪಿ ಹೊಂದಿದವರು ಅದನ್ನು ಪ್ರಕಾಶ್ ಶೆಟ್ಟಿ ಎಂಬುವವರಿಗೆ ಮಾರಿದ್ದಾರೆ. ಗೋವುಗಳನ್ನು ಸಾಕಲು ಮತ್ತು ಅಲ್ಲಿಯೇ ಬೇರೆ ವ್ಯವಹಾರ ಮಾಡಲು ಉದ್ಯಮಿ ಪ್ರಕಾಶ್ ಶೆಟ್ಟಿಯವರು ಆರಂಭಿಸಿದ್ದಾರೆ. ಅದೇ ಜಾಗವನ್ನು ಹಣ ಕೊಟ್ಟು ಕೆಐಎಡಿಬಿ ಈಗಾಗಲೇ ಸ್ವಾಧೀನಪಡಿಸಿಕೊಂಡಿದೆ. ಪ್ರಕಾಶ್ ಅವರು ಗೋವುಗಳನ್ನು ಸಾಕುತ್ತಾ ಅದೇ ಭಾಗದಲ್ಲಿ ಬೇರೆ ಬೇರೆ ವ್ಯವಹಾರ, ಉದ್ಯಮಗಳನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಅವರು ಸಾಕಿರುವ ಸುಮಾರು 270 ಗೋವುಗಳು ಅಲ್ಲಿ ಹುಲ್ಲು ಮೇಯುತ್ತಾ, ನದಿಯ ನೀರು ಸೇವಿಸುತ್ತಾ ಆರಾಮವಾಗಿ ಇದ್ದವು. ಈಗ ಸಮಸ್ಯೆ ಏನೆಂದರೆ ಕೋಸ್ಟ್ ಗಾರ್ಡ್ ಅಕಾಡೆಮಿ ಆರಂಭವಾಗುತ್ತೆ ಎಂದಾಗ ಪ್ರಕಾಶ್ ಶೆಟ್ಟಿಯವರು ಆ ಜಾಗವನ್ನು ಬಿಟ್ಟುಕೊಡಲೇ ಬೇಕಾಗಿತ್ತು. ಆದರೆ ಅವರು ತಯಾರಿರಲಿಲ್ಲ. ಅವರೊಂದಿಗೆ ಹಲವು ಸುತ್ತಿನ ಮಾತುಕತೆಗಳು ಈಗಾಗಲೇ ವಿವಿಧ ಮಟ್ಟದಲ್ಲಿ ನಡೆದಿವೆ. ಆದರೆ ಅವರು ತಮ್ಮ ಜಾಗದಿಂದ ಬೇರೆಡೆ ಸ್ಥಳಾಂತರ ಆಗಲು ಒಪ್ಪಲೇ ಇಲ್ಲ. ಈಗ ಜಿಲ್ಲಾಡಳಿತ ಅಲ್ಲಿ ಇರುವ ಅನಧಿಕೃತ ನಿರ್ಮಾಣವನ್ನು ಕೆಡವಿ ಹಾಕಿದೆ. ಗೋವುಗಳು ಎಲ್ಲೆಲ್ಲೋ ಅಲೆದಾಡುವಂತಾಗಿದೆ. ಒಂದು ವೇಳೆ ಪ್ರಕಾಶ್ ಅವರು ಬೇರೆಡೆ ಸ್ಥಳಾಂತರ ಮಾಡಲು ಒಪ್ಪಿದ್ದರೆ ನಾವೇ ವ್ಯವಸ್ಥೆ ಮಾಡಿಕೊಡುತ್ತಿದ್ದೇವು ಎನ್ನುವುದು ಶಾಸಕ ಉಮಾನಾಥ ಕೋಟ್ಯಾನ್ ಅವರ ಮಾತು. ಇನ್ನು ಈಗಲೂ ಪ್ರಕಾಶ ಅವರಿಗೆ ಗೋವನ್ನು ಸಾಕಲು ಕಷ್ಟವಾದರೆ ನಾವು ಜಿಲ್ಲಾಡಳಿತದ ಮೂಲಕ ಅವುಗಳನ್ನು ಸೂಕ್ತ ಕಡೆ ಸ್ಥಳಾಂತರಿಸಿ ಅವುಗಳ ರಕ್ಷಣೆಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಶಾಸಕರು ಹೇಳುತ್ತಿದ್ದಾರೆ. ಆದರೆ ಸ್ಥಳಾಂತರಕ್ಕೆ ಪ್ರಕಾಶ ಶೆಟ್ಟಿ ಒಪ್ಪುತ್ತಿಲ್ಲ ಎನ್ನಲಾಗುತ್ತಿದೆ. ಒಬ್ಬ ವ್ಯಕ್ತಿ ಸರಕಾರಿ ಜಾಗ ಪಾಳು ಬಿದ್ದಿದ್ದಾಗ ಆ ಜಾಗದಲ್ಲಿ ತಾನು ಏನಾದರೂ ಮಾಡಿದ್ದರೆ ಅದನ್ನು ಯಾರೂ ಕೇಳದಿದ್ದರೆ ಅದೇ ಶಾಶ್ವತ ಎಂದು ಅಂದುಕೊಳ್ಳಬಾರದು. ಗೋವುಗಳನ್ನು ಸಾಕುವುದು ಶ್ರೇಷ್ಟ ಕೆಲಸ. ಆದರೆ ಅದರ ಹೆಸರಿನಲ್ಲಿ ಹಠ ಹಿಡಿದರೆ ಮುಂದೆ ತೊಂದರೆಯಾಗುತ್ತದೆ. ಈಗ ಪ್ರಕಾಶ್ ಶೆಟ್ಟಿ ಹಟದಿಂದ ಆ ಮೂಕ ದನಗಳು ದಾರಿಗೆ ಬಿದ್ದಂತೆ ಆಗಿದೆ. ಅದನ್ನು ಹೇಳುವವರಾರು? ಎಲ್ಲರೂ ಗೋವಿನ ಅಳುವಿನ ಫೋಟೋ ಹಾಕಿ ಮನಸ್ಸಿಗೆ ಬಂದ ಹಾಗೆ ಬರೆಯುತ್ತಿದ್ದಾರೆ. ಆದರೆ ಈ ವಿಷಯದಲ್ಲಿ ನೈಜ ವಿಷಯ ಬೇರೆಯದ್ದೇ ಇದೆ ಎಂದು ಹಲವರಿಗೆ ಗೊತ್ತಿಲ್ಲ.
- Advertisement -
Trending Now
ರಾಜ್ಯ ಸರಕಾರ 350 ಕೋಟಿ ಬಾಕಿ ಹಿನ್ನಲೆ; ದಯಾಮರಣ ನೀಡಲು ಮನವಿ!
January 14, 2025
Leave A Reply