ಅಲ್ಪಸಂಖ್ಯಾತರು ಎಂದರೆ ಬರಿ ಮುಸ್ಲಿಮರು ಅಲ್ಲ ಯಡ್ಡಿ?
ಈ ಬಜೆಟಿನಲ್ಲಿ ನಮ್ಮ ದಕ್ಷಿಣ ಕನ್ನಡ ಜಿಲ್ಲೆಗೆ ಒಳ್ಳೆಯದು ಯಾವುದು ಎಂದು ಕೇಳಿದರೆ ಇಡೀ ರಾಜ್ಯಕ್ಕೆ ಹೇಗೆ ಯಾವುದೇ ತೆರಿಗೆ ಹೊಸದ್ದು ಹಾಕದೇ ಬಜೆಟ್ ಮಾಡಲಾಗಿದೆಯೋ ಅಷ್ಟು ಮಾತ್ರ ಎಂದು ಹೇಳಬಲ್ಲೆ. ಆದರೆ ಎಂಟನೇ ಬಜೆಟ್ ಮಂಡಿಸುತ್ತಿರುವ ಯಡ್ಡಿಯೂರಪ್ಪನವರಿಗೆ ನಿಜಕ್ಕೂ ಈ ರಾಜಕೀಯ ಕದನ, ಸಿಡಿ ಗಲಾಟೆ, ಮೀಸಲಾತಿ ವಿವಾದ ಇದರ ನಡುವೆ ರಾಜ್ಯದ ಆರ್ಥಿಕ ವ್ಯವಸ್ಥೆಯ ಮುಖ್ಯ ಅಂಗವಾಗಿರುವ ಬಜೆಟ್ ಕಡೆ ಅಷ್ಟು ಗಮನ ಕೊಡಲಾಗಲಿಲ್ಲ ಎನ್ನುವುದು ಸ್ಪಷ್ಟ. ಇನ್ನು ಐಎಎಸ್ ಕಲಿತಿರೋ ಅಧಿಕಾರಿಗಳಾದರೂ ಬಜೆಟ್ ಸರಿಯಾಗಿ ಮಾಡಿ ಯಡ್ಡಿ ಕೈಯಲ್ಲಿ ಕೊಟ್ಟಿದ್ದಾರೋ ಎಂದು ನೋಡಿದರೆ ಅದು ಕೂಡ ಇಲ್ಲ. ಅವರು ಅಷ್ಟು ದೊಡ್ಡ ದೊಡ್ಡ ಸಂಬಳ ತೆಗೆದುಕೊಂಡದ್ದಾಕ್ಕಾದರೂ ಸರಿಯಾಗಿ ಬಜೆಟ್ ಬರೆಯಬೇಕಿತ್ತು. ಅವರಿಗೆ ಕನಿಷ್ಟ ಜ್ಞಾನ ಕೂಡ ಇಲ್ಲ ಎನ್ನುವುದಕ್ಕೆ ಒಂದು ಉದಾಹರಣೆ ಕೊಡುತ್ತೇನೆ. ಯಡ್ಡಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ 1500 ಕೋಟಿ ಇಟ್ಟಿದ್ದಾರೆ. ಇರಲಿ, ಭಾರತೀಯ ಜನತಾ ಪಾರ್ಟಿಯವರಿಗೆ ಅರ್ಜೆಂಟಾಗಿ ತಾವು ಅಲ್ಪಸಂಖ್ಯಾತರ ರಕ್ಷಕರು ಎಂದು ತೋರಿಸಿ ಕಾಂಗ್ರೆಸ್ ವೋಟ್ ಬ್ಯಾಂಕ್ ಒಡೆಯಬೇಕಿದೆ. ಆದ್ದರಿಂದ ಅವರು ವೋಟ್ ಹಾಕದಿದ್ದರೂ ಅವರಿಗೆ ಕಾಂಗ್ರೆಸ್ ಕೊಟ್ಟಿದ್ದಕ್ಕಿಂತ ಜಾಸ್ತಿ ಅನುದಾನ ಬಿಜೆಪಿಯವರು ಕೊಡುತ್ತಾರೆ. ಆದರೆ ಈಗ ವಿಷಯ ಇರುವುದು ಯಡ್ಡಿ ಅಥವಾ ಬಜೆಟ್ ತಯಾರಿಸಿದ ಅಧಿಕಾರಿಗಳು ಯಾರನ್ನು ಅಲ್ಪಸಂಖ್ಯಾತರು ಎಂದು ಅಂದುಕೊಂಡಿದ್ದಾರೆ. ಅಲ್ಪಸಂಖ್ಯಾತ ಎಂದರೆ ಅದರಲ್ಲಿ ಮುಸ್ಲಿಮರು, ಕ್ರೈಸ್ತರು, ಜೈನರು, ಸಿಖ್, ಬೌದ್ಧರು, ಪಾರ್ಸಿಗಳು ಹೀಗೆ ವಿವಿಧ ಸಮುದಾಯ ಬರುತ್ತದೆ. ಈಗ ಯಡ್ಡಿ ಇಟ್ಟಿರುವ 1500 ಕೋಟಿಯಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಹಣ ಸಿಗುವುದಾದರೆ ಪುನ: ಕ್ರೈಸ್ತರಿಗೆ 200 ಕೋಟಿ ಪ್ರತ್ಯೇಕ ನೀಡುವ ಅಗತ್ಯ ಏನಿತ್ತು ಎನ್ನುವುದು ಪ್ರಶ್ನೆ. ಜೈನರು ಕೂಡ ಅಲ್ಪಸಂಖ್ಯಾತರೇ ಆಗಿರುವುದರಿಂದ ಅವರಿಗೆ ಪುನ: 50 ಕೋಟಿ ಕೊಡುವ ಅಗತ್ಯ ಏನಿದೆ? ಒಂದೋ ಅಲ್ಪಸಂಖ್ಯಾತರು ಎಂದರೆ ಮುಸ್ಲಿಮರು ಮಾತ್ರ ಎಂದು ಇವರು ಅಂದುಕೊಂಡಿದ್ದಾರೆ. ಇಲ್ಲ ಕ್ರೈಸ್ತರನ್ನು, ಜೈನರನ್ನು ಇವರು ಅಲ್ಪಸಂಖ್ಯಾತರ ಕ್ಯಾಟಗರಿಯಿಂದ ಪ್ರತ್ಯೇಕವಾಗಿ ಇಡಲಾಗಿದೆಯಾ ಎಂದು ಯಡ್ಡಿ ಹೇಳಿಬಿಡಬೇಕು.
ಇನ್ನು ಮಧ್ಯಮ ವರ್ಗದವರು 35 ರಿಂದ 45 ಲಕ್ಷದ ಒಳಗಿನ ಫ್ಲಾಟ್ ಖರೀದಿ ಮಾಡುವುದಾದರೆ ರಿಜಿಸ್ಟ್ರೇಶನ್ ಫೀಸ್ ಐದರಿಂದ ಮೂರು ಶೇಕಡಾಗೆ ಇಳಿಸಿ ಸಿಎಂ ಔದಾರ್ಹತೆ ಮೆರೆದಿದ್ದಾರೆ. ಆದರೆ ಅದರೊಂದಿಗೆ ಇನ್ನೊಂದು ಬಹಳ ಮುಖ್ಯವಾದ ವಿನಾಯಿತಿ ಮಂಗಳೂರಿನ ಜನರಿಗೆ ಸಿಗಲೇಬೇಕಿತ್ತು. ಅದೇನೆಂದರೆ ನಾವು ನಮ್ಮದೇ ಐದು ಸೆಂಟ್ಸ್ ಜಾಗದಲ್ಲಿ ಒಂದು ಮನೆ ಕಟ್ಟುವುದಾದರೆ ಆ ಜಾಗವನ್ನು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಏಕನಿವೇಶನ ಮಾಡಬೇಕು. ಅಲ್ಲಿ ಐದು ಸೆಂಟ್ಸ್ ಜಾಗ ಆದಲ್ಲಿ ಕನಿಷ್ಟ ನಲ್ವತ್ತರಿಂದ ನಲ್ವತ್ತೈದು ಸಾವಿರ ರೂಪಾಯಿ ಕಟ್ಟಬೇಕಾಗುತ್ತದೆ. ಹಿಂದೆ ಬಿಜೆಪಿ ಸರಕಾರ ಬರುವ ಮೊದಲು ಹೆಚ್ಚೆಂದರೆ ಏಳು ಸಾವಿರ ರೂಪಾಯಿ ಒಳಗೆ ಈ ಎಲ್ಲಾ ಪ್ರಕ್ರಿಯೆ ಆಗಿ ಹೋಗುತ್ತಿತ್ತು. ಈಗ ಇವರು ರಿಂಗ್ ರೋಡ್ ಫೀಸ್, ಕೆರೆ,ಬಾವಿ ಅಭಿವೃದ್ಧಿ ಫೀಸ್ ಎಂದು ಹಾಕಿ ಮಧ್ಯಮ ವರ್ಗದ ವ್ಯಕ್ತಿ ಈ ಹೊರೆಯನ್ನು ಅನುಭವಿಸುವಂತೆ ಮಾಡಿದ್ದಾರೆ. ಮೂಡಾ ವ್ಯಾಪ್ತಿಯಲ್ಲಿ ರಿಂಗ್ ರೋಡ್ ಯಾವಾಗ ಆಗುತ್ತದೆ ಎಂದು ಇವರು ಹೇಳಬೇಕು. ಸುಮ್ಮನೆ ಬೆಂಗಳೂರು, ಮೈಸೂರಿನಲ್ಲಿ ಅಂತಹ ಫೀಸ್ ಹಾಕುತ್ತಾರೆ ಎಂದು ಇಲ್ಲಿ ಹಾಕಬಾರದು. ರಿಂಗ್ ರೋಡ್ ಮಾಡಲು ಇಲ್ಲದಿದ್ದರೆ ಆ ಹೊರೆ ಯಾಕೆ ನಮ್ಮ ಮೇಲೆ ಹಾಕುವುದು. ಇನ್ನು ಕೆರೆ-ಬಾವಿ ಅಭಿವೃದ್ಧಿ ಶುಲ್ಕ ಎಂದು ಸಂಗ್ರಹ ಮಾಡುತ್ತಾರೆ. ಗುಜ್ಜಾರೆ ಕೆರೆ, ಕಾವೂರು ಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿ ಮಾಡಲು ಇವರು ಬಳಸುತ್ತಿರುವುದು ಸ್ಮಾರ್ಟ್ ಸಿಟಿ ಅನುದಾನ. ಹಾಗಾದರೆ ಇವರು ಈ ಪಾಟಿ ಸಂಗ್ರಹ ಮಾಡುವುದು ಯಾಕೆ? ಒಂದು ಸೆಂಟ್ಸ್ ಗೆ ಅಂದಾಜು 750 ರೂಪಾಯಿಯನ್ನು ಇವರು ಸಂಗ್ರಹಿಸುತ್ತಾರೆ. ಐದು ಸೆಂಟ್ಸ್ ಆದರೆ ನಾಲ್ಕು ಸಾವಿರ ದಾಟಿರುತ್ತದೆ. ಒಂದು ಸೆಂಟ್ಸ್ ಜಾಗವನ್ನು ಏಕನಿವೇಶನ ಮಾಡುವುದಾದರೂ ಆ ಮಧ್ಯಮ ವರ್ಗದ ವ್ಯಕ್ತಿಗೆ ಕನಿಷ್ಟ 20 ಸಾವಿರದಿಂದ 25 ಸಾವಿರ ರೂಪಾಯಿಯವರೆಗೆ ಹೊರೆ ಬೀಳುತ್ತದೆ. ಇದು ಸರಿಯಾ ಎನ್ನುವುದು ಈಗ ಉಳಿದಿರುವ ಪ್ರಶ್ನೆ. ಯಡ್ಡಿ ಮಧ್ಯಮ ವರ್ಗದವರಿಗಾಗಿ ಒಳ್ಳೆಯದು ಮಾಡುವುದಕ್ಕಾಗಿ ರಿಜಿಸ್ಟ್ರೇಶನ್ ಶುಲ್ಕ ಇಳಿಸಿದ್ದಾರೋ ಅಥವಾ ಬಿಲ್ಡರ್ ಗಳಿಗಾಗಿ ಹಾಗೆ ಮಾಡಿದ್ದಾರೋ ಒಟ್ಟಿನಲ್ಲಿ ಇಳಿಕೆಯಾಗಿದೆ, ಅದೇ ಮಂಗಳೂರಿನಲ್ಲಿ ಹೀಗೆ ಸುಲಿಗೆ ಮಾಡುವುದಾದರೆ ಮಂಗಳೂರಿನ ಮಧ್ಯಮ ವರ್ಗದ ಜನ ಏನು ಅಪರಾಧ ಮಾಡಿದ್ದಾರೆ ಎಂದು ಸಿಎಂ ಹೇಳಬೇಕು.
ಇನ್ನು ಕರ್ನಾಟಕ ಎಂದರೆ ಬೆಂಗಳೂರು ಮಾತ್ರವಲ್ಲ, ಅಲ್ಲಿ ಬಿಬಿಎಂಪಿ ಚುನಾವಣೆ ಇರಬಹುದು. ಹಾಗಂತ 7795 ಸಾವಿರ ಕೋಟಿ ಅಲ್ಲಿಗೆ ಇಟ್ಟರೆ ತೆರಿಗೆಯನ್ನು ಕೂಡ ಅಲ್ಲಿಂದಲೇ ವಸೂಲಿ ಮಾಡಿ. ನಿಮ್ಮ ಚುನಾವಣೆಯ ಗೆಲುವಿನ ಹಪಾಹಪಿಗೆ ಅವರಿಗೆ ಸಿಂಹಪಾಲು ಕೊಡುವುದಾದರೆ ನಾವು ಯಾಕೆ ತೆರಿಗೆ ಕಟ್ಟಬೇಕು. ಇನ್ನು ಯಡ್ಡಿ ತಮ್ಮ ಕಾರ್ಯಕ್ಷೇತ್ರ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ಕೊಟ್ಟು ಅಲ್ಲಿನ ಜನ ತಮ್ಮನ್ನು ಮತ್ತು ಮಗನನ್ನು ಗೆಲ್ಲಿಸುತ್ತಿರುವುದಕ್ಕೆ ಋಣ ತೀರಿಸಲು ಹೊರಟ್ಟಿದ್ದಾರೆ. ಅದನ್ನು ಬೇಕಾದರೆ ಮೆಚ್ಚೋಣ. ನಮ್ಮ ಸದಾನಂದ ಗೌಡ ಎನ್ನುವ ವ್ಯಕ್ತಿ ಸಿಎಂ ಆಗಿದ್ದಾಗ ದಕ್ಷಿಣ ಕನ್ನಡ ಜಿಲ್ಲೆಗೆ ಸಿಕ್ಕಿರುವುದು ಕಾಂಗ್ರೆಸ್ ಕಚೇರಿ ಮಾತ್ರ. ಮಲ್ಲಿಕಟ್ಟೆಯಲ್ಲಿ ನೂತನ ಕಾಂಗ್ರೆಸ್ ಕಚೇರಿಗೆ ಸದಾನಂದ ಗೌಡರ ಸಹಕಾರ ಇದ್ದೇ ಇದೆ. ನಮ್ಮ ಜಿಲ್ಲೆಗೆ ಈ ಬಾರಿ ಸರಿಯಾಗಿ ಸಿಕ್ಕಿದ್ದು ಅಡಿಕೆಗೆ ಹಳದಿ ಕೊಳೆರೋಗ ಬಂದಾಗ ಏನು ಮಾಡಲು ಯೋಚಿಸಲು ಅಧ್ಯಯನ ಕೇಂದ್ರ. ಅದು ಬಿಟ್ಟರೆ ಪ್ಲಾಸ್ಟಿಕ್ ಪಾರ್ಕ್ ಕೇಂದ್ರದ ಯೋಜನೆ. ಅಗತ್ಯವಾಗಿ ಆಗಬೇಕಾಗಿದ್ದದ್ದು ತುಂಬೆ ಹೊಸ ಡ್ಯಾಂ ಎತ್ತರ ಏಳು ಮೀಟರ್ ನಿಲ್ಲಿಸಲು ಪರಿಹಾರ ಹಣ ಮತ್ತು ಪಂಪ್ ವೆಲ್ ನಲ್ಲಿ ಹೊಸ ಬಸ್ ಸ್ಟ್ಯಾಂಡಿಗೆ ಹಣ. ಅದೇರಡೂ ಆಗಲಿಲ್ಲ!!
Leave A Reply