ಸಾಫ್ಟವೇರ್ ಮಾಡಲು ಆದೇಶ ಕೊಟ್ಟವರ ನಿರ್ಲಕ್ಷ್ಯವೋ ಅಥವಾ ಬ್ರಾಹ್ಮಣರಲ್ಲಿ ಇರುವ ಹತ್ತಾರು ವರ್ಗಗಳ ಬಗ್ಗೆ ಅಜ್ಞಾನವೋ ಅಥವಾ ಬ್ರಾಹ್ಮಣರ ಬಗ್ಗೆ ಉಢಾಪೆಯೋ ಅಥವಾ ಏನು ಅನ್ಯಾಯವಾದರೂ ಬ್ರಾಹ್ಮಣರು ಅದರಲ್ಲಿಯೂ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯ, ಸಾರಸ್ವತ ಬ್ರಾಹ್ಮಣ ಸಮುದಾಯದವರು ತೆಪ್ಪಗೆ ಕುಳಿತುಕೊಳ್ಳುತ್ತಾರೆ ಎನ್ನುವ ಭಂಡ ಧೈರ್ಯವೋ ಒಟ್ಟಿನಲ್ಲಿ ಒಂದು ಪ್ರಮಾದ ಅಸಂಖ್ಯಾತ ಬ್ರಾಹ್ಮಣರಲ್ಲಿಯೇ ಇರುವ ಒಂದು ವರ್ಗ ಜಿಎಸ್ ಬಿ ಹಾಗೂ ಎಸ್ ಬಿಯ ಮಕ್ಕಳಿಗೆ ಸಾಕಷ್ಟು ಅನ್ಯಾಯ ಮಾಡಿದೆ.
ಭಾರತೀಯ ಜನತಾ ಪಾರ್ಟಿಯ ನೇತೃತ್ವದ ಕೇಂದ್ರ ಸರಕಾರ ಅಧಿಕಾರಕ್ಕೆ ಬಂದ ನಂತರ ಕುರುಡರಲ್ಲಿಯೇ ಮೆಳ್ಳೆಗಣ್ಣು ಒಂದಿಷ್ಟು ವಾಸಿ ಎನ್ನುವಂತೆ ಬ್ರಾಹ್ಮಣರಲ್ಲಿಯೇ ಇರುವ ಬಡವರಿಗೆ 10% ಮೀಸಲಾತಿ ಘೋಷಿಸಿತ್ತು. ಇದರಿಂದ ದೊಡ್ಡ ಪ್ರಯೋಜನ ಎಂದು ಇಲ್ಲವಾದರೂ ನಿಮ್ಮ ಮಗ, ಮಗಳು ಒಂದು ವೇಳೆ ಭಾಷಾ ಅಲ್ಪಸಂಖ್ಯಾತ ಸಮುದಾಯದವರು ನಡೆಸುವ (ಲಿಂಗ್ವಿಸ್ಟಿಕ್ ಮೈನಾರಿಟಿ) ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮೆರಿಟ್ ಸೀಟ್ ಪಡೆಯಲು ಈ ಮೀಸಲಾತಿಯಿಂದ ಸುಲಭವಾಗುತ್ತದೆ. ಉದಾಹರಣೆಗೆ ಕಸ್ತೂರ್ಬಾ ಮೆಡಿಕಲ್ ಕಾಲೇಜು, ಲಿಂಗ್ವಿಸ್ಟಿಕ್ ಮೈನಾರಿಟಿ ಅಂದರೆ ಜಿಎಸ್ ಬಿಗಳು ನಡೆಸುವ ಕಾಲೇಜು. ಅಲ್ಲಿ ನೀವು ಜಿಎಸ್ ಬಿ ಎಂದು ಜಾತಿ ಪ್ರಮಾಣಪತ್ರ ಸಲ್ಲಿಸಿದರೆ ನಿಮಗೆ ಮೆರಿಟ್ ಸೀಟು ಸಿಗುತ್ತದೆ. ಆದರೆ ಜಾತಿ ಪ್ರಮಾಣ ಪತ್ರ ಎಲ್ಲಿ ಪಡೆಯುವುದು? ಅದಕ್ಕೆ ನೀವು ತಾಲೂಕು ಕಚೇರಿಗೆ ಹೋಗುತ್ತೀರಿ. ಅಲ್ಲಿ ಕಂಪ್ಯೂಟರ್ ನಲ್ಲಿ ಅರ್ಜಿ ತುಂಬುವಾಗ ಜಾತಿ ಕಾಲಂನಲ್ಲಿ ಬ್ರಾಹ್ಮಣ ಎಂದು ಬರುತ್ತದೆ. ನೀವು ಜಿಎಸ್ ಬಿ ಎನ್ನುತ್ತೀರಿ. ಆದರೆ ಫಾರಂನಲ್ಲಿ ಅಂತಹ ಆಯ್ಕೆ ಇಲ್ಲವೇ ಇಲ್ಲ. ಯಾಕೆಂದರೆ ಸಾಫ್ಟವೇರ್ ಹಾಗೆ ರಚಿಸಿಯೇ ಇಲ್ಲ. ಕೇವಲ ಬ್ರಾಹ್ಮಣ ಎಂದು ಪ್ರಮಾಣಪತ್ರ ತೆಗೆದುಕೊಂಡು ಹೋದರೆ ನಿಮಗೆ ಅಂತಹ ಕಾಲೇಜುಗಳಲ್ಲಿ ಮೀಸಲಾತಿ ಅವಕಾಶ ಸಿಗುವುದಿಲ್ಲ. ಹಾಗಿರುವಾಗ ಈ ತೊಂದರೆಯನ್ನು ಸರಿ ಮಾಡಬೇಕಲ್ಲ. ಗೋವಾ ರಾಜ್ಯದಲ್ಲಿ ಈ ಬಗ್ಗೆ ಆದ ಪ್ರಮಾದವನ್ನು ಬೇಗ ಸರಿಪಡಿಸಿದ್ದಾರೆ. ಈಗ ಸರದಿ ಕರ್ನಾಟಕದ್ದು. ಜಿಎಸ್ ಬಿಗಳು ಬಿಜೆಪಿ ಸರಕಾರದ ವೋಟ್ ಬ್ಯಾಂಕ್. ಆದರೆ ತಮ್ಮ ವೋಟ್ ಬ್ಯಾಂಕನ್ನು ರಾಜ್ಯ ಸರಕಾರ ಯಾಕೆ ನಿರ್ಲಕ್ಷಿಸಿದೆ ಎಂದೇ ಗೊತ್ತಾಗುತ್ತಿಲ್ಲ. ಈ ಬಗ್ಗೆ ವಿಧಾನಸಭಾ ಅಧಿವೇಶನದಲ್ಲಿ ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಮಾತನಾಡಿದ್ದಾರೆ. ಅವರಿಗೆ ಕಾರ್ಕಳದ ಶಾಸಕ ಸುನೀಲ್ ಕುಮಾರ್ ಸಾಥ್ ನೀಡಿದ್ದಾರೆ. ಬ್ರಾಹ್ಮಣರಲ್ಲಿ ಇರುವ ಜಿಎಸ್ ಬಿಗಳ ಕುಟುಂಬದ ಒಟ್ಟು ಆದಾಯ ಎಂಟು ಲಕ್ಷದ ಒಳಗೆ ಇದ್ದರೆ ನೀವು ಕೇಂದ್ರ ಸರಕಾರ ನೀಡಿರುವ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯದಲ್ಲಿರುವ ವರ್ಗಗಳಿಗೆ ಸಿಗುವ 10% ಮೀಸಲಾತಿ ಸಿಗುತ್ತದೆ. ಸ್ಕಾಲರ್ ಶಿಪ್ ಮತ್ತು ಸೀಟ್ ಗಳಿಗೆ ಈ ಸೌಲಭ್ಯವನ್ನು ಉಪಯೋಗಿಸಬಹುದು. ಬ್ರಾಹ್ಮಣರನ್ನು ಎಷ್ಟೇ ಉನ್ನತ ಜಾತಿ ಎಂದು ಹಣೆಪಟ್ಟಿ ಕಟ್ಟಿದರೂ ಅದರಲ್ಲಿರುವ ಗೌಡ ಸಾರಸ್ವತ ಬ್ರಾಹ್ಮಣರಲ್ಲಿ ದೊಡ್ಡ ಶೇಕಡಾ ಜನ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದವರು. ಅವರಿಗೆ ಇದರಿಂದ ಪ್ರಯೋಜನವಾಗಬೇಕಾದರೆ ಆದಷ್ಟು ಬೇಗ ರಾಜ್ಯ ಸರಕಾರ ಎಚ್ಚೆತ್ತುಕೊಂಡು ತನ್ನ ತಪ್ಪನ್ನು ಸರಿ ಮಾಡಬೇಕು.
ಕೆಲವು ತಿಂಗಳ ಹಿಂದೆ ರಾಜ್ಯದ ಕಂದಾಯ ಸಚಿವ ಅಶೋಕ್ ಅವರು ಮಂಗಳೂರಿಗೆ ಬಂದಾಗ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ನಿಂದ ನಾವು ಪದಾಧಿಕಾರಿಗಳು ಶಾಸಕರಾದ ಡಿ ವೇದವ್ಯಾಸ ಕಾಮತ್ ಹಾಗೂ ವಿಧಾನಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್ ಅವರ ನೇತೃತ್ವದಲ್ಲಿ ಒಂದು ಮನವಿ ಸಲ್ಲಿಸಿ ರಾಜ್ಯ ಸರಕಾರ ಈ ಕೂಡಲೇ ಈ ಅನ್ಯಾಯವನ್ನು ಸರಿಪಡಿಸಿ ನ್ಯಾಯ ಒದಗಿಸಬೇಕೆಂದು ಮನವಿ ಮಾಡಿದ್ದೇವು. ಅದೇ ಪ್ರಕಾರವಾಗಿ ಉಡುಪಿಯ ಜಿಎಸ್ ಬಿ ಸಮಾಜದ ಹಿರಿಯರು ಅಲ್ಲಿನ ಶಾಸಕ ಸುನೀಲ್ ಕುಮಾರ್ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಿದ್ದರು. ಆದಷ್ಟು ಬೇಗ ಇದನ್ನು ಸರಿಪಡಿಸುತ್ತೇನೆ ಎಂದು ಹೇಳಿದ ಸಚಿವರು ನಂತರ ಈ ಬಗ್ಗೆ ಗಮನ ಹರಿಸಲೇ ಇಲ್ಲ. ಆದ್ದರಿಂದ ಕೇಂದ್ರ ಕೊಟ್ಟರೂ ರಾಜ್ಯ ಕೊಡಲಿಲ್ಲ ಎಂದು ಸ್ಪಷ್ಟವಾಗಿ ಹೇಳಬಹುದು. ಅದೊಂದು ಗಾದೆ ಇದೆಯಲ್ಲ, ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ, ಹಾಗೆ. ಸದ್ಯ ರಾಜ್ಯವನ್ನು ಆಳುವವರಿಗೆ ಜಿಎಸ್ ಬಿ, ಎಸ್ ಬಿ ಸಮುದಾಯದವರ ಬಗ್ಗೆ ತಲೆಕೆಡಿಸಿಕೊಳ್ಳಲು ಪುರುಸೋತ್ತು ಉಂಟೋ ಇಲ್ವೋ? ಯಾಕೆಂದರೆ ಆರು ತಿಂಗಳೊಳಗೆ ಪಂಚಮಸಾಲಿಗಳಿಗೆ 2ಎ ಮೀಸಲಾತಿ ಕೊಡುತ್ತೇನೆ ಎಂದು ಸಿಎಂ ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಅಲ್ಲಿಯ ತನಕ ಅವರು ಸಿಎಂ ಹುದ್ದೆಯಲ್ಲಿ ಇರುತ್ತಾರೋ, ಇಲ್ವೋ ದೇವರಿಗೆ ಗೊತ್ತು. ಇನ್ನು ರಾಜ್ಯದ ಪ್ರತಿ ಜಾತಿಯವರು ಕೂಡ ಮೀಸಲಾತಿ ಕೇಳುತ್ತಾ ಇದ್ದಾರೆ. ಎಲ್ಲರಿಗೂ ಕೊಟ್ಟರೆ ನಿಜವಾಗಿ ಮೀಸಲಾತಿ ಯಾರಿಗೋ ಸಿಗಬೇಕೊ ಅವರಿಗೆ ಸಿಗುವುದಿಲ್ಲ. ನೀವು ಬೇಕಾದರೆ ಸರಿಯಾಗಿ ನೋಡಿ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದಲ್ಲಿ ಹುಟ್ಟಿದರೆ ಸಾಕು, ನೀವು ನೇರವಾಗಿ ಎಲ್ಲದರಲ್ಲಿಯೂ ಮೀಸಲಾತಿ ಪಡೆಯುತ್ತೀರಿ. ಅದೇ ನೀವು ಬ್ರಾಹ್ಮಣರಾಗಿ ಹುಟ್ಟಿದರೆ ಅದರಲ್ಲಿ ಆರ್ಥಿಕವಾಗಿ ಹಿಂದುಳಿದವರಾಗಿದ್ದರೆ ಮಾತ್ರ ಮೀಸಲಾತಿ. ನಿಮ್ಮ ಮಗ, ಮಗಳು 98% ಅಂಕಗಳನ್ನು ಪಡೆದರೂ ಮೀಸಲಾತಿ ಇರುವ ಜಾತಿಯವರು 50% ಪಡೆದರೂ ಅವರಿಗೆ ನಿಮಗೆ ಅರ್ಹವಾಗಿ ಸಿಗಬೇಕಾದ ಸೀಟು ಹೋಗುತ್ತೆ. ಇದು ಇಡೀ ರಾಷ್ಟ್ರಕ್ಕೆ ಗೊತ್ತು. ಎಲ್ಲಾ ರಾಜಕೀಯ ಪಕ್ಷದವರಿಗೂ ಗೊತ್ತು. ಆದರೆ ಯಾರೂ ಮಾತನಾಡುವುದಿಲ್ಲ. ಇನ್ನು ಜಿಎಸ್ ಬಿಯವರಿಗೆ ಅರ್ಹವಾಗಿ ಸಿಗಬೇಕಿದ್ದ ಮೀಸಲಾತಿ ಸಿಗದೆ ಇದ್ದರೂ ಸರಕಾರ ಮೌನವಾಗಿದೆ. ಯಾಕೆಂದರೆ ನಾವು ಬೀದಿಗಿಳಿಯಲ್ಲ!!
Leave A Reply