ಒಂದು ಕಾಲವಿತ್ತು. ಆಗಲೂ ತುಂಬಾ ಜನಸೇವಕರಿದ್ದರು. ಅವರನ್ನು ಒತ್ತಾಯ ಮಾಡಿ ವಿಧಾನಸಭೆಗೋ, ಲೋಕಸಭೆಗೋ ಚುನಾವಣೆಗೆ ನಿಲ್ಲಿಸಬೇಕಿತ್ತು. ಅವರು ಚುನಾವಣೆಗೆ ನಿಂತಾಗ ಜನ ಪ್ರೀತಿಯಿಂದ ಬಂದು ಮತ ಹಾಕಿ ಹೋಗುತ್ತಿದ್ದರು. ನಂತರ ಒಂದು ಸಮಯ ಬಂತು. ಚುನಾವಣೆ ಎಂದ ಕೂಡಲೇ ಇಂತಿಂತವರೇ ನಿಲ್ಲುತ್ತಾರೆ ಎಂದು ಅಂದುಕೊಳ್ಳುವ ಕಾಲ ಬಂತು. ಅವರು ಸಹಜ ಪ್ರಕ್ರಿಯೆ ಎನ್ನುವಂತೆ ಚುನಾವಣೆಗೆ ನಿಲ್ಲುತ್ತಿದ್ದರು. ಜನ ಅವರಿಗೆ ಖರ್ಚಿಗೆ ಒಂದಿಷ್ಟು ಹಣ ಕೊಟ್ಟ ಉದಾಹರಣೆ ಕೂಡ ಇದೆ. ಈಗ ಏನಾಗಿದೆ ಎಂದರೆ ಚುನಾವಣೆಗೆ ನಿಲ್ಲಲು ತೀವ್ರ ಪೈಪೋಟಿ ಇದೆ. ರಾಜಕೀಯ ಪಕ್ಷಗಳಿಗೆ ದೇಣಿಗೆ ಕೊಟ್ಟು ಟಿಕೆಟ್ ಪಡೆದುಕೊಂಡವರು ಇದ್ದಾರೆ. ನಂತರ ಕೋಟಿಗಟ್ಟಲೆ ಹಣ, ಹೆಂಡ, ಸೀರೆ, ಕುಕ್ಕರ್ ಕೊಟ್ಟು ಗೆದ್ದವರೂ ಇದ್ದಾರೆ. ಈಗ ಐದು ರಾಜ್ಯಗಳಲ್ಲಿ ವಿಧಾನಸಭಾ ಮತದಾನಕ್ಕೆ ದಿನಗಣನೆ ಆರಂಭವಾಗಿದೆ. ತಮಿಳುನಾಡಿನ ಒಂದು ರಾಜಕೀಯ ಪಕ್ಷ ನಮ್ಮನ್ನು ಗೆಲ್ಲಿಸಿದರೆ ನಾವು ಪರೀಕ್ಷೆಯಲ್ಲಿ ಕಾಪಿ ಮಾಡಲು ಅವಕಾಶ ಕೊಡುತ್ತೇವೆ ಎನ್ನುವ ಆಮಿಷವನ್ನು ಇಟ್ಟಿದೆ. ಇದು ಅನೈತಿಕತೆಯ ಪರಮಾವಧಿಯಾಗಿದೆ. ಚುನಾವಣೆಗಳಲ್ಲಿ ಆಮಿಷಗಳನ್ನು ಒಡ್ಡುವುದೇ ತಪ್ಪು. ಹಾಗಿರುವಾಗ ಬಹಿರಂಗ ಆಮಿಷಗಳನ್ನು ಅದು ಕೂಡ ಗೆದ್ದರೆ ಪರೀಕ್ಷೆಯಲ್ಲಿ ಕಾಪಿ ಹೊಡೆಯಲು ಅವಕಾಶ ನೀಡುತ್ತೇವೆ ಎಂದು ಹೇಳುವ ಮೂಲಕ ಇದು ಮುಂದಿನ ದಿನಗಳಲ್ಲಿ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಚುನಾವಣೆಗೆ ಹೋಗುವ ರಾಜಕೀಯ ಪಕ್ಷಗಳಿಗೆ ಏನು ಸಂದೇಶ ನೀಡುತ್ತದೆ ಎಂದು ಯೋಚಿಸಬೇಕು. ಡಿಎಂಕೆಯ ಹಿರಿಯ ನಾಯಕ ಕೆ.ಎಂ.ನೆಹರು ಈ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಗೆಲ್ಲುವುದಕ್ಕೆ ತಮ್ಮ ಪಕ್ಷ ಯಾವ ಲೆವೆಲ್ಲಿಗೂ ಹೋಗಬಹುದು ಎನ್ನುವುದನ್ನು ತೋರಿಸಿದ್ದಾರೆ. ಅವರು ಅದಕ್ಕೆ ಕೊಡುವ ಸಮರ್ಥನೆಯೂ ಅಷ್ಟೇ ಅಸಹ್ಯವಾಗಿದೆ. ನೀಟ್ ಪರೀಕ್ಷೆಯಲ್ಲಿ ಬಿಹಾರ, ಮಧ್ಯಪ್ರದೇಶ, ಉತ್ತರ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಸಾಗುತ್ತಾರೆ. ಆದ್ದರಿಂದ ತಾವು ಕೂಡ ನಮ್ಮ ರಾಜ್ಯದ ವಿದ್ಯಾರ್ಥಿಗಳಿಗೆ ಕಾಪಿ ಹೊಡೆಯುವ ಅವಕಾಶ ಕೊಡುತ್ತೇವೆ ಎಂದಿದ್ದಾರೆ. ಇವತ್ತು ನೀಟ್ ಪರೀಕ್ಷಾರ್ಥಿಗಳಿಗೆ ಕಾಪಿ ಮಾಡುವ ಅವಕಾಶ ಕೊಡುತ್ತೇವೆ ಎನ್ನುವ ರಾಜಕೀಯ ಪಕ್ಷಗಳು ಗೆದ್ದರೆ ಹೇಳಿದಂತೆ ಮಾಡಬೇಕಾಗುತ್ತದೆ. ಒಂದು ವೇಳೆ ಹಾಗೆ ಅವಕಾಶ ಕೊಟ್ಟರೆ ಹಾಗೆ ಕಾಪಿ ಬರೆದು ಹೆಚ್ಚು ಅಂಕಗಳನ್ನು ಪಡೆದ ಪರೀಕ್ಷಾರ್ಥಿಗಳು ಏನು ತಾನೆ ನೈತಿಕತೆಯ ಜೀವನ ನಡೆಸಿಯಾರು? ಅವರು ಇಂಜಿನಿಯರೋ ಅಥವಾ ಮತ್ತೊಂದೋ ಆದರೆ ಅವರಿಂದ ಸಮಾಜ ಏನು ನಿರೀಕ್ಷೆ ಮಾಡಲು ಸಾಧ್ಯ. ಇನ್ನು ಎರಡನೇಯದಾಗಿ ತಮಿಳುನಾಡಿನಿಂದ ಸ್ಫೂರ್ತಿ ಪಡೆದ ಮತ್ತೊಂದು ರಾಜ್ಯದಲ್ಲಿ ಅಲ್ಲಿನ ರಾಜಕೀಯ ಪಕ್ಷ ಪದವಿಪೂರ್ವ ಪರೀಕ್ಷೆಯಲ್ಲಿಯೂ ಕಾಪಿ ಹೊಡೆಯಲು ಅವಕಾ ನೀಡುತ್ತೇವೆ ಎಂದು ಆಮಿಷ ಒಡ್ಡಬಹುದು. ಈ ಪಕ್ಷ ಅಧಿಕಾರಕ್ಕೆ ಬಂದರೆ ತಮ್ಮ ಮಗನೋ, ಮಗಳೋ ಪಿಯು ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಪಡೆಯಬಹುದು ಎಂದು ಹೆಚ್ಚಿನ ಪೋಷಕರು ಅದೇ ಪಕ್ಷಕ್ಕೆ ಮತ ಹಾಕಲು ಮುಂದಾಗಬಹುದು. ಈ ಪಕ್ಷ ಐದು ವರ್ಷ ಅಧಿಕಾರದಲ್ಲಿ ಇದ್ದರೆ ನನ್ನ ಮಗನಿಗೂ, ಮಗಳಿಗೂ ಒಳ್ಳೆಯದು ಎಂದು ಎಂಟನೇ ಕ್ಲಾಸಿನಿಂದ ಪಿಯು ವರೆಗಿನ ಮಕ್ಕಳ ಪೋಷಕರು ಅದೇ ಪಕ್ಷಕ್ಕೆ ಮತ ಹಾಕಿದರೆ ಪೋಷಕರು ಯಾವ ಟ್ರೆಂಡ್ ಸೃಷ್ಟಿಸಿಯಾರು? ಇನ್ನು ಏನೂ ಟೆನ್ಷನ್ ಇಲ್ಲ, ಪರೀಕ್ಷೆಗೆ ಟೆಕ್ಸ್ ಪುಸ್ತಕ ಹಿಡಿದು ಹೋಗು ಎಂದು ಅಂತಹ ರಾಜ್ಯದ ಪೋಷಕರು ಹೇಳುವ ಪರಿಸ್ಥಿತಿ ಬಂದರೆ ಏನಾಗಬಹುದು? ಇನ್ನು ತಮಿಳುನಾಡಿನಲ್ಲಿ ಆಮಿಷಗಳದ್ದೇ ಒಂದು ಸಂತೆ. ಜಯಲಲಿತಾ ಹಾಗೂ ಕರುಣಾನಿಧಿ ಬದುಕಿದ್ದಾಗ ಯಾರು ಎಷ್ಟು ದೊಡ್ಡ ಆಮಿಷ ಕೊಡುತ್ತಾರೆ ಎನ್ನುವುದರ ಆಧಾರದ ಮೇಲೆಯೇ ಗೆದ್ದು ಬರುತ್ತಿದ್ದರು. ಗೆದ್ದ ಬಳಿಕ ಅವರು ಅದೇ ರಾಜ್ಯದ ಜನರ ತೆರಿಗೆ ಲೂಟಿ ಮಾಡಿ ಆಸ್ತಿ ಮಾಡಿದ್ದು ಕಡಿಮೆ ಏನಿರಲಿಲ್ಲ. ಜಯಲಲಿತಾ ತಾವು ಮಾಡಿದ ಆಸ್ತಿಯನ್ನು ಸರಿಯಾಗಿ ನೋಡುವ ಮೊದಲೇ ಆಸ್ಪತ್ರೆಯಲ್ಲಿ ನರಳಿ ಪ್ರಾಣ ಬಿಟ್ಟರು. ಅವರ ಜೊತೆಗಿದ್ದ ಮಹಿಳೆ ಅಕ್ರಮ ಆಸ್ತಿಯಲ್ಲಿ ಜೈಲಿನಲ್ಲಿ ಇರಬೇಕಾಯಿತು. ಇಷ್ಟೆಲ್ಲಾ ಆಸ್ತಿ ಮಾಡಲು ಅವರು ಮತದಾರರಿಗೆ ಆಮಿಷ ಒಡ್ಡುತ್ತಾರೆ. ಒಂದು ಬಾಟಲು ಷರಾಬು, ಒಂದು ಮನೆಗೆ ಎರಡು ಸೀರೆ, ಕುಕ್ಕರ್ ಕೊಟ್ಟರೆ ನೀವು ನಿಮ್ಮ ಅಮೂಲ್ಯ ಮತ ನೀಡುತ್ತೀರಿ. ಅದರ ನಂತರ ನಿಮ್ಮ ರಸ್ತೆಗೆ ಕಾಂಕ್ರೀಟ್ ಹಾಕಬೇಕಾದರೂ ಅದೇ ಶಾಸಕನ ಕೈ ಕಾಲು ಹಿಡಿದು ಮಾಡಬೇಕಾಗುತ್ತದೆ. ನೀವು ನನ್ನಿಂದ ಹಣ ಪಡೆದುಕೊಂಡು, ಉಚಿತವಾಗಿ ಕುಡಿದು ಮತ ಹಾಕಿದವರು, ನಿಮಗೆ ಒಳ್ಳೆಯ ರಸ್ತೆ ನಾನ್ಯಾಕೆ ಮಾಡಿಕೊಡಬೇಕು, ಮಾಡಿ ಕೊಟ್ಟರೂ ಅದರಲ್ಲಿ 15 ಶೇಕಡಾ ಕಮಿಷನ್ ಯಾಕೆ ಹೊಡೆಯಬಾರದು, ಯಾಕೆಂದರೆ ಕೋಟಿ ಖರ್ಚು ಮಾಡಿಯೇ ಗೆದ್ದವನು ನಾನು ಎನ್ನುವ ಅಹಂ ಆ ಜನಪ್ರತಿನಿಧಿಯ ಮೇಲಿರುತ್ತದೆ. ನಮ್ಮ ಮತ ಅಮೂಲ್ಯ, ಅದನ್ನು ಪೋಲು ಮಾಡಬೇಡಿ ಎಂದು ಚುನಾವಣೆಯ ಸಂದರ್ಭದಲ್ಲಿ ಎಲ್ಲಾ ಕಡೆ ಜಾಗೃತಿಯ ಹೋರ್ಡಿಂಗ್ಸ್ ನಾವು ಗಮನಿಸಿರುತ್ತೇವೆ. ಆದರೆ ನಮ್ಮ ಒಂದು ವೋಟಿನಿಂದ ಏನಾಗುತ್ತೆ ಎಂದು ಅಂದುಕೊಂಡು ಎರಡೂವರೆ ಲಕ್ಷ ಮತದಾರರು ಇರುವ ಒಂದು ವಿಧಾನಸಭಾ ಕ್ಷೇತ್ರದ ಹತ್ತು ಶೇಕಡಾ ಜನ ಅಂದುಕೊಂಡರೆ ಏನಾಗುತ್ತದೆ? ಯಾರು ಪ್ರಾಮಾಣಿಕವಾಗಿ ಗೆಲ್ಲಬೇಕಿತ್ತೋ ಅವನು ಸೋಲುತ್ತಾನೆ. ಭ್ರಷ್ಟ ಗೆದ್ದೇ ಬಿಡಬಹುದು. ಯಾಕೆಂದರೆ ಅವನಿಗೆ ಮತ ಕೊಟ್ಟವರು ಅವನ ಹಣದಿಂದ ಹಿಂದಿನ ದಿನ “ಫಲಾನುಭವಿಗಳು” ಆಗಿದ್ದವರು. ಇದು ಬದಲಾಗಬೇಕಾದರೆ ನಾವು ಒಬ್ಬ ಜನಪ್ರತಿನಿಧಿಯನ್ನು ಆಯ್ಕೆ ಮಾಡಿದ ಬಳಿಕ ಅವನು ಅಥವಾ ಅವಳು ನಮ್ಮ ಸಂಘ ಸಂಸ್ಥೆಗಳಿಗೆ ಹಣ ಕೊಡುವ ಎಟಿಎಂ ಎಂದು ಅಂದುಕೊಳ್ಳದೇ ನಮ್ಮ ಕ್ಷೇತ್ರದ ಅಭಿವೃದ್ಧಿ ಮಾಡುವ ಸೇವಕ ಎಂದು ಅಂದುಕೊಳ್ಳಬೇಕು!
Leave A Reply