ಎಲ್ಲಾ ಪೊಲೀಸರು ತಮಗೆ ಸಚಿವರು ಕೊಟ್ಟಿರುವ ಟಾರ್ಗೆಟ್ ಹೇಳುವ ಧೈರ್ಯ ಮಾಡಲಿ!!
ಸಚಿನ್ ವಾಜೆ ಎನ್ನುವ ಕಳಂಕಿತ ಪೊಲೀಸ್ ಅಧಿಕಾರಿ ಕೂಡ ಮಹಾರಾಷ್ಟ್ರದ ನಿಕಟಪೂರ್ವ ಗೃಹಸಚಿವ ಅನಿಲ್ ದೇಶಮುಖ್ ಹಾಗೂ ಸಾರಿಗೆ ಸಚಿವ ಅನಿಲ್ ಪರಬ್ ಭ್ರಷ್ಟಾಚಾರದ ಬಗ್ಗೆ ತಮಗಾದ ಅನುಭವವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯ ಎದುರು ಇಟ್ಟಿದ್ದಾರೆ. ಅದನ್ನು ಅವರು ಲಿಖಿತವಾಗಿ ಕೊಟ್ಟಿದ್ದಾರೆ. ಅದು ಕೂಡ ಸ್ವತ: ತಮ್ಮ ಕೈಯಿಂದಲೇ ಬರೆದಿದ್ದಾರೆ. ಯಾರೋ ಟೈಪ್ ಮಾಡಿ ಕೊಟ್ಟು ಇವರು ಸೈನ್ ಹಾಕಿದ್ದಲ್ಲ ಎನ್ನುವ ಸಂದೇಶ ಸ್ಪಷ್ಟವಾಗಿ ಹೋಗಬೇಕು ಎಂದು ಅನಿಲ್ ವಾಜೆ ನಿರ್ಧರಿಸಿದಂತಿದೆ. ಇನ್ನು ಜೈಲಿನಲ್ಲಿ ಇರುವ ಅನಿಲ್ ವಾಜೆ ತಮ್ಮದೇ ಕೈಯಿಂದ ಬರೆದು ಕೊಟ್ಟಿರುವುದರಿಂದ ಅದನ್ನು ಅವರು ಮುಂದೆ ನಿರಾಕರಿಸುವಂತಿಲ್ಲ. ಯಾಕೆಂದರೆ ಅದು ಒಂದು ದಾಖಲೆಯೇ ಆಗಿ ಹೋಗಲಿದೆ. ಈ ಮೂಲಕ ಪರಂಬೀರ್ ಸಿಂಗ್ ಅವರ ವಾದಕ್ಕೆ ಹೆಚ್ಚಿನ ಬಲ ಬಂದಂತಿದೆ. ಹಾಗಾದರೆ ಅನಿಲ್ ವಾಜೆಯ ಆರೋಪಗಳೇನು? ಮೊದಲನೇಯದಾಗಿ ತಮ್ಮನ್ನು ಮತ್ತೆ ಪೊಲೀಸ್ ಇಲಾಖೆಗೆ ಸೇರಿಸಿಕೊಳ್ಳಲು ಗೃಹಸಚಿವರಾಗಿದ್ದ ಅನಿಲ್ ದೇಶಮುಖ್ ಎರಡು ಕೋಟಿ ಕೇಳಿದ್ದರು ಎಂದು ವಾಜೆ ಹೇಳುತ್ತಿದ್ದಾರೆ. ವಾಜೆ ಇರುವ ಪತ್ರದ ಸಾರಾಂಶ ಏನೆಂದರೆ ತಮ್ಮನ್ನು ಮತ್ತೆ ಉದ್ಯೋಗಕ್ಕೆ ಸೇರಿಸಿಕೊಳ್ಳಲು ಎನ್ ಸಿಪಿ ಸರ್ವೋಚ್ಚ ನಾಯಕ ಶರದ್ ಪವಾರ್ ತಯಾರಿರಲಿಲ್ಲ. ತಮ್ಮ ಅಮಾನತು ಮುಂದುವರೆಯಲಿ ಎಂದೇ ಅವರ ಇಚ್ಚೆ ಆಗಿತ್ತು. ಅದಕ್ಕಾಗಿ ತಾವು ಗೃಹ ಸಚಿವರಾಗಿದ್ದ ಅನಿಲ್ ದೇಶಮುಖ್ ಅವರನ್ನು ಭೇಟಿಯಾದಾಗ ಅವರು ಎರಡು ಕೋಟಿ ರೂಪಾಯಿ ಕೊಟ್ಟರೆ ಶರದ್ ಪವಾರ್ ಅವರ ಮನವೊಲಿಸುವಾಗಿ ಹೇಳಿದ್ದರು ಎಂದು ಹೇಳಿದ್ದಾರೆ. ನಂತರ ವಾಜೆ ಪೊಲೀಸ್ ಅಧಿಕಾರಿಯಾಗಿ ಉದ್ಯೋಗಕ್ಕೆ ಮರಳಿದ್ದಾರೆ. ಅದರ ಬಳಿಕ ಮಹಾರಾಷ್ಟ್ರದ ಸಾರಿಗೆ ಸಚಿವರಾಗಿರುವ ಅನಿಲ್ ಪರಬ್ ಅವರು ಒಟ್ಟು 50 ಸರಕಾರಿ ಗುತ್ತಿಗೆದಾರರಿಂದ ತಲಾ 2 ಕೋಟಿಯಂತೆ ಹಣ ವಸೂಲಿ ಮಾಡಲು ತಮಗೆ ಸೂಚನೆ ಕೊಟ್ಟಿದ್ದರು ಎಂದು ಕೂಡ ಹೇಳಿದ್ದಾರೆ. ಇದೆಲ್ಲವೂ ಮಹಾರಾಷ್ಟ್ರದಲ್ಲಿ ಅಧಿಕಾರಿದಲ್ಲಿರುವ ಲಗಾಡಿ ಸರಕಾರದ ಪರಮ ಭ್ರಷ್ಟತೆಯನ್ನು ಸಾರಿ ಸಾರಿ ಹೇಳುತ್ತಿವೆ. ಇಲ್ಲಿ ಗಮನಿಸಬೇಕಾದ ವಿಷಯ ಎಂದರೆ ಮೂಲತ: ವಾಜೆ ಶಿವಸೇನೆಯಲ್ಲಿದ್ದವರು. ಅವರ ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ ಅವರಿಗೆ ಸಹಜವಾಗಿ ಉದ್ಯೋಗಕ್ಕೆ ಮರಳುವ ಆಸೆ ಗರಿಗೆದರಿತ್ತು. ಅದಕ್ಕಿಂತ ಮುಂಚೆ ಅವರು ವಿವಿಧ ಪ್ರಕರಣಗಳಲ್ಲಿ ಸಿಲುಕಿ ಅಮಾನತುಗೊಂಡಿದ್ದರು. ಅವರ ಮೇಲೆ ಅಕ್ರಮ ಆಸ್ತಿ ಸಂಪಾದಿಸಿರುವ ಭ್ರಷ್ಟಾಚಾರದ ಪ್ರಕರಣಗಳಿವೆ. ಅವರ ಬಳಿ ಇರುವ ಬೆಲೆಬಾಳುವ ಕಾರುಗಳ ಸಂಗ್ರಹವನ್ನು ನೋಡಿದರೆ ಒಬ್ಬ ಸಾಮಾನ್ಯ ಪೊಲೀಸ್ ಅಧಿಕಾರಿ ಎಷ್ಟು ಸಂಪಾದಿಸಬಲ್ಲ ಎನ್ನುವ ವಾಸನೆ ಸಿಗುತ್ತದೆ. ಈತ ಕಾಲಕಾಲಕ್ಕೆ ಮೇಲಿನವರಿಗೆ ಕೊಟ್ಟೇ ಅಷ್ಟು ಸಂಪಾದಿಸಿರುತ್ತಾನೆ ಎನ್ನುವುದು ಯಾರು ಕೂಡ ಊಹಿಸಬಲ್ಲ ಸತ್ಯ. ಅದೇ ಕಾರಣಕ್ಕೆ ಅಮಾನತು ಕೂಡ ಆಗಿದ್ದರು. ಅದು ತನಿಖೆಯ ಹಂತದಲ್ಲಿದೆ. ಮುಂಬೈಯಲ್ಲಿ ಅನೇಕ ಪೊಲೀಸ್ ಅಧಿಕಾರಿಗಳು ತಮ್ಮ ಮೇಲೆ ಭ್ರಷ್ಟಾಚಾರದ ಆರೋಪ ಇದ್ದು ಆ ಬಗ್ಗೆ ಅಮಾನತುಗೊಂಡಿದ್ದು ತನಿಖೆ ಕೂಡ ಎದುರಿಸುತ್ತಿದ್ದಾರೆ. ಕೆಲವರು ಕ್ಲೀನ್ ಚಿಟ್ ಪಡೆದು ಉದ್ಯೋಗಕ್ಕೆ ಮರಳಿದ್ದಾರೆ. ಇದೆಲ್ಲ ಮುಂಬೈಯಂತಹ ವಾಣಿಜ್ಯ ರಾಜಧಾನಿಯಲ್ಲಿ ಸಹಜ ಎಂದೇ ಪರಿಗಣಿಸಿದರೂ ಈ ಪ್ರಮಾಣದಲ್ಲಿ ಅನಿಲ್ ಪರಬ್ ಹಾಗೂ ಅನಿಲ್ ದೇಶಮುಖ್ ಹಣಕ್ಕೆ ಬೇಡಿಕೆ ಇಟ್ಟಿರುವುದು ಮತ್ತು ಅದನ್ನು ಅವರದ್ದೇ ರಾಜ್ಯದ ಪೊಲೀಸ್ ಅಧಿಕಾರಿಗಳು ಬಯಲಿಗೆ ಎಳೆದು ಸುಪ್ರೀಂ ಮೆಟ್ಟಿಲು ಹತ್ತಿರುವುದು ನಿಜಕ್ಕೂ ಅಪರೂಪ ಎನ್ನಬಹುದು. ಈ ಬಗ್ಗೆ ಸರಿಯಾದ ವಿಚಾರಣೆ ನಡೆದು ಆರೋಪಿಗಳು ಜೈಲಿನೊಳಗೆ ಇದ್ದರೆ ಮತ್ತು ಅವರ ಆಸ್ತಿ ಮುಟ್ಟುಗೋಲು ಹಾಕಿ ಅವರು ಅರ್ಹವಾಗಿ ಎಷ್ಟು ಸಂಪಾದಿಸಬೇಕೋ ಅಷ್ಟು ಸಂಪಾದಿಸಿದ್ದು ಮಾತ್ರ ಅವರಿಗೆ ಕೊಟ್ಟರೆ ಆಗ ಅನಿಲ್ ದೇಶಮುಖ್ ಹಾಗೂ ಅನಿಲ್ ಪರಬ್ ನಂತವರ ಅಹಂಕಾರ ಎಲ್ಲ ಮುರಿದುಬೀಳುತ್ತದೆ. ನಮ್ಮಲ್ಲಿ ಭ್ರಷ್ಟಾಚಾರದ ಪ್ರಕರಣಗಳಲ್ಲಿ ಶಿಕ್ಷೆ ಅನುಭವಿಸಿದ್ದು ಬೆರಳೆಣಿಕೆಯ ರಾಜಕಾರಣಿಗಳು ಬಿಟ್ಟರೆ ಉಳಿದವರೆಲ್ಲ ಕೆಲವು ದಿನ ನಿಶ್ಚಿಂತೆಯಾಗಿ ಜೈಲಿನೊಳಗೆ ಒಳ್ಳೆಯ ಸೌಲಭ್ಯ ತೆಗೆದುಕೊಂಡು ರಿಲಾಕ್ಸ್ ಮಾಡಿಕೊಂಡು ಹೊರಗೆ ಬಂದವರೇ ಇದ್ದಾರೆ. ಇನ್ನು ಜಯಲಲಿತಾ ಆಪ್ತೆ ಶಶಿಕಲಾ ಪ್ರಕರಣ ತೆಗೆದುಕೊಳ್ಳಿ. ಅವಳು ಲೂಟಿ ಮಾಡಿದ್ದು ಅದೇ ತಮಿಳುನಾಡಿನ ಜನರ ಹಣ. ಆವತ್ತು ಅವಳು ಹೊರಗೆ ಬಂದಾಗ ಸಿಕ್ಕಿದ್ದು ಎಂತಹ ಸ್ವಾಗತ ಎಂದು ನಾವು ನೋಡಿದ್ದೇವೆ. ನಮ್ಮಲ್ಲಿ ರಾಜಕಾರಣಿಗಳು ನಮಗೆ ಬೇಕಾದಾಗ ನಮ್ಮ ಸಂಘ, ಸಂಸ್ಥೆಗಳ ಕಾರ್ಯಕ್ರಮಕ್ಕೆ, ಕಟ್ಟಡ ನಿರ್ಮಾಣಕ್ಕೆ ಕೊನೆಗೆ ಮಗುವನ್ನು ತೊಟ್ಟಿಲಿಗೆ ಹಾಕುವಾಗ ಹಣ ಕೊಟ್ಟರೆ ಅವರು ಶ್ರೇಷ್ಟರು. ಅವರು ನಂತರ ಹೇಗೆ ಹಣ ಹೊಡೆಯುತ್ತಾರೆ ಎಂದು ನಾವು ನೋಡುವುದಿಲ್ಲ. ಯಾವಾಗ ನಮಗೆ ಒಂದೂ ರೂಪಾಯಿ ಜಾಹೀರಾತು ಬೇಡಾ, ನೀವು ಒಂದು ರೂಪಾಯಿ ಭ್ರಷ್ಟಾಚಾರ ಮಾಡಿದ್ರೂ ಬರೆಯುತ್ತೇವೆ ಎಂದು ಪತ್ರಿಕೆಗಳು ಹೇಳುತ್ತವೆಯೋ ಆಗ ಒಂದಿಷ್ಟು ಸುಧಾರಣೆ ಆಗುತ್ತದೆ. ಜನ ಕೂಡ ಬದಲಾಗಬೇಕು. ಭ್ರಷ್ಟ ಜನಪ್ರತಿನಿಧಿಯನ್ನು ಅಸಹ್ಯವಾಗಿ ನೋಡಬೇಕು. ಇದು ಬದಲಾಗುವ ತನಕ ಅನಿಲ್ ದೇಶಮುಖ್ ಹುಟ್ಟುತ್ತಲೇ ಇರುತ್ತಾರೆ, ದೇಶದ ಮೂಲೆಮೂಲೆಯಲ್ಲಿ……!
Leave A Reply