ಉಚಿತ ಅಂಬ್ಯುಲೆನ್ಸ್ ಚಾಲಕನಿಂದಲೂ ದಂಡ ಸುಲಿಗೆ ಸರಿಯಾ?
ಪೊಲೀಸರ ಬಗ್ಗೆ ತುಂಬಾ ಗೌರವವಿದೆ. ಅವರು ಈ ಕೊರೊನಾ ಅವಧಿಯಲ್ಲಿ ಬಹಳ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಕೈಯ ಎಲ್ಲಾ ಬೆರಳುಗಳು ಒಂದೇ ಎತ್ತರ ಇಲ್ಲದಿರುವುದು ಹೇಗೋ ಹಾಗೆ ಪೊಲೀಸ್ ಇಲಾಖೆಯಲ್ಲಿಯೂ ಕೆಲವು ವ್ಯಕ್ತಿಗಳಿಂದ ಇಡೀ ಪೊಲೀಸ್ ಇಲಾಖೆಯ ಮೇಲೆ ಕೆಟ್ಟ ಅಭಿಪ್ರಾಯ ಮೂಡುತ್ತದೆ. ಪೊಲೀಸ್ ಕಮೀಷನರ್ ಶಶಿಕುಮಾರ್ ಅವರು ಕ್ರಿಯಾಶೀಲ ಅಧಿಕಾರಿ ಎಂದು ಬಹಳ ಸಣ್ಣ ಅವಧಿಯಲ್ಲಿಯೇ ಜನಮನ್ನಣೆ ಗಳಿಸಿರುವುದರಿಂದ ಅವರು ತಮ್ಮ ಕೈಕೆಳಗಿನ ಅಧಿಕಾರಿಗಳು, ಸಿಬ್ಬಂದಿಗಳು ಕೂಡ ಜನಸ್ನೇಹಿಗಳಾಗಬೇಕು ಎಂದು ಬಯಸುವುದು ಸಹಜ. ಆದರೆ ಕೆಲವು ಪೊಲೀಸರು ಮಾಡುವ ವರ್ತನೆಯಿಂದ ಇಲಾಖೆಯ ಮೇಲೆ ಒಳ್ಳೆಯ ಅಭಿಪ್ರಾಯ ಉಳಿಯುವುದಿಲ್ಲ. ಅಂತಹ ಸಂದರ್ಭದಲ್ಲಿ ಸಣ್ಣ ತಪ್ಪಾಗಳಾಗುವಾಗಲೇ ಅಂತಹ ಅಧಿಕಾರಿಗಳಿಗೆ ಬಿಸಿ ಮುಟ್ಟಿಸದಿದ್ದರೆ ಅದು ಮುಂದೆ ಸರಿಪಡಿಸಲಾರದ ತಪ್ಪಾಗಿ ಹೋಗುತ್ತದೆ. ಅದಕ್ಕೆ ಸೋಮವಾರ ನಡೆದ ಘಟನೆಯೇ ಸಾಕ್ಷಿ.
ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನವೀನ್ ಎನ್ನುವ ಎಎಸ್ ಐ ಇದ್ದಾರೆ. ಅವರು ಈಗಾಗಲೇ ತಮ್ಮ ಅಧಿಕಪ್ರಸಂಗಿ ಕೆಲಸಗಳಿಂದ ಎರಡು ಬಾರಿ ಅಮಾನತುಗೊಂಡಿದ್ದಾರೆ. ಒಮ್ಮೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಇದ್ದಾಗ ಇನ್ನೊಮ್ಮೆ ಮಂಗಳೂರು ನಗರ ಠಾಣೆಯಲ್ಲಿ ಇದ್ದಾಗ ಸಸ್ಪೆಂಡ್ ಗೊಂಡಿದ್ದರು. ಇಷ್ಟಾಗಿಯೂ ಅವರಿಗೆ ಬುದ್ಧಿ ಬಂದಿಲ್ಲ. ಅವರು ಮಾಡುವ ಕೃತ್ಯದಿಂದ ಅವರಿಗೂ ಅವರು ಕರ್ತವ್ಯ ನಿರ್ವಹಿಸುವ ಠಾಣೆಗೂ ಕೆಟ್ಟ ಹೆಸರು ಬರುತ್ತದೆ ಎಂದು ಗೊತ್ತಿದ್ದರೂ ಅವರು ಜನವಿರೋಧಿ ಕೃತ್ಯವನ್ನು ಮಾಡುತ್ತಲೇ ಇರುತ್ತಾರೆ. ಆ ಮೂಲಕ ಪೊಲೀಸ್ ಇಲಾಖೆಯ ವರ್ಚಸ್ಸಿಗೆ ದಕ್ಕೆ ತರುತ್ತಲೇ ಇರುತ್ತಾರೆ. ಈ ಬಾರಿ ಮತ್ತೊಮ್ಮೆ ಅವರು ಅಂತಹ ಕೆಲಸಕ್ಕೆ ಕೈ ಹಾಕಿದ್ದಾರೆ. ಅದನ್ನು ಪೊಲೀಸ್ ಕಮೀಷನರ್ ಅವರ ಗಮನಕ್ಕೆ ತರಲೇಬೇಕಾಗಿದ್ದು, ಕಮೀಷನರ್ ಎಸ್ ಶಶಿಕುಮಾರ್ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎನ್ನುವ ನಂಬಿಕೆ ಇದೆ.
ನಮ್ಮ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಈ ಕೊರೊನಾದ ಲಾಕ್ ಡೌನ್ ಅವಧಿಯಲ್ಲಿ ಮಾಡಿರುವ ಸೇವಾಕಾರ್ಯಗಳನ್ನು ಬರೆಯಲು ಹೋದರೆ ಅದೇ ಒಂದು ಅಂಕಣವಾದಿತು. ನಾನು ಅದನ್ನು ವಿವರಿಸಲು ಹೋಗುವುದಿಲ್ಲ. ಆ ಸೇವಾಕಾರ್ಯದ ಭಾಗವಾಗಿ ನಾವು ಎರಡು ಅಂಬ್ಯುಲೆನ್ಸ್ ಗಳನ್ನು ಉಚಿತವಾಗಿ ಜನಸೇವೆಗೆ ಬಳಸುತ್ತಿರುವುದು ಅನೇಕರಿಗೆ ಗೊತ್ತಿರುವ ಸಂಗತಿ. ಅದರಲ್ಲಿ ಒಂದು ಅಂಬ್ಯುಲೆನ್ಸ್ ವಾಹನ ಸೋಮವಾರ ಧರ್ಮಸ್ಥಳದಲ್ಲಿ ಒಬ್ಬರನ್ನು ಬಿಟ್ಟು ಮರಳಿ ಮಂಗಳೂರಿಗೆ ಬರುತ್ತಿತ್ತು. ಅದನ್ನು ಪಡೀಲ್ ಬಳಿ ಈ ನವೀನ್ ಅವರು ತಡೆದು ನಿಲ್ಲಿಸಿದ್ದಾರೆ. ಒಂದು ಚಿಕ್ಕಮಗುವಿಗೂ ಒಂದು ಅಂಬ್ಯುಲೆನ್ಸ್ ಅನ್ನು ನೋಡುವಾಗ ಅದರ ಗಂಭೀರತೆ ಅರ್ಥವಾಗುತ್ತದೆ. ಹಾಗಿರುವಾಗ ಈ ಪೊಲೀಸ್ ಇಲಾಖೆಯಲ್ಲಿ ಇರುವವರಿಗೆ ಅರ್ಥವಾಗಲಿಲ್ಲವೇ ಎನ್ನುವುದು ಮೊದಲ ಪ್ರಶ್ನೆ. ಅದರ ನಂತರ ಅಂಬ್ಯುಲೆನ್ಸ್ ಚಾಲಕನೊಂದಿಗೆ ವರ್ತಿಸಿದ ಉಢಾಪೆಯ ವರ್ತನೆ. ಪೊಲೀಸರಿಗೆ ಒಂದಿಷ್ಟು ಕಠಿಣವಾಗಿ ವರ್ತಿಸಿ ಎಂದು ಮೇಲಿನಿಂದ ಸೂಚನೆ ಬಂದಿರಬಹುದು. ಕೊರೊನಾ ನಿಯಂತ್ರಿಸಬೇಕಾದರೆ ರಸ್ತೆಯಲ್ಲಿ ಅನಗತ್ಯವಾಗಿ ವಾಹನಗಳಲ್ಲಿ ಓಡಾಡುವವರಿಗೆ ಕಡಿವಾಣ ಹಾಕಬೇಕಾಗಿರುವುದು ಅಗತ್ಯ. ಆದರೆ ಒಬ್ಬ ವ್ಯಕ್ತಿ ಟೈಂಪಾಸ್ ಮಾಡಲು ಅಂಬ್ಯುಲೆನ್ಸ್ ನಲ್ಲಿ ತಿರುಗುತ್ತಾರಾ? ಅದರಲ್ಲಿಯೂ ಈ ಪ್ರಜ್ಞಾವಂತರ ಜಿಲ್ಲೆಯಲ್ಲಿ ಅಂಬ್ಯುಲೆನ್ಸ್ ಸೈರನ್ ಕೇಳುತ್ತಿದ್ದಂತೆ ಕಾನೂನು ಪಾಲನಾ ದೃಷ್ಟಿಯಲ್ಲಿ ಮೊದಲಿಗೆ ಸೈಡಿಗೆ ತೆರಳಿ ಅದಕ್ಕೆ ಜಾಗ ಬಿಟ್ಟುಕೊಡುವ ಸಂಸ್ಕೃತಿ ನಮ್ಮದು. ಆದ್ದರಿಂದ ಒಂದು ಅಂಬ್ಯುಲೆನ್ಸ್ ಓಡಾಡುತ್ತಿದ್ದರೆ ಯಾವುದೋ ಕೊರೊನಾ ರೋಗಿಗಳ ಸೇವೆಯಲ್ಲಿ ಇರುತ್ತೆ ಎನ್ನುವುದು ದೇಹದಲ್ಲಿ ಪ್ರಜ್ಞೆ ಇರುವವರಿಗೆ ಗೊತ್ತಿರುವ ಸಂಗತಿ. ಇವರು ಅಂಬ್ಯುಲೆನ್ಸ್ ನಿಲ್ಲಿಸಿ ಸಣ್ಣಪುಟ್ಟ ತಪ್ಪುಗಳನ್ನೇ ಜೋರು ಮಾಡಿ ದಂಡ ವಸೂಲಿ ಮಾಡಲು ಇಳಿದಿದ್ದಾರೆ. ಅಂಬ್ಯುಲೆನ್ಸ್ ಚಾಲಕರು ಜನರ ಜೀವರಕ್ಷಕರು. ಅವರು ತಮ್ಮ ಪ್ರಾಣವನ್ನು ಪಣಕ್ಕೆ ಇಟ್ಟು ಜನರ ಜೀವ ಉಳಿಸಲು ಮೊದಲ ಆದ್ಯತೆ ನೀಡುವವರು. ಅವರು ತಾವು ಊಟ ಮಾಡಿದ್ದೇವಾ, ನೀರು ಕುಡಿದಿದ್ದೇವಾ, ಚಾ,ತಿಂಡಿ ತಿಂದಿದ್ದೇವಾ ಎಂದು ನೋಡುವುದಿಲ್ಲ. ಹಾಗಿರುವಾಗ ಅವರು ಸೀಟ್ ಬೆಲ್ಟ್ ಧರಿಸಿದ್ದೇವಾ ಎಂದು ನೋಡುವಷ್ಟು ವ್ಯವಧಾನ ಇಟ್ಟುಕೊಂಡಿರುತ್ತಾರಾ? ಅಂಬ್ಯುಲೆನ್ಸ್ ಎಂದರೆ ವಿಮಾನದ ಪೈಲೆಟ್ ನಂತೆ ವೇಗದಲ್ಲಿ ಹೋಗುವ ಕೆಲಸವಾದರೂ ಅವರಿಗೆ ಪೈಲೆಟ್ ಗೆ ಇರುವಷ್ಟು ಸೌಲಭ್ಯ ಇರುವುದಿಲ್ಲ. ಆದರೆ ಅಧಿಕಪ್ರಸಂಗಿ ನವೀನ್ ಅವರಿಗೆ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ನ ಅಂಬ್ಯುಲೆನ್ಸ್ ಚಾಲಕನಿಗೆ ಏನೆಲ್ಲ ಮಾನಸಿಕ ದೌರ್ಜನ್ಯ ಮಾಡಬಹುದೋ ಅದೆಲ್ಲ ಮಾಡಬೇಕು ಎಂದು ಅನಿಸಿದೆ. ನಾನು ಹೇಳುವುದು ಏನೆಂದರೆ ನಾಳೆ ಆ ಚಾಲಕ ನಾನು ಕೆಲಸಕ್ಕೆ ಬರುವುದಿಲ್ಲ ಎಂದರೆ ಈ ಲಾಕ್ ಡೌನ್ ಸಮಯದಲ್ಲಿ ಬೇರೆಯವರನ್ನು ಎಲ್ಲಿಂದ ಹುಡುಕುವುದು. ನೀವು ಮಾಸ್ಕ್ ಹಾಕದಿದ್ದರೆ ದಂಡ ಹಾಕುತ್ತೀರಿ, ಅನಗತ್ಯ ವಾಹನಗಳು ಓಡಾಡುತ್ತಿದ್ದರೆ ದಂಡ ಹಾಕುತ್ತೀರಿ. ಆದರೆ ಅಂಬ್ಯುಲೆನ್ಸ್ ಬಗ್ಗೆ ಒಂದಿಷ್ಟು ಹೆಚ್ಚಿನ ಅನುಕಂಪ ಇರಬೇಕಾಗುತ್ತದೆ. ಅಂಬ್ಯುಲೆನ್ಸ್ ನವರಿಗೂ ದಂಡ ಹಾಕುವ ಮೂಲಕ ಅವರು ಈ ಕೆಲಸದಿಂದ ವಿಮುಖರಾಗುವ ಪ್ರಯತ್ನ ಮಾಡಿದ್ದಾರೆ ಎನ್ನುವ ಕಾರಣಕ್ಕೆ ಪೊಲೀಸ್ ಕಮೀಷನರ್ ಅವರು ಯಾಕೆ ಇಂತವರ ಮೇಲೆ ಕ್ರಮ ತೆಗೆದುಕೊಳ್ಳಬಾರದು.!!
Leave A Reply