ಬುದ್ಧಿವಂತರ ಜಿಲ್ಲೆಯಲ್ಲಿ ಲಾಕ್ಡೌನ್ನಲ್ಲಿಯೂ ಅದ್ದೂರಿ ಮದುವೆಗಳಾದರೆ ಹೇಗೆ!!
ಜುಲೈ 5 ರ ತನಕ ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ತನಕ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕೊಡಲಾಗಿದೆ ಎನ್ನುವುದು ಬಿಟ್ಟರೆ ಬೇರೆ ಯಾವ ಬದಲಾವಣೆಯನ್ನು ಕೂಡ ನಮ್ಮ ಜಿಲ್ಲಾಧಿಕಾರಿಯವರು ಮಾಡಲಿಲ್ಲ. ರಾಜ್ಯದಲ್ಲಿ ಮೈಸೂರು ಬಿಟ್ಟರೆ ಕೆಳಗಿನಿಂದ ಎರಡನೇ ಸ್ಥಾನದಲ್ಲಿ ಇರುವ ಜಿಲ್ಲೆ ನಮ್ಮದೇ. ಅದಕ್ಕೆ ಇಷ್ಟು ಕಟ್ಟುನಿಟ್ಟಾಗಿ ನಿಯಮಗಳನ್ನು ತರುವ ಅವಶ್ಯಕತೆ ಈ ಜಿಲ್ಲೆಗೆ ಇದೆ. ಗ್ರಹಚಾರ ನಮ್ಮದು. ನಮ್ಮ ಜಿಲ್ಲೆಯಲ್ಲಿ ಸೋಂಕಿತರ ಪಾಸಿಟಿವಿಟಿ ರೇಟ್ ಕಡಿಮೆಯಾಗಿಲ್ಲ. ಅದಕ್ಕೆ ಅಂಕಿಅಂಶಗಳೇ ಸಾಕ್ಷಿ ಹೇಳುತ್ತವೆ. ಆದರೆ ಸ್ಮಾರ್ಟ್ ಸಿಟಿ ಕೆಲಸ ಆಗಿಲ್ಲ ಎನ್ನುವ ಕಾರಣಕ್ಕೆ ಲಾಕ್ ಡೌನ್ ಮುಂದುವರೆಸಲಾಗಿದೆ ಎಂದು ತುಂಬಾ ಕಲಿತಿರುವ ಬುದ್ಧಿವಂತರೇ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬರೆಯುತ್ತಿದ್ದಾರೆ. ಇನ್ನು ಕೆಲವರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆ ಇದೆ. ಹಾಗಿದ್ದ ಮೇಲೆ ಜಿಲ್ಲೆಗೆ ಏನು ಬೇಕಾದರೂ ಮಾಡಿಕೊಳ್ಳಿ. ಪಾಲಿಕೆ ವ್ಯಾಪ್ತಿಯಲ್ಲಿ ಲಾಕ್ ಡೌನ್ ಬೇಡಾ ಎನ್ನುತ್ತಿದ್ದಾರೆ. ಪಾಲಿಕೆಗೆ ಒಂದು ನಿಯಮ ಮತ್ತು ಜಿಲ್ಲೆಗೆ ಒಂದು ನಿಯಮ ಮಾಡಲು ಹೋದರೆ ಅದು ಸೆರಗಿನೊಳಗೆ ಕೆಂಡ ಇಟ್ಟುಕೊಂಡರೂ ಏನೂ ಆಗುವುದಿಲ್ಲ ಎಂದು ಅಂದುಕೊಂಡ ಹಾಗೆ. ಇಲ್ಲಿ ನಗರ ಮತ್ತು ಗ್ರಾಮಾಂತರ ಎಂದು ವಿಂಗಡನೆ ಮಾಡಿ ನೋಡಲು ಆಗುವುದಿಲ್ಲ. ಪಾಲಿಕೆ ಮತ್ತು ಅದರ ಹೊರಗೆ ಎನ್ನುವ ಲಾಜಿಕ್ ಇಲ್ಲಿ ಅನ್ವಯವಾಗುವುದಿಲ್ಲ. ಇನ್ನು ನಗರದವರ ತಪ್ಪಿಲ್ಲ. ಗ್ರಾಮಾಂತರದಲ್ಲಿ ಸೊಂಕಿತರ ಸಂಖ್ಯೆ ಹೆಚ್ಚಾದರೆ ನಾವು ಯಾಕೆ ಲಾಕ್ ಡೌನ್ ಅನುಭವಿಸಬೇಕು ಎಂದು ಹೇಳಲು ಆಗುವುದಿಲ್ಲ. ಆರಂಭದಲ್ಲಿ ಗ್ರಾಮಾಂತರ ಭಾಗದಲ್ಲಿ ಸೋಂಕಿತರ ಸಂಖ್ಯೆ ಕಡಿಮೆ ಇತ್ತು. ಆಗ ನಗರದಲ್ಲಿ ಜಾಸ್ತಿ ಇತ್ತು. ಆಗಲೂ ಇಡೀ ಜಿಲ್ಲೆಗೆ ಅನ್ವಯಿಸುವಂತೆ ನಿಯಮಗಳನ್ನು ಹೇರಲಾಗಿತ್ತು.
ಅಷ್ಟಕ್ಕೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂತಹ ಪರಿಸ್ಥಿತಿಗೆ ನಮ್ಮ ಸ್ವಯಂಕೃತ ಅಪರಾಧವೇ ಕಾರಣ. ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಸಾವಿರ ದಾಟಿ ಸಾಯುವವರ ಸಂಖ್ಯೆ ಹೆಚ್ಚಾಗುತ್ತಿರುವುದಕ್ಕೆ ನಾವು ಮಾಡುತ್ತಿರುವ ನಿರ್ಲಕ್ಷ್ಯವೇ ಕಾರಣ. ಇದಕ್ಕೆ ಎಷ್ಟೋ ಉದಾಹರಣೆಗಳು ಇವೆ. ಬೇಕಾದರೆ ಭಾನುವಾರ ಮಂಗಳಾದೇವಿ ದೇವಸ್ಥಾನದಲ್ಲಿ ಆದ ಮದುವೆಗಳನ್ನೇ ತೆಗೆದುಕೊಳ್ಳಿ. ಅಲ್ಲಿ ಸಹಾಯಕ ಆಯುಕ್ತ ಮದನ್ ಮೋಹನ್ ಅವರು ದಾಳಿ ಮಾಡಿ ಜೋರು ಮಾಡದೇ ಇದ್ದಲ್ಲಿ ಅಂತಹ ದೊಂಬರಾಟ ಯಾರ ಗಮನಕ್ಕೂ ಬರುತ್ತಿರಲಿಲ್ಲ. ಇಡೀ ಜಿಲ್ಲೆ ಕೊರೊನಾದೊಂದಿಗೆ ಸೆಣಸಾಡುತ್ತಿದೆ. ಇಂತಹ ಹೊತ್ತಿನಲ್ಲಿ ಅದ್ದೂರಿ ಮದುವೆಗಳು ಬೇಕಾ? ಯಾರಿಗೂ ಗೊತ್ತಾಗಲ್ಲ ಎನ್ನುವಂತಹ ಭಂಡ ಧೈರ್ಯನಾ ಅಥವಾ ಕೊರೊನಾದಿಂದ ಯಾರು ಬೇಕಾದರೆ ಸಾಯಲಿ, ನಾವು ಮದುವೆ ವಿಜೃಂಭಣೆಯಿಂದ ಮಾಡೋಣ ಎನ್ನುವ ಅಹಂಕಾರವೇ? ನಮ್ಮನ್ನು ಬುದ್ಧಿವಂತರ ಜಿಲ್ಲೆ ಎಂದು ಕರೆಯುತ್ತಾರೆ. ಆದ್ದರಿಂದ ಕೊರೊನಾ ನಿಯಂತ್ರಣದಲ್ಲಿ ನಾವು ರಾಜ್ಯಕ್ಕೆ ನಂಬರ್ 1 ಆಗಿ ಅನ್ ಲಾಕ್ ಆಗುವ ಜಿಲ್ಲೆಗಳ ಪಟ್ಟಿಯಲ್ಲಿ ನಮ್ಮದೇ ಹೆಸರು ಮೊದಲು ಇರಬೇಕಿತ್ತು. ಆದರೆ ಆಗುತ್ತಿರುವುದೇನು? 6 ರಿಂದ 9 ಇದ್ದದ್ದು 7 ರಿಂದ 1 ಗಂಟೆಗೆ ಬದಲಾಗಿದೆ. ಹಿಂದೆ ಬೆಳಿಗ್ಗೆ 4 ಗಂಟೆ ತಿರುಗಾಡುತ್ತಿದ್ದವರಿಗೆ ಈಗ ಸ್ವಲ್ಪ ಲೇಟಾಗಿ ಎದ್ದರೂ ಮಧ್ಯಾಹ್ನ ಒಂದು ಗಂಟೆಯ ತನಕ ತಿರುಗಾಡಲು ಅವಕಾಶ ನೀಡಲಾಗಿದೆ. ನಾವೆಲ್ಲರೂ ಅಂದುಕೊಂಡಿರುವುದೇ ಇಷ್ಟು.
ಸ್ವಲ್ಪ ಜಾಸ್ತಿ ಹೊತ್ತು ಹೊರಗೆ ಇರಲು ಅವಕಾಶ ಸಿಕ್ಕಿದಂತೆ ಎಂದು ಎಷ್ಟೋ ಜನ ಈ ಅವಕಾಶವನ್ನು ಬಳಸಿಕೊಳ್ಳಲಿದ್ದಾರೆ. ಅದರ ನಂತರ ನಮ್ಮ ಜಿಲ್ಲೆಯ ಪಾಸಿಟಿವಿಟಿ ರೇಟ್ ಕಡಿಮೆಯಾಗದೇ ಜಿಲ್ಲಾಧಿಕಾರಿಯವರು ಮತ್ತೆ ಒಂದು ವಾರ ಲಾಕ್ ಡೌನ್ ಮುಂದುವರೆಸಿದರೆ ಆಗ ಮತ್ತೊಮ್ಮೆ ನಮ್ಮ ಗ್ರಹಚಾರವನ್ನು ಬೈಯುತ್ತೇವೆ ಬಿಟ್ಟರೆ ನಾವು ಏನು ಜವಾಬ್ದಾರಿಯುತವಾಗಿ ವರ್ತಿಸಬೇಕೋ ಹಾಗೆ ವರ್ತಿಸಲ್ಲ. ಈಗ ನಮ್ಮ ಮುಂದಿರುವ ಒಂದು ವಾರವನ್ನು ನಾವು ಹೇಗೆ ಕಳೆಯುತ್ತೇವೆ ಎನ್ನುವುದರ ಮೇಲೆ ನಮ್ಮ ಜಿಲ್ಲೆಯಲ್ಲಿ ಲಾಕ್ ಡೌನ್ ಜುಲೈಗೆ ಕಾಲಿಡುತ್ತೋ ಈ ತಿಂಗಳಿಗೆ ಸಮಾಪ್ತಿಯಾಗುತ್ತೋ ಎಂದು ಗೊತ್ತಾಗುತ್ತೆ. ಅಷ್ಟಕ್ಕೂ ಜೂನ್ ಅಂತ್ಯದೊಳಗೆ ಎಲ್ಲವೂ ಮುಗಿಯುತ್ತೆ ಎಂದಲ್ಲ. ಜುಲೈ ಮೊದಲ ವಾರದಿಂದ ಎಲ್ಲವೂ ನಾರ್ಮಲ್ ಆಗುತ್ತದೆ ಎಂದು ಹೇಳಲು ಆಗುವುದಿಲ್ಲ. ಆದರೆ ಅಗತ್ಯ ವಸ್ತುಗಳ ಅಂಗಡಿಗಳನ್ನು ಬಿಟ್ಟು ಬೇರೆ ಅಂಗಡಿಗಳು ತೆರೆಯಲ್ಪಡುವ ಅವಕಾಶ ದಕ್ಕಿಸಿಕೊಂಡರೆ ಅದು ನಮ್ಮ ಮೊದಲ ಜಯ. ಉಡುಪಿಯಲ್ಲಿ ಪಾಸಿಟಿವಿಟಿ ರೇಟ್ ನಮಗಿಂತ ತುಂಬಾ ಕಡಿಮೆ ಇದೆ. 5 ಶೇಕಡಾಗಿಂತ ತುಸು ಜಾಸ್ತಿ ಇದೆ. ಆದ್ದರಿಂದ ಅಲ್ಲಿಯೂ ಲಾಕ್ ಡೌನ್ ಅನ್ ಲಾಕ್ ಮಾಡಿಲ್ಲ. ಆದರೆ ಉಡುಪಿ ಶಾಸಕ ರಘುಪತಿ ಭಟ್ ಅವರು ಉಡುಪಿಯಲ್ಲಿ ಅನ್ ಲಾಕ್ ಮಾಡಬೇಕೆಂದು ಆಗ್ರಹಿಸಿದ್ದಾರೆ. ಆದರೆ ಅಲ್ಲಿನಜಿಲ್ಲಾಧಿಕಾರಿಯವರು ತೆಗೆದುಕೊಳ್ಳಬೇಕಾದ ನಿರ್ಧಾರದ ಮೇಲೆ ಎಲ್ಲವೂ ಅವಲಂಬಿತವಾಗಿದೆ. ಪ್ರಧಾನಿ ಮೋದಿಯವರು ಅನ್ ಲಾಕ್ ಮಾಡುವ ನಿರ್ಧಾರವನ್ನು ಆಯಾ ಜಿಲ್ಲಾಧಿಕಾರಿಯವರಿಗೆ ಬಿಟ್ಟುಕೊಟ್ಟ ನಂತರ ಅದೀಗ ಜಿಲ್ಲಾಧಿಕಾರಿಯವರ ಹೊಣೆ ಆಗಿದೆ. ಒಂದು ವೇಳೆ ಜನಪ್ರತಿನಿಧಿಗಳಿಗೆ ಅಂದರೆ ಸಚಿವರಿಗೆ ನೀಡಿದ್ದರೆ ವಿವಿಧ ಉದ್ಯಮಗಳ ಮಾಲೀಕರ ಒತ್ತಡಕ್ಕೆ ಅವರು ಬಗ್ಗುವ ಸಾಧ್ಯತೆ ಇತ್ತು. ಆದ್ದರಿಂದ ಡಿಸಿಯವರಿಗೆ ಅ ಜವಾಬ್ದಾರಿ ಕೊಡಲಾಗಿದೆ. ಅವರಿಗೆ ಯಾರ ಹಂಗೂ ಇರಲ್ಲ. ಅವರು ಕೇವಲ ಜಿಲ್ಲೆಯ ಆರೋಗ್ಯವನ್ನು ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಮತ್ತು ಜಿಲ್ಲೆಯ ಆರೋಗ್ಯವನ್ನು ಸುಧಾರಿಸುವುದು ನಮ್ಮ ಕೈಯಲ್ಲಿ ಇದೆ. ನಾವು ಬುದ್ಧಿವಂತರಾಗಿದ್ದರೆ ಸಾಕಾಗುವುದಿಲ್ಲ. ಅದನ್ನು ಮುಂದಿನ ವಾರ ಸಾಬೀತುಪಡಿಸಬೇಕು. ನಮ್ಮ ನಿರ್ಲಕ್ಷ್ಯ ಮುಂದಿನ ತಿಂಗಳಿನ ತನಕ ಲಾಕ್ ಡೌನ್ ತೆಗೆದುಕೊಂಡು ಹೋಗಲುಬಹುದು. ಇದು ಸತ್ಯ ಮತ್ತು ಇದು ಮುಂದಿನ ಒಂದು ವಾರದ ತನಕ ನೆನಪಿರಲಿ!
Leave A Reply