ಇಬ್ಬರನ್ನೂ ಸುಧಾರಿಸಿಕೊಂಡು ಮೋದಿ ಹೋಗಬೇಕಿದೆ
ನಮ್ಮ ಭಾರತದಲ್ಲಿ ಎರಡು ರೀತಿಯ ಮತದಾರರು ಇದ್ದಾರೆ. ಒಬ್ಬರು ತನ್ನ ಹಾಗೂ ತನ್ನ ಕುಟುಂಬದ ಏಳಿಗೆಯನ್ನು ನೋಡುವವರು, ಮತ್ತೊಬ್ಬರು ದೇಶದ ಏಳಿಗೆಯನ್ನು ನೋಡುವವರು. ಮೋದಿ ಈ ಎರಡು ವ್ಯಕ್ತಿತ್ವವನ್ನು ಈಗ ಸರಿ ತೂಗಿಸಿಕೊಂಡು ಹೋಗಬೇಕಿದೆ. ಈಗ ಪೆಟ್ರೋಲ್ ಮತ್ತು ಡಿಸೀಲ್ ಬೆಲೆ ಎಲ್ಲಿಗೆ ಹೋಗಿ ತಲುಪಿದೆ ಎನ್ನುವುದನ್ನು ನನಗಿಂತ ಕಾರು, ಬೈಕ್ ಹೊಂದಿರುವ ನೀವು ಚೆನ್ನಾಗಿ ಬಲ್ಲಿರಿ. ಪೆಟ್ರೋಲ್ 100 ಗಡಿ ದಾಟಿ ತಿಂಗಳು ಕಳೆದಿದೆ. ಇಳಿದರೆ ಇಪ್ಪತ್ತು ಪೈಸೆ, ಐವತ್ತು ಪೈಸೆ ಇಳಿಯುತ್ತಿದೆ. ಇನ್ನು ಡಿಸೀಲ್ 95 ರ ಆಸುಪಾಸಿನಲ್ಲಿ ಟೆಂಟ್ ಹಾಕಿ ಕುಳಿತುಕೊಂಡಿದೆ.
ಈಗ ವಿಷಯ ಇರುವುದು ಅಡುಗೆ ಅನಿಲ ಅಥವಾ ಸಿಂಪಲ್ಲಾಗಿ ಗ್ಯಾಸ್ ಎಂಬ ಕಣ್ಣಿಗೆ ಕಾಣದ ಆದರೆ ಮನೆಗಳಿಗೆ ಅತ್ಯಗತ್ಯವಾಗಿರುವ ವಸ್ತುವಿನ ಬಗ್ಗೆ. ಇದರ ಬೆಲೆ ಸಾವಿರ ಈ ವರ್ಷವೇ ತಲುಪಬಹುದು ಅಥವಾ ಅದಕ್ಕಿಂತ ಮೊದಲೇ ತಲುಪಬಹುದು ಎನ್ನುವುದು ಸದ್ಯದ ಊಹೆ. ಈಗ ಅದು 900ರ ಗಡಿ ಮುಟ್ಟಿದೆ. ಮೋದಿ ಏನು ಮಾಡುತ್ತಿದ್ದಾರೆ ಎಂದು ಭಾರತೀಯ ಜನತಾ ಪಾರ್ಟಿಯ ಪರ ಎಂದು ಹೇಳಿಕೊಳ್ಳುವವರು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಬರೆಯುತ್ತಿದ್ದಾರೆ. ಕೆಲವರು ಟಿವಿಗಳಲ್ಲಿ ಕೂತು ಮಾತನಾಡುತ್ತಿದ್ದಾರೆ. ಅದಕ್ಕೆ ನಾನು ಆರಂಭದಲ್ಲಿ ಹೇಳಿರುವುದು ಏನೆಂದರೆ ಈ ದೇಶದಲ್ಲಿ ಎರಡು ಟೈಪಿನ ಮತದಾರರಿದ್ದಾರೆ. ಇದೇ ಪರಿಸ್ಥಿತಿ ಮುಂದುವರೆದರೆ ಮುಂದೆ ಕೇಂದ್ರದಲ್ಲಿ ಮೋದಿಯವರಿಗೆ ಹ್ಯಾಟ್ರಿಕ್ ಗೆಲುವು ಕಷ್ಟವಾದರೂ ಆಗಬಹುದು. ಆದರೆ ಆ ಹೊತ್ತಿಗೆ ಭವ್ಯ ರಾಮ ಮಂದಿರ ಎದ್ದು ನಿಲ್ಲುವುದರಿಂದ ಅದರ ವಿಡಿಯೋ ತೋರಿಸಿಯೇ ಮುಂದಿನ ಬಾರಿಯೂ ಮೋದಿ ಬಿಜೆಪಿಯನ್ನು ಗಡಿ ದಾಟಿಸಿಬಿಡಬಲ್ಲರು. ಆದರೆ ಅವರದ್ದೇ ಆಡಳಿತ ಇರುವ ರಾಜ್ಯಗಳ ಗತಿ ಏನು? ಕೇಂದ್ರದಲ್ಲಿ ಪರ್ಯಾಯ ಇಲ್ಲ. ಆದರೆ ನಮ್ಮ ರಾಜ್ಯದಲ್ಲಿ ಅಷ್ಟು ಸುಲಭವಿಲ್ಲ. ಗ್ಯಾಸ್, ಪೆಟ್ರೋಲ್, ಡಿಸೀಲ್ ದರ ತೋರಿಸಿಯೇ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಪಕ್ಷ ಬಿಜೆಪಿಯನ್ನು ಮಕಾಡೆ ಮಲಗಿಸುವ ಪೂರ್ಣ ಯತ್ನ ಮಾಡುತ್ತಿದೆ. ಹಾಗಾದರೆ ಈ ವಿಷಯದಲ್ಲಿ ಬಿಜೆಪಿಯ ಉತ್ತರ ಏನು? ಮೊದಲನೇಯದಾಗಿ ಕಳೆದ ಎರಡು ವರ್ಷಗಳಲ್ಲಿ ಜಗತ್ತು ಕಂಡರಿಯದ ಸಾಂಕ್ರಾಮಿಕ ರೋಗವನ್ನು ನಮ್ಮ ದೇಶವೂ ಕಂಡಿದೆ. ಪ್ರಪಂಚದ ಎಷ್ಟೋ ಸಣ್ಣಪುಟ್ಟ ದೇಶಗಳು ಈ ಕೊರೊನಾದ ಪೆಟ್ಟು ತಾಳಲಾರದೇ ತಮ್ಮ ದೇಶಗಳಲ್ಲಿ ಫುಡ್ ಎಮರ್ಜೆನಿ ಘೋಷಿಸಿವೆ. ಎಷ್ಟೋ ರಾಷ್ಟ್ರಗಳಲ್ಲಿ ಸರಕಾರಗಳೇ ಕೈ ಎತ್ತಿವೆ. ಆದರೆ ಪ್ರಪಂಚದ ಎರಡನೇ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಲ್ಲಿ ನೂರಮೂವತ್ತು ಕೋಟಿ ಜನಸಂಖ್ಯೆ ಹೊಂದಿದ ರಾಷ್ಟ್ರದಲ್ಲಿ ಈ ಕೊರೊನಾ ಏನು ಮಾಡಿದರೂ ನಮ್ಮನ್ನು ಬಗ್ಗಿಸಲು ಆಗಲಿಲ್ಲ.
ಒಂದು ದಿನ ದೇಶ ಬಂದ್ ಆದರೆ ಸಾವಿರಾರು ಕೋಟಿ ರೂಪಾಯಿ ನಷ್ಟವಾಗಿ ದೇಶ ಎಷ್ಟೊ ವರ್ಷ ಹಿಂದೆ ಹೋದ ಹಾಗೆ ಆಗುತ್ತದೆ. ಹಾಗಿರುವಾಗ ಆರಂಭದಲ್ಲಿ ತಿಂಗಳುಗಟ್ಟಲೆ ಲಾಕ್ ಡೌನ್, ನಂತರ ಅರ್ಧ ಲಾಕ್ ಡೌನ್, ನಂತರ ಜನತಾ ಕಫ್ಯರ್ೂ ಹೀಗೆ ಮೋದಿ ಜನರನ್ನು ರಕ್ಷಿಸಿದರೇ ವಿನ: ಆರ್ಥಿಕ ಸಂಪನ್ಮೂಲ ಕ್ರೋಢಿಕರಿಸುವುದು ಎರಡನೇ ಆಯ್ಕೆಯನ್ನಾಗಿ ಮಾಡಿಕೊಂಡರು. ಅದರೊಂದಿಗೆ ತಾತ್ಕಾಲಿಕ ಆಸ್ಪತ್ರೆಗಳ ನಿರ್ಮಾಣದಿಂದ ಹಿಡಿದು, ಆಕ್ಸಿಜನ್ ಘಟಕಗಳ ಸ್ಥಾಪನೆಗಳನ್ನು ಸೇರಿಸಿಕೊಂಡು, ವ್ಯಾಕ್ಸಿನ್ ಪೂರೈಕೆಯ ತನಕ ನಮ್ಮ ಸರಕಾರಗಳು ಖರ್ಚು ಮಾಡಿದ ಹಣದ ಹೊಳೆ ಅದು ಹೊಳೆ ಅಲ್ಲ ಸಾಗರವಾಗಿತ್ತು. ಅದಕ್ಕೆಲ್ಲ ಹಣ ಎಲ್ಲಿಂದ ಬರಬೇಕು?
ಅದರ ನಂತರ ದೇಶದ ಸುರಕ್ಷೆಗಾಗಿ ನಿಗದಿಪಡಿಸಬೇಕಾದ ಮೊತ್ತ, ಆಡಳಿತ ಯಂತ್ರಕ್ಕಾಗಿ ಇಡಬೇಕಾದ ಮೊಬಲಗು, ಮುಂದುವರೆಯಬೇಕಾದ ಅಭಿವೃದ್ಧಿ ಯೋಜನೆಗಳಿಗಾಗಿ ಹಣ ಎಲ್ಲವೂ ಇಲ್ಲಿಂದಲೇ ಬರಬೇಕು. ಅದಕ್ಕಾಗಿ ಬೇಕಾಬಿಟ್ಟಿ ಹಣವನ್ನು ಪ್ರಿಂಟ್ ಮಾಡಲು ಆಗುತ್ತದೆಯಾ? ಇದೆಲ್ಲವನ್ನು ಮೋದಿ ಒಟ್ಟು ಮಾಡಲು ಮುಂದಾಗಿರುವುದು ಇದೇ ಪೆಟ್ರೋಲ್, ಡಿಸೀಲ್, ಗ್ಯಾಸ್ ನಿಂದಾಗಿ ಎನ್ನುವುದು ಈಗ ಬಿಜೆಪಿಗರು ಮಂಡಿಸುತ್ತಿರುವ ವಾದ. ನಮಗೆ ಕೊರೊನಾ ಬಂದರೆ ಉಚಿತ ಚಿಕಿತ್ಸೆ ಬೇಕು, ಉಚಿತ ವ್ಯಾಕ್ಸಿನ್ ಬೇಕು ಎನ್ನುವುದರಿಂದ ಹಿಡಿದು ಮನೆಯ ಎದುರಿಗಿನ ರಸ್ತೆಗೆ ಕಾಂಕ್ರೀಟ್ ಇದೇ ವರ್ಷ ಆಗಬೇಕು ಎನ್ನುವ ತನಕ ಎಲ್ಲವೂ ಬೇಕು. ಆದರೆ ಮೋದಿ ಮಾತ್ರ ಯಾವುದರ ದರ ಕೂಡ ಹೆಚ್ಚಿಸಬಾರದು ಎನ್ನುವುದು ನಮ್ಮ ಹಟ.
ಮುಂದಿನ ತಿಂಗಳ ಮೊದಲ ವಾರದಲ್ಲಿ ಒಂದು ವೇಳೆ ಚುನಾವಣೆ ಇಟ್ಟರೆ ಮೋದಿ ಸರಕಾರ ಮತ್ತೆ ಬರುವುದು ಡೌಟು ಎನ್ನುವ ಪರಿಸ್ಥಿತಿ ಇದೆ. ಯಾಕೆಂದರೆ ಎಲ್ಲರೂ ಗ್ಯಾಸ್ ದರವನ್ನೇ ಮಾತನಾಡಿ ಯಾರಿಗೆ ಹಿಂದಿನ ಬಾರಿ ವೋಟ್ ಹಾಕಿದ್ದರೋ ಅವರಿಗೆ ಹಾಕುವುದೇ ಇಲ್ಲ. ನಾನು ಇನ್ನೊಮ್ಮೆ ಅದನ್ನೇ ಹೇಳುತ್ತೇನೆ, ನಮ್ಮ ದೇಶದಲ್ಲಿ ಎರಡು ರೀತಿಯ ಮತದಾರರಿದ್ದಾರೆ. ಕಾಂಗ್ರೆಸ್ ಸರಕಾರ ಮಾಡಿಟ್ಟಿದ್ದ ಮಿಲಿಯನ್ ಗಟ್ಟಲೆ ಆಯಿಲ್ ಬಾಂಡ್ ಸಾಲವನ್ನು ನಾವು ತೀರಿಸಿದ್ದೇವೆ ಎಂದು ಕೇಂದ್ರ ಸಚಿವರು ಹೇಳಿದರೂ ನಮ್ಮ ಸಾಲವನ್ನು ಯಾರ್ರೀ ತೀರಿಸುವುದು ಎನ್ನುವ ಮತದಾರರು ನಮ್ಮಲ್ಲಿದ್ದಾರೆ. ಪಾಕಿಸ್ತಾನದ ಗಡಿಯಲ್ಲಿ ನಮ್ಮ ಸೈನ್ಯದ ಅನುಕೂಲತೆಗೆ ರಸ್ತೆ ಮಾಡಿದ್ದೇವೆ ಎಂದು ರಕ್ಷಣಾ ಸಚಿವರು ಹೇಳಿದರೂ ನಮ್ಮ ಅಡುಗೆ ಎಣ್ಣೆಯ ದರ ಲೀಟರಿಗೆ ಇಪ್ಪತ್ತು ರೂಪಾಯಿ ಜಾಸ್ತಿಯಾಗಿದೆ ಎನ್ನುವವರು ನಮ್ಮಲ್ಲಿದ್ದಾರೆ. ದೇಶದ ಜಿಡಿಪಿ 20 ಶೇಕಡಾ ಸುಧಾರಿಸಿದೆ ಎಂದು ಆರ್ಥಿಕ ಸಚಿವೆ ಹೇಳಿದರೆ ನಮ್ಮ ಬಸ್ಸು ಟಿಕೆಟ್ ದರ ನಾಲ್ಕು ರೂಪಾಯಿ ಹೆಚ್ಚಾಗಿದೆ ಎನ್ನುವವರು ನಮ್ಮಲ್ಲಿದ್ದಾರೆ. ಈ ಇಬ್ಬರನ್ನು ಸುಧಾರಿಸಿಕೊಂಡು ಸಂಸಾರದ ಟೆನ್ಷನ್ ಮಾಡದೇ, ದೇಶದ ಜನರಿಗಾಗಿ ಬದುಕುತ್ತಿರುವ ಮೋದಿ. ಯಾಕೆಂದರೆ ಇದು ನಮ್ಮ ಭಾರತ ಮತ್ತು ಇಲ್ಲಿ ಎರಡು ಮನಸ್ಥಿತಿಯ ಜನರಿದ್ದಾರೆ!!
Leave A Reply