ಹಿಂದೂಗಳ ಹಬ್ಬದ ಮೇಲೆ ಮಂಗಳೂರು ಪಾಲಿಕೆಗೆ ಕಣ್ಣು!!
ಭಾರತೀಯ ಜನತಾ ಪಾರ್ಟಿ ನೇತೃತ್ವದ ಸರಕಾರ ರಾಜ್ಯದಲ್ಲಿ ಬಂದ ನಂತರ ಈ ಪರಿ ಹಿಂದೂ ಹಬ್ಬಗಳ ವಿಷಯದಲ್ಲಿ ಅಧ್ವಾನಗಳನ್ನು ಮಾಡುತ್ತೆ ಎಂದು ಯಾರಿಗೂ ಅನಿಸಿರಲಿಲ್ಲ. ಆರಂಭದಲ್ಲಿ ಗಣೇಶ ಹಬ್ಬವನ್ನು ಆಚರಿಸುವುದರ ಕುರಿತು ಇವರು ದಿನಕ್ಕೊಂದು ಮಾರ್ಗಸೂಚಿಗಳನ್ನು ಹೊರಡಿಸಿ ಅಕ್ಷರಶ: ಎಲ್ಲ ಗಣೇಶ ಭಕ್ತರನ್ನು ಗೊಂದಲಕ್ಕೆ ಈಡು ಮಾಡಿದ್ದರು. ಅತ್ತ ರಾಜ್ಯ ಸರಕಾರ ಹೀಗೆ ಎಡವಟ್ಟುಗಳ ಮೇಲೆ ಎಡವಟ್ಟು ಮಾಡುತ್ತಾ ಇದ್ರೆ ಮಂಗಳೂರು ಮಹಾನಗರ ಪಾಲಿಕೆಯ ಬಿಜೆಪಿ ನೇತೃತ್ವದ ಆಡಳಿತ ಪಕ್ಷ ಮಾಡುತ್ತಿರುವ ಕಾರುಬಾರು ಹಿಂದೂಗಳನ್ನು ಸಂಕಟಕ್ಕೆ ದೂಡಿದೆ. ಅದು ಹೇಗೆ? ವಿವರಿಸುತ್ತೇನೆ. ಮೊದಲನೇಯದಾಗಿ ಈಗ ಕೊರೊನಾ ಅವಧಿ. ಹೆಚ್ಚಿನವರಿಗೆ ಉದ್ಯೋಗದಲ್ಲಿ ತೊಂದರೆ ಆಗಿದೆ. ಅನೇಕರಿಗೆ ಸಂಬಳದಲ್ಲಿ ಕೊರತೆ ಆಗಿದೆ. ಉಳಿದವರಿಗೆ ಅರ್ಧ ಡ್ಯೂಟಿ ಆಗಿದೆ. ಆದ್ದರಿಂದ ಎರಡು ವರ್ಷಗಳ ಹಿಂದಿನ ಪರಿಸ್ಥಿತಿ ಈಗ ಮಧ್ಯಮ ವರ್ಗದವರಲ್ಲಿ ಇಲ್ಲ. ಹಾಗಂತ ಹಬ್ಬಗಳನ್ನು ಸಪ್ಪೆಯಾಗಿ ಆಚರಿಸಲು ಮನಸ್ಸು ಒಪ್ಪುತ್ತಿಲ್ಲ. ಆದ್ದರಿಂದ ಇದ್ದ ಬದ್ದ ಕಾಸು ಒಟ್ಟು ಮಾಡಿ ತಮ್ಮ ಮನಸ್ಸಿನ ನೆಮ್ಮದಿಗೆ ನಾವು ಹಬ್ಬ ಮಾಡಲು ಹೊರಟಿದ್ದೇವೆ. ಹಬ್ಬ ಎಂದ ನಂತರ ದೇವರಿಗೆ ನೈವೇದ್ಯ ಎಂದು ಬಗೆಬಗೆಯ ಭಕ್ಷ್ಯಗಳನ್ನು ಮಾಡುವ ಸಂಪ್ರದಾಯ ಇದೆ. ಆ ತರೇವಾರಿ ಪದಾರ್ಥಗಳನ್ನು ಮಾಡಲು ಅನೇಕ ಬಗೆಯ ತರಕಾರಿಗಳು ಬೇಕೆ ಬೇಕು. ಈ ತರಕಾರಿಗಳನ್ನು ನೀವು ತರಕಾರಿ ಅಂಗಡಿಗಳಲ್ಲಿ ಹೋಗಿ ಖರೀದಿಸಿದರೆ ಆಗುವ ಖರ್ಚಿಗಿಂತ ಈ ಬೀದಿಬದಿ ವ್ಯಾಪಾರಿಗಳ ಬಳಿ ಖರೀದಿ ಮಾಡಿದರೆ ನಿಮ್ಮ ಒಂದು ಚೀಲ ತುಂಬುವಾಗ ಸಾಕಷ್ಟು ಹಣ ಉಳಿಯುತ್ತದೆ. ಉದಾಹರಣೆಗೆ ಮೊನ್ನೆ ಅಷ್ಟಮಿಯಂದು ನಿಮಗೆ ಅನುಭವ ಆಗಿರಬಹುದು. ಅಷ್ಟಮಿಯಂದು ಊರಿನ ಬೆಂಡೆಕಾಯಿಯ ಪದಾರ್ಥವನ್ನು ಮಾಡುವ ಸಂಪ್ರದಾಯವಿದೆ. ಅದು ಬೀದಿಬದಿ ವ್ಯಾಪಾರಿಗಳಲ್ಲಿ ಖರೀದಿಸಿದರೆ ಕಿಲೋಗೆ 80 ರೂಪಾಯಿಯ ಆಸುಪಾಸಿನಲ್ಲಿ ದರ ಇದೆ. ಅದೇ ನೀವು ತರಕಾರಿ ಅಂಗಡಿಗಳಲ್ಲಿ ಖರೀದಿ ಮಾಡಿದರೆ ಅದೇ ಬೆಂಡೆಗೆ 120 ರೂಪಾಯಿ ಆಗುತ್ತದೆ. ಇನ್ನು ಕದಳಿ ಬಾಳೆಹಣ್ಣನ್ನೇ ತೆಗೆದುಕೊಳ್ಳಿ. ಅದಕ್ಕೆ ಬೀದಿಬದಿ ವ್ಯಾಪಾರಿಗಳ ಬಳಿ 60 ರಿಂದ ಹೆಚ್ಚೆಂದರೆ 80 ರೂಪಾಯಿ ಒಳಗೆ ಹಣ್ಣು ಬರುತ್ತದೆ. ಬೇಕಾದರೆ ಬೀದಿಬದಿ ವ್ಯಾಪಾರಿಗಳು ಎರಡು ಹಣ್ಣನ್ನು ಜಾಸ್ತಿಯೇ ಹಾಕಿಬಿಡುತ್ತಾರೆ. ಆದರೆ ತರಕಾರಿಯವರು ಇಲೆಕ್ಟ್ರಾನಿಕ್ ಮೇಶಿನ್ ನಲ್ಲಿ ಐವತ್ತು ಗ್ರಾಂ ಕೂಡ ಹೆಚ್ಚು ಬರದ ಹಾಗೆ ತೂಕ ಮಾಡಿಕೊಡುತ್ತಾರೆ. ರೇಟ್ ಕೂಡ ಸಾಕಷ್ಟು ಹೆಚ್ಚಾಗಿಯೇ ಇರುತ್ತದೆ. ಇನ್ನು ನೀವು ಯಾವುದೇ ತರಕಾರಿ, ಹಣ್ಣುಹಂಪಲುಗಳನ್ನು ಬೇಕಾದರೆ ತೆಗೆದುಕೊಳ್ಳಿ, ಬೀದಿಬದಿ ವ್ಯಾಪಾರಿಗಳಿಗಿಂತ ಬೇರೆ ತರಕಾರಿ ಅಂಗಡಿಯವರ ರೇಟ್ ಸಾಕಷ್ಟು ಜಾಸ್ತಿಯೇ ಇರುತ್ತದೆ. ಇನ್ನು ಗುಣಮಟ್ಟವನ್ನು ಕೂಡ ಈಗ ಬೀದಿಬದಿ ವ್ಯಾಪಾರಿಗಳು ಯಾವುದೇ ಕಡಿಮೆ ಇಲ್ಲದಂತೆ ಕಾಪಾಡಿಕೊಳ್ಳುತ್ತಿದ್ದಾರೆ. ಈಗ ಸೆಂಟ್ರಲ್ ಮಾರುಕಟ್ಟೆ ಎತ್ತಂಗಡಿ ಆದ ನಂತರ ತರಕಾರಿ, ಹಣ್ಣುಹಂಪಲು ಮಾರುವವರ ರೇಟ್ ಕೂಡ ವ್ಯತ್ಯಾಸವಾಗಿದೆ. ಶ್ರೀಮಂತರು ಅಥವಾ ಅನುಕೂಲಸ್ಥರು ಬೇಕಾದರೆ ಯಾರ ಬಳಿಯೂ ಹಣ್ಣುಹಂಪಲು, ತರಕಾರಿ ಖರೀದಿಸಲಿ. ಅದು ಅವರ ಇಷ್ಟ. ಆದರೆ ಮಧ್ಯಮ ಮತ್ತು ಕೆಳಮಧ್ಯಮ ವರ್ಗದವರಿಗೆ ಈಗ ಈ ಬೀದಿಬದಿ ವ್ಯಾಪಾರಿಗಳೇ ಗತಿ ಎನ್ನುವಂತಹ ದಿನಗಳು ಬಂದಿವೆ. ಇದೆಲ್ಲ ಗೊತ್ತಿದ್ದು ನಮ್ಮ ಪಾಲಿಕೆ ಏನು ಮಾಡುತ್ತಿದೆ ಎಂದರೆ ಹಿಂದೂ ಹಬ್ಬಗಳಿಗೆ ಎರಡು ದಿನಗಳು ಇರುವಾಗ ಈ ಬೀದಿಬದಿ ವ್ಯಾಪಾರಿಗಳ ಮೇಲೆ ರೇಡ್ ಮಾಡಿಸುತ್ತಾರೆ. ಅವರನ್ನು ಅಲ್ಲಿಂದ ಸಂಪೂರ್ಣವಾಗಿ ಓಡಿಸಿಬಿಡುತ್ತಾರೆ. ಅದರ ಬಳಿಕ ನಾವು ಖರೀದಿ ಮಾಡಲು ಹೋದರೆ ಅಲ್ಲಿ ಯಾವ ಬೀದಿಬದಿ ವ್ಯಾಪಾರಿಯೂ ಇರುವುದಿಲ್ಲ. ಇದರಿಂದ ಏನಾಗುತ್ತದೆ ಎಂದರೆ ನಾವು ಅನಿವಾರ್ಯವಾಗಿ ದೊಡ್ಡ ತರಕಾರಿ ಅಂಗಡಿಗಳಲ್ಲಿ ಖರೀದಿಸಬೇಕಾಗುತ್ತದೆ. ಅಲ್ಲಿ ನಮ್ಮನ್ನು ಎಷ್ಟು ಹಿಂಡಲು ಆಗುತ್ತದೆಯೋ ಅಷ್ಟು ಹಿಂಡುತ್ತಾರೆ. ಈ ಖುಷಿಯನ್ನೇ ಪಾಲಿಕೆ ಎದುರು ನೋಡುತ್ತಿದೆಯಾ ಎನ್ನುವ ಭಾವನೆ ಬರುತ್ತಿದೆ.
ಈಗ ನಾನು ಕೇಳುತ್ತಿರುವ ಪ್ರಶ್ನೆ ಏನೆಂದರೆ ಹಿಂದೂ ಹಬ್ಬಗಳ ಆಸುಪಾಸಿನಲ್ಲಿ ಬೀದಿ ಬದಿ ವ್ಯಾಪಾರಿಗಳ ಮೇಲೆ ರೇಡ್ ಮಾಡುತ್ತಿರುವ ಪಾಲಿಕೆ ಬಿಜೆಪಿ ಆಡಳಿತದ ಉದ್ದೇಶ ಏನು? ಈಗ ನಾಳೆ ಅಂದರೆ ಗುರುವಾರ ಮತ್ತೆ ಇವರು ರೇಡ್ ಮಾಡಿಸಲಿದ್ದಾರೆ. ಯಾಕೆಂದರೆ ಶುಕ್ರವಾರ ಗಣೇಶನ ಹಬ್ಬ ಇದೆ. ಬಡ, ಮಧ್ಯಮ ವರ್ಗದ ಹಿಂದೂ ಭಕ್ತರು ಖರೀದಿಗೆ ಬೀದಿಬದಿ ವ್ಯಾಪಾರಿಗಳ ಬಳಿ ಹೋಗುವಾಗ ಇವರು ರೇಡ್ ಮಾಡಿಸಿ ವ್ಯಾಪಾರಿಗಳನ್ನು ಓಡಿಸಿಬಿಟ್ಟಿರುತ್ತಾರೆ. ಹಾಗಾದರೆ ಪಾಲಿಕೆಯ ಅಧಿಕಾರಿಗಳಿಗೂ, ತರಕಾರಿ ಅಂಗಡಿಯವರಿಗೂ ಏನಾದರೂ ಒಳ ಒಪ್ಪಂದ ನಡೆದಿದೆಯಾ? ಇವತ್ತು ಕ್ರಿಶ್ಚಿಯನ್ನರ ಹಬ್ಬ. ಅದಕ್ಕೆ ಕಡ್ಡಾಯವಾಗಿ ಅವರ ಮನೆಗಳಲ್ಲಿ ಸಸ್ಯಹಾರವೇ ಇರುತ್ತದೆ. ಅದಕ್ಕಾಗಿ ಅವರು ನಿನ್ನೆ ಖರೀದಿ ಮಾಡಿಯಾಗಿದೆ. ಹಾಗಂತ ಮೊನ್ನೆ ಯಾವುದೇ ರೇಡ್ ಪಾಲಿಕೆಯಿಂದ ಆಗಿಲ್ಲ. ಕ್ರೈಸ್ತರಿಗೆ ಏನೂ ತೊಂದರೆ ಆಗದಂತೆ ಖರೀದಿ ಮಾಡಲು ಅವಕಾಶ ನೀಡಲಾಗಿದೆ. ಈಗ ಗೌರಿ-ಗಣೇಶ ಹಬ್ಬ ಬರುವ ಇವರ ರೇಡ್ ಇದ್ದೇ ಇರುತ್ತದೆ. ಅಷ್ಟಮಿ ಹಿಂದಿನ ಎರಡು ದಿನ ಕೂಡ ರೇಡ್ ಮಾಡಿ ಅದನ್ನು ಪಾಲಿಕೆ ಸಾಬೀತುಪಡಿಸಿದೆ. ಹಾಗಂತ ಇಲ್ಲಿ ನಾನು ಧರ್ಮಗಳ ವಿಷಯ ಹೇಳುತ್ತಿಲ್ಲ. ಅವರಿಗೆ ಒಂದು ನಿಯಮ, ನಮಗೆ ಒಂದು ನಿಯಮ ಸರಿನಾ ಎನ್ನುವುದು ಪ್ರಶ್ನೆ. ಇದು ಮೇಯರ್ ಹಾಗೂ ಶಾಸಕರ ಗಮನಕ್ಕೆ ಬರದೇ ಆಗುತ್ತಿದ್ದರೆ ದಯವಿಟ್ಟು ಜನಪ್ರತಿನಿಧಿಗಳು ಈ ಬಗ್ಗೆ ಮಾನವೀಯ ದೃಷ್ಟಿಯಿಂದಲೂ ನೋಡುವುದು ಒಳ್ಳೆಯದು. ಯಾಕೆಂದರೆ ಬಡ ಹಿಂದೂಗಳ ಮತ ಬೇಕು ಎಂದ ಮೇಲೆ ಅವರಿಗಾಗಿ ಏನಾದರೂ ಮಾಡಿ. ಇಲ್ಲದಿದ್ದರೆ ಶಾಪ ಗ್ಯಾರಂಟಿ. ಎಲ್ಲವೂ ಆದ ಮೇಲೆ ಎಚ್ಚರಿಸಲಿಲ್ಲ ಎನ್ನಬೇಡಿ. ಖಾರವಾಗಿ ಹೇಳಿದರೆ ನಾವು ಕೆಟ್ಟವರಾಗುತ್ತೇವೆ. ಬಡ ಹಿಂದೂಗಳು ಹಬ್ಬದ ದಿನ ಹಬ್ಬದೂಟ ಮಾಡುವುದು ಬೇಡಾ ಎಂದು ಹೇಳಲು ನೀವು ಹೊರಟಿದ್ದರೆ ಅಥವಾ ಹಾಗೆ ಮಾಡುತ್ತಿದ್ದರೆ ಅದು ನಿಮ್ಮ ಕರ್ಮ. ನಂತರ ಪಶ್ಚಾತ್ತಾಪ ಆದರೆ ಅನುಭವಿಸಲು ತಯಾರಾಗಿ!
Leave A Reply