ಪಾಲಿಕೆಯಲ್ಲಿ ಸೊಂಟ ಇಲ್ಲದ ಬಿಜೆಪಿ, ಕಂಠ ಇಲ್ಲದ ಕಾಂಗ್ರೆಸ್!
Posted On September 14, 2021
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಆಡಳಿತದಲ್ಲಿ ಎಷ್ಟೇ ಲೋಪದೋಷಗಳು ಇರಲಿ, ಕಾಂಗ್ರೆಸ್ ಯಾಕೆ ಸುದ್ದಿಗೋಷ್ಟಿ ಮಾಡುವುದಿಲ್ಲ ಎಂದು ಅವರದ್ದೇ ಪಕ್ಷದ ಮುಖಂಡರು, ಕಾರ್ಯಕರ್ತರು ತಮ್ಮ ನಾಯಕರನ್ನು ಕೇಳಬೇಕು. ರಾಜ್ಯ ಅಥವಾ ಕೇಂದ್ರ ಸರಕಾರದ ಒಂದು ಸಣ್ಣ ಸಾಸಿವೆ ಕಾಳಿನಷ್ಟು ವಿಷಯ ಸಿಕ್ಕಿದರೂ ಸಾಕು, ರಮಾನಾಥ ರೈ, ಖಾದರ್, ಹರೀಶ್ ಕುಮಾರ್, ವಿನಯರಾಜ್ ಹಾಗೂ ಮಾಜಿ ಶಾಸಕರೊಬ್ಬರು ಸರಣಿಯಲ್ಲಿ ನಿತ್ಯ ಸುದ್ದಿಗೋಷ್ಟಿಯನ್ನು ಮಾಡುತ್ತಾರೆ. ಅದೇ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಹಲಸಿನ ಹಣ್ಣು ಕೊಳೆತು ಬಿದ್ದಿದ್ದರೂ ಯಾರು ಮಾತನಾಡುವುದಿಲ್ಲ. ಆಗ ಇವರಿಗೆ ಸುದ್ದಿಗೋಷ್ಟಿಯಲ್ಲಿ ಏನು ಮಾತನಾಡುವುದು ಎಂದು ಗೊತ್ತಿಲ್ಲವೋ ಅಥವಾ ಪಾಲಿಕೆಯ ಹಗರಣದ ಬಗ್ಗೆ ಮಾತನಾಡುವುದು ಮತ್ತು ತಮ್ಮ ಕಾಲಿನ ಮೇಲೆ ತಾವೇ ಕಲ್ಲು ಎತ್ತಿ ಹಾಕಿಕೊಳ್ಳುವುದು ಒಂದೇ ಎಂದು ವಿನಯರಾಜ್ ನಂತವರು ತೀರ್ಮಾನಿಸಿದ್ದಾರೋ ಎನ್ನುವುದೇ ಈಗ ಏಳುತ್ತಿರುವ ಪ್ರಶ್ನೆ. ಇದರ ಅರ್ಥ ಒಂದೇ, ಬಿಜೆಪಿ ಹಾಗೂ ಕಾಂಗ್ರೆಸ್ ಪಾಲಿಕೆಯಲ್ಲಿ ಸ್ವಂತ ಕಸಿನ್ ಬ್ರದರ್ಸ್. ಬೇಕಾದರೆ ಆಂಟೋನಿ ವೇಸ್ಟ್ ಮ್ಯಾನೇಜಮೆಂಟ್ ನವರ ಕರ್ತವ್ಯ ಲೋಪವನ್ನೇ ತೆಗೆದುಕೊಳ್ಳಿ. ಬಿಜೆಪಿ ಬಿಡಿ, ಅವರಿಗೆ ಆಂಟೋನಿಯವರ ವಿರುದ್ಧ ಮಾತನಾಡಲು ಆಗುತ್ತಿಲ್ಲ. ಮಾತನಾಡಿದರೆ ಬೇಜಾರು ಮಾಡಿಕೊಂಡು ಬಿಟ್ಟಾರು ಎನ್ನುವ ಧಾರಾಳತನ. ಆದ್ದರಿಂದ ಆಂಟೋನಿ ಏನೂ ಮಾಡದಿದ್ದರೂ ಬಿಲ್ ಮಾತ್ರ ತಿಂಗಳಿಗೆ ಎರಡು ಕೋಟಿ ಕೊಟ್ಟ ಕೂಡಲೇ ಬಿಜೆಪಿಯವರು ಅದನ್ನು ಪಾಸ್ ಮಾಡಲು ತುದಿಗಾಲಲ್ಲಿ ನಿಲ್ಲುತ್ತಾರೆ. ಹಾಗಾದರೆ ಯಾಕೆ, ಕಾಂಗ್ರೆಸ್ ಈ ಬಗ್ಗೆ ಸುದ್ದಿಗೋಷ್ಟಿ ಮಾಡಲ್ಲ. ಮಾಡದಂತೆ ಇವರಿಗೂ ಆಗಾಗ ತ್ಯಾಜ್ಯ ಪಾರ್ಸೆಲ್ ಆಗಿ ಮನೆಗೆ ತಲುಪುತ್ತಿದೆಯಾ? ಅದನ್ನು ಅನ್ನದೊಂದಿಗೆ ಕಲೆಸಿ ತಿಂದು ಖುಷಿಯಾಗುತ್ತಿದೆಯಾ? ಅದಕ್ಕೆ ಆಂಟೋನಿ ವೇಸ್ಟ್ ವಿರುದ್ಧ ಮಾತನಾಡಲು ಶಬ್ದಗಳೇ ಸಿಗುತ್ತಿಲ್ಲವೇ? ಅಷ್ಟಕ್ಕೂ ಕಾಂಗ್ರೆಸ್ ಮನಸ್ಸು ಮಾಡಿದರೆ ಈ ವಿಷಯ ಎತ್ತಿ ಒಂದೇ ಕಲ್ಲಿಗೆ ಬಿಜೆಪಿ ಹಾಗೂ ಆಂಟೋನಿ ವೇಸ್ಟ್ ಎರಡನ್ನೂ ಹೊಡೆಯಬಹುದಿತ್ತು.
ಇದರಿಂದ ಜನರ ಪ್ರೀತಿಯೂ ಕಾಂಗ್ರೆಸ್ಸಿಗೆ ಸಿಗುತ್ತಿತ್ತು. ಆದರೆ ಜನರಿಗಿಂತ ಆಂಟೋನಿ ಮುಖ್ಯವಾಗಿರುವುದರಿಂದ ಕಾಂಗ್ರೆಸ್ ಬಾಯಲ್ಲಿ ಅವಲಕ್ಕಿ ಸಿಲುಕಿಕೊಂಡಿದೆ. ಇತ್ತ ವಿನಯರಾಜ್ ಪಾಲಿಕೆಯ ಬಿಜೆಪಿ ಆಡಳಿತದ ವಿರುದ್ಧ ಮಾತನಾಡುವುದಿಲ್ಲವಾದರಿಂದ ಪಾಲಿಕೆಯಲ್ಲಿ ಅವರಿಗೆ ವಿಪಕ್ಷ ನಾಯಕನ ಛೇಂಬರ್ ಮತ್ತು ಖುರ್ಚಿ ಸಿಕ್ಕಿದೆ. ಅಲ್ಲಿ ಹೊರಗೆ ಅವರು ತಮ್ಮ ನಾಮಫಲಕ ಅಳವಡಿಸಿದ್ದಾರೆ. ಅವರು ವಿಪಕ್ಷ ನಾಯಕ ಎಂದು ಮಾನ್ಯ ಮಾಡಲು ಆಗುವುದಿಲ್ಲ ಎಂದು ಪರಿಷತ್ ಸಭೆಯಲ್ಲಿ ಬಬ್ರುವಾಹನ ಗೆಟಪ್ಪಿನಲ್ಲಿ ಹೋರಾಡಿದ ಬಿಜೆಪಿಗರು ಅದೇ ಕಟ್ಟಡದಲ್ಲಿ ವಿನಯರಾಜ್ ತಮ್ಮ ಅಂಗಡಿ ತೆರೆದು ಕುಳಿತಿದ್ದರೆ “ನಿಮಗ್ಯಾರ್ರಿ ಇಲ್ಲಿ ಚೇಂಬರ್ ಕೀ ಕೊಟ್ಟಿದ್ದು” ಎಂದು ಕೇಳುವಷ್ಟು ಬಿಜೆಪಿಗೆ ಸೊಂಟದಲ್ಲಿ ಬಲ ಇಲ್ಲ. ನಿಯಮದ ಪ್ರಕಾರ ವಿನಯರಾಜ್ ವಿಪಕ್ಷ ನಾಯಕರೇ ಅಲ್ಲ. ಆದರೂ ಅವರಿಗೆ ಚೇಂಬರ್. ನಾಳೆ ಇನ್ನೊಬ್ಬ ಬಂದು ನನಗೆ ಪಾಲಿಕೆ ಕಟ್ಟಡದಲ್ಲಿ ಒಂದು ಚೇಂಬರ್ ಇರಬೇಕು ಎನ್ನುವುದು ಹಳೆ ಕನಸು. ಬಾಡಿಗೆ ಬೇಕಾದರೆ ಕೊಡ್ತೀನಿ. ಸಚೇತಕರ ಕೊಠಡಿಯ ಪಕ್ಕದಲ್ಲಿ ಒಂದು ಚೇಂಬರ್ ಮಾಡಿ ಕೊಡಬಹುದಾ ಎಂದು ಕೇಳಿದರೆ ಬಿಜೆಪಿಯವರು ಕೊಟ್ಟಾರಾ? ವಿನಯರಾಜ್ ಕಾಂಗ್ರೆಸ್ ಪಕ್ಷದ ಸ್ವಯಂಘೋಷಿತ ವಿಪಕ್ಷ ನಾಯಕ. ಅವರು ಅಲ್ಲಿಯೇ ಕೆಲವು ಮಾಧ್ಯಮದವರನ್ನು ಕರೆಸಿ ಬೈಟ್ ಕೊಡುತ್ತಾರೆ. ವಿಪಕ್ಷ ನಾಯಕ ಎಂದು ಹೇಳಿಕೊಳ್ಳುತ್ತಾರೆ. ಅಷ್ಟಿದ್ದ ಮೇಲೆ ಅವರು ಒಂದೋ ತಮ್ಮ ಡ್ಯೂಟಿ ಮಾಡಬೇಕು. ಪಾಲಿಕೆಯ ಲೋಪದೋಷಗಳನ್ನು ಹೊರಗೆ ಹಾಕಬೇಕು. ಅವರು ಹಾಕಲ್ಲ. ಯಾಕೆಂದರೆ ಕಸಿನ್ ಬ್ರದರ್ ವಿರುದ್ಧ ಹೇಗೆ ಮಾತನಾಡುವುದು. ಆದ್ರೆ ಮುಂದಿನ ಬಾರಿ ಮಂಗಳೂರು ನಗರ ದಕ್ಷಿಣದಿಂದ ವಿಧಾನಸಭೆಗೆ ಸ್ಪರ್ಧಿಸಲು ಗುರಿ ಇಟ್ಟುಕೊಂಡಿರುವ ವಿನಯರಾಜ್ ತಮ್ಮ ವಿರೋಧಿ ಎಂದು ತೆಗೆದುಕೊಂಡಿರುವುದು ದಕ್ಷಿಣದ ಈಗಿನ ಶಾಸಕರನ್ನು. ಅದರೊಂದಿಗೆ ಅವರಿಗೆ ಪಕ್ಷದಲ್ಲಿ ಇನ್ನೊಬ್ಬ ವಿರೋಧಿ ಎಂದರೆ ನಿಕಟಪೂರ್ವ ಶಾಸಕರು.
ಸ್ಮಾರ್ಟ್ ಸಿಟಿ ಮಂಡಳಿಯಲ್ಲಿ ವಿಪಕ್ಷದಿಂದ ಒಬ್ಬರನ್ನು ಸದಸ್ಯರನ್ನಾಗಿ ಸೇರಿಸಿಕೊಳ್ಳಲಾಗುತ್ತದೆ. ವಿನಯರಾಜ್ ಗೆ ಅದರಲ್ಲಿ ಸೇರಿಕೊಳ್ಳುವ ಹಪಾಹಪಿ ಉದ್ಭವವಾಗಿತ್ತು. ಅದಕ್ಕೆ ಪತ್ರ ಕೂಡ ಬರೆದರು. ಆದರೆ ಹಿರಿತನ, ಅನುಭವ ಮತ್ತು ಮಾಜಿ ಮೇಯರ್ ಎನ್ನುವ ಅರ್ಹತೆಯ ಆಧಾರದಲ್ಲಿ ಸಜ್ಜನ ರಾಜಕಾರಣಿ, ಧಾರ್ಮಿಕ ಮುಂದಾಳು ಭಾಸ್ಕರ್ ಮೊಯಿಲಿ ಅವರನ್ನು ಮಂಡಳಿಯಲ್ಲಿ ಸೇರಿಸಲಾಗಿದೆ. ಅದು ವಿನಯರಾಜ್ ಗೆ ಸಿಟ್ಟಿದೆ. ಆದರೆ ಕಾಂಗ್ರೆಸ್ಸಿನಲ್ಲಿ ಒಂದಿಷ್ಟು ಯುವಕರು ಮತ್ತು ಒಬ್ಬಿಬ್ಬರು ಮಾಜಿ ಶಾಸಕರ ವಿರೋಧಿಗಳು ಬಿಟ್ಟರೆ ಇವರ ಜೊತೆ ಯಾರೂ ಇಲ್ಲ. ಆದ್ದರಿಂದ ಗುಂಪುಗಾರಿಕೆಗೆ ತುತ್ತಾಗಿ ವಿನಯರಾಜ್ ಪರ ಧ್ವನಿ ಎತ್ತುವವರು ಯಾರೂ ಇಲ್ಲ. ಮನಸ್ಸು ಮಾಡಿದ್ರೆ ವಿನಯರಾಜ್ ಸಮಾಜಬಾಂಧವರೇ ಆದ ನವೀನ್ ಡಿಸೋಜಾ, ಲ್ಯಾನ್ ಲಾಟ್ ಪಿಂಟೋ ಸಹಿತ ಹಿರಿಯರಾದ ಶಶಿಧರ್ ಹೆಗ್ಡೆ ಸೇರಿ ಹಲವರು ಪಾಲಿಕೆಯಲ್ಲಿ ಇದ್ದಾರೆ. ಆದರೆ ಯಾರೂ ಇವರೊಂದಿಗೆ ಇಲ್ಲ. ಅಷ್ಟಕ್ಕೂ ಕಾಂಗ್ರೆಸ್ ಸದಸ್ಯರು ಪರಿಷತ್ ಸಭೆಯಲ್ಲಿ ಮೀಡಿಯಾಗಳು ಇದ್ದಾರೆ ಎಂಬ ಕಾರಣಕ್ಕೆ ಒಂದಿಷ್ಟು ಎಗರಾಡುತ್ತಾರೆ. ನಂತರ ಇವರೇ ಬೈಟು ಕಾಫಿ ಕುಡಿದು ನೀನು ನನಗೆ ಇದ್ದರೆ ನಾನು ನಿನಗೆ ಎಂದು ಹೇಳಿಕೊಂಡು ಹೋಗುತ್ತಾರೆ.
- Advertisement -
Leave A Reply