ಆಂಟೋನಿಯಿಂದ ಡಿಸೆಂಬರ್ ಒಳಗೆ ಮಂಗಳೂರು ತ್ಯಾಜ್ಯದ ನರಕ!!
ಆಂಟೋನಿ ವೇಸ್ಟ್ ಮ್ಯಾನೇಜಮೆಂಟ್ ಎನ್ನುವ ತ್ಯಾಜ್ಯ ಸಂಗ್ರಹಣಾ ಕಂಪೆನಿ ಮಂಗಳೂರಿನ ಮಟ್ಟಿಗೆ ಬಿಳಿಯಾನೆಯಾಗಿಯೇ ಇತ್ತು. ಅದಕ್ಕೆ ತಿಂಗಳಿಗೆ ಕೊಡುತ್ತಿದ್ದ ಎರಡು ಕಾಲು ಕೋಟಿ ರೂಪಾಯಿಗಳೆಂಬ ಮಂಗಳೂರಿನ ನಾಗರಿಕರ ತೆರಿಗೆಯ ಹಣ ನಿರಂತರ ಪೋಲಾಗುತ್ತಲೇ ಇತ್ತು. ಆದರೆ ಕೊನೆಗೂ ಮಂಗಳೂರಿನ ತ್ಯಾಜ್ಯ ಸಂಗ್ರಹಣೆಯ ಶಾಪ ವಿಮೋಚನೆ ಆಗಲು ಮೂರು ತಿಂಗಳು ಮಾತ್ರ ಬಾಕಿ ಇದೆ. ಜನವರಿಯಿಂದ ಹೊಸ ರೂಪದಲ್ಲಿ ತ್ಯಾಜ್ಯ ಸಂಗ್ರಹಣೆ ನಡೆಯಲಿದೆ. ವಾಹನಗಳ ಖರೀದಿಗೆ ಪಾಲಿಕೆ ಕಡೆಯಿಂದ ಚಿಂತನೆ ನಡೆಯುತ್ತಿದೆ. ಇದೆಲ್ಲ ಗೊತ್ತಿರುವುದರಿಂದ ತಮ್ಮ ಗುತ್ತಿಗೆ ನವೀಕರಣ ಆಗುವುದಿಲ್ಲ ಎನ್ನುವುದು ಗ್ಯಾರಂಟಿಯಾಗಿರುವುದರಿಂದ ಆಂಟೋನಿಯವರು ಈಗಾಗಲೇ ತಮ್ಮ ಕೆಲಸ ಎಂಬ ಕರ್ತವ್ಯದಲ್ಲಿ ಸಂಪೂರ್ಣವಾಗಿ ನಿರ್ಲಕ್ಷ್ಯವನ್ನು ತೋರುತ್ತಿದ್ದಾರೆ. ಎಲ್ಲಿಯ ತನಕ ಅಂದರೆ ಅವರು ಸಹಜವಾಗಿ ಮಾಡುತ್ತಿದ್ದ ಕೆಲಸದಲ್ಲಿ 25% ಕಾರ್ಯವನ್ನು ಕೂಡ ಈಗ ಮಾಡುತ್ತಿಲ್ಲ. ಈಗಾಗಲೇ ಮಂಗಳೂರಿನ ಋಣ ಮುಗಿಯಿತು ಎನ್ನುವ ರೀತಿಯಲ್ಲಿ ವ್ಯವಹರಿಸುತ್ತಿರುವ ಆಂಟೋನಿ ವೇಸ್ಟ್ ನವರಿಗೆ ಎಚ್ಚರಿಕೆ ಯಾವಾಗಲೋ ನೀಡಬೇಕಿತ್ತು, ಆಗಲೇ ನೀಡದ ಪಾಲಿಕೆಯ ಆಡಳಿತ ಇನ್ನು ನೀಡುತ್ತೆ ಎನ್ನುವ ಭರವಸೆ ನನಗಿಲ್ಲ.
ಇಲ್ಲಿಯ ತನಕ ಆಂಟೋನಿಯವರ ಉಢಾಪೆ ಮತ್ತು ನಿರ್ಲಕ್ಷ್ಯದ ಬಗ್ಗೆ ವರದಿ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಬರುತ್ತಿದ್ದವು. ಆದರೆ ಈಗ ನಿಧಾನವಾಗಿ ದಿನಪತ್ರಿಕೆಗಳಲ್ಲಿ ಕೂಡ ಬರಲು ಶುರುವಾಗಿದೆ. ಪೇಪರಿನಲ್ಲಿ ಫೋಟೋ ಮತ್ತು ಸಚಿತ್ರ ಲೇಖನಗಳು ಆಂಟೋನಿ ವೇಸ್ಟಿನ ಹಣೆಬರಹವನ್ನು ಎತ್ತಿಹಿಡಿಯುತ್ತಿವೆ. ಇದರಿಂದ ನೇರವಾಗಿ ಆಂಟೋನಿ ಮರ್ಯಾದೆ ಹೋಗುವುದಾದರೂ ಪರೋಕ್ಷವಾಗಿ ಮುಂದೆ ಪರಿಣಾಮ ಬೀಳುವುದು ಯಾರ ಮೇಲೆ ಎನ್ನುವುದು ಬುದ್ಧಿವಂತರಿಗೆ ಗೊತ್ತೆ ಇದೆ. ಈಗ ಆಂಟೋನಿ ವೇಸ್ಟಿನ ವಾಹನಗಳ ಚಾಲಕರು ಯಾವ ಹಂತಕ್ಕೆ ಬಂದು ತಲುಪಿದ್ದಾರೆ ಎಂದರೆ ನಾವು ಒಂದೊಂದು ಮನೆಯಿಂದ ಒಂದೊಂದೆ ಕಿಲೋ ತ್ಯಾಜ್ಯವನ್ನು ತೆಗೆದುಕೊಂಡು ಹೋಗುತ್ತೇವೆ. ನೀವು ತುಂಬಾ ತ್ಯಾಜ್ಯ ಕೊಡುವ ಹಾಗಿಲ್ಲ ಎಂದು ಹೇಳಲು ಶುರು ಮಾಡಿದ್ದಾರೆ. ಇವರಿಗೆ ಒಂದೊಂದು ಕಿಲೋ ತೂಕ ಮಾಡಿಕೊಡಲು ಇನ್ನು ಮನೆಯೊಳಗೆ ಒಂದೊಂದು ತೂಕದ ಯಂತ್ರವನ್ನು ನಾಗರಿಕರು ಇಟ್ಟುಕೊಳ್ಳಬೇಕಾ? ನಾಗರಿಕರು ಎಷ್ಟು ತ್ಯಾಜ್ಯವನ್ನು ಕೊಟ್ಟರೂ ಇವರು ಬೇಡಾ ಅಥವಾ ತೆಗೆದುಕೊಂಡು ಹೋಗುವುದಿಲ್ಲ ಎಂದು ಹೇಳುವ ಹಾಗಿಲ್ಲ. ಹಿಂದೆ ಇದೇ ಆಂಟೋನಿ ವೇಸ್ಟಿನವರು ಬೊಂಡದ ಅಂಗಡಿಗಳಿಂದ ಬೊಂಡದ ಚಿಪ್ಪುಗಳನ್ನು, ರಸ್ತೆ ಬದಿಯಲ್ಲಿದ್ದ ಕಲ್ಲುಗಳನ್ನು, ಮರಗಿಡಗಳು ಬಿದ್ದಿದ್ದರೆ ಅದನ್ನು ಕೂಡ ತೆಗೆದುಕೊಂಡು ಹೋಗುತ್ತಿದ್ದರು. ಯಾಕೆಂದರೆ ಅವರಿಗೆ ಒಟ್ಟು ಎಷ್ಟು ತೂಕದ ತ್ಯಾಜ್ಯವನ್ನು ಕೊಡಲಾಗುತ್ತಿತ್ತೋ ಅಷ್ಟು ಹಣ ಸಂದಾಯವೂ ಆಗುತ್ತಿತ್ತು. ಅದ್ದರಿಂದ ಹೆಚ್ಚೆಚ್ಚು ಭಾರವಾಗಲಿ ಎಂದು ಇವರು ಸಿಕ್ಕಿದ್ದು ಎಲ್ಲಾ ತೆಗೆದುಕೊಂಡು ಹೋಗಿ ಚೆನ್ನಾಗಿ ಸಂಭ್ರಮಿಸುತ್ತಿದ್ದರು. ಈಗ ಆಗಲ್ಲ ಎನ್ನುತ್ತಿದ್ದಾರೆ. ಇದನ್ನೆಲ್ಲ ನೋಡಲು ಯಾವುದೇ ಕಾರ್ಫೋರೇಟರ್ ನೈತಿಕವಾಗಿ ಜೀವಂತವಾಗಿ ಇಲ್ಲವೇನೋ ಎನ್ನುವ ಬೇಸರ ನಮ್ಮದು. ನೈತಿಕ ಜೀವಂತಿಕೆ ಎಂದರೆ ಜನರ ಕೆಲಸಗಳನ್ನು ಮಾಡಲು ಇಚ್ಚಾಶಕ್ತಿ ತೋರಿಸುವುದು. ಆದರೆ ಇವರು ತಮ್ಮ ಕಿಸೆ ಭಾರ ಮಾಡಲು ಆಸಕ್ತಿ ತೋರಿಸುವುದರಿಂದ ಪಾಲಿಕೆಯಲ್ಲಿ ಇಂಜಿನಿಯರಿಂಗ್ ವಿಭಾಗದಲ್ಲಿ ಹೆಚ್ಚು ಹೊತ್ತು ಇರುತ್ತಾರೆ. ಅದೇ ಆರೋಗ್ಯ ವಿಭಾಗಕ್ಕೆ ತಿರುಗಿಯೂ ನೋಡುವುದಿಲ್ಲ. ಯಾಕೆಂದರೆ ಇಂಜಿನಿಯರಿಂಗ್ ವಿಭಾಗದಲ್ಲಿ ಎಸ್ಟಿಮೇಟ್ ಎಲ್ಲಾ ಆಗಿ ಕೆಲಸ ಅನುಷ್ಟಾನಗೊಳ್ಳುವಾಗ ತಮ್ಮ ಪಾಲಿನದ್ದು ಸಿಕ್ಕಿಯೇ ಸಿಗುತ್ತದೆ. ಅದಕ್ಕಾಗಿ ತಮ್ಮ ವಾರ್ಡಿನಲ್ಲಿ ಹೆಚ್ಚೆಚ್ಚು ಕೆಲಸ ಆಗಲೇಬೇಕು. ಹೆಚ್ಚೆಚ್ಚು ಕೆಲಸ ಆದರೆ ಹೆಚ್ಚು ಫ್ಲೆಕ್ಸ್ ಹಾಕಲೂಬಹುದು. ಹೆಚ್ಚು ಕಮೀಶನ್ ಹೊಡೆಯಲೂಬಹುದು. ಅದೇ ಆರೋಗ್ಯ ವಿಭಾಗದಲ್ಲಿ ಹೋಗಲೇಬೇಕಾಗಿ ಏನೂ ಇಲ್ಲ. ಆಂಟೋನಿ ವೇಸ್ಟಿನವರು ಕೊಡಬೇಕಾದ ಎಂಜಿಲಿನ ಕವರನ್ನು ಹೇಗೂ ತಲುಪಿಸಿಯೇ ತಲುಪಿಸುತ್ತಾರೆ. ಇದು ಗೊತ್ತಿರುವುದರಿಂದ ಇಲ್ಲಿಯ ತನಕ ಯಾವುದೇ ಕಾರ್ಫೋರೇಟರ್ ಲಿಖಿತವಾಗಿ ಪಾಲಿಕೆಯಲ್ಲಿ ಆಂಟೋನಿ ವೇಸ್ಟಿನವರ ವಿರುದ್ಧ ಮಾತನಾಡಲಿಲ್ಲ.
ಇನ್ನು ಮಂಗಳೂರಿನಲ್ಲಿ ಮಳೆ ಬೋರಾಗಿ ಬರುವುದನ್ನೇ ನಿಲ್ಲಿಸಿದೆ. ಇದರಿಂದ ರಸ್ತೆಗಳ ಡಿವೈಡರ್ ಗಳ ಅಕ್ಕಪಕ್ಕದಲ್ಲಿ ಧೂಳು, ಮಣ್ಣು ತುಂಬಿ ನಿಂತಿದೆ. ಡಿವೈಡರ್ನ ಒಂದು ಕಡೆಯಿಂದ ಕಾರುಗಳು ಸ್ಪೀಡಾಗಿ ಚಲಿಸಿದರೆ ಡಿವೈಡರ್ ನ ಇನ್ನೊಂದು ಕಡೆಯಿಂದ ಬರುವ ದ್ವಿಚಕ್ರ ವಾಹನ ಸವಾರರ ಕಣ್ಣಿಗೆ ಧೂಳಿನ ಕಣಗಳು ರಭಸದಿಂದ ಹಾರುತ್ತವೆ. ನೋಡಲು ತುಂಬಾ ಚಿಕ್ಕ ಘಟನೆಯಂತೆ ನಿಮಗೆ ಅನಿಸಬಹುದು. ಆದರೆ ಅದನ್ನು ಅನುಭವಿಸಿದವರಿಗೆ ಮಾತ್ರ ಈ ಪರಿಸ್ಥಿತಿ ಗೊತ್ತಿದೆ. ಆಂಟೋನಿ ವೇಸ್ಟಿನವರಿಗೆ ಇಂತಿಂತಹ ರಸ್ತೆಗಳನ್ನು ಇಂತಿಂತಹ ದಿನ ಗುಡಿಸಬೇಕಾದ ನಿಯಮ ಇತ್ತು. ಕೆಲವು ರಸ್ತೆಗಳನ್ನು ನಿತ್ಯ, ಕೆಲವು ಎರಡು ದಿನಕ್ಕೊಮ್ಮೆ, ಕೆಲವು ಮೂರು ದಿನಕ್ಕೊಮ್ಮೆ, ಕೆಲವು ವಾರಕ್ಕೊಮ್ಮೆ ಗುಡಿಸುವ ಷರತ್ತು ಇತ್ತು. ಆದರೆ ಆಂಟೋನಿ ವೇಸ್ಟಿನವರು ಅದನ್ನು ಇವತ್ತಿನ ತನಕ ಪಾಲಿಸಿದ್ದಾರಾ ಎಂದು ನೋಡಿದರೆ ಇಲ್ಲವೇ ಇಲ್ಲ. ಹಾಗಿರುವಾಗ ಇನ್ನು ಉಳಿದಿರುವ ಮೂರ್ನಾಕು ತಿಂಗಳು ಅದನ್ನು ಪಾಲಿಸುತ್ತಾರೆ ಎಂದು ನಿರೀಕ್ಷೆ ಮಾಡುವುದು ಕೂಡ ತಪ್ಪು. ಇವರು ಹೀಗೆ ಮುಂದುವರೆದರೆ ಡಿಸೆಂಬರ್ ಅಂತ್ಯದ ಒಳಗೆ ಮಂಗಳೂರು ತ್ಯಾಜ್ಯದ ನರಕ ಆಗಿಬಿಡುತ್ತದೆ. ಒಟ್ಟಿನಲ್ಲಿ ಏನೂ ಕೆಲಸ ಮಾಡದೇ ಸಮಯಕ್ಕೆ ಸರಿಯಾಗಿ ಹಣ ಪಡೆಯುತ್ತಾ, ಕೊಡದಿದ್ದರೆ ಬ್ಲ್ಯಾಕ್ ಮೇಲ್ ಮಾಡುತ್ತಾ, ಒಂದೇ ಒಂದು ಬೈಗುಳವನ್ನು ಕೇಳಿಸದೇ, ಕೋಟಿಗಟ್ಟಲೆ ಲಾಭ ಮಾಡಿದ ಕಂಪೆನಿಯ ಬಗ್ಗೆ ಪಾಲಿಕೆ ಇಲ್ಲಿಯ ತನಕ ಹೇಗೆ ಎಲ್ಲವನ್ನು ಸಹಿಸಿಕೊಂಡು ನಡೆಯುತ್ತಿತ್ತೋ, ಆಂಟೋನಿಗೆ ಮಾತ್ರ ಗೊತ್ತು!!
Leave A Reply