ಆರ್ಯನ್ ಖಾನ್ ಹೊರಗೆ ಬರುವಾಗ ಸಂಭ್ರಮಿಸಿದವರು ಕೂಡ ಸಮಾನ ದ್ರೋಹಿಗಳು!!
Posted On November 1, 2021

ಆರ್ಯನ್ ಖಾನ್ ಕೊನೆಗೂ 26 ದಿನಗಳ ತನಕ ಜೈಲಿನಲ್ಲಿ ಮಲಗಿ ಮನೆಗೆ ವಾಪಾಸ್ಸಾಗಿದ್ದಾನೆ. ಆತ ಮನೆಗೆ ಬರುವ ದಾರಿಯಲ್ಲಿ ಸಿದ್ಧವಾಗಿದ್ದ ಸಂಭ್ರಮವನ್ನು ನೀವು ನೋಡಬೇಕಿತ್ತು. ಅಕ್ಷರಶ: ಯುದ್ಧ ಗೆದ್ದು ಬಂದ ವಾತಾವರಣ ನಿರ್ಮಾಣವಾಗಿತ್ತು. ಅದೇನು ಗೌಜಿ, ಗಮ್ಮತ್ತು, ಘೋಷಣೆ ಕೂಗಿದ್ದೇ ಕೂಗಿದ್ದು. ಆರ್ಯನ್ ಖಾನ್ ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧದಲ್ಲಿ ಶತ್ರು ಪಾಕಿಸ್ತಾನವನ್ನು ಸೋಲಿಸಿ ಅವರ ಹತ್ತಿಪ್ಪತ್ತು ಸೈನಿಕರನ್ನು ಕೊಂದು ಬಂದಿದ್ದರೆ ಆಗ ನಾನು ಕೂಡ ಆರ್ಯನ್ ಖಾನ್ ನನ್ನು ಪ್ರಶಂಸಿಸುತ್ತಿದ್ದೆ. ಇಡೀ ದೇಶವೇ ಅವನನ್ನು ಕೊಂಡಾಡುತ್ತಿತ್ತು. ಆದರೆ ಆರ್ಯನ್ ಖಾನ್ ಅಂತಹ ಯಾವುದೇ ಸಾಧನೆ ಮಾಡಿಲ್ಲ. ಆತ ಒಂದು ಐಷಾರಾಮಿ ಹಡಗಿನಲ್ಲಿ ಎನ್ ಸಿಬಿ ದಾಳಿಯಾದಾಗ ಸಿಕ್ಕಿಬಿದ್ದಿದ್ದ. ಅವನ ಬಳಿ ಡ್ರಗ್ಸ್ ಇತ್ತಾ, ಅವನು ಮಾರಲು ಹೋಗಿದ್ದನಾ, ಸೇವಿಸಿ ಸಂಭ್ರಮಿಸುತ್ತಿದ್ದನಾ, ಯುವತಿಯರಿಗೆ ಕೊಟ್ಟು ಲಲ್ಲೆಗರೆಯುತ್ತಿದ್ದನಾ ಎನ್ನುವುದೆಲ್ಲ ತನಿಖೆಯಾಗಬೇಕಾದ ವಿಷಯ. ಆ ತನಿಖೆಯ ಒಳಗೆ ನಾವು ಈಗ ಹೋಗಲು ಸಾಧ್ಯವಿಲ್ಲ. ಆದ್ರೆ ಸ್ವತ: ಒಬ್ಬ ಡ್ರಗ್ಸ್ ಪ್ರಕರಣದ ಆರೋಪಿ ಜೈಲಿನಿಂದ ಜಾಮೀನಿನಲ್ಲಿ ಹೊರಗೆ ಬರುವಾಗ ಸಿಗುವ ಸ್ವಾಗತ ಇದೆಯಲ್ಲ, ಅದು ಅವನಿಗೆ ಇನ್ನಷ್ಟು ಅಹಂಕಾರವನ್ನು, ಅನೈತಿಕ ಸ್ಥೈರ್ಯವನ್ನು ನೀಡುವ ಸಾಧ್ಯತೆ ಇದೆ. ಹೊರಗೆ ಬ್ಯಾಂಡ್, ವಾದ್ಯಗಳು, ಅವನ ವಾಹನದ ಸುತ್ತಲೂ ಸುತ್ತುವರೆದ ಜನರು ಆರೋಪಿಯಲ್ಲಿ ವಿಭಿನ್ನವಾದ ಭ್ರಮೆಯನ್ನು ತುಂಬಿಸಿಬಿಡುತ್ತಾರೆ. ಅಷ್ಟಕ್ಕೂ ಆರ್ಯನ್ ಖಾನ್ ಇಂತಹ ಭವ್ಯ ಸ್ವಾಗತ ಪಡೆದು ಆಗುವಂತದ್ದು ಏನಿಲ್ಲ. ಅವನು ಮತ್ತಷ್ಟು ಸಾಮಾಜಿಕ ವಿದ್ರೋಹಿ ಕೃತ್ಯವಾದ ಡ್ರಗ್ಸ್ ಪೆಡ್ಲಿಂಗ್ ನಲ್ಲಿ ತೊಡಗಬಹುದು. ಹಾಗಂತ ಅವನು ಜೈಲಿನಿಂದ ಹೊರಗೆ ಬಂದ ಕೂಡಲೇ ಅವನ ಮೇಲೆ ಮೊಟ್ಟೆ, ಟೊಮೆಟೊವನ್ನು ಎಸೆಯಬೇಕು ಎಂದು ಕೂಡ ನಾನು ಹೇಳುವುದಿಲ್ಲ.
ಯಾಕೆಂದರೆ ಅವನು ಒಂದು ವೇಳೆ ತಪ್ಪೇ ಮಾಡಿದ್ದಾನೆ ಎಂದು ಸಾಬೀತಾದರೂ ಅದರಿಂದ ಹೊರಗೆ ಬಂದು ಸಭ್ಯ ನಾಗರಿಕನಾಗುವ ಸಾಧ್ಯತೆ ಇದ್ದೇ ಇದೆ. ಒಮ್ಮೆ ಡ್ರಗ್ಸ್ ತೆಗೆದುಕೊಂಡವ ಜೀವನ ಪೂರ್ತಿ ಹಾಗೆ ಇರುತ್ತಾನೆ ಎಂದು ಹೇಳಲು ಆಗುವುದಿಲ್ಲ. ಆದರೆ ನಮ್ಮ ಸಮಾಜಕ್ಕೆ ಆರೋಪಿಯ ತಂದೆಯನ್ನು ಮೆಚ್ಚಿಸುವ, ತೆರೆಯ ಮೇಲೆ ಡ್ಯೂಪ್ ಹಾಕಿ ಫೈಟ್ ಮಾಡುವ ನಂತರ ಎಸಿ ವ್ಯಾನಿನಲ್ಲಿ ಮೈ ಆರಾಮವಾಗಿ ಬಿಟ್ಟು ಮಲಗುವ ಸಿನೆಮಾ ಹೀರೋಗಳೇ ಆದರ್ಶರಾಗುತ್ತಿದ್ದಾರಲ್ಲ ಎನ್ನುವುದೇ ಅಸಹ್ಯ. ಅವರನ್ನೇ ಆರಾಧಿಸುವ ವರ್ಗ ನಮ್ಮಲ್ಲಿ ಬೆಳೆಯುತ್ತಿದೆ. ಅಂತವರಿಂದ ಸ್ಫೂರ್ತಿ ಪಡೆದು ಏನೇನೋ ಆಗುತ್ತೇವೆ ಎಂದು ಭ್ರಮೆಯಲ್ಲಿ ತೇಲಾಡುವ ನಂತರ ಏನೂ ಆಗದೇ ಭ್ರಮಾಲೋಕದಿಂದ ಹೊರಗೆ ಬರುವಾಗ ಕಾಲ ಮಿಂಚಿ ಹೋಗುವ ಯುವಪಡೆ ನಮ್ಮಲ್ಲಿ ಜಾಸ್ತಿಯಾಗುತ್ತಿದ್ದರೆ ಅದು ದೇಶಕ್ಕೂ ಒಳ್ಳೆಯದಲ್ಲ. ಸಿನೆಮಾ ನಟರೆಲ್ಲರೂ ಕೆಟ್ಟವರೆಂದು ಇದರ ಅರ್ಥವಲ್ಲ. ತಾವು ದುಡಿದ ಹಣದಲ್ಲಿ ಸಿಂಹಪಾಲನ್ನು ಸಾಮಾಜಿಕ ಕಾರ್ಯಕ್ಕಾಗಿ ವಿನಿಯೋಗಿಸುವ ಬೆರಳೆಣಿಕೆಯ ನಟರು ನಮ್ಮಲ್ಲಿ ಇದ್ದಾರೆ. ಆದರೆ ತಮ್ಮ ಸ್ಟಾರ್ ಗಿರಿಯಿಂದ ಅಹಂಕಾರ ಮೈಗೂಡಿಸಿಕೊಂಡು ಈ ದೇಶದಲ್ಲಿ ವಾಸಿಸಲು ಹೆದರಿಕೆಯಾಗುತ್ತದೆ ಎಂದು ಯಾರದ್ದೋ ಕುಮ್ಮಕ್ಕಿನಿಂದ ಹೇಳುವ ಹೀರೋಗಳು ಕೇವಲ ಭ್ರಮೆ ತುಂಬಬಲ್ಲರೇ ವಿನ: ಅವರಿಂದ ಸ್ಫೂರ್ತಿ ಪಡೆಯುಂತದ್ದು ಏನೂ ಇಲ್ಲ. ಅದರ ಬದಲು ಇತ್ತೀಚೆಗೆ ಪಾರಾ ಒಲಿಂಪಿಕ್ಸ್ ಆಯಿತಲ್ಲ. ವಿಕಲ ಚೇತನ ಕ್ರೀಡಾಪಟುಗಳು ತಮ್ಮ ಎಲ್ಲ ಶಕ್ತಿ ಬಳಸಿ ದೇಶಕ್ಕಾಗಿ ಪದಕಗಳನ್ನು ದಾಖಲೆಯ ಸಂಖ್ಯೆಯಲ್ಲಿ ಭಾರತಕ್ಕಾಗಿ ಗೆದ್ದು ತಂದರಲ್ಲ. ಅವರನ್ನು ಹೆಗಲ ಮೇಲೆ ಹೊತ್ತು ಮೆರವಣಿಗೆ ಮಾಡುವ ಕಾಲ ನಮ್ಮಲ್ಲಿ ಯಾವಾಗ ಬರುತ್ತದೆ. ಅವರಿಗೆ ನೀವು ಹುಮ್ಮಸ್ಸು ತುಂಬಿದರೆ ಅಂತವರು ಇನ್ನಷ್ಟು ಸಾಧನೆ ಮಾಡಲು ನೀವು ಪರೋಕ್ಷವಾಗಿ ಪ್ರೇರಣೆ ನೀಡಿದಂತೆ ಆಗುತ್ತದೆ. ಅದರಿಂದ ದೇಶದ ಕೀರ್ತಿ ನಾಲ್ಕು ದಿಕ್ಕುಗಳಿಗೂ ಹಬ್ಬುತ್ತದೆ. ಭಾರತದ ವಿಕಲಚೇತನ ಕ್ರೀಡಾಪಟುಗಳ ಬಗ್ಗೆ ವಿದೇಶಗಳು ಕೂಡ ಮೂಗಿನ ಮೇಲೆ ಬೆರಳಿಡುವಂತೆ ಆಗುತ್ತದೆ. ಇನ್ನು ನಮ್ಮ ಇತರ ಕ್ರೀಡಾಳುಗಳು ಕೂಡ ಉತ್ತಮ ಸಾಧನೆ ಮಾಡಬೇಕಾದರೂ ನಮ್ಮ ದೇಶವಾಸಿಗಳ ಶಹಭಾಷ್ ಗಿರಿ ಅವರಿಗೆ ಬೇಕಾಗುತ್ತದೆ. ಆದರೆ ನಮ್ಮಲ್ಲಿ ಕ್ರಿಕೆಟ್ ಆಡುವವರು ಮಾತ್ರ ಕ್ರೀಡಾಪಟುಗಳು ಎನ್ನುವ ವಾತಾವರಣ ನಿರ್ಮಾಣವಾಗಿದೆ. ಅದನ್ನು ಕೂಡ ಬದಲಾಯಿಸಿ ನಾವು ಈ ದೇಶಕ್ಕಾಗಿ ಹಗಲು ಇರುಳು ಬೆವರು ಸುರಿಸುವ ಬೇರೆ ಕ್ರೀಡೆಗಳ ಆಟಗಾರರನ್ನು ಕೂಡ ಪ್ರೋತ್ಸಾಹಿಸಬೇಕು.
ಇನ್ನು ನಮ್ಮ ಯೋಧರ ಬಗ್ಗೆ ಹೇಳದಿದ್ದರೆ ಈ ಜಾಗೃತ ಅಂಕಣ ಪೂರ್ಣವಾಗುವುದೇ ಇಲ್ಲ. ನಮ್ಮ ಯೋಧರು ನಮ್ಮ ದೇಶಕ್ಕಾಗಿ ಬಲಿದಾನಗೈಯುವಾಗ ಎಷ್ಟು ಜನ ಆ ಮನೆಗಳಿಗೆ ಹೋಗಿ ಮನೆಯವರಲ್ಲಿ ಧೈರ್ಯ ತುಂಬಿದ್ದಾರೆ. ಎಷ್ಟು ಮಂದಿ ಆ ಕುಟುಂಬಗಳಲ್ಲಿ ಸ್ಥೈರ್ಯ ತುಂಬಿದ್ದಾರೆ. ಯೋಧರ ಪಾರ್ಥಿವ ಶರೀರ ಊರಿಗೆ ಬರುವಾಗ ಎಷ್ಟು ಜನ ನಾಗರಿಕರು ಅಲ್ಲಿ ಹೋಗಿ ಅಂತಿಮ ದರ್ಶನ ಮಾಡಿದ್ದಾರೆ. ಎಷ್ಟು ಜನ ಮೃತ ಯೋಧರ ಕುಟುಂಬಗಳು ಸೆಟಲ್ ಆಗಿ ಸಮಾಧಾನಕರ ಜೀವನ ಮಾಡುತ್ತಿವೆಯಾ ಎಂದು ನೋಡಿದ್ದಾರೆ. ಎಷ್ಟು ಜನ ಕ್ಯೂನಲ್ಲಿ ನಿಂತು ಆ ವೀರ ಯೋಧನ ತ್ಯಾಗವನ್ನು ನೆನಪಿಸಿಕೊಂಡಿದ್ದಾರೆ. ಇದೆಲ್ಲವನ್ನು ಮಾಡದೇ ನೀವೆ ಹಣ ಕೊಟ್ಟು ಟಿಕೆಟ್ ತೆಗೆದುಕೊಂಡು ಸಿನೆಮಾ ನೋಡಿ ಅದು ಯಶಸ್ವಿಯಾಗಿ ಆ ನಾಯಕ ನಟ ತನ್ನ ಸಂಭಾವನೆ ಏರಿಸಿ ತಾನು ಶ್ರೀಮಂತನಾಗಿ ನಮ್ಮ ದೇಶಕ್ಕೆ ನಯಾಪೈಸೆಯ ಲಾಭವಿಲ್ಲದೆ ಬದುಕುತ್ತಿದ್ದರೂ ಅವನ ಒಂದು ಲುಕ್ ಆಗಿ ಪರಿತಪಿಸುವ ಜನರು ಅದೇ ನಮ್ಮ ದೇಶಕ್ಕಾಗಿ ಬಲಿದಾನಗೈಯಲು ಹೋರಾಡಲು ಅಣಿಯಾಗುವ ಸೈನಿಕನ ಮನೆಗೆ ಹೋಗಿ ” ಸಹೋದರ, ನೀನು ಅತ್ತ ದೇಶಕ್ಕಾಗಿ ಹೋರಾಡುವಾಗ ನಿನ್ನ ಅಪ್ಪ, ಅಮ್ಮನ ಕಾಳಜಿಯನ್ನು ನಾವು ವಹಿಸುತ್ತೇವೆ” ಎಂದು ಹೇಳಿದ್ದೀರಿ. ಸಿನೆಮಾ ನಟರ ಬಂಗ್ಲೆಯಂತಹ ಮನೆಗಳ ಬಳಿ ಹೋಗಿ ಅವರ ಒಂದು ನೋಟಕ್ಕಾಗಿ ಹಾತೊರೆಯುವ ನಾವು ಯೋಧ ಗಡಿಯಲ್ಲಿ ಕಾವಲು ಕಾಯುತ್ತಿರುವಾಗ ನಿಮ್ಮದೇ ಊರಿನಲ್ಲಿರುವ ಅವನ ತಾಯಿ, ತಂದೆ ಊಟ ಮಾಡಿದ್ದಾರಾ ಎಂದು ನೋಡಿದ್ದಾರಾ?
- Advertisement -
Leave A Reply