ರಾಜೇಂದ್ರ ಕುಮಾರ್ ನಿಂತರೆ ಬಿಜೆಪಿಗೆ ಒಂದು ಕಲ್ಲಿಗೆ ಎರಡು ಹಕ್ಕಿ!!
ಪ್ರತಿ ಬಾರಿ ಚುನಾವಣೆಗಳು ಬಂದಾಗಲೂ ಎಸ್ ಡಿಸಿಸಿ ಬ್ಯಾಂಕಿನ ಅಧ್ಯಕ್ಷರಾದ ರಾಜೇಂದ್ರ ಕುಮಾರ್ ಹೆಸರು ಒಂದಲ್ಲ ಒಂದು ರೀತಿಯಲ್ಲಿ ಮುಂಚೂಣಿಗೆ ಬರುತ್ತದೆ. ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿಯೂ ಬಂದಿತ್ತು. ಅವರಿಗೆ ಕಾಂಗ್ರೆಸ್ ಟಿಕೆಟ್ ಕೊಡುತ್ತದೆ ಎನ್ನುವ ವದಂತಿ ಹರಡಿತ್ತು. ತಾನಾಗಿ ಎಲ್ಲಿಯೂ ಹೋಗಿ ಕೇಳಲ್ಲ, ಕೊಟ್ಟರೆ ಪಕ್ಷವನ್ನು ಗೆಲ್ಲಿಸಿಕೊಂಡು ಬರುತ್ತೇನೆ ಎಂದು ರಾಜೇಂದ್ರ ಕುಮಾರ್ ಹೇಳಿದ್ದರು. ಅದಕ್ಕೂ ಮೊದಲು ಅವರಿಗೆ ಕಾರ್ಕಳದಿಂದ ಕಾಂಗ್ರೆಸ್ ಟಿಕೆಟ್ ಕೊಡಲಾಗುತ್ತೆ ಎಂದು ಹೇಳಲಾಗುತ್ತಿತ್ತು. ಆದರೆ ಅವರನ್ನು ಆ ಚುನಾವಣೆಯಲ್ಲಿ ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ಮಾತ್ರ ಮಾಡಲಾಗಿತ್ತು. ಆದ್ದರಿಂದ ಎಲ್ಲೋ ಒಂದು ಕಡೆ ಕಾಂಗ್ರೆಸ್ ಕೇವಲ ಮೊಣಕೈಗೆ ಬೆಲ್ಲ ಸವರುವುದು ಬಿಟ್ಟರೆ ತಮಗೇನೂ ಮಾಡುವುದಿಲ್ಲ ಎನ್ನುವುದು ರಾಜೇಂದ್ರ ಕುಮಾರ್ ಅವರಿಗೆ ಗ್ಯಾರಂಟಿಯಾಗುತ್ತಿದ್ದಂತೆ ಅವರು ನಿಧಾನವಾಗಿ ಕಾಂಗ್ರೆಸ್ಸಿನಿಂದ ಅಂತರ ಕಾಯಲು ಶುರು ಮಾಡಿದರು. ಹಾಗಂತ ಏಕಾಏಕಿ ಭಾರತೀಯ ಜನತಾ ಪಾರ್ಟಿಗೆ ಬಂದು ಇಲ್ಲಿ ಟಿಕೆಟ್ ಪಡೆದುಕೊಳ್ಳುವ ವಾತಾವರಣ ಕೂಡ ಇರಲಿಲ್ಲ. ಇನ್ನು ಪೂರ್ತಿಯಾಗಿ ಅವರು ಕಾಂಗ್ರೆಸ್ ಮೂಡ್ ನಿಂದ ಹೊರಗೆ ಬರದೇ ಇದ್ದದ್ದು ಮತ್ತು ಇಲ್ಲಿ ಅವರಿಗೆ ಉಭಯ ಜಿಲ್ಲೆಗಳಲ್ಲಿ ಕೊಡಬಹುದಾದ ಯಾವುದೇ ಸೀಟು ಖಾಲಿ ಇಲ್ಲದೇ ಇದ್ದದ್ದು ಅವರಿಗೆ ಆವತ್ತು ಬಿಜೆಪಿಯಲ್ಲಿ ಸುಲಭವಾಗಿ ಎಂಟ್ರಿ ಸಿಗಲಿಲ್ಲ. ಈ ಹೊತ್ತಿನಲ್ಲಿಯೇ ಕಾಂಗ್ರೆಸ್ಸಿನಿಂದ ಅಸಮಾಧಾನಗೊಂಡ ರಾಜೇಂದ್ರ ಕುಮಾರ್ ಬಿಜೆಪಿಯವರೊಂದಿಗೆ ಸ್ನೇಹ ಸಂಬಂಧ ಸುಧಾರಿಸಿಕೊಳ್ಳುವ ಕೆಲಸಕ್ಕೆ ಕೈ ಹಾಕಿದರು. ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರೊಂದಿಗೆ ಅಲ್ಲಿಯ ತನಕ ವೇದಿಕೆ ಹಂಚಿಕೊಳ್ಳದಿದ್ದ ರಾಜೇಂದ್ರ ಕುಮಾರ್ ನಂತರ ಮಡಿವಂತಿಗೆ ಬಿಟ್ಟು ಸ್ನೇಹದ ಹಸ್ತ ಚಾಚಿದರು. ನಳಿನ್ ಕೂಡ ರಾಜೇಂದ್ರ ಕುಮಾರ್ ಅವರನ್ನು ಬಹಿರಂಗ ವೇದಿಕೆಯಲ್ಲಿ ಹೊಗಳಲು ಶುರು ಮಾಡಿದರು. ಅಲ್ಲಿಗೆ ವಿದ್ಯುಕ್ತವಾಗಿ ರಾಜೇಂದ್ರ ಕುಮಾರ್ ಬಿಜೆಪಿಯ ಅಂಗಣದಲ್ಲಿ ಕಾಲಿಟ್ಟಂತೆ ಆಯಿತು. ರಾಜ್ಯ ಸರಕಾರ ಬಿಜೆಪಿಯದ್ದು ಬಂದ ಬಳಿಕ ಸಚಿವರೊಂದಿಗೆ ಸ್ನೇಹ, ಶಾಸಕರೊಂದಿಗೆ ಗೆಳೆತನ ಮುಂದುವರೆಯಿತು. ಹೀಗೆ ಹೋಗುತ್ತಾ ಇರುವಾಗಲೇ ರಾಜೇಂದ್ರ ಕುಮಾರ್ ತಾವು ಕೂಡ ಸ್ಥಳೀಯ ಸಂಸ್ಥೆಯ ಮೂಲಕ ವಿಧಾನಪರಿಷತ್ ಗೆ ಪ್ರವೇಶಿಸಲು ಬಯಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಅವರು ಒಂದು ವೇಳೆ ನಿಂತರೆ ಅದು ಕಾಂಗ್ರೆಸ್ಸ್ ಪಾಲಿಗೆ ಬಿಸಿತುಪ್ಪವಾಗಲಿದೆ. ತಮಗೆ ಜನಪ್ರತಿನಿಧಿ ಮಾಡದೇ ಸತಾಯಿಸಿದ್ದ ಕಾಂಗ್ರೆಸ್ಸಿಗೆ ಸೂಕ್ತ ಬುದ್ಧಿ ಕಲಿಸಲು ರಾಜೇಂದ್ರ ಕುಮಾರ್ ಅವರಿಗೆ ಇದು ಸೂಕ್ತ ವೇದಿಕೆಯಂತೆ ಕಾಣುತ್ತಿದೆ. ತಮ್ಮ ನವೋದಯ ಸ್ತ್ರೀ ಸಹಾಯ ಸಂಘ ಮತ್ತು ಸಹಕಾರಿ ಕ್ಷೇತ್ರದ ಮೂಲಕ ರಾಜೇಂದ್ರ ಕುಮಾರ್ ಅವರಿಗೆ ಸಾಕಷ್ಟು ವರ್ಚಸ್ಸು ಇದೆ. ಅದು ಮತವಾಗಿ ಪರಿವರ್ತನೆಯಾಗಬೇಕಾದರೆ ಪರೀಕ್ಷೆಗೆ ಒಳಪಡಬೇಕು. ಬಿಜೆಪಿಯ ಬಳಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಬ್ಬ ಅಭ್ಯರ್ಥಿಯನ್ನು ಗೆಲ್ಲಿಸಲು ಬೇಕಾದಷ್ಟು ಮತಗಳಿವೆ. ಆದರೆ ಎರಡನೇ ಅಭ್ಯರ್ಥಿಯನ್ನು ಗೆಲ್ಲಿಸಲು ಅಗತ್ಯವಾದಷ್ಟು ಮತಗಳಿಲ್ಲ. ಇಬ್ಬರನ್ನು ಕಣಕ್ಕೆ ಇಳಿಸಿದರೆ ಅತ್ತ ತಮ್ಮ ಅಭ್ಯರ್ಥಿಯೂ ಗೆಲ್ಲದೆ, ರಾಜೇಂದ್ರ ಕುಮಾರ್ ಕೂಡ ಗೆಲ್ಲದೆ, ಕಾಂಗ್ರೆಸ್ ಸಲೀಸಾಗಿ ಒಬ್ಬರನ್ನು ಗೆಲ್ಲಿಸಿಕೊಂಡು ಹೋಗಬಹುದು ಎನ್ನುವುದು ಬಿಜೆಪಿ ಲೆಕ್ಕಾಚಾರ. ಎಷ್ಟು ಕ್ರಾಸ್ ವೋಟಿಂಗ್ ಆದರೂ ಬಿಜೆಪಿ ಒಬ್ಬ ಅಭ್ಯರ್ಥಿ ಕಣ್ಣುಮುಚ್ಚಿ ಗೆಲ್ಲಬಹುದು. ಅದೇ ಒಂದಿಷ್ಟು ಹೆಚ್ಚು ಕ್ರಾಸ್ ವೋಟಿಂಗ್ ಆದರೆ ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವು ಮರಿಚೀಕೆ ಆಗಲಿದೆ. ಯಾಕೆಂದರೆ ಪಕ್ಷೇತರ ಅಭ್ಯರ್ಥಿ ರಾಜೇಂದ್ರ ಕುಮಾರ್ ಬಿಜೆಪಿಯ ಹೆಚ್ಚುವರಿ ಮತಗಳನ್ನು ಮತ್ತು ಕಾಂಗ್ರೆಸ್ಸಿನ ಕ್ರಾಸ್ ವೋಟಿಂಗ್ ಲಾಭ ಪಡೆದು ಗೆಲುವು ಸಾಧಿಸಿದರೆ ಇದು ಕಾಂಗ್ರೆಸ್ಸಿಗೆ ಮುಖಭಂಗವಾಗಲಿದೆ. ಇನ್ನು ಕಾಂಗ್ರೆಸ್ಸಿನಲ್ಲಿ ಏಳೆಂಟು ಜನ ಘಟಾನುಘಟಿ ಮುಖಂಡರು ವಿಧಾನಪರಿಷತ್ ನಲ್ಲಿ ಶಾಸಕರಾಗಿ ಎಂಟ್ರಿ ಕೊಡುವ ಗಡಿಬಿಡಿಯಲ್ಲಿದ್ದು, ಅದರಲ್ಲಿ ಮಂಜುನಾಥ ಭಂಡಾರಿಯವರಿಂದ ಹಿಡಿದು ಯುಬಿ ಶೆಟ್ಟಿಯವರ ತನಕ ಧನಬಲದಲ್ಲಿ ಚೆನ್ನಾಗಿ ಇರುವವರೂ ಇದ್ದಾರೆ. ಶಶಿಧರ್ ಹೆಗ್ಡೆ ಕಾರ್ಪೋರೇಟರ್ ರಿಂದ ಎಂಎಲ್ಸಿ ಆಗುವ ತವಕದಲ್ಲಿದ್ದರೆ, ಐವನ್ ಡಿಸೋಜಾ ಸಿದ್ಧರಾಮಯ್ಯನವರ ಪಂಚೆ ಹಿಡಿದು ಮತ್ತೊಮ್ಮೆ ವಿಧಾನಪರಿಷತ್ ಮೆಟ್ಟಿಲು ಏರುವ ಉಮ್ಮೇದಿನಲ್ಲಿ ಇದ್ದಾರೆ. ಪಿವಿ ಮೋಹನ್, ಶ್ಯಾಮಲಾ ಏನಾದರೂ ದೊಡ್ಡದು ಘಟಿಸಿದರೆ ಅವಕಾಶ ಪಡೆದುಕೊಳ್ಳಬಹುದು. ಮಂಜುನಾಥ ಭಂಡಾರಿಯವರಿಗೆ ಕಳೆದ ಬಾರಿ ಶಿವಮೊಗ್ಗದಿಂದ ಕಾಂಗ್ರೆಸ್ ಟಿಕೆಟ್ ನೀಡಲಾಗಿತ್ತು. ಅವರಿಗೆ ರಾಜ್ಯ, ರಾಷ್ಟ್ರ ಉನ್ನತ ಕಾಂಗ್ರೆಸ್ ನಾಯಕರ ನಿಕಟ ಸಂಪರ್ಕವಿದೆ. ಯುಬಿ ಶೆಟ್ಟಿಯವರಿಗೆ ಡಿಕೆಶಿಯವರ ಗೆಳೆತನವಿದೆ. ಐವನ್ ಸಿದ್ಧರಾಮಯ್ಯನವರನ್ನು ನಂಬಿದ್ದಾರೆ. ಶಶಿಧರ್ ಹೆಗ್ಡೆಯವರಿಗೆ ಕೊಟ್ಟರೆ ಜಿಲ್ಲೆಯಲ್ಲಿ ಬಂಟರಿಗೆ ಒಂದು ಪ್ರಾಶಸ್ತ್ಯ ಸಿಕ್ಕಂತೆ ಆಗುತ್ತದೆ. ಈ ನಡುವೆ ಕೋಟಾ ಶ್ರೀನಿವಾಸ ಪೂಜಾರಿಯವರು ಸುಲಭವಾಗಿ ಗೆದ್ದು ಸಚಿವರಾಗಿ ಮುಂದುವರೆಯಲಿದ್ದಾರೆ. ಬಿಜೆಪಿ ಇನ್ನೊಬ್ಬರನ್ನು ಇಳಿಸಿ ತಾನು ಮುಖಭಂಗ ಒಳಗಾಗುವುದಕ್ಕಿಂತ ಪರೋಕ್ಷವಾಗಿ ರಾಜೇಂದ್ರ ಕುಮಾರ್ ಅವರಿಗೆ ಬೆಂಬಲ ನೀಡಿ ಏಕಕಾಲಕ್ಕೆ ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಹೊಡೆಯಲಿದೆ. ಒಂದು ರಾಜೇಂದ್ರ ಕುಮಾರ್ ನಿಂತರೆ ಕಾಂಗ್ರೆಸ್ ಸೋಲಬಹುದು ಮತ್ತು ಇನ್ನೊಂದು ಮುಂದಿನ ದಿನಗಳಲ್ಲಿ ರಾಜೇಂದ್ರ ಕುಮಾರ್ ಬೆಂಬಲಿಗರ ವೋಟು ನಿಶ್ಚಿಂತೆಯಾಗಿ ಬಿಜೆಪಿ ಬುಟ್ಟಿಯಲ್ಲಿ ಭದ್ರವಾಗಲಿದೆ. ಹಣ ಇದ್ದರೆ ಏನೂ ಆಟವಾಡಬಹುದು ಎನ್ನುವುದು ಯಾವತ್ತೋ ರಾಜಕೀಯದಲ್ಲಿ ಸಾಬೀತಾಗಿದೆ. ಅದಕ್ಕೆ ರಾಜೇಂದ್ರ ಕುಮಾರ್ ಹೊಸ ಸೇರ್ಪಡೆಯಲ್ಲ. ಕೊನೆಯದ್ದೂ ಅಲ್ಲ!
Leave A Reply