ಬಿಟ್ ಕಾಯಿನ್ ಬರೀ ಶಬ್ದ ಮಾಡದೇ ಹೆಸರು ಕೂಡ ಗೊತ್ತಾಗಬೇಕು!!
ಲಂಚವನ್ನು ನಗದು ರೂಪದಲ್ಲಿ ತೆಗೆದುಕೊಳ್ಳುವುದು ಹಳೇ ಸ್ಟೈಲ್. ಕೆಲವರು ಚೆಕ್ ಮೂಲಕ ತೆಗೆದುಕೊಂಡಿರುವುದನ್ನು ಕೂಡ ಇಡೀ ರಾಜ್ಯದ ಜನ ಗಮನಿಸಿದ್ದೇವೆ. ಆದರೆ ಯಾವಾಗ ಮೋದಿ ಡಿಜಿಟಲ್ ಕರೆನ್ಸಿಗೆ ಒತ್ತು ಕೊಟ್ಟರೋ ರಾಜಕಾರಣಿಗಳು, ಅಧಿಕಾರಿಗಳು ಡಿಜಿಟಲ್ ಮೂಲಕವೂ ಲಂಚ ತೆಗೆದುಕೊಳ್ಳುತ್ತಿದ್ದಾರೋ ಎನ್ನುವುದು ಜನಸಾಮಾನ್ಯರಿಗೆ ಸ್ಪಷ್ಟವಾಗುತ್ತಿದೆ. ಅದಕ್ಕೆ ತಾಜಾ ಉದಾಹರಣೆ ಬಿಟ್ ಕಾಯಿನ್. ಇದು ಭೌತಿಕವಾಗಿ ಇಲ್ಲದ ಕರೆನ್ಸಿ. ಪಕ್ಕಾ ಹವಾಲಾ ಜಾಲದಂತೆ ಕೆಲಸ ನಿರ್ವಹಿಸುತ್ತದೆ. ದೊಡ್ಡ ದೊಡ್ಡ ಮೊತ್ತವನ್ನು ಕೂಡ ಸಲೀಸಾಗಿ ಇದರ ಮೂಲಕ ಒಬ್ಬರಿಂದ ಇನ್ನೊಬ್ಬರ ಖಾತೆಗೆ ಸಾಗಿಸಬಹುದು. ಹೆಸರು ಬಿಟ್ ಕಾಯಿನ್ ಎಂದು ಇದ್ದರೂ ಇದು ಕಾಯಿನ್ ಅಲ್ಲ, ಪಕ್ಕಾ ಹೆವಿ ನೋಟು ಎನ್ನುವುದೇ ದೊಡ್ಡ ವ್ಯಂಗ್ಯ. ಒಂದು ಬಿಟ್ ಕಾಯಿನ್ ಸರಾಸರಿ 46 ಲಕ್ಷ ರೂಪಾಯಿ ಮೌಲ್ಯ ಹೊಂದಿದೆ ಎಂದರೆ ನೀವೆ ಲೆಕ್ಕ ಹಾಕಿ. ಹತ್ತು ಬಿಟ್ ಕಾಯಿನ್ ಇದ್ದವರು ಎಷ್ಟು ಕೋಟಿಗೆ ತೂಗುತ್ತಾರೆ ಎನ್ನುವುದು ಗೊತ್ತಾಗುತ್ತದೆ. ಇದು ಡಿಜಿಟಲ್ ಆದ್ದರಿಂದ ಇದನ್ನು ಯಾರು ಯಾರಿಗೆ ಯಾವಾಗ ಎಷ್ಟು ಪೂರೈಸಿದರು ಎನ್ನುವುದು ಅಷ್ಟು ಸುಲಭದಲ್ಲಿ ಗೊತ್ತಾಗುವುದಿಲ್ಲ. ಈಗ ಪಾಸ್ ಬುಕ್ ಆದರೆ ನಿಮ್ಮ ಅಕೌಂಟಿನಿಂದ ಯಾರಿಗೆ ಎಷ್ಟು ಹೋಗಿದೆ ಅಥವಾ ಎಷ್ಟು ನಿಮ್ಮ ಅಕೌಂಟಿಗೆ ಎಷ್ಟು ಬಂದಿದೆ ಎಂದು ಗೊತ್ತಾಗುತ್ತದೆ. ಇನ್ನು ಪಾಸ್ ಬುಕ್ ಇಲ್ಲದಿದ್ದರೆ ನಿಮ್ಮ ಬ್ಯಾಂಕಿನಿಂದ ಡಿಟೇಲ್ಸ್ ತೆಗೆದರೆ ಅಲ್ಲಿ ಕೂಡ ಹೋದ ಮತ್ತು ಬಂದ ಹಣ ಎಲ್ಲವೂ ಗೊತ್ತಾಗುತ್ತದೆ. ಆದರೆ ಬಿಟ್ ಕಾಯಿನ್ ಅಷ್ಟು ಸುಲಭವಾಗಿ ಗೊತ್ತಾಗುವುದಿಲ್ಲ. ಹಾಗಂತ ಸಾಧ್ಯವೇ ಇಲ್ವಾ ಎಂದು ಕೇಳಿದರೆ ಇದೆ. ಅದಕ್ಕೆ ಶ್ರೀಕಿ ಅಂತವರೇ ಬೇಕು. ಹೀಗೆ ವಿಷಯ ಸಾಗುತ್ತಾ ಇರುವಾಗಲೇ ಕಾಂಗ್ರೆಸ್ಸಿಗೆ ಭಾರತೀಯ ಜನತಾ ಪಾರ್ಟಿಯ ಮೇಲೆ ಆರೋಪ ಮಾಡಲು ವಿಷಯ ಸಿಕ್ಕಿದೆ. ಅದೇನೆಂದರೆ ಬಿಜೆಪಿ ಮುಖಂಡರು ಬಿಟ್ ಕಾಯಿನ್ ಜಾಲದಲ್ಲಿ ಭಾಗಿಯಾಗಿದ್ದಾರೆ ಎನ್ನುವುದು. ಭಾರತದಲ್ಲಿ ಬಿಟ್ ಕಾಯಿನ್ ಗೆ ಮಾನ್ಯತೆ ಇಲ್ಲ. ಅದು ಕಾನೂನು ಪ್ರಕಾರ ಅಪರಾಧವೂ ಹೌದು. ಅನೇಕ ಬಾರಿ ವಿದೇಶಗಳಲ್ಲಿ ಆಸ್ತಿ ಖರೀದಿಸುವಾಗ ತೆರಿಗೆ ತಪ್ಪಿಸಲು ಅಲ್ಲಿನ ಏಜೆನ್ಸಿಗಳಿಗೆ ಬಿಟ್ ಕಾಯಿನ್ ಮೂಲಕ ನಮ್ಮವರು ಹಣ ತಲುಪಿಸುತ್ತಾರೆ. ಇದು ಜನಸಾಮಾನ್ಯರ ತಲೆಗೆ ಹೋಗದಂತಹ ವಿಷಯ. ಆದ್ದರಿಂದ ಬಿಟ್ ಕಾಯಿನ್ ವಿವಾದದಿಂದ ಕಾಂಗ್ರೆಸ್ ಆಗಲಿ ಬಿಜೆಪಿಯಾಗಲಿ, ಹೋಗಲಿ ಜೆಡಿಎಸ್ ಗೆ ಆಗಲಿ ಆಗುವಂತದ್ದು ಏನೂ ಇಲ್ಲ.
ಆದರೆ ಇಲ್ಲಿ ಆಡಳಿತ ಪಕ್ಷ ಭ್ರಷ್ಟ ಎಂದು ಜನಾಭಿಪ್ರಾಯ ಮೂಡಿಸಲು ಕಾಂಗ್ರೆಸ್ಸಿಗೆ ಅವಕಾಶ ಸಿಗುತ್ತದೆ. ಹಾಗೆ ಕಾಂಗ್ರೆಸ್ಸಿಗರೇ ಇದರಲ್ಲಿ ಭಾಗಿಯಾಗಿದ್ದಾರೆ, ಅವರನ್ನು ಮತ್ತೆ ನಂಬಬೇಡಿ ಎಂದು ಹೇಳಲು ಬಿಜೆಪಿಗೆ ಚಾನ್ಸ್ ಸಿಕ್ಕಂತೆ ಆಗುತ್ತದೆ. ಒಟ್ಟಿನಲ್ಲಿ ಇಬ್ಬರಿಗೂ ಇದು ಅಷ್ಟು ಸುಲಭವಾಗಿ ಸಿಕ್ಕಿಬೀಳುವ ಪ್ರಕರಣ ಅಲ್ಲ ಎಂದು ಗೊತ್ತಿದೆ. ಆದರೂ ಇದರಲ್ಲಿ ಯಾರಾದರೂ ಕೆಲವು ಘಟಾನುಘಟಿ ನಾಯಕರು ಇದ್ದೇ ಇರುತ್ತಾರೆ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದೇ ಇದೆ. ಒಂದೊಂಮ್ಮೆ ಹಿಂದೆ ಈ ಬಿಟ್ ಕಾಯಿನ್ ವ್ಯವಹಾರದಲ್ಲಿ ಕೈಯಾಡಿಸಿದವರಿಗೂ ಇಡೀ ಬುಡ ಮೇಲೆ ಬಂದರೆ ನಮ್ಮ ಸ್ಥಾನಮಾನಕ್ಕೆ ದಕ್ಕೆ ಬರಬಹುದು ಎನ್ನುವ ಆತಂಕ ಇದ್ದೇ ಇದೆ. ಇನ್ನು ಕೆಲವರಿಗೆ ತಮ್ಮ ಹೆಸರು ತನಿಖಾ ಸಂಸ್ಥೆಯ ಫೈಲ್ ನಲ್ಲಿ ಇದೆಯಾ ಎಂದು ತಿಳಿದುಕೊಳ್ಳುವ ಕುತೂಹಲ. ಇನ್ನು ಕೆಲವರಿಗೆ ತಮ್ಮ ಸಹ ಉದ್ಯೋಗಿ ಏನಾದರೂ ಸಿಕ್ಕಿಬಿದ್ದಿದ್ದಾರಾ ಎಂದು ತಿಳಿಯುವ ಕಾತರ. ಹೀಗೆ ವಿಚಾರಣೆ ನಡೆಯುವಾಗ ಒಬ್ಬರು ಉನ್ನತ ಪೊಲೀಸ್ ಅಧಿಕಾರಿ ಈ ತನಿಖಾ ಸಂಸ್ಥೆಯಲ್ಲಿ ಪೇದೆಯಾಗಿರುವ ಒಬ್ಬರಿಗೆ ಕರೆ ಮಾಡಿ ಯಾರದೆಲ್ಲ ಹೆಸರು ಇದೆ ಎಂದು ಆಫ್ ದಿ ರೆಕಾರ್ಡ್ ವಿಚಾರಿಸಿದ್ದಾರೆ. ಸಾಮಾನ್ಯವಾಗಿ ಒಂದು ತನಿಖೆ ಆಗುವಾಗ ಆ ವಿಭಾಗದ ಪೇದೆಗಳಿಗೆ ಬೇರೆ ಬೇರೆ ವಿಷಯ ಕಿವಿಗೆ ಬೀಳುತ್ತಾ ಇರುತ್ತದೆ. ಅವರ ಬಳಿ ಪತ್ರಕರ್ತರು ಒಂದಿಷ್ಟು ಸುಳಿವು ಪಡೆದು ಬ್ರೇಕಿಂಗ್ ನ್ಯೂಸ್ ಎಂದು ಮಾಡುವುದೂ ಇದೆ. ಆದರೆ ಎಲ್ಲಿ ಕೂಡ ಇಂತವರ ಹೆಸರು ಬಹಿರಂಗ ಆಗುವುದಿಲ್ಲ. ಈಗ ಹೇಗೋ ಆ ಪೊಲೀಸ್ ಅಧಿಕಾರಿ- ಪೇದೆಯ ನಡುವಿನ ಮಾತುಕತೆಯ ಒಂದು ಆಡಿಯೋ ಹೊರಗೆ ಬಂದಿದೆ. ಅದರೊಂದಿಗೆ ಇಲ್ಲಿಗೆ ಒಂದು ವಿಷಯ ಗ್ಯಾರಂಟಿ ಆದಂತೆ ಆಗಿದೆ. ಅದೇನೆಂದರೆ ಇಲ್ಲಿ ದೊಡ್ಡ ದೊಡ್ಡ ತಲೆಗಳು ಇವೆ ಮತ್ತು ಅವು ಏನು ಬೇಕಾದರೂ ಮಾಡಲು ತಯಾರಿವೆ.
ಇನ್ನು ನಿತ್ಯ ಕಾಂಗ್ರೆಸ್ ಮತ್ತು ಬಿಜೆಪಿಯವರು ಸುದ್ದಿಗೋಷ್ಟಿ ಮಾಡುತ್ತಾ ಗಾಳಿಯಲ್ಲಿ ಗುಂಡು ಹಾರಿಸುವ ಕೆಲಸ ಮಾಡುತ್ತಿದ್ದಾರೆ. ಜೆಡಿಎಸ್ ನವರು ಯಥಾಪ್ರಕಾರ ರಬ್ಬರ್ ಹಾವು ಬಿಡುತ್ತಲೇ ಇರುತ್ತಾರೆ. ಹೀಗೆ ಮುಂದುವರೆಯುವುದರಿಂದ ಕೆಲವು ದಿನ ಬಳಿಕ ಇದು ಜನರಿಗೆ ಬೋರ್ ಆಗುತ್ತದೆ. ಉನ್ನತ ರಾಜಕೀಯ ನಾಯಕರು ಸೆಟಲ್ ಆಗುತ್ತಾರೆ. ಮಾಧ್ಯಮಗಳು ಬೇರೆ ವಿಷಯಕ್ಕೆ ಹೋಗುತ್ತಾರೆ. ಬಿಟ್ ಕಾಯಿನ್ ಅಟ್ಟ ಸೇರುತ್ತದೆ. ಹೀಗೆ ಆಗಬಾರದು ಎಂದರೆ ಮಾನ್ಯ ಸರ್ವೋಚ್ಚ ನ್ಯಾಯಾಲಯ ಈ ಪ್ರಕರಣದಲ್ಲಿ ಮಧ್ಯ ಪ್ರವೇಶಿಸಿ ಯಾರ ಹೆಸರು ಯಾರ ಬಳಿ ಇದೆಯೋ ಅವರು ತಕ್ಷಣ ಅದನ್ನು ಬಹಿರಂಗ ಪಡಿಸಬೇಕು ಎಂದು ಆದೇಶ ಮಾಡಬೇಕು. ಆರೋಪಿಗಳ ವಿರುದ್ಧ ತನಿಖೆ ಆಗಬೇಕು. ಆರೋಪ ಸುಳ್ಳು ಎಂದು ಸಾಬೀತಾದರೆ ಸುಳ್ಳು ಆರೋಪ ಹಾಕಿದವರ ಮೇಲೆ ತನಿಖೆ ಆಗಬೇಕು ಮತ್ತು ಶಿಕ್ಷೆ ವಿಧಿಸಬೇಕು. ಇದು ಆಗದಿದ್ದರೆ ಇದು ಧಾರವಾಹಿಯ ತನಕ ಕೆಲವು ದಿನ ನಡೆಯುತ್ತೆ. ಹಣ ಕೈ ಬದಲಾಗುತ್ತದೆ. ಕಳ್ಳರು ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ!!
Leave A Reply