ಹೆದರಿಕೆ ಎನ್ನುವ ಸರಕನ್ನು ಮಾರುವುದೇ ನ್ಯೂಸ್ ಚಾನೆಲ್ ವ್ಯಾಪಾರ!!

ಮೊನ್ನೆಯಿಂದ ಟಿವಿಯವರಿಗೆ ಹೊಸ ಶಬ್ದ ಸಿಕ್ಕಿದೆ. ಅದೇ ಓಮಿಕ್ರಾನ್. ಹಿಂದೆ ಒಂದು ಕಾಲದಲ್ಲಿ ನ್ಯೂಸ್ ವಾಹಿನಿಗಳು ಇರದಿದ್ದ ಸಮಯದಲ್ಲಿ ದಿನಕ್ಕೆ ಎರಡು ಸಲ ವಾರ್ತೆಗಳು ಬರುತ್ತಿದ್ದವು. ಅದರಲ್ಲಿ ಬರುತ್ತಿದ್ದ ಸುದ್ದಿಗಳಿಗೆ ಒಂದು ಘನತೆ ಇತ್ತು. ಅವು ಕೇವಲ ಸುದ್ದಿಗಳಾಗಿರುತ್ತಿದ್ದವು. ನಾವು ಅದನ್ನು ಕಾದು ಕುಳಿತು ಕೇಳುತ್ತಿದ್ದೇವು ಅಥವಾ ವೀಕ್ಷಿಸುತ್ತಿದ್ದೇವು. ನಂತರ ಮೊದಲ ಬಾರಿ ಯಾರಿಗೆ ಇಡೀ ದಿನ ನ್ಯೂಸ್ ತೋರಿಸೋಣ ಎಂದು ಅನಿಸಿತೋ ದೇವರಿಗೆ ಗೊತ್ತು. ಇಡೀ ದಿನ ನ್ಯೂಸ್ ತೋರಿಸುವ ಟಿವಿ9 ಹುಟ್ಟಿಕೊಂಡಿತು. ಅದು ನ್ಯೂಸ್ ತೋರಿಸುವ ಶೈಲಿಯನ್ನೇ ಬದಲಾಯಿಸಿಬಿಟ್ಟಿತ್ತು. ಅದರ ಯಶಸ್ಸು ಬೇರೆಯವರಿಗೆ ನ್ಯೂಸ್ ಚಾನೆಲ್ ಆರಂಭಿಸಲು ಪ್ರೇರಣೆ ನೀಡಿತು. ಆ ನಂತರ ಒಂದೊಂದೇ ನ್ಯೂಸ್ ಚಾನೆಲ್ ಆರಂಭವಾಯಿತು. ಈಗ ಹೇಗೆ ಆಗಿದೆ ಎಂದರೆ ನೀವು ದಿನದ ಯಾವ ಸಮಯದಲ್ಲಿ ಯಾವ ವಾರ್ತಾ ವಾಹಿನಿ ಇಟ್ಟರೂ ನಿಮಗೆ ನ್ಯೂಸ್ ದೊರಕುತ್ತದೆ. ನ್ಯೂಸ್ ಮಾತ್ರ ಕೊಟ್ಟರೆ ಪರವಾಗಿರಲಿಲ್ಲ. ಯಾವಾಗ ಈ ವಾಹಿನಿಗಳು ವೀವ್ಸ್ ಕೊಡಲು ಆರಂಭಿಸಿದವೋ ಮೊದಲ ಬಾರಿಗೆ ಈ ವಾಹಿನಿಗಳ ಮೇಲಿದ್ದ ವಿಶ್ವಾಸಕ್ಕೆ ಕೊಡಲಿ ಪೆಟ್ಟು ಬಿತ್ತು. ಆರಂಭದಲ್ಲಿ ಇವರು ಏನು ತೋರಿಸಿದರೂ, ಏನು ಹೇಳಿದರೂ ಜನ ನಂಬುತ್ತಿದ್ದರು. ಆದರೆ ಅದು ಕೆಲವು ಕಾಲ. ಈಗ ವಾಹಿನಿಗಳನ್ನು ಜನ ಮಾಹಿತಿಗಿಂತ ಹೆಚ್ಚಾಗಿ ಮನೋರಂಜನೆಗಾಗಿ ನೋಡುತ್ತಿದ್ದಾರೆ. ಪಕ್ಕದ ಮನೆಯ ಕುಟುಂಬದ ಕಲಹದಿಂದ ಹಿಡಿದು ವಿಧಾನಸಭೆಯಲ್ಲಿ ಶಾಸಕನೊಬ್ಬ ಮೂಗಿಗೆ ಬೆರಳು ಹಾಕಿದ್ದರ ತನಕ ಎಲ್ಲವೂ ನ್ಯೂಸ್ ಆಗಲು ಶುರುವಾಗಿದೆ. ಅದಕ್ಕೆ ಇವರು ಕೊಡುವ ಮ್ಯೂಸಿಕ್ ಮತ್ತು ಚಿತ್ರವಿಚಿತ್ರ ದೃಶ್ಯಗಳು ಒಂದಷ್ಟು ಕಾಲ ಜನರಿಗೆ ಪುಕ್ಸಟ್ಟೆ ಮನೋರಂಜನೆ ಕೊಟ್ಟವು. ಆದರೆ ಯಾವಾಗ ಕೊರೊನಾ ದೇಶಕ್ಕೆ ಕಾಲಿಟ್ಟಿತ್ತೋ ಮೊದಲ ಬಾರಿಗೆ ಭಯ ಕೂಡ ಮಾರಾಟದ ಸರಕು ಆಗಬಹುದು ಎಂದು ವಾಹಿನಿಗಳಿಗೆ ಅನಿಸಲು ಶುರುವಾಯಿತು. ಅಲ್ಲಿಂದ ಶುರುವಾಯಿತು ನೋಡಿ ದೊಂಬರಾಟ. ಅಲ್ಲಿ ಹೀಗಂತೆ, ಇಲ್ಲಿ ಹೀಗಂತೆ ಎಂದು ಮೂಗಿಗೆ ಪೈಪು ಹಾಕಿ ಆಸ್ಪತ್ರೆಯಲ್ಲಿ ಮಲಗಿದವರ ದೃಶ್ಯಗಳನ್ನು ತೋರಿಸಿದ್ದೇ ತೋರಿಸಿದ್ದು. ವೀಕ್ಷಕ ಅದನ್ನು ಹೆದರಿಕೆಯ ದೃಷ್ಟಿಯಿಂದ ನೋಡಲು ಶುರು ಮಾಡಿದ. ಅವನಿಗೆ ಸಾವು ತನ್ನದೇ ಮನೆಯ ಬಾಗಿಲು ಬಡಿದಂತೆ ಅನಿಸುವ ಮಟ್ಟಿಗೆ ಟಿವಿಗಳು ಕೊರೊನಾದ ವಿವಿಧ ಆಯಾಮಗಳನ್ನು ಸಂತೆಯಲ್ಲಿ ಸಿಹಿತಿಂಡಿಗಳನ್ನು ಹರಡಿ ವ್ಯಾಪಾರಕ್ಕೆ ಕುಳಿತುಕೊಳ್ಳುತ್ತಾರಲ್ಲ, ಹಾಗೆ ತೋರಿಸಲಾರಂಭಿಸಲಾಯಿತು. ಹಲವರು ನೋಡಿಯೇ ಆಸ್ಪತ್ರೆ ಸೇರಿದರು. ಕೆಲವರು ಅಲ್ಲಿಯೇ ಪ್ರಾಣ ಬಿಟ್ಟರು. ಜನ ಈ ವಾಹಿನಿಗಳನ್ನು ಬೈಯಲು ಆರಂಭಿಸಿದರು. ವ್ಯಾಪಾರಕ್ಕೆ ಕುಳಿತ ನ್ಯೂಸ್ ಚಾನೆಲ್ ಗಳ ಧಣಿಗಳಿಗೆ ತಮ್ಮ ಸರಕು ಖಾಲಿಯಾಗುತ್ತಿರುವಂತೆ ಅನಿಸಿತು.
ಇನ್ನು ನಾವು ಹೆದರಿಕೆಯನ್ನು ವಿಶ್ವಾಸದ ಕವರ್ ನಲ್ಲಿ ಸುತ್ತಿ ಕೊಡಬೇಕು ಎಂದು ಹೊಸ ಮಂತ್ರ ಆರಂಭಿಸಿದರು. ಹೆದರಬೇಡಿ ಆದರೆ ಎಚ್ಚರಿಕೆಯಲ್ಲಿ ಇರಿ ಎನ್ನುವುದು ಅದರ ಮುಂದುವರೆದ ಭಾಗ. ಜನರಿಗೆ ಇವರ ಮೇಲೆ ಮತ್ತೆ ವಿಶ್ವಾಸ ಭರಿಸುವ ಕೆಲಸವನ್ನು ಇವರೇ ಆರಂಭಿಸಿದರು. ವೈದ್ಯರನ್ನು ಕುಳ್ಳಿರಿಸಿ ಮಾತನಾಡಿಸಿದರು. ಕೆಲವು ಆಸ್ಪತ್ರೆಗಳು ತಮ್ಮ ಜಾಹೀರಾತು ನೀಡಿ ಅಲ್ಲಿಯೂ ಬೇಳೆ ಬೇಯಿಸಿಕೊಂಡವು. ರಾಜಕಾರಣಿಗಳು ಸ್ವಲ್ಪ ಸಹಾಯ ಮಾಡಿದ ವಿಷಯವನ್ನು ಗಂಟೆಗಟ್ಟಲೆ ಎಪಿಸೋಡ್ ಮಾಡಿ ಸರಣಿಯಂತೆ ತೋರಿಸಲಾಯಿತು. ಜನಪ್ರತಿನಿಧಿಗಳ ಪ್ರಚಾರದಲ್ಲಿ ಕಾಣಿಸಿಕೊಳ್ಳುವ ಹುಚ್ಚನ್ನು ಎನ್ ಕ್ಯಾಶ್ ಮಾಡಿಕೊಳ್ಳಲಾಯಿತು. ಇದು ಕೂಡ ವಿಶ್ವಾಸದ ಪ್ಯಾಕೇಜಿನಲ್ಲಿ ಭಯವೇ ಅಡಗಿ ಕುಳಿತುಕೊಳ್ಳುವಂತೆ ಮಾಡಲಾಗಿತ್ತು. ನಿಮಗೆ ಗೊತ್ತಿರುವಂತೆ ಟಿವಿಗಳ ಲೋಕದಲ್ಲಿ ಪ್ರೈಮ್ ಟೈಮ್ ಮತ್ತು ನಾನ್ ಪ್ರೈಮ್ ಟೈಮ್ ಎಂದು ಇರುತ್ತದೆ. ಸಂಜೆ 5 ಗಂಟೆ ದಾಟುತ್ತಿದ್ದಂತೆ ಜಾಹೀರಾತುಗಳ ದರ ಪ್ರತಿ ಅರ್ಧ ಗಂಟೆಗೊಮ್ಮೆ ಜಾಸ್ತಿಯಾಗುತ್ತಾ ಹೋಗಿ ರಾತ್ರಿ 10 ಗಂಟೆ ಕಳೆಯುತ್ತಿದ್ದಂತೆ ನಿಧಾನವಾಗಿ ಇಳಿಯುತ್ತಾ ಹೋಗುತ್ತೆ. ಆದರೆ ಯಾವಾಗ ಲಾಕ್ ಡೌನ್ ಆಗುತ್ತದೋ ಆಗ ಇಡೀ ದಿನ ಇವರ ಪಾಲಿಗೆ ಪ್ರೈಮ್ ಟೈಮ್. ಯಾಕೆಂದರೆ ಎಲ್ಲರೂ ಮನೆಯಲ್ಲಿಯೇ ಇರುತ್ತಾರೆ. ಈಗ ಲಾಕ್ ಡೌನ್ ಇಲ್ಲದ ಕಾರಣ ಟಿವಿ ವಾಹಿನಿಗಳಿಗೆ ಮೀನನ್ನು ನೀರಿನಿಂದ ತೆಗೆದಂತೆ ಆಗಿದೆ. ಜನ ತಮ್ಮನ್ನು ಕಡೆಗಣಿಸಬಾರದಾದರೆ ಏನು ಮಾಡಬೇಕು ಎನ್ನುವುದು ತಿಳಿದಿರುವುದರಿಂದ ಮತ್ತೆ ಹೆದರಿಕೆ ಎನ್ನುವ ಸರಕನ್ನು ಮುನ್ನಲೆಗೆ ತಂದಿದ್ದಾರೆ. ಅದೇ ಓಮಿಕ್ರಾನ್.
ಓಮಿಕ್ರಾನ್ ದಕ್ಷಿಣ ಆಫ್ರಿಕಾದಲ್ಲಿ ಕೊರೊನಾದಿಂದ ರೂಪಾಂತರಿಗೊಂಡ ಒಂದು ವೈರಸ್. ಹೇಗೆ ಕೊರನಾದಿಂದ ಕೋವಿಡ್ 19 ಹುಟ್ಟಿಕೊಂಡು ನಮ್ಮನ್ನು ಕಾಡಿದ್ದ ಹಾಗೆ ಇದು ಕೂಡ ಒಂದು ರೂಪಾಂತರಿ. ಇಂತಹ ಅಸಂಖ್ಯಾತ ರೂಪಾಂತರಿಗಳು ನಮ್ಮ ಸುತ್ತಮುತ್ತಲೂ ಹಿಂದೆ ಕೂಡ ಇತ್ತು, ಈಗ ಕೂಡ ಇದೆ, ಮುಂದೆ ಕೂಡ ಇರುತ್ತದೆ. ನಿಮಗೆ ಯಾವಾಗಲಾದರೂ ವೈರಲ್ ಫ್ಲೂ ಬಂದಿಲ್ವಾ? ಹಾಗೆ ಇದು ಕೂಡ ಬರಬಹುದು. ಆದರೆ ನೀವು ಲಸಿಕೆಯನ್ನು ತೆಗೆದುಕೊಂಡಿದ್ದರೆ ಇದರ ಉಪಟಳ ಇರುವುದಿಲ್ಲ. ಹಾಗಂತ ಇದಕ್ಕೆ ಹೆದರಿ ಮನಸ್ಸನ್ನು ಮುದ್ದೆ ಮಾಡಿಕೊಂಡರೆ ಅಷ್ಟರಮಟ್ಟಿಗೆ ನೀವು ಸೋತ ಹಾಗೆ. ಏನು ಹೆದರುವ ಅವಶ್ಯಕತೆ ಇಲ್ಲ. ಈಗಾಗಲೇ ಮರೆತಿರುವ ಮಾಸ್ಕ್ ಅನ್ನು ಮತ್ತೆ ಮೂಗಿನ ಮೇಲಿನ ತನಕ ಹಾಕಿ. ಕೈಗಳನ್ನು ತೊಳೆಯುತ್ತಾ ಇರಿ. ದೈಹಿಕ ಅಂತರ ಇರಲಿ. ಉಳಿದದ್ದು ಟಿವಿಯವರಿಗೆ ಬಿಡಿ, ಅವರು ಕೂಡ ಬದುಕಬೇಕಲ್ಲ!!
Leave A Reply