ಯುಪಿ, ಗುಜರಾತ್ ತರಹ ಇಲ್ಲಿ ಕೂಡ ಅಂತವರನ್ನು ಬಂಧಿಸುವ ಆದೇಶವಾಗಿದೆ!!

ಮೂರು ಸೇನಾಪಡೆಗಳ ಒಕ್ಕೂಟದ ಏಕೈಕ ಮುಖ್ಯಸ್ಥರಾಗಿದ್ದ ಜನರಲ್ ಬಿಪಿನ್ ರಾವತ್ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನದ ಹಿಂದಿರುವ ನೈಜ ಕಾರಣಗಳು ಪತ್ತೆಯಾಗಲೇಬೇಕು. ಈ ಬಗ್ಗೆ ನಮ್ಮ ದೇಶದಲ್ಲಿ ಮಾತ್ರವಲ್ಲ, ಅಂತರಾಷ್ಟ್ರೀಯ ತನಿಖಾ ಸಂಸ್ಥೆಗಳು ಕೂಡ ಕುತೂಹಲದಿಂದ ಕಾಯುತ್ತಿರುತ್ತವೆ. ಇಲ್ಲಿ ನಿಜಕ್ಕೂ ಹವಾಮಾನ ವೈಪರಿತ್ಯನಾ, ಹೆಲಿಕಾಪ್ಟರ್ ನಲ್ಲಿ ತಾಂತ್ರಿಕ ದೋಷನಾ? ಅಥವಾ ಇನ್ಯಾರೋ ಕೈ ಆಡಿಸಿರಬಹುದಾ ಎನ್ನುವುದು ಹೊರ ಜಗತ್ತಿಗೆ ಸ್ಪಷ್ಟವಾಗಿ ಗೊತ್ತಾಗಬೇಕು. ಅಲ್ಲಿಯವರೆಗೆ ವಾಟ್ಸಪ್ ಪರಿಣಿತರು, ಪತ್ರಿಕೆ ಓದಿ ಹೆಲಿಕಾಪ್ಟರ್ ತಂತ್ರಜ್ಞಾನ ತಿಳಿದವರು, ಗೂಗಲ್ ನಲ್ಲಿ ಅಂತರಾಷ್ಟ್ರೀಯ ವ್ಯವಹಾರಗಳ ವಿಶೇಷ ಅನುಭವಿಗಳು ಒಂದಿಷ್ಟು ದಿನ ಬಾಯಿ ಮುಚ್ಚಿ ಕುಳಿತುಕೊಳ್ಳುವುದು ಎಲ್ಲರಿಗೂ ಒಳ್ಳೆಯದು. ಯಾಕೆಂದರೆ ಇವರ ನಡುವೆ ಉದ್ಭವಿಸಿರುವ ಕೆಲವು ಸೀಸನಲ್ ದೇಶದ್ರೋಹಿಗಳು ತಮ್ಮ ಬಾಲ ಬಿಚ್ಚಿ ಮಜಾ ತೆಗೆದುಕೊಳ್ಳುತ್ತಿದ್ದಾರೆ. ಆ ಬಗ್ಗೆ ನಿನ್ನೆಯ ಜಾಗೃತ ಅಂಕಣದಲ್ಲಿ ಹೇಳಿದ್ದೇನೆ. ಈಗ ಆಗಬೇಕಿರುವುದು ಗುಜರಾತ್ ಮತ್ತು ಉತ್ತರ ಪ್ರದೇಶದಲ್ಲಿ ಅಲ್ಲಿನ ಸರಕಾರಗಳು ಮಾಡಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಬಿಪಿನ್ ರಾವತ್ ಅವರ ಅಕಸ್ಮಾತ್ ಅಗಲುವಿಕೆಯನ್ನು ಕೆಟ್ಟದಾಗಿ ಸಂಭ್ರಮಿಸುವರನ್ನು ಹೆಡೆಮುರಿ ಕಟ್ಟಿ ಎಳೆದುಕೊಂಡು ಜೈಲಿಗೆ ಹಾಕುವುದು. ಹೀಗೆ ಮಾಡುವುದರಿಂದ ಉಳಿದವರಿಗೂ ಬುದ್ಧಿ ಬರುತ್ತದೆ. ಆದರೆ ಆ ಎರಡು ರಾಜ್ಯಗಳಲ್ಲಿ ಇದ್ದ ಹಾಗೆ ಇಲ್ಲಿಯೂ ಭಾರತೀಯ ಜನತಾ ಪಾರ್ಟಿಯ ಸರಕಾರ ಇದೆ. ಅಲ್ಲಿನ ಸರಕಾರಗಳು ಕಟ್ಟುನಿಟ್ಟಿನ ಸೂಚನೆಗಳನ್ನು ಹೊರಡಿಸಿರುವುದರ ಹಾಗೆ ಇಲ್ಲಿಯೂ ಮಾಡಬಹುದಲ್ಲವೇ?ಎಂದು ಪ್ರಜ್ಞಾವಂತರು ನಿರಂತರ ಒತ್ತಡ ಹಾಕಿ, ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಕೊಟ್ಟ ಬಳಿಕ ಕರ್ನಾಟಕದಲ್ಲಿಯೂ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ. ಆದರೆ ಸೂಚನೆ ನೀಡಿದ ಕೂಡಲೇ ಇಲ್ಲಿ ಆಗುತ್ತಾ ಎನ್ನುವುದು ಈಗ ಉಳಿದಿರುವ ಪ್ರಶ್ನೆ.
ಆದರೆ ಬಿಜೆಪಿ ಸರಕಾರದ ಎರಡನೇ ಮುಖ್ಯಮಂತ್ರಿ ಅಧಿಕಾರ ವಹಿಸಿಕೊಂಡಾಗಿನಿಂದ ಇಲ್ಲಿ ಸರಕಾರದ ಯಾವುದೇ ಸೂಚನೆಗಳು ಯಥಾವತ್ತಾಗಿ ಜಾರಿಯಲ್ಲಿ ಬರುತ್ತಿಲ್ಲ. ಅದು ಯಾಕೆ ಎಂದು ಸರಕಾರ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಒಂದೆರಡು ಸಣ್ಣ ಪ್ರಕರಣಗಳಲ್ಲಿ ಸರಕಾರ ಪೊಲೀಸ್ ಇಲಾಖೆಯಿಂದ ಮುಜುಗರ ಅನುಭವಿಸಿದರೆ ಅದು ಬೇರೆ ವಿಷಯ. ಆದರೆ ಇದು ನಿರಂತರವಾಗಿ ಆಗುತ್ತಿದೆ. ಒಂದನೇಯದಾಗಿ ಇಲ್ಲಿನ ಪೊಲೀಸ್ ಇಲಾಖೆ ರಾಜ್ಯ ಸರಕಾರದ ಮಾತಿಗೆ ಕವಡೆ ಕಿಮ್ಮತ್ತು ಕೊಡುತ್ತಿಲ್ಲ ಎನ್ನುವಂತೆ ಕಾಣುತ್ತಿದೆ. ಬಿಜೆಪಿ ಸರಕಾರ ಸಂಪೂರ್ಣ ಗೋಹತ್ಯಾ ನಿಷೇಧ ಕಾಯ್ದೆ ಜಾರಿಗೆ ತಂದಿದೆ. ಆದರೂ ಪೊಲೀಸರು ಅಕ್ರಮ ಗೋಸಾಗಾಟ ತಡೆಯಲು ಹೋಗುತ್ತಿಲ್ಲ. ಇವತ್ತಿಗೂ ಹಿಂದೂ ಸಂಘಟನೆಗಳು ಮತ್ತು ಅದರ ಕಾರ್ಯಕರ್ತರೇ ಅಕ್ರಮ ಗೋಸಾಗಾಟದ ವಾಹನಗಳ ಹಿಂದೆ ಬೀಳಬೇಕಾಗಿದೆ. ಆದರೆ ಗೋವನ್ನು ಕದಿಯಲು ಬರುವ ಕಳ್ಳರು ತಲವಾರು ಜೊತೆಗೆ ಬಂದಿರುತ್ತಾರೆ. ಅವರು ತಮ್ಮನ್ನು ಬೆಂಬತ್ತಿ ಬರುವವರ ಮೇಲೆ ತಲವಾರು ಬೀಸುತ್ತಾರೆ, ಬಗ್ಗದಿದ್ದರೆ ತಮ್ಮ ವಾಹನವನ್ನೇ ಅವರ ಮೇಲೆ ಹರಿಸುತ್ತಾರೆ. ಇದು ನೋಡಿದ ನಂತರ ಹಿಂದೂ ಸಂಘಟನೆಗಳಿಗೆ ಈಗ ರಾಜ್ಯದಲ್ಲಿ ಇರುವುದು ಬಿಜೆಪಿ ಸರಕಾರನಾ ಅಥವಾ ಕಾಂಗ್ರೆಸ್ ಸರಕಾರವೇ ಎನ್ನುವ ಸಂಶಯ ಉಂಟಾಗಿದೆ.
ಇನ್ನು ಹಲವು ಪ್ರಕರಣಗಳಲ್ಲಿ ಪೊಲೀಸರು ಸಾಮರಸ್ಯ ತೋರಿಸುವುದಕ್ಕಾಗಿ ಹಿಂದೂಗಳನ್ನು ಅನಾವಶ್ಯಕವಾಗಿ ಆರೋಪಿಗಳನ್ನಾಗಿ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತದೆ. ಮೂವರು ಮುಸ್ಲಿಂ ಆರೋಪಿಗಳು ಇದ್ದರೆ ಬೇಕಂತಲೇ ಇಬ್ಬರು ಹಿಂದೂ ವ್ಯಕ್ತಿಗಳನ್ನು ಆರೋಪಿಗಳನ್ನಾಗಿ ಮಾಡಿ ಬ್ಯಾಲೆನ್ಸ್ ಮಾಡುವ ಕೆಲಸ ನಡೆಯುತ್ತಿದೆ ಎನ್ನಲಾಗುತ್ತದೆ. ಡಮ್ಮಿಗಳಾಗಿ ಬಂಧನಕ್ಕೆ ಒಳಗಾದವರಿಗೆ ಯಾವ ಅಪರಾಧಿಕ ಹಿನ್ನಲೆ ಕೂಡ ಇರದೇ ಇರುವುದು, ಯಾರನ್ನೋ ಸುಮ್ಮನೆ ಬಂಧಿಸಿರುವುದು ಹಿಂದೂ ಸಂಘಟನೆಗಳ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಇನ್ನು ಯಾವುದೇ ತಲವಾರು ಕಾಳಗದಲ್ಲಿಯೂ ನೈಜ ಆರೋಪಿಗಳನ್ನು ಬಿಟ್ಟು ಅನಾವಶ್ಯಕವಾಗಿ ಯಾರನ್ನೋ ಫಿಕ್ಸ್ ಮಾಡುತ್ತಿರುವುದು ಕೂಡ ಪೊಲೀಸ್ ಇಲಾಖೆ ಎತ್ತ ಸಾಗುತ್ತಿದೆ ಎಂದು ಜನರು ಕೇಳಿಕೊಳ್ಳುವಂತಾಗಿದೆ. ಪೊಲೀಸ್ ಇಲಾಖೆ ಎಂದರೆ ಅದು ಯಾರದ್ದೂ ವಶೀಲಿಬಾಜಿಗೆ ಒಳಗಾಗಬಾರದು. ಅದು ಕಾಂಗ್ರೆಸ್ ಇರಲಿ, ಬಿಜೆಪಿ ಇರಲಿ ಮತ್ತೊಬ್ಬರು ಇರಲಿ. ಯಾರೂ ಕೂಡ ಒತ್ತಡ ಹಾಕಿ ಯಾರನ್ನೊ ಒಳಗೆ ಹಾಕಿ ಇನ್ಯಾರನ್ನೋ ಬಿಡಿಸಬಾರದು. ಪೊಲೀಸರು ಕೂಡ ತಮಗೆ ಬೇಕಾದ ಕಡೆ ಪೋಸ್ಟಿಂಗ್ ಮಾಡಿಸಲು ಜನಪ್ರತಿನಿಧಿಗಳಿಗೆ ದಂಬಾಲು ಬೀಳಬಾರದು. ಇನ್ನು ಸರಕಾರಗಳು ಮಾಡುವ ಕಾನೂನನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸಲು ಪೊಲೀಸ್ ಇಲಾಖೆ ಕೆಲಸ ಮಾಡಬೇಕು. ಯಾವುದೋ ಪುಡಿಗಾಸಿಗೆ ಯಾರದ್ದೋ ಪರ ಕೆಲಸ ಮಾಡಿದರೆ ಅದು ತಮಗೆ ತಿರುಗುಬಾಣವಾಗುತ್ತದೆ ಎಂದು ಮರೆಯಬಾರದು. ಯಾರನ್ನೋ ಯಾವುದೋ ಕೇಸಿನಲ್ಲಿ ಫಿಕ್ಸ್ ಮಾಡುವುದರಿಂದ ಶಾಂತಿ, ಸುವ್ಯವಸ್ಥೆ ಹಾಳಾಗಿ ಹೋಗುವುದು!!
Leave A Reply