ಪಾದಯಾತ್ರೆಗೆ ಬಂದವರಿಗೆ ಕೊರೊನಾ ಫ್ರೀ!!

ಪಾದಯಾತ್ರೆಯಿಂದ ಲಾಭ ಇದೆ ಎನ್ನುವುದು ಕಾಂಗ್ರೆಸ್ಸಿಗಿಂತ ಚೆನ್ನಾಗಿ ಗೊತ್ತಿರುವ ಮತ್ತೊಂದು ಪಕ್ಷ ಇಲ್ಲ. 2013 ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಇಂತಹುದೇ ಪಾದಯಾತ್ರೆ ಕಾರಣ. ಧಮ್ಮಿದ್ದರೆ ಬಳ್ಳಾರಿಗೆ ಬಂದು ತೋರಿಸಿ ಎಂದು ರೆಡ್ಡಿ ಪಟಾಲಂ ವಿಧಾನಸಭೆಯಲ್ಲಿ ಬಹಿರಂಗವಾಗಿ ಸವಾಲೆಸೆದ ಬಳಿಕ ತೊಡೆ ತಟ್ಟಿ, ತೋಳು ಮಡಚಿ ಬಂದೇ ಬರುತ್ತೇವೆ, ಧಮ್ಮಿದ್ದರೆ ತಡೆಯಿರಿ ಎಂದು ಯಾವಾಗ ವಿಪಕ್ಷ ನಾಯಕರಾಗಿದ್ದ ಸಿದ್ಧರಾಮಯ್ಯ ಹೇಳಿದರೋ ಕಾಂಗ್ರೆಸ್ ಪೂರ್ಣಶಕ್ತಿಯೊಂದಿಗೆ ಆವತ್ತು ರಣರಂಗಕ್ಕೆ ಇಳಿದಿತ್ತು. ಆಗ ನಿಜವಾಗಿಯೂ ಸಿದ್ದು ದೇಹದಲ್ಲಿ ಕಸುವಿತ್ತು. ಹತ್ತು ವರುಷಗಳ ಹಿಂದಿನ ದಿನಗಳವು. ಸಿದ್ದು, ರಮಾನಾಥ ರೈ ಸಹಿತ ಆರೇಳು ಕಾಂಗ್ರೆಸ್ ನಾಯಕರ ನೇತೃತ್ವದಲ್ಲಿ ನೂರಾರು ಜನ ಹತ್ತಾರು ದಿನ ಅಕ್ಷರಶ: ಬೆಂಗಳೂರಿನಿಂದ ಬಳ್ಳಾರಿಗೆ ನಡೆದುಕೊಂಡು ಹೋದರು. ಬಳ್ಳಾರಿಯಲ್ಲಿ ಬೃಹತ್ ಸಭೆಯನ್ನು ಆಯೋಜಿಸಲಾಯಿತು. ಸೇರಿದ ಸಹಸ್ರಾರು ಜನರನ್ನು ಕಂಡು ಸಿದ್ದು ಥ್ರಿಲ್ ಆದರು. ಅವರಿಗೆ ತಾವು ಅಧಿಕಾರದ ಗದ್ದುಗೆ ಏರುವುದು ಅಲ್ಲಿಂದಲೇ ಸ್ಪಷ್ಟವಾಗಿ ಕಾಣಲು ಶುರುವಾಗಿತ್ತು. ಕೇವಲ ಹಣಬಲದಿಂದಲೇ ರಾಜಕೀಯ ಮಾಡಲು ಸಾಧ್ಯ ಎಂದು ತೋರಿಸುತ್ತಿದ್ದ ಜನಾರ್ಧನ ರೆಡ್ಡಿ ಮತ್ತು ಬಳಗಕ್ಕೆ ಜನಬಲವೂ ಬೇಕು ಎಂದು ತೋರಿಸಿಕೊಟ್ಟಿದ್ದು ಇದೇ ಸಿದ್ದು. ಅದರ ನಂತರ ಸಿದ್ದು ಸಿಎಂ ಆದರು. ರೆಡ್ಡಿಗಳು ಅಂದರ್ ಆದರು. ಅದೆಲ್ಲ ಆಗಿ ಈಗ ಕಾವೇರಿಯಲ್ಲಿ ಸಾಕಷ್ಟು ನೀರು ಹರಿದಿದೆ. ಸಿದ್ದು ಮತ್ತೆ ವಿಪಕ್ಷ ಸ್ಥಾನಕ್ಕೆ ಬಂದು ಕೂತಿದ್ದಾರೆ. ರಾಜ್ಯ ರಾಜಕೀಯ ಒಂದು ಗಿರಕಿ ಹೊಡೆದು ಬಂದು ಅಲ್ಲಿಗೆ ನಿಂತಿದೆ. ವಿಧಾನಸಭೆಯ ಒಳಗೆ ಹೊಂದಾಣಿಕೆಯ ಪಾಲಿಟಿಕ್ಸ್ ಶುರುವಾಗಿದೆ. ಸಿದ್ದು ವಿಧಾನಸಭೆಯ ಒಳಗೆ ನಿಂತು ಸರಕಾರದ ಲೋಪಗಳನ್ನು ದಾಖಲೆ ಸಮೇತ ಬಿಚ್ಚಿಡುತ್ತಿದ್ದರೆ ಎದುರಿಗೆ ಕುಳಿತ ಸಚಿವರು ನಿತ್ರಾಂಣಗೊಂಡಂತೆ ಕಾಣುತ್ತಿದ್ದಾರೆ. ಯಡ್ಡಿ ಕೊನೆಯ ಸೀಟಿನಲ್ಲಿ ಕುಳಿತು ಟೈಮ್ ಪಾಸ್ ಮಾಡುತ್ತಿದ್ದರೆ ಕಾಂಗ್ರೆಸ್ಸಿನಿಂದ ಭಾರತೀಯ ಜನತಾ ಪಾರ್ಟಿಗೆ ಹಾರಿ ಸಚಿವರಾಗಿರುವವರು ಸಾರ್, ಸಾರ್ ಎಂದು ಸಿದ್ದುವನ್ನು ಕಾಲು ಎಳೆಯಲು ಸೀಮಿತವಾದರೆ ವಿನ: ಆ ರೋಷಾಗ್ನಿ ಅಭಿವೃದ್ಧಿಯ ವಿಷಯದಲ್ಲಿ ಕಾಣಲೇ ಇಲ್ಲ. ಯಾವಾಗಲೂ ಪ್ರಬಲ ವಿಪಕ್ಷ ನಾಯಕನಿಗೆ ಟಕ್ಕರ್ ಕೊಡುವ ಆಡಳಿತ ಪಕ್ಷ ಇದ್ದರೆ ಅದರ ಮಜಾನೇ ಬೇರೆ. ಆದರೆ ಇಲ್ಲಿ ಅಂತಹ ಫೈಟ್ ಇರುತ್ತಿರಲಿಲ್ಲ. ಹೀಗೆ ಹೋಗುವಾಗಲೇ ನಾವು ಚುನಾವಣೆಗೆ ಒಂದು ವರ್ಷ ಇರುವಾಗಲೇ ಏನಾದರೊಂದು ದೊಡ್ಡದು ಮಾಡದಿದ್ದರೆ ಕಾಂಗ್ರೆಸ್ಸಿಗೆ ಮತ ಹಾಕಲು ಜನರಿಗೆ ಪ್ರೇರಣೆ ಎಲ್ಲಿಂದ ಬರಬೇಕು ಎಂದು ಅವಲತ್ತುಗೊಂಡ ಡಿಕೆಶಿ ಅದೇ ಹಳೆಯ ಯಶಸ್ವಿ ಫಾರ್ಮುಲಾ ಹಿಡಿದು ಹೊರಟುಬಿಟ್ಟರು. ಈಗ ದಶಕದ ಬಳಿಕ ಜನರ ಮನಸ್ಸನ್ನು ತಮ್ಮತ್ತ ಸೆಳೆಯಲು ತಾವು ಯಶಸ್ವಿಯಾಗಿದ್ದೆವೆ ಎಂದು ಕಾಂಗ್ರೆಸ್ ಅಂದುಕೊಳ್ಳುತ್ತಿದ್ದರೆ ಅವರನ್ನು ಹೇಗೆ ಮಗುಚಿ ಹಾಕಬೇಕು ಎಂದು ರಾಜ್ಯ ಸರಕಾರ ಮಾಡುತ್ತಿರುವ ಚಿಂತನೆ ಕುತೂಹಲಕಾರಿಯಾಗಿದೆ. ಸರಿಯಾಗಿ ನೋಡಿದರೆ ಮೇಕೆದಾಟುವಿನಿಂದ ಕಾಂಗ್ರೆಸ್ಸಿಗೆ ಏನೂ ಆಗಬೇಕಿಲ್ಲ. ನೀವು ತುಂಬಾ ಒತ್ತಡ ಹಾಕಲು ಹೋಗಬೇಡಿ ಎಂದು ಸ್ಟಾಲಿನ್ ಹೇಳಿದ್ದಕ್ಕೆ ಇದು ಕೇವಲ ರಾಜಕೀಯ ಮೈಲೇಜ್ ತೆಗೆದುಕೊಳ್ಳುವ ಪ್ರಯತ್ನ ವಿನ: ಬೇರೆ ಏನೂ ಇಲ್ಲ ಎಂದು ಬೇಕಾದರೆ ಡಿಕೆಶಿ ಹೇಳಿಬಿಟ್ಟಾರು. ಅವರಿಗೆ ಈಗ ಹೇಗಾದರೂ ಮಾಡಿ ಈ ಪಾದಯಾತ್ರೆಯ ಮೂಲಕ ತಾವು ಮಿಂಚಬೇಕು ಎನ್ನುವ ದೂರದೃಷ್ಟಿ ಇದೆ. ಆದರೆ ಸಿದ್ದುವಿಗೆ ಹತ್ತು ವರ್ಷದ ಹಿಂದೆ ಇದ್ದ ಆರೋಗ್ಯ ಈಗ ಇಲ್ಲ ಎನ್ನುವುದು ಮೊದಲ ದಿನವೇ ಸಾಬೀತಾಗಿದೆ. ಇನ್ನು ಈಗ ಕೊರೊನಾ ಅವಧಿ. ಅಷ್ಟು ಜನರನ್ನು ತೆಗೆದುಕೊಂಡು ನಡೆಯುವಾಗಲೇ ಯಾವ ಮನುಷ್ಯ ಬಂದು ಕೋವಿಡ್ ಅಂಟಿಸಿ ಹೋದ ಎಂದು ಹೇಳಲು ಸಾಧ್ಯವಿಲ್ಲ. ಅದಕ್ಕೆ ಸರಿಯಾಗಿ ಡಿಕೆಶಿಗೆ ಕೊರೊನಾ ಟೆಸ್ಟ್ ಮಾಡಿಸಲು ಬಂದ ಬೆಂಗಳೂರು ಹೆಚ್ಚುವರಿ ಜಿಲ್ಲಾಧಿಕಾರಿಯವರಿಗೆ ಹಿನ್ನಡೆಯಾಗಿದೆ. ಡಿಕೆಶಿ ತಮಗೆ ಟೆಸ್ಟ್ ಮಾಡಿಸಲು ಒಪ್ಪಲೇ ಇಲ್ಲ. ಅವರಿಗೆ ಎರಡು ರೀತಿಯ ಹೆದರಿಕೆ ಇದೆ. ಒಂದನೇಯದಾಗಿ ತಮ್ಮ ಸ್ಯಾಂಪಲ್ ಪಾಸಿಟಿವ್ ಎಂದು ದೃಢವಾದರೆ ಈ ಪಾದಯಾತ್ರೆ ಅಲ್ಲಿಗೆ ಮುಗಿಯಬಹುದು ಅಥವಾ ಬೇರೆ ಯಾರಾದರೂ ಇದರ ಶ್ರೇಯಸ್ಸನ್ನು ಹೈಜಾಕ್ ಮಾಡಬಹುದು. ಆಗ ತಮ್ಮ ಸಿಎಂ ಆಗುವ ಗುರಿಗೆ ತಾವೇ ಕಲ್ಲು ಎತ್ತಿ ಕಾಲಿನ ಮೇಲೆ ಹಾಕಿದಂತೆ ಆಗುತ್ತದೆ. ಇನ್ನು ಪಾಸಿಟಿವ್ ಇಲ್ಲ ಎಂದು ರಿಸಲ್ಟ್ ಬಂದರೂ ಅದನ್ನು ಪಾಸಿಟಿವ್ ಎಂದು ಮಾಡಿಸಿ ಎಂದು ಸಿದ್ದುವೇ ಸರಕಾರಕ್ಕೆ ಹೇಳಿಸಿ ಮಾಡಿಸಿಬಿಟ್ಟಾರು. ಇಲ್ಲಿ ಯಾರೂ ಯಾರನ್ನು ನಂಬುವ ಸ್ಥಿತಿಯಲ್ಲಿಲ್ಲ. ಯಾವಾಗ ಹೈಕಮಾಂಡ್ ದುರ್ಬಲವಾಗಿ ಯಾರು ಅಧಿಕಾರಕ್ಕೆ ತರುತ್ತಾರೋ ಅವರೇ ಮುಂದಿನ ಸಿಎಂ ಎಂದು ಕಿವಿಯಲ್ಲಿ ಹೇಳಿಬಿಟ್ಟರೆ ಆಗ ಹೀಗೆ ಸ್ಪರ್ದೇಗೆ ಬಿದ್ದಂತೆ ಇಬ್ಬರು ಹೋರಾಟಕ್ಕೆ ನಿಂತುಬಿಡುತ್ತಾರೆ. ಇನ್ನು ಡಿಕೆ ಸ್ಯಾಂಪಲ್ ತೆಗೆಯಲು ಹೋದ ಎಡಿಸಿಗೆ ಕೊರೊನಾ ತಗುಲಿದೆ ಎಂದಾದರೆ ಅಲ್ಲಿ ಎಷ್ಟು ತೀಕ್ಣವಾಗಿ ಈ ವೈರಸ್ ಹರಡುತ್ತಿದೆ ಎನ್ನುವುದು ಸ್ಪಷ್ಟವಾಗುತ್ತಿದೆ. ಸರಕಾರ ಮನಸ್ಸು ಮಾಡಿದ್ದರೆ ಈ ಪಾದಯಾತ್ರೆಯನ್ನು ತಡೆಯಬಹುದಿತ್ತು. ಪೊಲೀಸ್ ಬಲ ಪ್ರಯೋಗಿಸಿ ನಿಲ್ಲಿಸಬಹುದಿತ್ತು. ಆದರೆ ಸರಕಾರದ ಒಳಗೆ ಕುಳಿತಿರುವವರಿಗೆ ಒಂದು ವಿಷಯ ಚೆನ್ನಾಗಿ ಗೊತ್ತಿದೆ. ಅದೇನೆಂದರೆ ಕೊರೊನಾ ಮೂರನೇ ಅಲೆ ಬಂದಾಗಿದೆ. ಅದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. ಅದನ್ನು ಯಾವುದಾದರೂ ಭಕ್ರಾದ ತಲೆಗೆ ಕಟ್ಟದಿದ್ದರೆ ಸರಕಾರ ಕೊರೊನಾ ತಡೆಯಲು ವಿಫಲ ಎಂದು ಹಣೆಪಟ್ಟಿ ಕಟ್ಟಿ ಸರಕಾರಕ್ಕೆ ಕೆಟ್ಟ ಹೆಸರು ತರುತ್ತಾರೆ. ಇದರ ಬದಲು ಕಾಂಗ್ರೆಸ್ಸಿನ ಪಾದಯಾತ್ರೆಯಿಂದ ಈ ಪ್ರಮಾಣದಲ್ಲಿ ಕೊರೊನಾ ಹೆಚ್ಚಾಗಿದೆ ಎಂದು ಹೇಳಿದರೆ ಮುಗಿಯಿತಲ್ಲ. ಒಟ್ಟಿನಲ್ಲಿ ಬಾವಿ ಕಟ್ಟೆಯ ಮೇಲೆ ಕುಳಿತು ಬಸು ಬೊಮ್ಮಾಯಿ ಒಂಭತ್ತು ಒಂಭತ್ತು ಎಂದು ಹೇಳುತ್ತಿದ್ದಂತೆ ಡಿಕೆಶಿ ಓಡಿ ಬಂದು ಹಾರಿಬಿಟ್ಟಿದ್ದಾರೆ. ಅಲ್ಲಿಗೆ ಬಸು ಒಂದೇ ಕಲ್ಲಿಗೆ ಸುಮಾರು ಹಕ್ಕಿಗಳನ್ನು ಹೊಡೆದು ತಾವೀಗ ಕ್ವಾರಂಟೈನ್ ನಲ್ಲಿದ್ದಾರೆ!!
Leave A Reply