ಕೊರೊನಾ ಇಲ್ಲ ಎಂದು ಬದುಕುತ್ತಿರುವ ಸ್ಪೇನ್ ನಮಗೆ ಮಾದರಿಯಾಗಲಿ!!
ಯುರೋಪಿನ ಪ್ರಮುಖ ರಾಜ್ಯವಾಗಿರುವ ಸ್ಪೇನ್ ನಲ್ಲಿ ಇನ್ನು ಮುಂದೆ ಕೊರೊನಾವನ್ನು ಸಾಮಾನ್ಯ ಜ್ವರ ಎಂದು ಪರಿಗಣಿಸಬೇಕು ಎಂದು ಅಲ್ಲಿನ ಆಡಳಿತ ವ್ಯವಸ್ಥೆ ತೀರ್ಮಾನ ಮಾಡಿದೆ. ಯಾಕೆಂದರೆ ಇನ್ನು ಹೆದರಿ ಕುಳಿತುಕೊಂಡರೆ ಆಗುವಂತದ್ದು ಏನೂ ಇಲ್ಲ. ಅದರ ಬದಲಿಗೆ ನೇರವಾಗಿ ಒಂದು ಸಾಮಾನ್ಯ ಜ್ವರ ಬರುವಾಗ ಯಾವ ರೀತಿಯಲ್ಲಿ ಸ್ಪಂದಿಸಬೇಕೋ ಅದೇ ರೀತಿಯಲ್ಲಿ ಪ್ರತಿಕ್ರಿಯಿಸಬೇಕು ಎಂದು ಅಲ್ಲಿನ ಸರಕಾರ ಜನರಿಗೆ ಹೇಳಿದೆ. ಯುರೋಪಿಯನ್ ಭೂಪ್ರಾಂತ್ಯದಲ್ಲಿ ಇಂತದೊಂದು ತೀರ್ಮಾನ ತೆಗೆದುಕೊಂಡ ದೊಡ್ಡ ಪ್ರದೇಶವಾಗಿ ಸ್ಪೇನ್ ಮಾದರಿಯಾಗಿದೆ. ಅವರು ತೆಗೆದುಕೊಂಡ ನಿರ್ಧಾರ ಸಮಂಜಸವಾಗಿದೆ ಎಂದು ಅಂದುಕೊಂಡು ಜಗತ್ತಿನ ಉಳಿದ ರಾಷ್ಟ್ರಗಳು ಅದನ್ನು ಅನುಸರಿಸಿದರೆ ಅದಕ್ಕಿಂತ ಉತ್ತಮವಾದದ್ದು ಬೇರೆ ಯಾವುದೂ ಇಲ್ಲ. ಯಾಕೆಂದರೆ ಲಾಕ್ ಡೌನ್ ಗಳನ್ನು ಮಾಡಿ ಇನ್ನು ಹೆದರಿ ಕುಳಿತುಕೊಂಡರೆ ದೇಶದ ಆರ್ಥಿಕ ವ್ಯವಸ್ಥೆಯೂ ಕುಸಿಯುತ್ತದೆ, ಜನರು ಕೂಡ ಆತಂಕದಿಂದಲೇ ರೋಗನಿರೋಧಕ ಶಕ್ತಿಯನ್ನು ಕಳೆದುಕೊಂಡುಬಿಡುತ್ತಾರೆ. ಆರು ತಿಂಗಳಿಗೊಮ್ಮೆ ಬೂಸ್ಟರ್ ಡೋಸ್ ಗಳನ್ನು ಕೊಡುವುದೇ ಸರಕಾರದ ಕಾಯಕವಾಗುತ್ತದೆ. ಇದರಿಂದ ಆರ್ಥಿಕ ಹೊರೆಯೂ ಜಾಸ್ತಿಯಾಗುತ್ತದೆ ಎಂದು ಅಲ್ಲಿನ ಸರಕಾರಕ್ಕೆ ಗೊತ್ತಾಗಿದೆ. ಆದ್ದರಿಂದ ಇನ್ನು ನಾವು ಕೊರೊನಾದೊಂದಿಗೆ ಬಾಳಲು ಕಲಿಯಬೇಕು. ಹಾಗೆಂದು ನಿತ್ಯ ಕೊರೊನಾ ಇಷ್ಟಾಯಿತು, ಅಷ್ಟಾಯಿತು ಎಂದು ಟಿವಿ ನೋಡಿ ಹೆದರಿ ಕುಳಿತುಕೊಂಡರೆ ನಮ್ಮ ದೇಹದ ಒಳಗೆ ನಕರಾತ್ಮಕ ಶಕ್ತಿಯೇ ಸಂಚಯನಗೊಂಡು ಸಮಸ್ಯೆ ಹೆಚ್ಚಾಗುತ್ತದೆಯೇ ವಿನ: ಆಗುವಂತಹ ಪ್ರಯೋಜನ ಬೇರೆ ಏನೂ ಇಲ್ಲ. ಕೊರೊನಾ ಟೆಸ್ಟಿಂಗ್ ಜಾಸ್ತಿ ಮಾಡಿದರೆ ಸಹಜವಾಗಿ ಸಂಖ್ಯೆ ಜಾಸ್ತಿ ಕಾಣಿಸುತ್ತದೆ. ಅದರಲ್ಲಿಯೂ ಭಾರತದಲ್ಲಿ ಕಳೆದ ವಾರದಿಂದ ಶುಷ್ಕ ವಾತಾವರಣವೂ ಅಲ್ಲದ, ಪೂರ್ಣ ಶೀತವಾತಾವರಣವೂ ಅಲ್ಲದ ಒಂದು ವಿಭಿನ್ನ ವಾತಾವರಣ ನಮ್ಮ ಸುತ್ತಮುತ್ತಲೂ ಕಾಣಿಸುತ್ತಿದೆ. ಬಹುತೇಕರಲ್ಲಿ ಶೀತ, ಕೆಮ್ಮು, ಜ್ವರ ಈ ವಾರ, ಹತ್ತು ದಿನಗಳಲ್ಲಿ ಸಾಮಾನ್ಯದಂತೆ ಕೇಳಿಬರುತ್ತಿದೆ. ಈಗ ಅಂತವರು ಕೊರೊನಾ ಟೆಸ್ಟ್ ಮಾಡಿಸಿದ್ದಲ್ಲಿ ಹತ್ತರಲ್ಲಿ ಒಂಭತ್ತು ಜನರಿಗೆ ಕೊರೊನಾ ಇರಬಹುದು ಎಂದು ಅನಿಸುತ್ತದೆ. ಯಾವಾಗ ಇಂತಹ ಪರಿಸ್ಥಿತಿ ಹೆಚ್ಚಾಗುತ್ತಾ ಹೋಗುತ್ತದೆಯೋ ಆಗ ಕೊರೊನಾ ಸೋಂಕಿತರು ಎಂದು ಅನಿಸಿಕೊಂಡವರ ಸಂಖ್ಯೆಯೂ ಜಾಸ್ತಿಯಾಗುತ್ತಾ ಹೋಗುತ್ತದೆ. ಯಾವಾಗ ಸೊಂಕಿತರ ಸಂಖ್ಯೆ ಜಾಸ್ತಿಯಾಗುತ್ತದೆಯೋ ಆಗ ಸರಕಾರ ವಿಕೇಂಡ್ ಕಫ್ಯರ್ೂ ಅದು ಇದು ಮುಂದುವರೆಸಿಕೊಂಡು ಹೋಗುತ್ತಾ ಇರುತ್ತದೆ. ನಂತರ ರಾತ್ರಿ ಕಫ್ಯರ್ೂವಿನಿಂದ ಕೊರೊನಾ ಕಡಿಮೆಯಾಗಲ್ಲ ಎಂದು ಕೆಲವು ಬುದ್ಧಿಜೀವಿಗಳು ಹೇಳಿಕೆ ಕೊಡಲು ಶುರು ಮಾಡುತ್ತಿದ್ದಂತೆ ತಜ್ಞರು ಎಂದು ಅನಿಸಿಕೊಂಡವರು ವಿಧಾನಸೌಧಕ್ಕೆ ಧಾವಿಸಿ ಸರಕಾರಕ್ಕೆ ಸಲಹೆ ಕೊಡಲು ಬರುತ್ತಾರೆ. ಆ ಸಲಹೆಯಂತೆ ಸರಕಾರ ಲಾಕ್ ಡೌನ್ ಹಾಕಿದ್ರಾ ಮುಗಿಯಿತು. ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ವ್ಯಾಪಾರಿಗಳು ಮಾತ್ರ ಮೇಲೆ ಬೀಳುತ್ತಾರೆ. ಉಳಿದ ಬಟ್ಟೆ, ಫೂಟ್ ವೇರ್, ಫ್ಯಾನ್ಸಿ ಸಹಿತ ಟೈಲರ್ಸ್, ಬ್ಯೂಟಿ ಪಾರ್ಲರ್ ಗಳನ್ನು ಸೇರಿಸಿಕೊಂಡು ಹಲವು ಉದ್ಯಮಗಳು ಮಕಾಡೆ ಮಲಗುತ್ತವೆ. ನಾಲ್ಕು ಜನರು ಕೆಲಸ ಮಾಡುತ್ತಿದ್ದ ಕಡೆ ಮಾಲೀಕರು ಒಬ್ಬಿಬ್ಬರ ಕೆಲಸ ಕಸಿದುಬಿಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಬದುಕು ಅಟ್ಟ ಸೇರುತ್ತದೆ. ಯಾವಾಗ ಇದು ಮುಂದುವರೆಯುತ್ತದೆಯೋ ಸಾಲಗೀಲ ಮಾಡಿಕೊಂಡು ಮನೆ, ಕಾರು ಮಾಡಿಕೊಂಡವರು ಅದನ್ನು ಮಾರಲು ಆಗದೇ, ಸಂಭಾಳಿಸಲು ಆಗದೇ ಒದ್ದಾಡಿಬಿಡುತ್ತಾರೆ. ಮಾರಲು ಸ್ವಾಭಿಮಾನ, ಇಟ್ಟುಕೊಂಡರೆ ಸಾಲ ಕಟ್ಟುವ ಆಹ್ವಾನ. ಇದರಿಂದ ನೊಂದವರು ಆತ್ಮಹತ್ಯೆ ಮಾಡಿಕೊಂಡದ್ದು ಇದೆ. ಅದರ ಬದಲು ಹೇಗೂ ಕೊರೊನಾದಿಂದ ಸಾಯಲು ಬಯಸದವರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡುತ್ತಾ ನಿಮ್ಮಷ್ಟಕ್ಕೆ ನೀವು ವ್ಯಾಪಾರ, ವಹಿವಾಟು ಮಾಡುತ್ತಾ ಇರಿ. ಹೇಗೂ ನಾವು ಗ್ರಾಮ ಮಟ್ಟದಲ್ಲಿ ಅಲ್ಲಲ್ಲಿ ಚಿಕಿತ್ಸಾ ಕೇಂದ್ರಗಳನ್ನು ಮಾಡಿದ್ದೇವೆ. ಅಲ್ಲಿ ಬೇಕಾದರೆ ಚಿಕಿತ್ಸೆ ಪಡೆಯಬಹುದು. ಇನ್ನು ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಎಂದು ದಾಖಲಾದರೆ ಅದರ ಬಿಲ್ ಜನರೇ ಭರಿಸಬೇಕು. ಸರಕಾರಿ ಆಸ್ಪತ್ರೆಯಲ್ಲಿ ದಾಖಲಾದರೆ ನಾವು ನೋಡಿಕೊಳ್ಳುತ್ತೇವೆ ಎಂದು ಸರಕಾರ ಹೇಳಿದರೆ ಮುಗಿಯಿತು. ಆಗ ಖಾಸಗಿ ಆಸ್ಪತ್ರೆಗಳು ಕೂಡ ಯೋಚಿಸುತ್ತವೆ. ಇನ್ನು ಹೇಗೂ ಈ ದೇಶದಲ್ಲಿ ಕೊರೊನಾದಿಂದಲೇ ಸಾಯುವವರ ಸಂಖ್ಯೆ ಈಗ ಕಡಿಮೆಯಾಗಿದ್ದು, ಕೊರೊನಾ ಸೊಂಕಿತರ ಸಂಖ್ಯೆ ಜಾಸ್ತಿಯಾಗುತ್ತಿದೆ. ಇದಕ್ಕೆ ಜನರೇ ಅನೇಕ ಸಂದರ್ಭದಲ್ಲಿ ನೇರ ಕಾರಣ. ನಮ್ಮ ನಾಯಕರನ್ನು ಮೆಚ್ಚಿಸಲು ಪಾದಯಾತ್ರೆಯಲ್ಲಿ ಸಾವಿರ ಸಂಖ್ಯೆಯಲ್ಲಿ ತೆರಳಿ ಅಲ್ಲಿ ಕೊರೊನಾ ಅಂಟಿಸಿಕೊಂಡು ಬಂದು ಅದರ ಸಂಖ್ಯೆ ಜಾಸ್ತಿಯಾದರೆ ಸರಕಾರ ತಾನೆ ಏನು ಮಾಡಬಹುದು. ಅದೇ ನಾಯಕರಿಗಾದರೆ ಯಾವುದೇ ಪಕ್ಷದವರೇ ಇರಲಿ ತಲೆ ಸರಿ ಇಲ್ಲ, ಅವರ ರಾಜಕೀಯವೇ ಅವರಿಗೆ ಮುಖ್ಯ ಎಂದು ಅಂದುಕೊಳ್ಳಬಹುದು. ಆದರೆ ತಮಗೆ ಹೆಚ್ಚು ಕಡಿಮೆ ಆದರೆ ಯಾರಿದ್ದಾರೆ ಎಂದು ಜನರಾದರೂ ಯೋಚಿಸಬಾರದೇ? ಆದ್ದರಿಂದ ಉತ್ತಮ ಎಂದರೆ ಕೊರೊನಾ, ಒಮಿಕ್ರಾನ್, ಡೆಲ್ಟಾ, ಡಾಮಿಕ್ರಾನ್ ಇನ್ನು ಇಲ್ಲ. ಅದು ಹೋಗಿದೆ. ಈಗ ಸಾಮಾನ್ಯ ಜ್ವರ, ತಲೆನೋವು ಬಂದರೆ ಏನೂ ಅಗತ್ಯ ಕ್ರಮ ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಳ್ಳೋಣ. ಆರಾಮವಾಗಿ ಇರೋಣ. ಉಳಿದದ್ದು ದೇವರಿಗೆ ಬಿಡೋಣ ಎಂದು ಅಂದುಕೊಳ್ಳೋಣ. ಏನಂತೀರಾ!
Leave A Reply