ಸಿದ್ದು ಹಿಜಾಬಿಗೆ ಕೈ ಹಾಕಬಾರದಿತ್ತು!

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮನ್ನು ತಾವು ವಕೀಲರು ಎಂದು ಹೇಳಿಕೊಳ್ಳುತ್ತಾರೆ. ಹಾಗಿದ್ದ ಮೇಲೆ ಯಾರಾದರೂ ಅವರ ಮುಖಕ್ಕೆ ಹೈಕೋರ್ಟ್ಗಳು ಮತ್ತು ಸುಪ್ರೀಂಕೋರ್ಟ್ ಹಿಜಾಬ್ ವಿಷಯದಲ್ಲಿ ಕೊಟ್ಟಿರುವ ತೀರ್ಪುಗಳನ್ನು ಯಾಕೆ ಹಿಡಿಯಬಾರದು. ಕೇರಳ ಉಚ್ಚ ನ್ಯಾಯಾಲಯ, ಮುಂಬೈ ಉಚ್ಚ ನ್ಯಾಯಾಲಯ ಅಷ್ಟೇ ಯಾಕೆ ದೇಶದ ಸರ್ವೋಚ್ಚ ನ್ಯಾಯಾಲಯ ಕೂಡ ಹಿಜಾಬ್ ವಿಷಯದಲ್ಲಿ ವಿದ್ಯಾರ್ಥಿನಿಯರ ಪರವಾಗಿ ತೀರ್ಪು ಕೊಟ್ಟಿಲ್ಲ. ಎಲ್ಲಾ ಆದೇಶಗಳು ಶಿಕ್ಷಣ ಸಂಸ್ಥೆಗಳ ಪರವಾಗಿಯೇ ಇದೆ. ಅಷ್ಟಿದ್ದ ಮೇಲೆಯೂ ಸಿದ್ದು ಸಾಹೇಬ್ರು ರಾಜ್ಯ ಸರಕಾರ ಮುಸ್ಲಿಂ ಹೆಣ್ಣುಮಕ್ಕಳ ಶಿಕ್ಷಣದ ಹಕ್ಕನ್ನು ಮೊಟಕುಗೊಳಿಸುತ್ತಿದೆ ಎಂದು ಹೇಳುತ್ತಾರೆ ಎಂದರೆ ಒಬ್ಬ ಸಿದ್ದು ಸಾಕು, ಈ ಬಾರಿ ಕಾಂಗ್ರೆಸ್ಸನ್ನು ಕಾವೇರಿಯಲ್ಲಿ ಮುಳುಗಿಸಲು.
ಇಂತಹ ವಿಷಯ ಬಂದಾಗ ಕಾಂಗ್ರೆಸ್ಸಿಗೆ ಅದರಲ್ಲಿಯೂ ಮುಖ್ಯವಾಗಿ ಸಿದ್ದು ಅಂತವರಿಗೆ ಮುಳುಗುತ್ತಿರುವ ಕಾಂಗ್ರೆಸ್ ಹಡಗನ್ನು ದಡ ಸೇರಿಸಲು ಉತ್ತಮ ಅವಕಾಶ ಇತ್ತು. ಅಷ್ಟಕ್ಕೂ ಕಳೆದ ಬಾರಿ ಕಾಂಗ್ರೆಸ್ ಸೋತದ್ದೇ ಅಲ್ಪಸಂಖ್ಯಾತರನ್ನು ವಾಕರಿಕೆ ಬರುವಷ್ಟು ಒಲೈಸಿದ್ದಕ್ಕಾಗಿ. ಅಲ್ಲಿ ಸಿದ್ದು ಅಲ್ಪಸಂಖ್ಯಾತರೇ ತಮ್ಮ ಮನೆದೇವ್ರು ಎಂದು ಉಟ್ಟಬಟ್ಟೆಯಲ್ಲಿಯೇ ಕುಣಿದಾಡುತ್ತಿದ್ದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಕಾಂಗ್ರೆಸ್ ಸಚಿವರು, ಶಾಸಕರು ಅಲ್ಪಸಂಖ್ಯಾತರಿಗೆ ಅಸಹ್ಯ ಅನಿಸುವ ಲೆವೆಲ್ಲಿಗೆ ಓಲೈಕೆ ಮಾಡಲು ನಿಂತಿದ್ದರು. ಎಲ್ಲದಕ್ಕೂ ಒಂದು ಲಿಮಿಟಿದೆ. ರಾಜಕೀಯ ಎಂದ ಮೇಲೆ ಎಲ್ಲರ ಮತ ಎಲ್ಲರಿಗೂ ಬೇಕು. ಮುಸ್ಲಿಮರ ಮತ ಬೇಡಾ ಎಂದು ಬಿಜೆಪಿಯ ಒಂದಿಬ್ಬರು ಹೇಳಿ ದಕ್ಕಿಸಿಕೊಂಡು ಬಿಡಬಹುದು. ಆದರೆ ಮುಸ್ಲಿಮರು ಓಟು ಹಾಕಲ್ಲ ಎಂದು ಗೊತ್ತಿದ್ದರೂ ಭಾರತೀಯ ಜನತಾ ಪಾರ್ಟಿಯಲ್ಲಿ ಅಲ್ಪಸಂಖ್ಯಾತ ಮೋರ್ಚಾ ಇದೆ. ಯಾಕೆಂದರೆ ಉಪ್ಪಿನಕಾಯಿ ನಾವು ತಿನ್ನುತ್ತೇವೋ ಇಲ್ಲವೋ ಎಲೆಯ ಒಂದು ಮೂಲೆಯಲ್ಲಿ ಅರ್ಧ ಚಮಚಾ ಇದ್ದರೆ ಎಲೆಗೆ ಚೆಂದ. ಆದರೆ ಕಾಂಗ್ರೆಸ್ಸಿಗರು ನಾವು ಉಪ್ಪಿನಕಾಯಿಯನ್ನೇ ಒಂದು ಸೌಟು ಹಾಕಿಸಿಕೊಳ್ಳುತ್ತೇವೆ ಎಂದು ಯಾವಾಗ ಹೊರಟರೋ ಅದು ಅವರ ಪರ್ಯಾವಸನದ ಮೊಳೆಯಾಗಿ ಕುತ್ತಿಗೆಯಲ್ಲಿ ಸಿಲುಕಿಕೊಂಡಿತು. ಅದರಿಂದ ಫೈಲ್ಸ್ ಬಂತು. ಕಾಂಗ್ರೆಸ್ ನಾಲ್ಕು ವರ್ಷಗಳ ಬಳಿಕವೂ ಅದರಿಂದ ಹೊರಬರಲಾರದೇ ಒದ್ದಾಡುತ್ತಿದೆ. ಈಗಲಾದರೂ ಅದರಿಂದ ಎದ್ದು ಬಂದು ಶಾಲೆಯಲ್ಲಿ ಎಲ್ಲರೂ ಸಮಾನರಾಗಿ ಕಾಣಬೇಕು, ಹಿಜಾಬ್ ಬೇಡಾ ಎಂದು ಸಿದ್ದು ಹೇಳಿದ್ದರೆ ಮುಗಿಯುತ್ತಿತ್ತು. ಆದರೆ ಹೇಳಿಲ್ಲ. ಸರಣಿಯಲ್ಲಿ ರಾಜ್ಯ ಸರಕಾರವನ್ನು ಟೀಕಿಸುತ್ತಾ ಬರುತ್ತಿದ್ದಾರೆ. ಅಲ್ಲಿಗೆ ಬಿಜೆಪಿಯ ತಟ್ಟೆಗೆ ಕೇಸರಿಬಾತ್ ಬಂದು ಬಿದ್ದಿದೆ. ಹಾಗಾದರೆ ಕಾಂಗ್ರೆಸ್ಸಿಗೆ ನಿಜವಾದ ವಿಲನ್ ಯಾರು? ಸಂಶಯವೇ ಇಲ್ಲ, ಅದು ಸಿದ್ದು. ಮುಂದಿನ ವರ್ಷ ಕರ್ನಾಟಕ ವಿಧಾನಸಭಾ ಚುನಾವಣೆ ಇರುವಾಗ ತಾನು ಯಾವ ಕಾಸ್ಟೂಮ್ ಹಾಕಿ ಬರಬೇಕು ಎಂದು ಜಾತಿ, ಧರ್ಮ, ಮತ ಲೆಕ್ಕಾಚಾರ ಹಾಕಿ ಕೂತಿರುವ ರಾಹುಲ್ ಸಾಹೇಬ್ರಿಗೆ ಈಗ ಸಿದ್ದು ಇಲ್ಲಿ ಮಾಡುತ್ತಿರುವ ಆವಾಂತರ ಗೊತ್ತೆ ಆಗುವುದಿಲ್ಲ. ಸರಿಯಾಗಿ ನೋಡಿದರೆ ಮುಸ್ಲಿಂ ಹೆಣ್ಣುಮಕ್ಕಳನ್ನು ಎದುರಿಗೆ ಇಟ್ಟು ಆಟವಾಡುತ್ತಿರುವ ಎಸ್ ಡಿಪಿಐ, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾಗೆ ಸರಿಯಾದ ಸಮಯಕ್ಕೆ ಸಿದ್ದು ಬಂದು ಕಬಾಬ್ ಮೇ ಹಡ್ಡಿ ಆಗುತ್ತಾರೆ ಎಂದು ಗೊತ್ತಿತ್ತು. ಯಾಕೆಂದರೆ ಮುಸ್ಲಿಮರು ಕಾಂಗ್ರೆಸ್ಸಿನ ಒಂದು ಕಾಲದ ಮತಬ್ಯಾಂಕ್. ನಾಡಿದ್ದು ಲಿಂಗಾಯತರು, ಒಕ್ಕಲಿಗರು ಒಂದಷ್ಟು ಆಚೀಚೆ ಹೋಗಿ ಲೆಕ್ಕಾಚಾರ ಉಲ್ಟಾ ಆದರೂ ಆಗಬಹುದು. ಆದರೆ ಅಹಿಂದದ ನಾಯಕನಾಗಿರುವ ತಮಗೆ ಅದರಲ್ಲಿ “ಅ” ಉಳಿಸಲಾಗದಿದ್ದರೆ ತಮ್ಮ ವರ್ಚಸ್ಸು ಮಣ್ಣುಪಾಲಾಗುತ್ತದೆ ಎಂದು ಅಂದುಕೊಂಡಿರುವ ಸಿದ್ದು ಇದನ್ನು ಡಿಕೆಶಿ ಎನ್ ಕ್ಯಾಶ್ ಮಾಡಿಕೊಳ್ಳುವ ಮೊದಲೇ ತಾವೇ ತಾವಾಗಿ ನೀರಿಲ್ಲದ ಬಾವಿಗೆ ಹಾರಿದ್ದಾರೆ. ಬಾವಿ ದಂಡೆಯ ಮೇಲೆ ಕುಳಿತಿರುವ ಬಿಜೆಪಿ ನಾಯಕರಿಗೆ ಇದು ನಿರೀಕ್ಷಿತ ಕ್ಯಾಚ್. ಈಗ ಏನಾಯ್ತು. ಸರಿಯಾಗಿ ಮತಗಳ ಧ್ರುವಿಕರಣ ಆಯಿತಾ? ಮುಂದಿನ ಚುನಾವಣೆಯ ತನಕ ಇದನ್ನು ಎಸ್ ಡಿಪಿಐ ಎಳೆದುಕೊಂಡು ಹೋದರೆ ಸಂಶಯವೇ ಬೇಡಾ, ಕಾಂಗ್ರೆಸ್ಸು ದಡದ ತನಕ ಬಂದು ಕೈ ಸೋತು ಅಲ್ಲಿಯೇ ಮುಳುಗಿ ಬಿಡಲಿದೆ.
ಒಂದು ಶಿಕ್ಷಣ ಸಂಸ್ಥೆಯಲ್ಲಿ ಯಾವ ವಸ್ತ್ರ ಸಂಹಿತೆ ಇರಬೇಕು ಎನ್ನುವುದನ್ನು ಆಯಾ ಕಾಲೇಜಿನ ಆಡಳಿತ ಮಂಡಳಿ, ಅಭಿವೃದ್ಧಿ ಸಮಿತಿ ನಿರ್ಧರಿಸುತ್ತದೆ. ಅದರಂತೆ ನಡೆದುಕೊಳ್ಳುವುದು ವಿದ್ಯಾರ್ಥಿಗಳ ಕರ್ತವ್ಯ. ಅವರು ತಮಗೆ ಬೇಕಾದ್ದನ್ನು ಧರಿಸಿಯೇ ಬರುತ್ತಾರೆ ಎಂದರೆ ಅಲ್ಲಿ ಎಂಟ್ರಿ ಇಲ್ಲ. ಇದು ಚಿಕ್ಕಮಕ್ಕಳಿಗೂ ಅರ್ಥವಾಗುತ್ತದೆ. ಈ ಸಂದರ್ಭದಲ್ಲಿ ಮಕ್ಕಳು ಮಾಡುತ್ತಿರುವುದೇ ಸರಿ ಎಂದು ವಾದಿಸುವವರು ತಮ್ಮ ಕಾಲ ಮೇಲೆ ತಾವೇ ಇಟ್ಟಿಗೆ ಎತ್ತಿ ಹಾಕಿದಂತೆ. ಯಾಕೆಂದರೆ ಈ ನಾಡಿನ ಸಭ್ಯ ಮುಸ್ಲಿಂ ಪೋಷಕರೇ ಇದನ್ನೆಲ್ಲ ಒಪ್ಪುವುದಿಲ್ಲ. ಅವರಿಗೆ ಇದರ ಹಿಂದೆ ರಾಜಕೀಯ ಇದೆ ಎಂದು ಗೊತ್ತಿದೆ. ತಮ್ಮ ಮಕ್ಕಳಿಗೆ ತಮ್ಮ ಮತದ ಶಿಕ್ಷಣವನ್ನು ಅವರು ಮನೆಯಲ್ಲಿ ನೀಡುತ್ತಾರೆ. ಶಾಲೆಗೆ ಕಳುಹಿಸುವಾಗ ಅಲ್ಲಿ ಹೇಗಿರಬೇಕೋ ಹಾಗೆ ಇರಲು ಒಪ್ಪುತ್ತಾರೆ. ಯಾಕೆಂದರೆ ಆಧುನಿಕ ದಿನಗಳ ಪೋಷಕರಿಗೆ ಮಗಳಿಗೆ ಸಿಗುವ ಶಿಕ್ಷಣ ಮುಖ್ಯ. ಅವಳು ಎಲ್ಲರಂತೆ ಬೆಳೆದು ನಾಲ್ಕು ಜನರಲ್ಲಿ ಎದ್ದು ಕಾಣುವ ಸಾಧನೆ ಮಾಡಬೇಕು ಎಂದು ಬಯಸುತ್ತಾರೆ ವಿನ: ಹಿಜಾಬ್ ಗಾಗಿ ಕಾಲೇಜಿನ ಗೇಟ್ ಬಳಿ ಬೊಬ್ಬೆ ಹೊಡೆಯಲಿ ಎಂದು ಬಯಸಲ್ಲ. ಆದರೆ ಎಸ್ ಡಿಪಿಐಗೆ ಸಿಕ್ಕಿದ ಪ್ಯಾಕೇಜು ದೊಡ್ಡದಿರಬೇಕು. ಅವರು ಅದನ್ನು ನಿಯತ್ತಾಗಿ ಮಾಡುತ್ತಾರೆ. ಸಿದ್ದು ಯಾರೋ ಹೆಣೆದ ಬಲೆಗೆ ಬಿದ್ದಿದ್ದಾರೆ. ಕಾಂಗ್ರೆಸ್ಸಿನ ನಾಯಕರು ಎಲ್ಲಾ ಗೊತ್ತಿದ್ದೇ ಬಾವಿಗೆ ಬೀಳುತ್ತಾರಲ್ಲ ಎನ್ನುವುದೇ ಈಗಿನ ಕುಚೋದ್ಯ!!
Leave A Reply