ಹಿಜಾಬ್ ಹಟದವರದ್ದು ಮುಲ್ಲಾನ ಇಸ್ಲಾಂ, ಅಲ್ಲಾನ ಇಸ್ಲಾಂ ಅಲ್ಲ!!
ಇದು ಕೇವಲ ಹಿಜಾಬ್ ಮತ್ತು ಕೇಸರಿ ಶಾಲಿನ ವಿವಾದ ಆಗಿ ಉಳಿಯುವ ಯಾವುದೇ ಲಕ್ಷಣ ತೋರಿಸುತ್ತಿಲ್ಲ. ಇದು ಪಕ್ಕಾ ಹಿಂದೂ-ಮುಸ್ಲಿಂ ಫೈಟ್ ಆಗಿ ತಿರುಗುವ ಎಲ್ಲಾ ಸಾಧ್ಯತೆಗಳನ್ನು ಸ್ಪಷ್ಟಪಡಿಸುತ್ತಿದೆ. ಶಿವಮೊಗ್ಗದಲ್ಲಿ ಕಲ್ಲು ತೂರಾಟದಂತಹ ಘಟನೆ ಈ ಎಲ್ಲ ವಾಕ್ಸಮರವನ್ನು ಘರ್ಷಣೆಯಾಗಿ ತಿರುಗಿಸಲು ಅಧಿಕೃತ ತುಪ್ಪ ಸುರಿದುಬಿಟ್ಟಿದೆ. ಮಡಿಕೇರಿಯಲ್ಲಿ ಹಿಂದೂ ಯುವಕನಿಗೆ ಚೂರಿ ಇರಿದ ಪ್ರಕರಣ ದಾಖಲಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಇಬ್ಬರು ಯುವಕರನ್ನು ಬಂಧಿಸಲಾಗಿದೆ. ಇಲ್ಲಿ ಕೆಲವು ಸೂಕ್ಷ್ಮಗಳನ್ನು ನಾವು ಗಮನಿಸಬೇಕು. ಹಿಜಾಬ್ ಧರಿಸಿಯೇ ತರಗತಿಯಲ್ಲಿ ಪಾಠ ಕೇಳುತ್ತೇವೆ ಎನ್ನುವ ಒಂದು ವರ್ಗ, ಅವರು ಹಿಜಾಬ್ ಹಾಕಿದರೆ ನಾವು ಕೇಸರಿ ಶಾಲು ಹಾಕಿ ಕೂರುತ್ತೇವೆ ಎಂದು ಹೇಳುವ ಇನ್ನೊಂದು ವರ್ಗ. ಅದರ ನಡುವೆ ಹಿಂದೂಗಳಾಗಿದ್ದು ಅತ್ತ ಹಿಜಾಬ್ ಗೆ ಬಹಿರಂಗವಾಗಿ ಬೆಂಬಲ ಕೊಡಲು ಆಗದೇ, ಇತ್ತ ಕೇಸರಿ ಧರಿಸಲು ಮನಸ್ಸಿಲ್ಲದೇ ಇರುವ ಕಾಂಗ್ರೆಸ್ ಮನಸ್ಥಿತಿಯ ಯುವಕರು ಇದ್ದಾರಲ್ಲ, ಅವರು ಕೇಸರಿ ಧರಿಸಲು ಮುಂದೆ ಬರುತ್ತಿಲ್ಲ. ಯಾಕೆಂದರೆ ಹಿಜಾಬ್ ವರ್ಸಸ್ ಕೇಸರಿ ಎನ್ನುವುದು ಸಾವರ್ತಿಕವಾಗಿರುವ ಸಂಗತಿ ಅಲ್ಲ. ಮತ್ತೊಂದೆಡೆ ಕೆಲವರು ನೀಲಿ ಶಾಲು ಧರಿಸಿ ಕ್ಲಾಸಿನಲ್ಲಿ ಕೂರುತ್ತೇವೆ ಎನ್ನುತ್ತಿದ್ದಾರೆ. ಅದು ಭೀಮವಾದ. ಅವರಿಗೂ ಕೇಸರಿಗೂ ಅಗಿಬರುವುದಿಲ್ಲ. ಇದರ ಇನ್ನೊಂದು ಭಾಗವಾಗಿ ಮಾಜಿ ಸಿಎಂ ಕುಮಾರಸ್ವಾಮಿ ಹಸಿರು ಶಾಲಿನ ಕರೆ ನೀಡಲು ತಯಾರು ಎಂದಿದ್ದಾರೆ. ಹಾಗಾದ್ರೆ ತರಗತಿ ಎನ್ನುವುದು ಫ್ಯಾಶನ್ ಶೋ ರ್ಯಾಂಪ್ ಆಗುತ್ತಾ ಎನ್ನುವುದು ಈಗ ಇರುವ ಪ್ರಶ್ನೆ.
ಹಿಜಾಬ್ ವಿವಾದ ಇಂದು ನಿನ್ನೆಯದ್ದಲ್ಲ. ಹಿಂದೆ ಕೂಡ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಕೋಣೆ ನೀಡಿ ಅಲ್ಲಿ ಅವರು ಅದನ್ನು ತೆಗೆದಿಟ್ಟು ಬರುವ ವ್ಯವಸ್ಥೆ ಇತ್ತು. ಕ್ಲಾಸಿನೊಳಗೆ ಬೇಡಾ ಎಂದು ಅಧ್ಯಾಪಕರು ಹೇಳಿದ್ದಕ್ಕೆ ತಕ್ಷಣ ಒಪ್ಪಿದ ವಿದ್ಯಾರ್ಥಿನಿಯರಿದ್ದರು. ಈಗ ಒಪ್ಪುತ್ತಿಲ್ಲ ಎನ್ನುವುದೇ ಆಗಿರುವ ಬದಲಾವಣೆ. ಹಿಂದೆ ವಿದ್ಯಾರ್ಯಿಗಳ ಕಾಲೇಜು ಚುನಾವಣೆಯ ದಿನ ಒಂದಿಷ್ಟು ಹೊತ್ತು ಮಾತ್ರ ಕ್ಯಾಂಪಸ್ ಬಿಸಿಯಾಗುತ್ತಿತ್ತು. ಆದರೆ ಈಗ ನಿತ್ಯ ಬೆಳಿಗ್ಗೆಯಿಂದ ಮಧ್ಯಾಹ್ನದ ತನಕ ಕಾಲೇಜಿನ ಗೇಟಿನಿಂದ ಹಿಡಿದು ಪ್ರಾಂಶುಪಾಲರ ಕೋಣೆಯ ಒಳಗಿನ ತನಕ ಆತಂಕದ ಛಾಯೆಯೆ ಕಂಡುಬರುತ್ತದೆ. ಯಾವಾಗ ಪರಿಸ್ಥಿತಿ ವಿಕೋಪಕ್ಕೆ ಹೋಗಬಹುದು ಎಂದು ಗೊತ್ತಾಗುವುದಿಲ್ಲವಾದ ಕಾರಣ ಪೊಲೀಸರು ಕೂಡ ತಮ್ಮ ಕೆಲಸ ಬಿಟ್ಟು ಕಾಲೇಜಿನ ಗೇಟುಗಳನ್ನು ಕಾಯುವ ಪರಿಸ್ಥಿತಿ ಬಂದಿದೆ. ಇದನ್ನೆಲ್ಲ ತಪ್ಪಿಸಲು ರಾಜ್ಯ ಸರಕಾರ ಮೂರು ದಿನಗಳ ತನಕ ಪ್ರೌಢಶಾಲೆ ಹಾಗೂ ಕಾಲೇಜುಗಳಿಗೆ ರಜೆ ಘೋಷಿಸಿದೆ. ಬುಧವಾರ ನ್ಯಾಯಾಲಯ ಈ ವಿಷಯದಲ್ಲಿ ಐತಿಹಾಸಿಕ ನಿರ್ಣಯ ನೀಡಿದ ನಂತರ ಸಂಘರ್ಷ ಮುಂದುವರೆಯುವ ಸಾಧ್ಯತೆ ಕೂಡ ನಿಶ್ಚಿತ. ಈ ವಿವಾದ ಏನೇ ಇರಲಿ, ಈ ನಡುವೆ ಸಿದ್ಧರಾಮಯ್ಯ ಬಿಟ್ಟು ಕಾಂಗ್ರೆಸ್ ಈ ವಿಷಯದಲ್ಲಿ ನೇರವಾಗಿ ಆಡಲು ಹಿಂಜರಿಯುತ್ತಿದೆ. ಯುವ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ಎನಿಸಿಕೊಂಡ ಒಬ್ಬಾಕೆ ಧರ್ಮಕ್ಕಿಂತ ದೇಶ ಮುಖ್ಯ ಎಂದು ಹೇಳುವ ಮೂಲಕ ಸಿದ್ದುವಿಗೆ ನೇರ ಟಾಂಗ್ ನೀಡಿದ್ದಾರೆ. ಬಹುಶ: ಕಾಂಗ್ರೆಸ್ ಈ ವಿಷಯದಲ್ಲಿ ಆಯಾ ನಾಯಕರು ತಮಗೆ ಬೇಕಾದ ಹೇಳಿಕೆ ನೀಡಲು ಬಿಟ್ಟಂತೆ ಕಾಣುತ್ತಿದೆ. ಕರಾವಳಿಯ ಕಾಂಗ್ರೆಸ್ಸಿನ ಏಕೈಕ ಶಾಸಕ ಯುಟಿ ಖಾದರ್ ಮಾತ್ರ ಹಿಜಾಬ್ ಪರ ಬ್ಯಾಟಿಂಗ್ ಬೀಸಿದರೆ ಉಳಿದ ಮಾಜಿಗಳು ಮೌನಕ್ಕೆ ಶರಣಾಗಿದ್ದಾರೆ. ಏನೇ ಚಿಕ್ಕ ವಿಷಯ ಇದ್ದಾಗಲೂ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ಮಾಡಲು ಓಡೋಡಿ ಬರುತ್ತಿದ್ದ ಕಾಂಗ್ರೆಸ್ಸಿಗರು ಈ ವಿಷಯದಲ್ಲಿ ರಕ್ಷಣಾತ್ಮಕ ಆಟ ಆಡಲು ನಿರ್ಧರಿಸಿದ್ದಾರೆ. ಅವರು ಏನು ಮಾತನಾಡಿದರೂ ಅದು ಅವರಿಗೆ ಉಲ್ಟಾ ಆಗುವ ಲಕ್ಷಣ ಇರುವುದರಿಂದ ಅದರ ಪಾಡಿಗೆ ಅದು ತಣ್ಣಗಾಗಲಿ ಎಂದು ಕಾಯುತ್ತಿದ್ದಾರೆ.
ಅಷ್ಟಕ್ಕೂ ಇಸ್ಲಾಂ ಮತವನ್ನು ಅನುಸರಿಸುವ ಎಲ್ಲರೂ ಹಿಜಾಬ್ ಧರಿಸಿಯೇ ಇರುತ್ತಾರಾ ಎನ್ನುವ ಪ್ರಶ್ನೆ ಯಾರಾದರೂ ಕೇಳಿದರೆ ಖಂಡಿತವಾಗಿಯೂ ಇಲ್ಲ. ನೀವು ಸಾಮಾಜಿಕ ಜಾಲತಾಣಗಳಲ್ಲಿ ಬಿಕಿನಿ ತೊಟ್ಟು ಬೀಚ್ ಗಳಲ್ಲಿ ಫೋಟೋ ತೆಗೆಸುತ್ತಿರುವ ಕೆಲವು ತಾರೆಯರ ಪುತ್ರಿಯರನ್ನು ನೋಡಿರಬಹುದು. ಅಮೀರ್ ಖಾನ್, ಶಾರುಖ್ ಖಾನ್, ಸೈಫ್ ಅಲಿ ಖಾನ್ ಅವರ ಹೆಣ್ಣುಮಕ್ಕಳು ಜನಸಾಮಾನ್ಯರು ನೋಡಲು ಮುಜುಗರ ಪಡುವಂತಹ ಫೋಟೋಗಳಲ್ಲಿ ಕಾಣಸಿಗುತ್ತಾರೆ. ಅವರೆ ಯಾಕೆ, ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ನೇರ ವಂಶಸ್ತರಾದ, 41 ನೇ ತಲೆಮಾರಿನವರಾದ ಜೋರ್ಡಾನ್ ರಾಜ ಎರಡನೇ ಅಬ್ದುಲ್ಲಾ ಬಿನ್ ಅಲ್ ಹುಸೈನಿಯವರ ಕುಟುಂಬದಲ್ಲಿ ಏಕಪತ್ನಿಯ ಸಂಪ್ರದಾಯ ಇದೆ. ಅವರು ಗಡ್ಡ ಬಿಟ್ಟಿಲ್ಲ, ಟೋಪಿ ಧರಿಸುತ್ತಿಲ್ಲ, ಹೆಣ್ಣುಮಕ್ಕಳು ಬುರ್ಖಾ, ಹಿಜಾಬ್ ಧರಿಸುತ್ತಿಲ್ಲ. ಆದ್ದರಿಂದ ಎಲ್ಲರೂ ಹೇಳುವಂತೆ ಇಸ್ಲಾಂನಲ್ಲಿ ಅಲ್ಲನ ಇಸ್ಲಾಂ ಮತ್ತು ಮುಲ್ಲನ ಇಸ್ಲಾಂ ಇದೆ ಎನ್ನುವುದು ಸ್ಪಷ್ಟವಾಗುತ್ತಿದೆ. ಅಲ್ಲಾನ ಇಸ್ಲಾಂನಲ್ಲಿ ಎಲ್ಲರೂ ಶಾಂತಿಯಿಂದ ಬದುಕುತ್ತಿದ್ದಾರೆ. ಮುಲ್ಲಾನ ಇಸ್ಲಾಂ ಅನುಸರಿಸುವವರು ಹೆಣ್ಣುಮಕ್ಕಳಿಗೆ ತಲಾಖ್, ಶಿಕ್ಷಣ ವಂಚನೆ, ಮನೆಯೊಳಗೆ ಕೂಡಿ ಹಾಕಿ ಮದುವೆ, ಮಕ್ಕಳು ಎಂದು ಬಂಧಿ ಮಾಡುತ್ತಾ ಸ್ವಾತಂತ್ರ್ಯಹರಣ ಮಾಡುತ್ತಿರುತ್ತಾರೆ. ಈಗ ಹಿಜಾಬ್ ವಿವಾದ ನೈಜ ಇಸ್ಲಾಂ ಪಾಲಿಸಲು ಬಯಸುವವರಿಗೆ ಯೋಚಿಸುವಂತೆ ಮಾಡಿದೆ. ತರಗತಿಯಲ್ಲಿ ಪುರುಷ ಉಪಾಧ್ಯಯರು ಇರುವುದರಿಂದ ಹಿಜಾಬ್ ಹಾಕದೇ ಕುಳಿತುಕೊಳ್ಳಲು ಮುಜುಗರ ಆಗುತ್ತೆ ಎನ್ನುವವರು, ಮನೆಯಲ್ಲಿ ಕೂಡ ತಂದೆ, ಅಣ್ಣನಿಗೆ ಕಾಣಿಸದಂತೆ ಹಿಜಾಬ್ ಧರಿಸುತ್ತೇವೆ ಎನ್ನುವವರು ಯಾವ ಯುಗದತ್ತ ಹೊರಳುತ್ತಿದ್ದಾರೆ ಎಂದು ಅವರೇ ಹೇಳಬೇಕು!!
Leave A Reply