ಕಾಂಗ್ರೆಸ್ಸಿಗೆ ಹಿಜಾಬ್ ಹುತ್ತ ಹೊಡೆದು ಇರುವೆ ಬಿಟ್ಟುಕೊಟ್ಟಂತೆ!!
ಒಂದು ವಿಷಯವನ್ನು ನ್ಯಾಯಾಲಯದ ಕಟಕಟೆಗೆ ತೆಗೆದುಕೊಂಡು ಹೋಗುವ ಮೊದಲೇ ಯೋಚಿಸಬೇಕು. ನಂತರ ಅಲ್ಲಿ ಏನು ಆದೇಶ ಬರುತ್ತದೋ ಅದಕ್ಕೆ ತಯಾರಾಗಿ ಇರಬೇಕು. ಅರ್ಧ ಆಟ ಆಡುವಾಗ ಸೋಲುತ್ತೇವೆ ಎನ್ನುವ ಮುನ್ಸೂಚನೆ ಬಂದರೆ ಆಟವನ್ನು ಅರ್ಧಕ್ಕೆ ನಿಲ್ಲಿಸಿ ತಾನು ಹೋಗುತ್ತೇನೆ ಎಂದು ಹಟ ಹಿಡಿದರೆ ನೀವು ಆಟ ಮುಗಿಯುವ ಮೊದಲೇ ಸೋಲು ಒಪ್ಪಿಕೊಂಡಂತೆ. ಹೆಚ್ಚು ಕಡಿಮೆ ಇಂತಹುದೇ ಪರಿಸ್ಥಿತಿಯನ್ನು ಉಡುಪಿಯ ಹಿಜಾಬ್ ರಾಣಿಯರು ಅನುಭವಿಸುತ್ತಿದ್ದಾರೆ. ಸದ್ಯ ಇಡೀ ರಾಜ್ಯದಲ್ಲಿ ಚರ್ಚೆಯಲ್ಲಿರುವ, ತೀರ್ಪು ಏನು ಬಂದರೆ ಏನಾಗಬಹುದು ಎಂದು ಆತಂಕದಲ್ಲಿರುವ ನಾಗರಿಕರನ್ನು ಈ ಸ್ಥಿತಿಗೆ ತಂದವರೇ ಉಡುಪಿಯ ಹಿಜಾಬ್ ಹಟದವರು. ಅವರು ಹಣ ಖರ್ಚು ಮಾಡಿ ಹೈಕೋರ್ಟಿಗೆ ಹೋಗಿದ್ದಾರೆ ಎಂದು ನಾವು ಯಾರೂ ಒಪ್ಪಲು ಸಾಧ್ಯವಿಲ್ಲ. ಯಾಕೆಂದರೆ ಹೈಕೋರ್ಟಿನಲ್ಲಿ ಕೇಸು ದಾಖಲಿಸುವುದು ಎಂದರೆ ಮನೆಯಿಂದ ಹೊರಟು ಉಡುಪಿಯ ಕಾಲೇಜಿಗೆ ಬಂದಷ್ಟು ಸುಲಭ ಅಲ್ಲ ಎಂದು ಆ ವಿದ್ಯಾರ್ಥಿನಿಯರಿಗೆ ಗೊತ್ತಿದೆ. ಆದ್ದರಿಂದ ಈ ಪ್ರಕರಣದಲ್ಲಿ ತಾವು ಸೋತರೂ, ಗೆದ್ದರೂ ಕಳೆದುಕೊಳ್ಳುವಂತದ್ದು ಏನೂ ಇಲ್ಲ ಎಂದು ಹಿಜಾಬ್ ವಿದ್ಯಾರ್ಥಿನಿಯರಿಗೆ ಗೊತ್ತಿದೆ. ಶಾಸಕ ರಘುಪತಿ ಭಟ್ ಹಾಗೂ ಆ ಕಾಲೇಜಿನ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾಗಿರುವ ಯಶಪಾಲ್ ಸುವರ್ಣ ಅವರಿಗೆ ಮುಖಭಂಗ ಮಾಡಬೇಕು ಎನ್ನುವ ಉದ್ದೇಶದಿಂದ ಈ ಪ್ರಕರಣವನ್ನು ನ್ಯಾಯಾಲಯಕ್ಕೆ ತೆಗೆದುಕೊಂಡು ಹೋದವರು ಮತ್ತು ವಕೀಲರುಗಳನ್ನು ನೇಮಿಸಿ ಅವರಿಗೆ ಲಕ್ಷಾಂತರ ರೂಪಾಯಿ ಫೀಸ್ ನೀಡಿ ತಂತ್ರಕ್ಕೆ ಮುಂದಾದವರಿಗೆ ಈಗ ಒಂದಿಷ್ಟು ಹಿನ್ನಡೆ ಆಗುತ್ತಿರುವಂತೆ ಕಾಣುತ್ತಿದೆ. ಈಗ ಸಡನ್ನಾಗಿ ಈ ಪ್ರಕರಣವನ್ನು ಫೆಬ್ರವರಿ 28 ರ ನಂತರ ವಿಚಾರಣೆ ಮಾಡಬೇಕು ಎಂದು ಹೈಕೋರ್ಟಿಗೆ ಈ ಉಡುಪಿ ಹಿಜಾಬ್ ವಿದ್ಯಾರ್ಥಿನಿಯರು ಮನವಿ ಮಾಡಿದ್ದಾರೆ. ಅಫಿದಾವಿತ್ ಸಲ್ಲಿಸದೇ ನೇರವಾಗಿ ಅರ್ಜಿ ಮೂಲಕ ಮನವಿ ಮಾಡಿದ್ದಕ್ಕಾಗಿ ಅವರ ಮನವಿಯನ್ನು ತಿರಸ್ಕರಿಸಲಾಗಿದೆ. ಆದರೆ ಈ ಪ್ರಕರಣ ವಿಚಾರಣೆ ನಡೆದಷ್ಟು ರಾಷ್ಟ್ರದಲ್ಲಿ ನಡೆಯುತ್ತಿರುವ ಪಂಚರಾಜ್ಯಗಳ ಚುನಾವಣೆಯ ಮೇಲೆ ಪ್ರಭಾವ ಬೀರಬಹುದು ಎನ್ನುವುದು ಈ ಉಡುಪಿ ವಿದ್ಯಾರ್ಥಿನಿಯರ ವಾದ. ಸರಿಯಾಗಿ ತಮ್ಮ ಪುಸ್ತಕದಲ್ಲಿರುವ ಪಠ್ಯಗಳನ್ನು ಮನನ ಮಾಡಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಹೇಗೆ ತೆಗೆದುಕೊಳ್ಳಬಹುದು ಎಂದು ಯೋಚಿಸುವ ವಯಸ್ಸಿನಲ್ಲಿ ಇಡೀ ರಾಷ್ಟ್ರದ ಪಂಚರಾಜ್ಯಗಳ ಬಗ್ಗೆ ಮತ್ತು ಅಲ್ಲಿ ಭಾರತೀಯ ಜನತಾ ಪಾರ್ಟಿಗೆ ಲಾಭ ಆಗುತ್ತೆ ಎಂದು ಯೋಚಿಸುವಷ್ಟು ಈ ವಿದ್ಯಾರ್ಥಿಯರು ಬೆಳೆದಿಲ್ಲ. ಅವರ ಹಿಂದೆ ಇಷ್ಟೆಲ್ಲ ಯೋಚಿಸುವವರು ಯಾರೋ ಇದ್ದಾರೆ ಎನ್ನುವುದು ಇಲ್ಲಿ ಪಕ್ಕಾ. ಅರ್ಜಿಯನ್ನು ತಿರಸ್ಕರಿಸಿರುವುದಕ್ಕೆ ಸ್ಪಷ್ಟನೆ ಕೊಟ್ಟಿರುವ ರಾಜ್ಯ ಉಚ್ಚ ನ್ಯಾಯಾಲಯ, ಈ ಪ್ರಕರಣ ನಡೆಯುತ್ತಿರುವ ಕರ್ನಾಟಕದಲ್ಲಿ ಸದ್ಯ ಯಾವುದೇ ಚುನಾವಣೆ ನಡೆಯುತ್ತಿಲ್ಲ. ಇನ್ನು ಪ್ರಕರಣದ ವಾದಿಗಳು ಮತ್ತು ಪ್ರತಿವಾದಿಗಳು ಇಬ್ಬರೂ ಪಂಚರಾಜ್ಯಗಳ ಚುನಾವಣೆಯಲ್ಲಿ ಮತದಾರರಲ್ಲ. ಆದ್ದರಿಂದ ಫೆಬ್ರವರಿ 28 ರ ನಂತರ ವಿಚಾರಣೆ ನಡೆಸಿ ಎನ್ನುವುದಕ್ಕೆ ಯಾವುದೇ ಆಧಾರ ಇಲ್ಲ ಎಂದು ಹೇಳಿದೆ.
ಈಗ ವಿಷಯ ಇರುವುದು ನಿಜಕ್ಕೂ ಈ ವಿಚಾರಣೆಯಿಂದ ಪಂಚರಾಜ್ಯಗಳ ಚುನಾವಣೆಯ ಮೇಲೆ ಏನಾದರೂ ಪ್ರಭಾವ ಬೀರಬಹುದಾ? ಎನ್ನುವುದನ್ನು ನೋಡೋಣ. ಅದನ್ನು ಹೇಗೆ, ಯಾವ ರೀತಿಯಲ್ಲಿ ಆಯಾ ರಾಜ್ಯಗಳ ಪಕ್ಷಗಳು ಎನ್ ಕ್ಯಾಶ್ ಮಾಡಿ ಬಳಸಿಕೊಳ್ಳುತ್ತವೆ ಎನ್ನುವುದರ ಮೇಲೆ ನಿರ್ಧರಿತವಾಗುತ್ತದೆ. ಮೊದಲನೇಯದಾಗಿ ಪಂಚರಾಜ್ಯಗಳಲ್ಲಿ ಮುಖ್ಯವಾಗಿರುವ ಉತ್ತರ ಪ್ರದೇಶದ ಕಾಂಗ್ರೆಸ್ಸಿನ ಕಾನೂನು ಸಮಿತಿಯಲ್ಲಿ ದೇವದತ್ತ ಕಾಮತ್ ಎನ್ನುವ ವ್ಯಕ್ತಿ ಇದ್ದಾರೆ. ಅವರು ಈ ಪ್ರಕರಣದಲ್ಲಿ ಹಿಜಾಬ್ ಪರ ವಾದ ಮಂಡಿಸುತ್ತಿದ್ದಾರೆ. ಒಂದು ವೇಳೆ ಅವರಿಗೆ ವ್ಯತಿರಿಕ್ತವಾಗಿ ತೀರ್ಪು ಬಂದರೆ ಅದು ಕಾಂಗ್ರೆಸ್ಸಿಗೂ ಪರೋಕ್ಷವಾಗಿರುವ ಹಿನ್ನಡೆ. ಯಾಕೆಂದರೆ ಎಸ್ ಡಿಪಿಐಗಳನ್ನು ಬಳಸಿಕೊಂಡು ಕಾಂಗ್ರೆಸ್ ಆಡಿರುವ ಆಟದಲ್ಲಿ ಒಂದು ವೇಳೆ ಸೋತರೆ ಇದರಿಂದ ಮುಸ್ಲಿಮರ ನೇರವಾದ ಆಕ್ರೋಶ ಈ ಎರಡು ಪಕ್ಷಗಳ ವಿರುದ್ಧ ತಿರುಗುತ್ತದೆ. ನಾವು ಸುಮ್ಮನೆ ನಮ್ಮ ಪಾಡಿಗೆ ಇದ್ದೇವು. ಈಗ ನಮ್ಮನ್ನು ಕೋರ್ಟಿಗೆ ಎಳೆದು ಸುಮ್ಮನೆ ನಮ್ಮ ಭವಿಷ್ಯದ ಜೊತೆಗೆ ಆಟವಾಡಲಾಗಿದೆ ಎಂದು ಆ ವಿದ್ಯಾರ್ಥಿನಿಯರ ಜೊತೆಗೆ ಈ ಒಟ್ಟು ಪ್ರಕರಣದಲ್ಲಿ ಶಿಕ್ಷಣವನ್ನು ಹಲವು ದಿನ ತಪ್ಪಿಸಿಕೊಂಡಿರುವ ವಿದ್ಯಾರ್ಥಿನಿಯರ ಕೋಪವು ಇರುತ್ತದೆ. ಇನ್ನು ಚುನಾವಣೆಯ ವಿಷಯಕ್ಕೆ ಬಂದರೆ ಇದರ ತೀರ್ಪು ಏನೇ ಬರಲಿ ಮುಂದಿನ ವರ್ಷ ಕರ್ನಾಟಕದಲ್ಲಿ ನಡೆಯುವ ಚುನಾವಣೆಯ ಮೇಲೆ ಇದರ ಪ್ರಭಾವ ಇದ್ದೇ ಇರುತ್ತದೆ. ಅದು ಗೊತ್ತಿದ್ದೇ, ಈ ವಿಷಯ ಆದಷ್ಟು ಬೇಗ ಜನಮಾನಸದಿಂದ ಮರೆತು ಹೋಗಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಬಯಸುತ್ತಿದ್ದಾರೆ. ಅದಕ್ಕಾಗಿ ತಮ್ಮ ಪಕ್ಷದಿಂದ ಯಾರೂ ಕೂಡ ಈ ಬಗ್ಗೆ ಮಾತನಾಡಬಾರದು ಎಂದು ಆದೇಶ ಹೊರಡಿಸಿದ್ದಾರೆ. ಆದರೆ ಈ ವಿಷಯದಲ್ಲಿ ತಾವು ಮಾತನಾಡದೇ ಹೋದರೆ ತಮಗೆ ಮತ ಕೊಟ್ಟ ತಮ್ಮದೇ ಸಮುದಾಯದ ಜನರಿಗೆ ಉತ್ತರ ಏನು ಕೊಡುವುದು ಎಂದು ಕಾಂಗ್ರೆಸ್ ಶಾಸಕರು ಏನು ಮಾತನಾಡದೇ ಕೈಕೈ ಹಿಸುಕುತ್ತಿದ್ದಾರೆ. ಗೊಂದಲಕ್ಕೆ ಬಿದ್ದಿರುವ ಕಾಂಗ್ರೆಸ್ಸಿನ ಮುಸ್ಲಿಂ ಶಾಸಕರು ಈ ವಿಷಯವನ್ನು ಮಾತನಾಡಲು ಅವಕಾಶ ಕೊಡಿ ಎಂದು ಸಿದ್ದು, ಡಿಕೆಶಿ ಮೇಲೆ ಒತ್ತಡ ಹಾಕುತ್ತಿದ್ದಾರೆ. ಹಾಗಂತ ಏನು ಮಾತನಾಡದೇ ಅವರು ಸುಮ್ಮನೆ ಕುಳಿತುಕೊಟ್ಟರೆ ಅವರ ಬೆಂಬಲಿಗರೇ ಅವರನ್ನು ಬಿಡುವುದಿಲ್ಲ. ನಿಮ್ಮನ್ನು ಗೆಲ್ಲಿಸಿದ್ದು ನೀವು ಇಂತಹ ವಿಷಯದಲ್ಲಿ ಬಾಯಿಗೆ ಅವಲಕ್ಕಿ ತುಂಬಿ ಕುಳಿತುಕೊಂಡರೆ ನಾವು ಮುಂದಿನ ಬಾರಿ ನಿಮಗೆ ವೋಟ್ ಹಾಕುವುದು ಯಾವ ಕರ್ಮಕ್ಕಾಗಿ ಎಂದು ಕೇಳುತ್ತಾರೆ ಎನ್ನುವುದು ಡಿಕೆಶಿಗೂ ಗೊತ್ತಿದೆ. ಒಟ್ಟಿನಲ್ಲಿ ಈ ವಿಷಯ ಕಾಂಗ್ರೆಸ್ಸಿಗೆ ಹುತ್ತ ಬಡಿದು ಇರುವೆಯನ್ನು ಮೈ ಮೇಲೆ ಬಿಟ್ಟುಕೊಟ್ಟಂತೆ ಆಗಿದೆ. ಬಿಜೆಪಿಗರು ಯುಗಾದಿ ಹಬ್ಬದ ತಯಾರಿಯಲ್ಲಿದ್ದಾರೆ!!
Leave A Reply