ಬಿಜೆಪಿಯವರೇ, ನೀವು ನಿಮ್ಮ ಕಿಸೆಯಿಂದ ಕಾಂಗ್ರೆಸ್ಸಿನವರಿಗೆ ಊಟ ಕೊಡಿ, ನಮ್ಮ ಹಣದಿಂದಲ್ಲ!!
ಕಾಂಗ್ರೆಸ್ಸಿಗರು ವಿಧಾನಸೌಧದಲ್ಲಿ ಮಾಡಿದ ಧರಣಿಯ ಮಹಾಪ್ರಸಂಗಕ್ಕೆ ರಾಜ್ಯ ಸರಕಾರವೇ ಪ್ರಾಯೋಜಿತ್ವ ವಹಿಸಿಕೊಂಡಿದೆ. ಅವರಿಗೆ ರಾತ್ರಿ 15 ನಮೂನೆಯ ತರಹೇವಾರಿ ಮೃಷ್ಟಾನ್ನ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಮಾಂಸಹಾರಿ ಶಾಸಕರಿಗೆ ಕೋಳಿ, ಮೊಟ್ಟೆ ಎಲ್ಲ ವ್ಯವಸ್ಥೆ ಇತ್ತು. ಇವರು ಮಲಗಲು ದಿಂಬು, ಬೆಡ್ ಶೀಟ್ ಎಲ್ಲಾ ವ್ಯವಸ್ಥೆ ಮಾಡಲಾಗಿತ್ತು. ಉಭಯ ಸದನಗಳಲ್ಲಿ ಸುಮಾರು 95 ರಷ್ಟಿರುವ ಕಾಂಗ್ರೆಸ್ಸಿನ ಈ ಶಾಸಕರುಗಳ ರಾತ್ರಿ ಊಟ, ನಿದ್ರೆಗೆ ಯಾವುದೇ ಭಂಗ ಮಾಡದೇ ಅವರ ಧರಣಿ ಯಶಸ್ವಿಯಾಗುವಂತೆ ಮಾಡಿದ್ದು ರಾಜ್ಯ ಭಾರತೀಯ ಜನತಾ ಪಾರ್ಟಿಯ ಸರಕಾರ. ಅಷ್ಟಕ್ಕೂ ವಿಪಕ್ಷದವರು ಪ್ರತಿಭಟನೆ ಮಾಡಿದ್ದು ಯಕಶ್ಚಿತ್ ಒಬ್ಬ ಸಚಿವರು ರಾಜೀನಾಮೆ ಕೊಡಬೇಕು ಎನ್ನುವ ಕಾರಣಕ್ಕೆ. ಅದು ಕೂಡ ಇವರು ರಾಜೀನಾಮೆ ಕೇಳುತ್ತಿರುವ ಸಚಿವ ಈಶುವಿನ ವಿರುದ್ಧ ಇವರು ಭ್ರಷ್ಟಾಚಾರದ ಆರೋಪ ಮಾಡಿ ಅದಕ್ಕೆ ಸಾಕ್ಷ್ಯ ಸಂಗ್ರಹಿಸಿ ನಂತರ ರಾಜೀನಾಮೆ ಕೇಳಿದ್ದರೆ ಅದು ಬೇರೆ ವಿಷಯ. ಮನೆಯಲ್ಲಿ ಹಣ ಲೆಕ್ಕ ಮಾಡಲು ಯಂತ್ರ ಇಟ್ಟುಕೊಂಡಿರುವ ನೀವು ಭ್ರಷ್ಟಾಚಾರಿ ಎಂದು ಡಿಕೆಶಿ ಒಮ್ಮೆ ಗುಡುಗಿದರಾದರೂ ಆ ವಿಷಯದ ಮೇಲೆ ಇವರು ರಾಜೀನಾಮೆ ಕೇಳುತ್ತಿಲ್ಲ. ಹೋಗಲಿ, ಅಭಿವೃದ್ಧಿ ನಡೆಯುತ್ತಿಲ್ಲ ಎಂದು ಆರೋಪಿಸಿ ಧರಣಿ ಮಾಡುತ್ತಿದ್ದಾರಾ, ಇಲ್ಲ. ಕೇಸರಿ ಧ್ವಜವನ್ನು ಕೆಂಪುಕೋಟೆಯ ಮೇಲೆ ಹಾರಿಸುತ್ತೇವೆ ಎಂದು ಈಶು ಯಾವುದೋ ಮೂಡಿನಲ್ಲಿ ಮಾಧ್ಯಮಗಳ ಎದುರು ಮೈಲೇಜ್ ಪಡೆದುಕೊಳ್ಳಲು ಆಡಿದ ಮಾತುಗಳಿಗೆ ಕಾಂಗ್ರೆಸ್ಸಿಗರು ರಾಜೀನಾಮೆ ಕೇಳುತ್ತಿರುವುದು. ಇವರ ಈ ಧರಣಿಯಿಂದ ರಾಜ್ಯಕ್ಕೆ ಏನಾದರೂ ಲಾಭ ಇದೆಯಾ? ಸುಮ್ಮನೆ ಕಲಾಪ ವೇಸ್ಟ್ ಆಗುತ್ತಿದೆ ಬಿಟ್ಟರೆ ಆಡಳಿತ ಹಾಗೂ ವಿಪಕ್ಷದವರು ಐದಾರು ದಿನಗಳ ಅಧಿವೇಶನದಲ್ಲಿ ಸಾಧಿಸಿದ್ದು ಏನೂ ಅಲ್ಲ. ಹಾಗಿರುವಾಗ ಯಾವ ಪುರುಷಾರ್ಥಕ್ಕೆ ಇವರಿಗೆ ಮೃಷ್ಟಾನ್ನ ಭೋಜನ ಕೊಟ್ಟಿದ್ದು. ಒಂದು ವೇಳೆ ವಿಧಾನಸಭಾಧ್ಯಕ್ಷ ಕಾಗೇರಿಯವರಿಗೆ ವಿಪಕ್ಷ ಕಾಂಗ್ರೆಸ್ಸಿನ ಮೇಲೆ ಅಷ್ಟು ಪ್ರೀತಿ ಇದ್ದರೆ ಇವರೇ ತಮ್ಮ ಕಿಸೆಯಿಂದ ಹಣ ಹಾಕಿ ಭೋಜನ ಕೊಡಿಸಲಿ. ಅದು ಬಿಟ್ಟು ನಮ್ಮ ತೆರಿಗೆಯ ಹಣದಲ್ಲಿ ಒಂದು ರೂಪಾಯಿ ಕೂಡ ಮುಟ್ಟುವ ಅಧಿಕಾರ ಕಾಗೇರಿಯವರಿಗೆ ಇಲ್ಲ.
ಇನ್ನು ಸರಕಾರದ ಊಟ ಮಾಡಿ, ಸರಕಾರದ ಹೊಸ ಹಾಸಿಗೆ, ದಿಂಬು, ಬೆಡ್ ಶೀಟ್ ಮೇಲೆ ಮಲಗುವುದೇ ಆದರೆ ಅದು ಯಾವ ರೀತಿಯ ಧರಣಿ. ಹೇಗೂ ಇವರು ಮಲಗುವುದು ಅಲ್ಲಿಯೇ ಇರುವ ಶಾಸಕರ ಭವನದಲ್ಲಿ ಆಗಿದ್ದರೆ ಅಲ್ಲಿ ಕೂಡ ಎಸಿ ವ್ಯವಸ್ಥೆ ಇದೆ. ಹಾಗಿರುವಾಗ ವಿಧಾನಸೌಧದ ಒಳಗೆ ಎಸಿ ಹಾಕಿ ಮಲಗುವುದೇ ಆದರೆ ಅದರಲ್ಲಿ ಧರಣಿಯ ಹೆಸರು ಯಾಕೆ? ಇನ್ನು ಇವರು ಧರಣಿ ಕುಳಿತುಕೊಂಡರೆ ಊಟ, ದಿಂಬು, ಹಾಸಿಗೆಯ ವ್ಯವಸ್ಥೆ ಮಾಡಬೇಕು ಎಂದು ಸ್ಪೀಕರ್ ಅವರಿಗೆ ಹೇಳಿದ್ದು ಯಾರು? ಮುಖ್ಯಮಂತ್ರಿಗಳಾ ಹಾಗಿದ್ದರೆ ಅದರ ಎಲ್ಲಾ ಬಿಲ್ ಅವರೇ ಕೊಡಲಿ. ಕಾಂಗ್ರೆಸ್ಸಿನವರೊಂದಿಗೆ ಚೆನ್ನಾಗಿರುವ ಮಾಜಿ ಮುಖ್ಯಮಂತ್ರಿ ಯಡ್ಡಿಯವರಾ ಹಾಗಿದ್ದರೆ ಅವರೇ ಕೊಡಲಿ. ಒಂದು ವೇಳೆ ಧರಣಿ ಕುಳಿತುಕೊಳ್ಳುತ್ತೇವೆ ಎಂದು ಹೊರಟವರಿಗೆಲ್ಲ ಸರಕಾರ ಒಳ್ಳೆಯ ಊಟ, ಬೇರೆ ಎಲ್ಲ ವ್ಯವಸ್ಥೆ ಮಾಡುತ್ತದೆ ಎಂದರೆ ರಾಜ್ಯದ ಎಲ್ಲೆಲ್ಲೆ, ಯಾವಾಗ ಪ್ರತಿಭಟನೆ ಆಗುತ್ತದೋ ಅಂತಹ ಕಡೆ ಆಯಾ ತಾಲೂಕಿನ ತಹಶೀಲ್ದಾರರೇ ಸರಕಾರದ ವತಿಯಿಂದ ಊಟ, ತಿಂಡಿ, ಮೈಕಿನ ವ್ಯವಸ್ಥೆ ಮಾಡುವ ಕ್ರಮವನ್ನು ಸರಕಾರ ಜಾರಿಗೆ ತರಲಿ. ಯಾಕೆಂದರೆ ಹೆಚ್ಚಿನ ಕಡೆ ಪ್ರತಿಭಟನೆ ಆಗುವಾಗ ಪ್ರತಿಭಟನಾಕಾರರಲ್ಲಿ ಜನಪರ ಉದ್ದೇಶ ಇರುತ್ತದೆ. ಆರ್ಥಿಕ ಸಂಪನ್ಮೂಲ ಕೂಡ ಕಡಿಮೆ ಇರುತ್ತದೆ. ಕಷ್ಟದಲ್ಲಿ ಹೋರಾಟ, ಪ್ರತಿಭಟನೆ ಮಾಡುವವರ ಬಳಿ ಏನೂ ಇರುವುದಿಲ್ಲ. ಅವರಿಗೆ ಸರಕಾರದ ನೆರವು ಬೇಕು. ಅದು ಬಿಟ್ಟು ಗೂಳಿಯಂತೆ ಕೊಬ್ಬಿರುವ ಕೋಟಿ, ಕೋಟಿ ಆಸ್ತಿಪಾಸ್ತಿ ಇರುವವರಿಗೆ ಧರಣಿ ಹೆಸರಿನಲ್ಲಿ ಊಟ ಕೊಡಲು ಅದೇನು ರಾಜ್ಯ ಸರಕಾರದ ರಿಸೆಪ್ಷನ್ ಊಟವಾ? ಯಾವ ಘನಂದಾರಿ ಕೆಲಸ ಮಾಡಿದ್ದಾರೆ ಎಂದು ಅವರಿಗೆ ಊಟ ಕೊಡುವುದು? ಇನ್ನು ಧರಣಿ ಕೈಬಿಡಿ ಎಂದು ಸಿಎಂ, ಸಚಿವರು, ಸ್ಪೀಕರ್ ಸದನದಲ್ಲಿ ವಿಪಕ್ಷದವರೊಂದಿಗೆ ಕುಳಿತು ಮನವೊಲಿಸುತ್ತಿರುವ ನಾಟಕ ನೋಡಬೇಕಿತ್ತು. ನಂತರ ಅವರು ಒಪ್ಪಲಿಲ್ಲ ಎಂದು ಮಾಧ್ಯಮದವರೆದುರು ಸಪ್ಪೆಮೋರೆ ಹಾಕಿ ಹೇಳುವ ರೀತಿ ಈ ರಾಜ್ಯದ ಜನ ನೋಡಿದ್ದಾರೆ. ಇವರು ಹೇಳಿದ ಕೂಡಲೇ ಅವರು ಧರಣಿ ಕೈಬಿಡುತ್ತಾರೆ ಎಂದು ನಂಬಲು ನಾವೇನು ಕಿವಿ ಮೇಲೆ ಹೂ ಇಟ್ಟಿಲ್ಲ. ಅಷ್ಟಕ್ಕೂ ಸಿಎಂ, ಸ್ಪೀಕರ್ ಹೋಗಿ ಸಿದ್ದು, ಡಿಕೆಶಿ ಬಳಿ ನಗುತ್ತಾ ಮಾತನಾಡುತ್ತಿರುವ ಫೋಟೋ ಹೇಗಿತ್ತು ಎಂದರೆ “ರಾತ್ರಿಗೆ ಏನು ಬೇಕಪ್ಪಾ, ಕಬಾಬ್, ಸುಕ್ಕ, ತಂದೂರಿ ಮತ್ತು ಗ್ರೀಲ್ಡ್ ಚಿಕ್ಕನಾ” ಎಂದು ಆಡಳಿತ ಪಕ್ಷದವರು ಕೇಳಿದ್ದರೆ ವಿಪಕ್ಷದವರು ” ಸ್ವಾಮಿ, ಅರವತ್ತು ನಾನ್ ವೆಜ್, ಅವರ ಆರ್ಡ್ ರ್ ಬರೆದುಕೊಳ್ಳಿ, ಇನ್ನು ಮೂವತ್ತೈದು ವೆಜ್. ವೆಜ್ ನಲ್ಲಿ ಪನ್ನೀರ್ ಐಟಂ ಮತ್ತು ಒಂದಿಷ್ಟು ಖಾರದ್ದು ಕೂಡ ಇರಲಿ, ಕೋಲ್ಡ್ ಡಿಂಕ್ಸ್ ನಲ್ಲಿ ಯಾವುದು ಕೊಡ್ತೀರಿ, ಜ್ಯೂಸ್ ಏನಾದರೂ ಕೊಟ್ಟುಬಿಡಿ” ಎಂದು ಹೇಳಿದ ಹಾಗೆ ಇತ್ತು. ಅದಕ್ಕೆ ಆಡಳಿತ ಪಕ್ಷ ಬಿಜೆಪಿಯವರು ” ಯಾವ ಹೋಟೇಲಿನಿಂದ ಆಗಬಹುದು, ಅಶೋಕಾ ಹೋಟೇಲಿನಿಂದ ತರಿಸಲಾ” ಎಂದು ಕೇಳಿದರೆ ಇವರು ” ಒಳ್ಳೆಯ ಫೈವ್ ಸ್ಟಾರ್ ಹೋಟೇಲಿನಿಂದಲೇ ಬೇಕು. ಇಲ್ಲದಿದ್ದರೆ ನೋಡಿ ಮತ್ತೆ” ಎಂದು ಹೇಳಿದಂತೆ ಕಾಣುತ್ತಿದೆ. ಇವರಿಗೆ ಸುರಿದ ಹಣದಲ್ಲಿ ಒಂದು ರಸ್ತೆ ಕಾಂಕ್ರೀಟ್ ಮಾಡಿದ್ದರೆ ಅದು ಹತ್ತಾರು ವರ್ಷ ಬರುತ್ತಿತ್ತು. ಇವರು ತಿಂದು ತೇಗಿ ನಾಳೆ ಮರೆಯುತ್ತಾರೆ. ರಸ್ತೆ ಮಾಡಿದರೆ ಅಲ್ಲಿನ ಜನ ನೆನಪಿನಲ್ಲಿಡುತ್ತಿದ್ದರು. ಇವರು ಒಂದು ಪೈಸೆ ಕೂಡ ನೆನಪಿನಲ್ಲಿ ಇಟ್ಟುಕೊಳ್ಳುವುದಿಲ್ಲ. ಇಂತವರಿಗೆ ನಮ್ಮ ಹಣದಲ್ಲಿ ಊಟವಾ, ನಾಚಿಕೆಯಾಗಬೇಕು, ಬಿಜೆಪಿ ಸರಕಾರಕ್ಕೆ!!
Leave A Reply