ಶಾ ಏನೂ ಹೇಳದೆ ಎಲ್ಲವೂ ಅರ್ಥ ಮಾಡಿಕೊಂಡಿದ್ದಾರೆ!!
ಕನಿಷ್ಟ 150 ಸೀಟುಗಳನ್ನು ಗೆಲ್ಲಲೇಬೇಕು ಎಂದು ಅಮಿತ್ ಶಾ ಹೇಳಿ ಹೋಗಿದ್ದಾರೆ. ಅದೇ ದಿನ ರಾಹುಲ್ ಕೂಡ 150 ಸೀಟ್ ಗೆಲ್ಲಲೇಬೇಕು ಎಂದು ಹೇಳಿ ತೆರಳಿದ್ದಾರೆ. ಶಾ ಮತ್ತು ರಾಹುಲ್ ಮಾತನಾಡಿಕೊಂಡು ನೀವು ಅಷ್ಟೇ ಹೇಳಿ, ನಾನು ಕೂಡ ನಮ್ಮವರಿಗೆ ಅಷ್ಟೇ ಹೇಳುತ್ತೇನೆ ಎಂದು ಹೇಳಿದ್ದಲ್ಲ. 150 ಎಂದು ಇದ್ದರೆ ಕನಿಷ್ಟ 120 ಆದರೂ ಬರಬಹುದು ಎನ್ನುವುದು ದೆಹಲಿಯಲ್ಲಿ ಕುಳಿತ ನಾಯಕರ ಲೆಕ್ಕಾಚಾರ. ಒಂದು ವೇಳೆ ಐದಾರು ಸೀಟು ಕಡಿಮೆ ಆದರೂ ಸರಳ ಬಹುಮತ ಬರುತ್ತದೆ. ಆದರೆ ನೂರರ ಗಡಿಯ ಆಸುಪಾಸಿನಲ್ಲಿ ನಿಂತರೆ ಜಾತ್ಯಾತೀತ ಜನತಾದಳವನ್ನು ನಂಬಿ ದೇವೆಗೌಡರನ್ನು ಕರೆಸಿ ಮಾತನಾಡಿಸುವ ಪರಿಸ್ಥಿತಿ ಬರುವುದು ಬೇಡಾ ಎನ್ನುವುದು ಭಾರತೀಯ ಜನತಾ ಪಾರ್ಟಿ ಹಾಗೂ ಕಾಂಗ್ರೆಸ್ ವರಿಷ್ಟರ ಮನದಾಳದ ಅಭಿಪ್ರಾಯ. ಇಲ್ಲದೇ ಹೋದರೆ 2018 ರ ಕಥೆಯೇ ರಿಪೀಟ್ ಆದರೆ ಮತ್ತೆ ಗೊಂದಲ. ಈ ಬಾರಿ ಹಾಗೆ ಆಗದಂತೆ ನೋಡಿಕೊಳ್ಳಬೇಕಾದರೆ ಜೆಡಿಎಸ್ ಅನ್ನು ಮುಗಿಸಿಬಿಡಿ ಎನ್ನುವುದು ತಾಜ್ ವೆಸ್ಟ್ ಎಂಡ್ ನಲ್ಲಿ ರಾತ್ರಿ ಊಟದ ಟೇಬಲ್ ನಲ್ಲಿ ಶಾ ಕೊಟ್ಟ ಸುಫಾರಿ. ಆ ಹೊತ್ತಿನಲ್ಲಿ ಅವರ ಜೊತೆ ಇದ್ದದ್ದು ಬೊಮ್ಮಾಯಿ, ಯಡ್ಡಿ ಹಾಗೂ ನಳಿನ್. ಹಳೆ ಮೈಸೂರು ಕಡೆ ಮುಗಿಬಿದ್ದು ಜೆಡಿಎಸ್ ನಾಯಕರನ್ನು ಸೆಳೆದುಬಿಡಿ, ಗೆಲ್ಲುವ ಕುದುರೆಗಳಿಗೆ ಈಗಲೇ ಆಮಿಷ ನೀಡಿ. ಈಗಲೇ ಈ ಕೆಲಸ ಆಗಿ ಹೋದರೆ ನಂತರ ಮೀಡಿಯಾದವರು ಆಪರೇಶನ್ ಕಮಲ ಎಂದು ವ್ಯಂಗ್ಯ ಮಾಡಲ್ಲ. ಜೆಡಿಎಸ್ ನಲ್ಲಿರುವ ಹೆಚ್ಚಿನವರು ಹೊರಗೆ ಕಾಲಿಡಲು ಚಪ್ಪಲಿ ಹುಡುಕುತ್ತಿದ್ದಾರೆ. ಅವರ ಸೈಜಿನ ಚಪ್ಪಲಿ ನಾವೇ ಕೊಟ್ಟರೆ ಮುಗಿಯಿತು ಎಂದು ಶಾ ಹೇಳಿದ ರಣನೀತಿಯಿಂದ ಬಿಜೆಪಿ ಪಾಳಯ ಖುಷಿಗೊಂಡಿದೆ. ಅದೇ ಖುಷಿಯಲ್ಲಿ ಉನ್ನತ ಮುಖಂಡರನ್ನು ಇಂಪ್ರೆಸ್ ಮಾಡಲು ಸಿಟಿ ರವಿ ಹಳೆ ಮೈಸೂರು ಕಡೆ ಹೊರಡಲು ಸಜ್ಜಾಗಿದ್ದಾರೆ.
ಆದರೆ ಕಾಂಗ್ರೆಸ್ ಕೂಡ 150 ನ್ನೇ ಗುರಿಯಾಗಿಟ್ಟುಕೊಂಡಿರುವ ಹಿಂದೆ ವಿಶೇಷ ಲಾಜಿಕ್ ಏನೂ ಇಲ್ಲ. ಕರ್ನಾಟಕ ರಾಜ್ಯ ಕಾಂಗ್ರೆಸ್ ಸಾಂಪ್ರದಾಯಿಕ ನೆಲ ಎಂದು ರಾಹುಲ್ ಸಿದ್ಧಪಡಿಸಿಕೊಟ್ಟ ಭಾಷಣ ಓದಿದರಾದರೂ ಸಿದ್ದು ಮತ್ತು ಡಿಕೆ ದೋಣಿಯ ಎರಡು ಹುಟ್ಟುಗಳನ್ನು ತಮ್ಮ ಕೈಯಲ್ಲಿ ತೆಗೆದುಕೊಂಡಿರುವುದರಿಂದ ದೋಣಿ ದಡ ಸೇರುತ್ತದಾ ಎನ್ನುವ ಸಂಶಯ ವೇಣು ಹಾಗೂ ಸುರ್ಜೆವಾಲರಿಗೆ ಇದ್ದೇ ಇದೆ. ಅಲ್ಪಸಂಖ್ಯಾತರ ಹಿಂದೆ ನಿಲ್ಲಲು ಮೀನಾಮೇಶ ಎಣಿಸಬಾರದು ಎಂದು ಸಿದ್ದು ಬಹಿರಂಗ ವೇದಿಕೆಯಲ್ಲಿ ಕರೆಕೊಟ್ಟರಾದರೂ ರಾಹುಲ್ ಪಕ್ಕ ಕುಳಿತ ಡಿಕೆಶಿ ” ವೋ ಸಬ್ ಅಭಿ ನಹೀ ಚಲ್ತಾ.. ಹಮ್ ಮೈನಾರಿಟಿ ಕೆ ಸಾಥ್ ಗಯೇ ತೋ ಬಿಜೆಪಿ ಹಿಂದೂತ್ವ ಲೇಕರ್ ಜಾಯೇಗಾ” ಎಂದು ಕಿವಿಯಲ್ಲಿ ಉಸಿರಿಸಿದ್ದಾರೆ. ಆಗಲೇ ರಾಜ್ಯ ಕಾಂಗ್ರೆಸ್ ಮನೆಯೊಂದು ಹಲವು ಬಾಗಿಲು ಎಂದು ರಾಹುಲ್ ಗೆ ಪಕ್ಕಾ ಆಗಿದೆ. ಅದಕ್ಕೆ ಅವರು ಎಡಬದಿಯಲ್ಲಿದ್ದ ವೇಣುವನ್ನು ಹತ್ತಿರ ಕರೆದು ” ಈಸ್ ರಾಜ್ಯಮೇ ಕಾಂಗ್ರೆಸ್ ಸತ್ತಾ ಪರ್ ಆನೇಕಾ ವಿಶ್ವಾಸ್ ಕಮ್ ಹೇ” ಎಂದಿದ್ದಾರೆ. ಆಗಲೇ ವೇಣು ” ಸರ್, ಹಮ್ ಸಿದ್ದು, ಡಿಕೆಶಿ ಔರ್ ಖರ್ಗೆಜಿ ಕೋ ಲೇಕರ್ ಏಕ್ ಟೀಮ್ ಕರೆಂಗೇ” ಎಂದಿದ್ದಾರೆ. ಹಾಗೆ ದಲಿತರ ಪೈಕಿ ಖರ್ಗೆ, ಕುರುಬರ ಪೈಕಿ ಸಿದ್ದು, ಒಕ್ಕಲಿಗರ ಪೈಕಿ ಡಿಕೆಶಿ ಸೇರಿ ತಂಡ ಆಗಿರುವುದು. ಹೇಗೂ ಎಂಬಿ ಪಾಟೀಲ್ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಲಿಂಗಾಯಿತರಿಗೆ ಪ್ರಾತಿನಿಧ್ಯ ಕೊಡಲಿರುವುದರಿಂದ ಹೊಸ ಡೆಡ್ಲಿ ಕಾಂಬೀನೇಶನ್ ಮಾಡಿ ಕಾಂಗ್ರೆಸ್ ಸಜ್ಜಾಗಿರುವುದು.
ಹೀಗೆ ದೇಶದ ದಕ್ಷಿಣ ಭಾಗದಲ್ಲಿ ಅಧಿಕಾರಕ್ಕೆ ಬರಲು ನಮಗೆ ಏನು ವಿಷಯ ಇದೆ ಎಂದು ಕಾಂಗ್ರೆಸ್ ಹುಡುಕುವಾಗಲೇ ಅವರ ತಟ್ಟೆಯಲ್ಲಿ ಬಂದು ಬಿದ್ದಿದ್ದೇ 40 ಶೇಕಡಾ ಕಮೀಷನ್ ವ್ಯವಹಾರ. ರಾಹುಲ್ ಮೊನ್ನೆ ಹೇಳಿದಂತೆ ಇನ್ನು ಮೋದಿ ಹೇಗೆ ಕರ್ನಾಟಕದಲ್ಲಿ ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಾರೆ, ನೋಡುವ ಎಂದಿದ್ದಾರೆ. ರಾಜ್ಯಕ್ಕೆ ಬರುವ ಮೊದಲೇ ತನ್ನ ವೈಯಕ್ತಿಕ ಗುಪ್ತಚರ ದಳವನ್ನು ಕಳುಹಿಸಿ ಸಚಿವರ ರಿಪೋರ್ಟ್ ಕಾರ್ಡ್ ತರಿಸಿ ಪರಿಶೀಲಿಸುವ ಶಾಗೆ ಇದೆಲ್ಲ ಗೊತ್ತಿಲ್ಲ ಎಂದಿಲ್ಲ. ಆದರೆ ರಾಜ್ಯದಲ್ಲಿ ಬಲಿಷ್ಟ ಕುರುಬ ಸಮುದಾಯದ ಮತವನ್ನು ಸೆಳೆಯಲು ಸಿದ್ದು ತೋಳು ಏರಿಸಿ ಸಜ್ಜಾಗಿರುವಾಗ ಐನಾತಿ ಸಮಯದಲ್ಲಿ ಈಶುವನ್ನು ಸಚಿವ ಸಂಪುಟದಿಂದ ಹೊರಗಿಟ್ಟರೆ ಏನಾಗಬಹುದು ಎನ್ನುವ ಯೋಚನೆ ಶಾರದ್ದು. ಅದರೊಂದಿಗೆ ಎಷ್ಟೇ ಪ್ರಭಾವಿ, ಮಾಸ್ ಎಂದರೂ ಯಡ್ಡಿ ಸಫಾರಿಗೆ ಅಂಟಿದ ಭ್ರಷ್ಟಾಚಾರದ ಕಳಂಕ ಚಿಕ್ಕದಲ್ಲ. ಅದೇ ವಿಷಯ ಇಟ್ಟು ಅವರನ್ನು ಇಳಿಸಿದ್ದು ಹೌದಾದರೂ ವಯಸ್ಸಿನ ಪರಿಧಿ ಎಂದು ಕೊಟ್ಟ ಸಬೂಬು ಅಷ್ಟು ಸುಲಭವಾಗಿ ನಂಬುವಂತದ್ದಲ್ಲ ಎಂದು ಶಾಗೆ ಗೊತ್ತಿದೆ. ನನ್ನನ್ನು ಇಳಿಸಿದ್ರಿ ಪರವಾಗಿಲ್ಲ, ಆದರೆ ಈಗ ನನ್ನ ಮಗನಿಗೂ ಏನೂ ಕೊಡದೇ ಹೋದರೆ ನನ್ನ ಮೌನ ಚುನಾವಣೆಯಲ್ಲಿ ನಿಮಗೆ ದುಬಾರಿಯಾಗಲಿದೆ ಎಂದು ಯಡ್ಡಿ ಕೊಟ್ಟಿರುವ ಸಾಫ್ಟ್ ಮುನ್ನೆಚ್ಚರಿಕೆ ಕೂಡ ಶಾ ವರದಿಯಲ್ಲಿದೆ. ಒಬ್ಬ ಮಾಸ್ ಲೀಡರ್ ಇಲ್ಲದೇ, ಒಬ್ಬ ಪ್ರಬಲ ಕುರುಬ ಸಮುದಾಯದ ಮುಖಂಡ ಇಲ್ಲದೆ ಚುನಾವಣೆಗೆ ಹೋಗಲು ಸಾಧ್ಯವಿಲ್ಲ. ಹಾಗಂತ ಅವರ ಭ್ರಷ್ಟಾಚಾರದ ಬ್ಯಾಗೇಜ್ ಇಟ್ಟುಕೊಂಡು ಹೋಗಲು ಆತ್ಮಸಾಕ್ಷಿ ಒಪ್ಪಲ್ಲ. ಇನ್ನು ಕಾಂಗ್ರೆಸ್ಸಿನಿಂದ ಬಂದ ನಿಷ್ಕ್ರಿಯಗೊಂಡ ಕೆಲವು ಸಚಿವರನ್ನು ತೆಗೆಯೋಣ ಎಂದರೆ ಹಾಗೆ ಮಾಡಿದರೆ ಮುಂದಿನ ಚುನಾವಣೆಗೆ ಅವರು ಮತ್ತೆ ಕಾಂಗ್ರೆಸ್ ಕಡೆ ನೆಂಟಸ್ತಿಕೆ ಜೋಡಿಸಿದರೆ ಏನಾಗಲಿದೆ ಎನ್ನುವ ಆತಂಕವೂ ಇದೆ. ಇಂತಹ ತೀರಾ ಸಂಕೀರ್ಣ ರಾಜಕೀಯ ವರದಿ ಇಟ್ಟುಕೊಂಡು ಬೆಂಗಳೂರಿನಲ್ಲಿ ಇಳಿದ ಶಾ ಏನೂ ನಿಶ್ಚಿತ ಸೂಚನೆ ಕೊಡದೇ ಒಂದೆರಡು ವಾರದೊಳಗೆ ಸೂಚನೆ ನೀಡಲಾಗುವುದು ಎಂದು ಹೇಳಿ ಬಾಯ್ ಬಾಯ್ ಮಾಡಿದ್ದಾರೆ. ಈಗ ಶಾ ದೆಹಲಿಯಲ್ಲಿ ನಡ್ಡಾ ಅವರನ್ನು ಕರೆದು ಏನು ಮಾಡೋದು ಎಂದು ಚರ್ಚೆ ಮಾಡಿ ಎಪ್ರಿಲ್ 16, 17 ರಂದು ವಿಜಯಪುರದಲ್ಲಿ ನಡೆಯುವ ಕಾರ್ಯಕಾರಿಣಿಯಲ್ಲಿ ಹೇಳಿ ಎಂದು ಸಲಹೆ ಕೊಡಲಿದ್ದಾರೆ. ಆದ್ದರಿಂದ ಮುಂದಿನ ಎರಡು ವಾರ ಬಿಜೆಪಿಯ ಹಲವರ ಪಾಲಿಗೆ ಪರೀಕ್ಷೆ ಪತ್ರಿಕೆ ಹೇಗೆ ಇರಲಿದೆ ಎಂದು ಕಾದು ನೋಡುವ ಕಾಲ. ನಡ್ಡಾ ಎಪ್ರಿಲ್ 17 ರ ಇಳಿ ಸಂಜೆ ದೆಹಲಿ ವಿಮಾನ ಹತ್ತುವ ಒಳಗೆ ಏನಾದರೂ ಹೇಳಿಯೇ ಹೇಳುತ್ತಾರೆ. ಹೇಳದಿದ್ದರೆ ಕೇಂದ್ರದ ಬಿಜೆಪಿ ನಾಯಕರು ರಾಜ್ಯದ ಆಸೆ ಬಿಟ್ಟಿದ್ದಾರೆ ಎಂದೇ ಅರ್ಥ!
Leave A Reply