ಮೊಬೈಲ್ ಕ್ಯಾಮೆರಾ ಹಿಡಿದು ಹೊರಡಿ ವಾರ್ಡ್ ಕಮಿಟಿ ಸದಸ್ಯರೇ!!
ವಾರ್ಡ್ ಕಮಿಟಿ ಆದ ನಂತರ ಆಯಾ ವಾರ್ಡಿಗಳಲ್ಲಿ ಸ್ವರ್ಗ ಧರೆಗೆ ಇಳಿಯುತ್ತೆ ಎನ್ನುವ ಭಾವನೆ ಇತ್ತು. ಕಾರ್ಪೋರೇಟರ್ ಗಳಿಗೆ ಅಂಕುಶ ಹಾಕುವ ಹಟ ಅದನ್ನು ಅನುಷ್ಟಾನಕ್ಕೆ ತರಬೇಕೆಂದು ಹೊರಟ ಪ್ರತಿಯೊಬ್ಬರಲ್ಲಿಯೂ ಇತ್ತು. ಈಗ ಅದನ್ನು ತೋರಿಸುವ ಸಂದರ್ಭ ಕಮಿಟಿಗಳ ಸದಸ್ಯರುಗಳಿಗೆ ಬಂದಿದೆ. ಮೊಬೈಲ್ ಹೇಗೂ ಕಿಸೆಯಲ್ಲಿರುತ್ತದೆ. ಸೀದಾ ನಿಮ್ಮ ನಿಮ್ಮ ವಾರ್ಡುಗಳ ಒಂದು ಮೀಟರ್ ಒಳಗಿನ ಅಗಲದ ತೋಡುಗಳ ಬಳಿ ಹೋಗಿ. ಅದರಲ್ಲಿರುವ ಹೂಳನ್ನು ತೆಗೆಯಲಾಗಿದೆಯೋ ಎಂದು ನೋಡಿ. ಇಲ್ಲವಾದರೆ ಫೋಟೋ ತೆಗೆಯಿರಿ. ಅದೇ ರೀತಿಯಲ್ಲಿ ನಿಮ್ಮ ವಾರ್ಡಿನಲ್ಲಿ ಎಲ್ಲೆಲ್ಲಿ ಕಸ ರಾಶಿ ಹಾಕಲಾಗಿದೆ, ಎಲ್ಲಿ ಡಿವೈಡರ್ ಬಳಿ, ಫುಟ್ ಪಾತ್ ಬಳಿ ಮಣ್ಣು, ಧೂಳು ಬಿದ್ದಿದೆ, ಎಲ್ಲೆಲ್ಲಿ ಈ ಮಳೆಯ ನೀರು ಹರಿದು ಹೋಗಲು ಗಲ್ಲಿ ಟ್ರಾಪ್ ವ್ಯವಸ್ಥೆ ಮಾಡಲಾಗಿದೆಯೋ ಅದರ ಮೇಲೆ ಪ್ಲಾಸ್ಟಿಕ್ ಶೇಖರಣೆ ಆಗಿದೆ ಎಲ್ಲವನ್ನು ಕಣ್ಣಿನಲ್ಲಿಯೇ ಗಮನಿಸಿ, ಅದರ ಫೋಟೋಗಳನ್ನು ತೆಗೆಯಿರಿ. ಅದನ್ನು ನಿಮ್ಮ ವಾರ್ಡಿನ ಕಾರ್ಪೋರೇಟರ್ ಗಳಿಗೆ ತೋರಿಸಿ. ಯಾಕೆ ಏನು ಕೆಲಸ ಆಗಿಲ್ಲ ಎಂದು ಕೇಳಿ. ಅವರು ಏನೇನೋ ಸಬೂಬು ನೀಡಿ ಜಾರಿಕೊಳ್ಳಬಹುದು.
ನಂತರ ಅದನ್ನು ಅದರ ಒಂದು ಪ್ರತಿಯನ್ನು ಪಾಲಿಕೆಯ ಆಯುಕ್ತರಿಗೂ ಲಿಖಿತವಾಗಿ ನೀಡಿ ಹೇಳಿ ಬನ್ನಿ. ಆ ಬಳಿಕ ಆ ಫೋಟೋಗಳೊಂದಿಗೆ ವಿಷಯವನ್ನು ಕಮಿಟಿಯ ಸದಸ್ಯರು ನಿಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಿ. ಒಂದು ಸಲ ಕಾರ್ಪೋರೇಟರ್ ಕೋಪಗೊಳ್ಳಬಹುದು. ಮುಖ ಸಿಂಡರಿಸಿಕೊಳ್ಳಬಹುದು. ಒಂದೆರಡು ದಿನ ಮಾತು ಬಿಡಬಹುದು. ಆದರೆ ನೀವು ಯಾವ ಉದ್ದೇಶಕ್ಕೆ ವಾರ್ಡ್ ಕಮಿಟಿಯಲ್ಲಿ ಇದ್ದಿರೋ ಅದರ ಉದ್ದೇಶ ಈಡೇರುತ್ತದೆ. ಯಾಕೆಂದರೆ ಇದನ್ನೆಲ್ಲ ನೋಡಬೇಕಾಗಿರುವುದು ಪಾಲಿಕೆಯ ವ್ಯಾಪ್ತಿಯಲ್ಲಿ ಸ್ವಚ್ಚತೆ ಮಾಡುತ್ತೇವೆ ಎಂದು ಗುತ್ತಿಗೆ ಪಡೆದು ಕೋಟಿಗಟ್ಟಲೆ ರೂಪಾಯಿ ಇಲ್ಲಿಯ ತನಕ ನುಂಗಿರುವ ಆಂಟೋನಿ ವೇಸ್ಟ್ ಮ್ಯಾನೇಜಮೆಂಟ್ ನವರ ಜವಾಬ್ದಾರಿ. ಆದರೆ ಕಳೆದ ಏಳು ವರ್ಷಗಳಲ್ಲಿ ಆಂಟೋನಿ ವೇಸ್ಟ್ ನವರು ಒಮ್ಮೆ ಕೂಡ ಒಂದು ಮೀಟರ್ ಅಗಲದ ತೋಡುಗಳನ್ನು ಸ್ವಚ್ಚ ಮಾಡಿಲ್ಲ. ರಸ್ತೆಗಳನ್ನು ಎಷ್ಟು ಗುಡಿಸಿದ್ದಾರೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಅವರ ಬೆನ್ನೇರಿ ಕೆಲಸ ಮಾಡಿಸಬೇಕಾದವರು ನಮ್ಮ ಕಾರ್ಪೋರೇಟರ್ ಗಳು. ಆಂಟೋನಿ ವೇಸ್ಟಿನವರು ಒಟ್ಟು 7 ವರ್ಷಗಳಿಂದ ಇಲ್ಲಿ ಗುತ್ತಿಗೆ ವಹಿಸಿಕೊಂಡಿದ್ದಾರೆ. ಅದರಲ್ಲಿ ಮೊದಲ ಐದು ವರ್ಷ ಕಾಂಗ್ರೆಸ್ಸು. ಅದು ಬಿಡಿ, ಅವರು ಆಂಟೋನಿ ವೇಸ್ಟಿನವರೊಂದಿಗೆ ಚೆನ್ನಾಗಿ ಇದ್ರು. ಏನೂ ಮಾಡದಿದ್ದರೂ ಸುಮ್ಮನೆ ನೋಡಿ ಕುಳಿತಿದ್ರು ಎನ್ನುವುದನ್ನು ಒಪ್ಪಿಕೊಳ್ಳೋಣ. ಆದರೆ ನಂತರ ಭಾರತೀಯ ಜನತಾ ಪಾರ್ಟಿಯ ಸರಕಾರ ಬಂದಿದೆ. ಅವರಾದರೂ ಆಂಟೋನಿ ವೇಸ್ಟಿನವರ ಸೊಂಟ ಬಗ್ಗಿಸಿ ಕೆಲಸ ಮಾಡಿಸಬಹುದಿತ್ತಲ್ಲ. ಆದರೆ ಅವರು ಕೂಡ ಗಪ್ ಚುಪ್. ಎಲ್ಲರಿಗೂ ಏನು ಆಗಿದೆ ಎಂದು ಅವರ ಕಿಸೆ, ಪರ್ಸ್ ನೋಡಿದರೆ ಗೊತ್ತಾಗಬಹುದು. ಆದರೆ ಈಗ ಕಾರ್ಪೋರೇಟರ್ಸ್ ಎದ್ದಿದ್ದಾರೆ. ಒಂದು ಮೀಟರ್ ಅಗಲದ ತೋಡಿನ ಹೂಳು ತೆಗೆಯದಿದ್ದರೆ ಮುಂದೆ ಕೃತಕ ನೆರೆ ಬರುತ್ತದೆ ಎಂದು ಬಾಯಿಬಡಿದುಕೊಳ್ಳುತ್ತಿದ್ದಾರೆ. ಅಂದರೆ ವಾರ್ಡಿನ ಮೇಲಿನ ಪ್ರೀತಿಯಿಂದಲ್ಲ. ಈ ಹೂಳನ್ನು ತೆಗೆಯಲು ಸ್ಪೆಶಲ್ ಗ್ಯಾಂಗ್ ರಚಿಸಿ ಎಂದು ಪೀಟಿಲು ಕೊಯ್ಯಲು ತಯಾರಾಗಿದ್ದಾರೆ. ಯಾಕೆಂದರೆ ಅದರಿಂದಲೂ ಲಾಭ ಇದೆ. ಒಟ್ಟಿನಲ್ಲಿ ಆಂಟೋನಿ ವೇಸ್ಟಿನವರು ತೆಗೆಯದಿದ್ದರೂ ಇವರಿಗೆ ಲಾಭ. ಸ್ಪೆಶಲ್ ಗ್ಯಾಂಗಿನವರು ತೆಗೆದರೂ ಲಾಭ. ಆದರೆ ಅದರಿಂದ ಪೋಲಾಗುವುದು ಮಾತ್ರ ಜನಸಾಮಾನ್ಯರ ತೆರಿಗೆ ಕೋಟ್ಯಾಂತರ ರೂಪಾಯಿ ಹಣ. ಆದ್ದರಿಂದ ಕಾರ್ಪೋರೇಟರ್ ಬೇಸರಗೊಂಡರೂ ವಾರ್ಡ್ ಕಮಿಟಿ ತನ್ನ ಕೆಲಸ ತಾನು ಮಾಡಲೇಬೇಕು.
ಇನ್ನು ಸ್ವಚ್ಚತೆಯಲ್ಲಿ ದಿವ್ಯ ನಿರ್ಲಕ್ಷ್ಯ ತೋರಿಸುವ ಕಾರ್ಪೋರೇಟರ್ ಗಳು ಈ ಸಿವಿಲ್ ಕಾಮಗಾರಿಗಳು ತಮ್ಮ ವಾರ್ಡಿನಲ್ಲಿ ಯಾವಾಗ ಆಗುತ್ತದೆ ಎಂದು ಕಾಯುತ್ತಾ ಕುಳಿತುಕೊಂಡಿರುತ್ತಾರೆ. ಯಾಕೆಂದರೆ ಅದರಿಂದಲೂ ಒಂದಿಷ್ಟು “ಸಂತೃಪ್ತಿ” ಸಿಗುತ್ತದೆ. ಒಟ್ಟಿನಲ್ಲಿ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎನ್ನುವ ಪ್ರಶ್ನೆ ಇಲ್ಲಿ ಮೂಡುತ್ತದೆ. ಯಾವುದಾದರೂ ಒಂದು ವಾರ್ಡಿನಿಂದ ಈ ವಾರ್ಡ್ ಕಮಿಟಿಯ ಕರ್ತವ್ಯ ಶುರುವಾಗಲಿ. ಅದರ ನಂತರ ಅದು ತನ್ನಿಂದ ತಾನೆ ಬೇರೆ ವಾರ್ಡಿಗೂ ತಗುಲಿ ಎಲ್ಲಾ ವಾರ್ಡಿನಲ್ಲಿ ಸಂಚಲನ ಮೂಡುತ್ತದೆ. ಒಟ್ಟಿನಲ್ಲಿ ನಮ್ಮ ತೆರಿಗೆಯ ಹಣ ಸಮರ್ಪಕವಾಗಿ ಬಳಕೆಯಾಗಬೇಕು. ಅದನ್ನು ಈ ಕಮಿಟಿ ಮಾಡಲಿ ಎಂದು ಹಾರೈಕೆ.
Leave A Reply