ಕಳೆಗುಂದಿದ ಕಾಂಗ್ರೆಸ್ಸಿಗೆ ಪಿಎಸ್ ಐ ಹಗರಣ ಸಂಜೀವಿನಿ!
ಸರಕಾರಿ ಕೆಲಸ ಸಿಗಬೇಕು ಎಂದು ಆಸೆ ಹೆಚ್ಚಿನವರಲ್ಲಿ ಇರುತ್ತದೆ. ಅದರಲ್ಲಿಯೂ ಅರೆ ಗ್ರಾಮೀಣ ಭಾಗದ ಜನರಲ್ಲಿ ಈ ಆಸೆ ಜೋರಾಗಿರುತ್ತದೆ. ಇನ್ನು ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ಮಾಡಬೇಕು ಎನ್ನುವ ಆಸೆ ಹೆಚ್ಚಿರುತ್ತದೆ. ಪೊಲೀಸ್ ಸಬ್ ಇನ್ಸಪೆಕ್ಟರ್ ಆದರೆ ಅದಕ್ಕೊಂದು ಘನತೆ, ಗೌರವ ಇದೆ ಎಂದುಕೊಂಡು ಯುವಕರು ಸಿಂಗಂ ಕನಸು ಕಟ್ಟುಕೊಂಡಿರುತ್ತಾರೆ. ಯುವತಿಯರು ಕನಸಿನಲ್ಲಿ ಕಿರಣ್ ಬೇಡಿ ಆದಂತೆ ಕಲ್ಪಿಸಿಕೊಂಡು ಬೆಚ್ಚಗಾಗುತ್ತಾರೆ. ತಮ್ಮ ಮಕ್ಕಳ ಆಸೆ ಈಡೇರಿಸಲು ಅವರ ಹೆತ್ತವರು ಕೂಡ ಟೊಂಕಕಟ್ಟಿ ನಿಲ್ಲುತ್ತಾರೆ. ಆದರೆ ಕರ್ನಾಟಕದಲ್ಲಿ ಇಂತಹ ಆಸೆ ಇಟ್ಟುಕೊಳ್ಳುವುದು ಎಷ್ಟು ದುಬಾರಿ ಎನ್ನುವುದು ಸಾಬೀತಾಗಿದೆ. ಕೆಲವರು ಹತ್ತು ಲಕ್ಷ ಅಂದರೆ ಇನ್ನು ಕೆಲವು ಎಂಭತ್ತು ಲಕ್ಷದವರೆಗೂ ಕೊಟ್ಟಿದ್ದಾರೆ. ಈಗ ಕೆಲಸವೂ ಇಲ್ಲದೆ, ಹಣವೂ ಇಲ್ಲದೆ ಜೈಲು ಪಾಲಾಗಬೇಕಾದ ಪರಿಸ್ಥಿತಿಯನ್ನು ಕೆಲವರು ತಂದೊಡ್ಡಿದ್ದಾರೆ. ಪೊಲೀಸ್ ಆಗಬೇಕೆಂದುಕೊಂಡವರು ಈಗ ಜೈಲಿನ ಕಂಬಿ ಎಣಿಸುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಒಂದು ಕೆಟ್ಟ ವ್ಯವಸ್ಥೆ. ಅದರ ಸುತ್ತಲೂ ನಡೆಯುವ ದುರಾಸೆಯ ರಾಜಕಾರಣ. ಆ ರಾಜಕಾರಣ ಸುತ್ತಲೂ ನಡೆಯುವ ಲಂಪಟ ಅಧಿಕಾರಿಗಳ ವರ್ಗ. ಈಗ ಇಷ್ಟೆಲ್ಲ ಹಗರಣ ಆದ ನಂತರ ಇದು ಕಾಂಗ್ರೆಸ್ ಸಮಯದಲ್ಲಿ ಇತ್ತು, ಭಾರತೀಯ ಜನತಾ ಪಾರ್ಟಿಯ ಅವಧಿಯಲ್ಲಿಯೂ ಇದೆ ಎಂದು ತಿಪ್ಪೆ ಸಾರಿಸಿ ಬಿಡವವರ ಸಂಖ್ಯೆ ಹೆಚ್ಚಾಗಿದೆ. ಇನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು “ಬಿಜೆಪಿ ಮುಖಂಡರು ಪೊಲೀಸ್ ಮುಖ್ಯಸ್ಥ ಕಮಲ್ ಪಂಥ ವಿರುದ್ಧ ಅವಮಾನಕಾರಿಯಾಗಿ ಮಾತನಾಡಿದ ಕಾರಣ ಅವರು ಇದನ್ನು ಹೊರಗೆ ಹಾಕಿದ್ದಾರೆ” ಎಂದು ಹೇಳಿದ್ದಾರೆ. ಅದು ನಿಜನೂ ಇರಬಹುದು. ಇಲ್ಲದೆಯೂ ಇರಬಹುದು. ಆದರೆ ರಾಜ್ಯ ರಾಜಕಾರಣದ ಪಂಡಿತರಿಗೆ ವಿಶ್ವಾಸಾರ್ಹ ಹೆಡ್ ಆಫೀಸ್ ಆಗಿರುವ ಪದ್ಮನಾಭನಗರದ ದೊಡ್ಡ ಮನೆಯವರಿಗೆ ಗೊತ್ತಿಲ್ಲದ ವಿಷಯಗಳು ಇರುವುದಿಲ್ಲ. ಅವರ ಪಕ್ಷದ ಶಾಸಕರು ಕಡಿಮೆ ಇರಬಹುದು. ಆದರೆ ಪಕ್ಷದ “ಅಧಿಕಾರಿಗಳು” ವಿಧಾನಸೌಧದಿಂದ ಹಿಡಿದು ಪ್ರತಿ ಇಲಾಖೆಯಲ್ಲಿಯೂ ಸಾಕಷ್ಟು ಜನ ಇದ್ದಾರೆ. ಕೇವಲ ಅಧಿಕಾರಿಗಳಿಂದ ಒಳರಹಸ್ಯ ಪಡೆದುಕೊಂಡು ಒಂದು ಸ್ವಸ್ಥ ಸರಕಾರಕ್ಕೆ ಎಳ್ಳುನೀರು ಬಿಡುವಂತಹ ಸಾಮರ್ತ್ಯ ಗೌಡರ ಕುಟುಂಬಕ್ಕೆ ಇದೆ. ಅವರು ಹೇಳುವುದನ್ನೇ ನಂಬುವುದಾದರೆ ಮತ್ತೊಮ್ಮೆ ಸಾಬೀತಾಗಿರುವುದು ಏನೆಂದರೆ ” ಇಡೀ ಪೊಲೀಸ್ ಇಲಾಖೆ ರಾಜ್ಯ ಬಿಜೆಪಿ ಸರಕಾರದ ವಿರುದ್ಧ ಇದೆ” ಇದು ಹಿಂದೆನೂ ಸಾಬೀತಾಗಿತ್ತು. ಈಗ ಮತ್ತೆ ಹೌದೆಂದು ಘಟನೆಗಳು ತೋರಿಸಿಕೊಡುತ್ತಿವೆ.
ಸರಕಾರಿ ಕೆಲಸ ಪಡೆಯಲು ತಾನು ಒಂದು ರೂಪಾಯಿ ಲಂಚ ಕೊಡಲಿಲ್ಲ ಎಂದು ಯಾರಾದರೂ ಹೇಳಿದರೆ ಒಂದೋ ಆತ ಅಪ್ಪಟ ಸುಳ್ಳು ಹೇಳುತ್ತಿದ್ದಾನೆ ಇಲ್ಲ ಅನುಕಂಪದ ಆಧಾರದ ಮೇಲೆ ಕೆಲಸ ಸಿಕ್ಕಿದೆ ಎಂದೇ ಅಂದುಕೊಳ್ಳಬೇಕು. ಆದ್ದರಿಂದ ಪಿಎಸ್ ಐ ಹುದ್ದೆಯೂ ಅದಕ್ಕೆ ಅಪವಾದ ಅಲ್ಲ. ಯಾವುದೇ ಸರಕಾರ ಬರಲಿ, ಭ್ರಷ್ಟಾಚಾರ ಆಗುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಈ ಬಾರಿ ಈ ಇಲಾಖೆ ಈ ಪರಿ ಮರ್ಯಾದೆಗೆಟ್ಟುತ್ತದೆ ಎಂದು ಯಾರು ಕೂಡ ಅಂದುಕೊಂಡಿರಲಿಲ್ಲ. ಒಬ್ಬ ಸಾಮಾನ್ಯ ಪೇದೆಯಿಂದ ಹಿಡಿದು ಉನ್ನತ ಪೊಲೀಸ್ ಅಧಿಕಾರಿಗಳ ತನಕ ಇದು ಹಬ್ಬಿಕೊಂಡಿರುವುದು ಮತ್ತು ಅದಕ್ಕೆ ಪ್ರಭಾವಿ ಸಚಿವರ ಹೆಸರು ಕೂಡ ನೇತುಹಾಕಲ್ಪಟ್ಟಿರುವುದು ಬಿಜೆಪಿಯನ್ನು ಇನ್ನಷ್ಟು ಕಂದಕದತ್ತ ನೂಕುತ್ತಿರುವುದು ಸುಳ್ಳಲ್ಲ. ಈಗ ವಿಷಯ ಇರುವುದು ಪಿಎಸ್ ಐ ಹುದ್ದೆಗೆ ಈಗ ಮತ್ತೊಮ್ಮೆ ಲಿಖಿತ ಪರೀಕ್ಷೆ ಮಾಡಿಸಬೇಕಾಗುತ್ತದೆ ಎನ್ನುವ ನಿರ್ಧಾರವಾಗಿರುವುದು. ಸುಮಾರು 56000 ಮಂದಿ ಈಗಾಗಲೇ ಪರೀಕ್ಷೆ ಬರೆದಿದ್ದಾರೆ. ಅಷ್ಟು ಮಂದಿ ಈಗ ಮತ್ತೊಮ್ಮೆ ಪರೀಕ್ಷೆ ಬರೆಯಬೇಕಾಗುತ್ತದೆ. ಇದು ಒಂದು ರೀತಿಯಲ್ಲಿ ಸಕ್ರಮವಾಗಿರುವವರ ಮೇಲೆ ಆಗುತ್ತಿರುವ ಅನ್ಯಾಯವೂ ಹೌದು. ಆದರೆ ಇದನ್ನು ಏನು ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಉದ್ಭವವಾಗಿದೆ. ಯಾಕೆಂದರೆ ಒಂದು ಲೀಟರ್ ಹಾಲಿಗೆ ಒಂಭತ್ತು ಲೀಟರ್ ನೀರು ಹಾಕಿದರೆ ಏನಾಗುತ್ತೆ, ಹಾಗೆ ಆಗಿದೆ ಪರಿಸ್ಥಿತಿ.
ಯಾರು ಸೋಬಗರು ಮತ್ತು ಯಾರು ಅಕ್ರಮಿಗಳು ಎಂದು ಹೇಳಲಾಗದಷ್ಟು ಹಾಲು ಮತ್ತು ನೀರು ಬೆರೆತಿದೆ. ಆದ್ದರಿಂದ ಅನೇಕರ ತಪ್ಪಿನಿಂದಾಗಿ ಬಹುತೇಕರು ಸಂಕಷ್ಟಪಡುವಂತಾಗಿದೆ. ಇನ್ನು ಇಲ್ಲಿ ಯಾರು ಯಾರಿಗೆ ಹಣ ಕೊಟ್ಟಿದ್ದಾರೆ ಎನ್ನುವುದು ತನಿಖೆಯಿಂದ ಗೊತ್ತಾಗುತ್ತದೆ. ಅವರ ವಿರುದ್ಧ ಕ್ರಮ ತೆಗೆದುಕೊಂಡರೆ ಸಾಕು. ಅದು ಬಿಟ್ಟು ಏಕಾಏಕಿ ಎಲ್ಲರ ವಿರುದ್ಧ ಕ್ರಮ ತೆಗೆದುಕೊಳ್ಳುವ ಅವಶ್ಯಕತೆ ಏನಿದೆ ಎನ್ನುವುದು ಪ್ರಶ್ನೆ. ಇನ್ನು ಇವರು ಕ್ರಮ ತೆಗೆದುಕೊಳ್ಳುವುದಾದರೂ ಯಾರ ವಿರುದ್ಧ ನೋಡಿದ್ದೀರಾ? ಅದೇ ಪೇದೆ, ಹೆಡ್ ಕಾನ್ಸಟೇಬಲ್, ಎಸ್ ಐ ಹೆಚ್ಚೆಂದರೆ ಒಬ್ಬಿಬ್ಬರು ಇನ್ಸಪೆಕ್ಟರ್. ಇವರನ್ನು ಅಮಾನತು ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಸೇವೆಯಿಂದ ವಜಾ ಮಾಡಲು ಕೂಡ ತೀರ್ಮಾನಿಸುವ ಸಾಧ್ಯತೆಗಳಿವೆ. ಹಾಗಾದರೆ ಸಾವಿರ ರೂಪಾಯಿ ತಿಂದವ ಸೇಫ್. ಹತ್ತು ರೂಪಾಯಿ ತಿಂದವ ಅಂದರ್ ಎನ್ನುವ ಪರಿಸ್ಥಿತಿ ಬಂದಿದೆ. ಇನ್ನು ರಾಜಕೀಯವನ್ನು ತೆಗೆದುಕೊಂಡರೆ ಕಾಂಗ್ರೆಸ್ ಮತ್ತು ಬಿಜೆಪಿ ಪರಸ್ಪರ ಕೆಸರೆರೆಚಾಟ ಮಾಡುತ್ತಿರುವುದು ಹೊಸತೇನಲ್ಲ. ಈ ಹಗರಣದಲ್ಲಿ ಎರಡೂ ಪಕ್ಷಗಳು ಕೂಡ ಮೊಸರು ತಿಂದಿವೆ. ಈಗ ಅಧಿಕಾರದಲ್ಲಿ ಬಿಜೆಪಿ ಇರುವುದರಿಂದ ಕಾಂಗ್ರೆಸ್ ಆರಾಮವಾಗಿ ಸೆಗಣಿಯ ಬೆರಣಿ ತಟ್ಟಿ ಬಿಜೆಪಿಯ ಗೋಡೆಗೆ ಬಡಿಯುತ್ತಿದೆ. ಇನ್ನು ಆರೋಪ ಬಂದಿರುವ ಸಚಿವರಿಗೆ ರಾಜೀನಾಮೆ ಕೊಡುವುದೋ ಬಿಡುವುದೋ ಎನ್ನುವುದು ಉಭಯ ಸಂಕಟ. ರಾಜೀನಾಮೆ ಕೊಟ್ಟರೆ ಭ್ರಷ್ಟಾಚಾರದ ವಿಷಯದಲ್ಲಿ ಪಕ್ಷದ ಮತ್ತೊಂದು ವಿಕೆಟ್ ಉರುಳಿಸಿದಂತೆ ಆಗುತ್ತದೆ. ಅದೇ ರಾಜೀನಾಮೆ ಕೊಡದಿದ್ದರೆ ಈ ವಿವಾದವನ್ನು ಎಳೆಯಲು ವಿಪಕ್ಷಗಳಿಗೆ ಅವಕಾಶ ಕೊಟ್ಟಂತೆ ಆಗುತ್ತದೆ. ಚುನಾವಣೆಯ ಹೊಸ್ತಿಲಲ್ಲಿ ಕಾಂಗ್ರೆಸ್ಸಿನ ತಟ್ಟೆಗೆ ಒಳ್ಳೊಳ್ಳೆಯ ವಿಷಯಗಳು ಬಂದು ಬೀಳುತ್ತಿರುವುದೇ ಆಸಕ್ತಿಯ ವಿಷಯ!
Leave A Reply