ಈ-ಖಾತಾ ನಂಬರ್ ತೆಗೆದುಕೊಂಡಿರಿ, ಅಗತ್ಯ ಬೀಳಬಹುದು!
ನೀವು ಈ-ಖಾತಾವನ್ನು ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಮಾಡಿಸಿದ್ದೀರಿ ಎಂದರೆ ನೀವು ಅದೆಷ್ಟು ಕಷ್ಟಪಟ್ಟಿದ್ದಿರಿ ಎನ್ನುವ ಅರಿವು ನನಗಿದೆ. ಯಾಕೆಂದರೆ ಡಿಜಿಟಲ್ ಈ ಖಾತಾವನ್ನು ನಮ್ಮ ಪಾಲಿಕೆಯಲ್ಲಿ ಮಾಡಿಸುವುದು ಅಷ್ಟು ಸುಲಭವಲ್ಲ. ಆನ್ ಲೈನ್ ನಲ್ಲಿ ಫೋಟೋ ಸೇರಿಸುವುದರಿಂದ ಹಿಡಿದು ದಾಖಲೆಗಳು ಸ್ಕ್ಯಾನ್ ಸಹಿತ ಎಲ್ಲವೂ ಅದರಲ್ಲಿಯೇ ಆಗಬೇಕು. ಹಿಂದಿನಂತೆ ಈಗ ಮ್ಯಾನುವಲ್ ನಲ್ಲಿ ಈ-ಖಾತಾ ಮಾಡಿಸುವ ಕ್ರಮ ಇಲ್ಲ. ನಿಮ್ಮ ಮೊಬೈಲಿಗೆ ಓಟಿಪಿ ನಂಬರ್ ಎಲ್ಲಾ ಬಂದು ಅದು ಅಲ್ಲಿ ಎಂಟ್ರಿಯಾಗಿ ಕೆಲಸ ಆಗಬೇಕು. ಎಷ್ಟು ದಿನಗಳಲ್ಲಿ ಈ-ಖಾತಾ ತಯಾರಾಗುತ್ತದೆ ಎಂದು ನೀವು ಪಾಲಿಕೆಯಲ್ಲಿ ಅದನ್ನು ಮಾಡುವವರ ಬಳಿ ಕೇಳಿದರೆ ಹೆಚ್ಚೆಂದರೆ 20 ದಿನ ಎಂದು ಅಲ್ಲಿಂದ ಉತ್ತರ ಬರಬಹುದು. ಹಾಗಂತ ನೀವು 20 ದಿನ ಬಿಟ್ಟು ಹೋದರೆ ಅಲ್ಲಿ ಈ-ಖಾತಾ ಆಗಿರುವುದಿಲ್ಲ. 20 ದಿನ ಬಿಡಿ, ಆರು ತಿಂಗಳು ಹೋದರೂ ಈ-ಖಾತಾ ಆಗಿರುವುದಿಲ್ಲ. ಇದು ಸಣ್ಣ ಸಮಸ್ಯೆ ಅಲ್ಲ. ಈ-ಖಾತಾ ಮಾಡಿಸಲು ಜನರು ಆಗಾಗ ಪಾಲಿಕೆಗೆ ಬಂದು ಆಗಲಿಲ್ಲ ಎನ್ನುವ ಉತ್ತರ ಕೇಳಿ ಕೇಳಿ ಬೇಸತ್ತು ಹೋಗುತ್ತಾರೆ. ಈ ಸಮಸ್ಯೆಯನ್ನು ಅನೇಕರು ಅನುಭವಿಸುತ್ತಿರುವುದು ನನ್ನ ಗಮನಕ್ಕೆ ಬಂದಿತ್ತು. ನಾನು ಈ ವಿಷಯವನ್ನು ಪಾಲಿಕೆಯ ಕಮೀಷನರ್ ಅಕ್ಷಯ್ ಶ್ರೀಧರ್ ಅವರ ಬಳಿ ಹೇಳಿದೆ. ಅವರು ಆಯಿತು, ನೋಡೋಣ ಎಂದು ಹೇಳಿದರು. ಆದರೆ ಜನರ ಈ ಸಂಕಷ್ಟ ಶೀಘ್ರದಲ್ಲಿ ಪರಿಹರಿಸಲು ಏನಾದರೂ ಮಾಡಬೇಕೆನ್ನುವ ಕಾರಣಕ್ಕೆ ಮೇಯರ್ ಪ್ರೇಮಾನಂದ ಶೆಟ್ಟಿಯವರು ಭೇಟಿಯಾಗಿ ಅವರಿಗೆ ಈ ಸಮಸ್ಯೆಗಳನ್ನು ತಿಳಿಸಿದೆ. ಅವರು ತಕ್ಷಣ ಈ-ಖಾತಾ ಮಾಡುವ ವಿಭಾಗಕ್ಕೆ ಹೋಗೋಣ ಎಂದರು. ಅಲ್ಲಿ ಹೋಗಿ ಅವರಿಗೆ ಅಲ್ಲಿ ಜನರಿಗೆ ಆಗುತ್ತಿರುವ ಸಮಸ್ಯೆಗಳನ್ನು ವಿವರಿಸಿದೆ. ನಾವು ಈ-ಖಾತಾಕ್ಕೆ ಅರ್ಜಿ ಹಾಕಿದ ನಂತರ ಅದು ಯಾಕೆ ತುಂಬಾ ತಡವಾಗುತ್ತದೆ ಎನ್ನುವುದಕ್ಕೆ ಮುಖ್ಯ ಕಾರಣಗಳಲ್ಲಿ ಒಂದು ಯಾವುದೆಂದರೆ ಈ-ಖಾತಾ ಆಗುತ್ತಿರುವ ಆನ್ ಲೈನ್ ಪ್ರಕ್ರಿಯೆ ಅದು ಯಾವ ಹಂತದಲ್ಲಿ ಸಿಲುಕಿದೆ ಎಂದು ಯಾರಿಗೂ ಗೊತ್ತಾಗದೇ ಇರುವುದು. ಆರಂಭದಲ್ಲಿ ಟಪ್ಪಾಲಿನಿಂದ ಅದು ಕ್ಲಾರ್ಕಿಗೆ ಹೋಗುತ್ತದೆ. ಕ್ಲಾರ್ಕಿನಿಂದ ಅದು ಸ್ಕ್ಯಾನ್ ಆಗುತ್ತದೆ. ಸ್ಕ್ಯಾನ್ ಆಗಿ ಮತ್ತೆ ಕ್ಲಾರ್ಕಿಗೆ ಬರುತ್ತದೆ. ಅಲ್ಲಿಂದ ಅದು ಇನ್ಸಪೆಕ್ಟರಿಗೆ ಹೋಗುತ್ತದೆ. ಅಲ್ಲಿಂದ ಅದು ಸೂಪರಿಟೆಂಡೆಂಟ್ ಗೆ ಹೋಗುತ್ತದೆ. ಎಲ್ಲಾ ಕಡೆ ಈ ಪ್ರಕ್ರಿಯೆಗಳು ಆನ್ ಲೈನ್ ನಲ್ಲಿಯೇ ಆಗುತ್ತದೆ. ಇಲ್ಲಿ ಸಾಮಾನ್ಯ ಜನರಿಗೆ ತಮ್ಮ ಈ-ಖಾತಾ ಆರು ವಾರದಲ್ಲಿ ಆಗುತ್ತದಾ, ಆರು ತಿಂಗಳು ಹಿಡಿಯುತ್ತಾ ಎನ್ನುವುದು ಯಕ್ಷಪ್ರಶ್ನೆ ಆಗಿಯೇ ಉಳಿಯುತ್ತದೆ. ಆದರೆ ವಕೀಲರ ಮೂಲಕ ಅಥವಾ ಬ್ರೋಕರ್ ಗಳ ಮೂಲಕ ಬರುವವರಿಗೆ ಕೆಲಸ ಬೇಗ ಆಗುತ್ತದೆ. ಅಲ್ಲಿ ಸಿಬ್ಬಂದಿಗಳ ಮತ್ತು ಬ್ರೋಕರ್ ಗಳ ಅಪವಿತ್ರ ಮೈತ್ರಿ ಚೆನ್ನಾಗಿರುವುದರಿಂದ ಕೆಲಸ ಲೇಟ್ ಆಗುವುದಿಲ್ಲ. ಅದೆಲ್ಲವೂ ಮೇಯರ್ ಗಮನಕ್ಕೆ ತಂದ ಬಳಿಕ ಅವರೊಂದು ನಿಯಮ ತಂದರು.
ಯಾರು ಮೊದಲು ಅರ್ಜಿ ಹಾಕುತ್ತಾರೋ ಅವರಿಗೆ ಒಂದು ಟೋಕನ್ ನಂಬರ್ ಕೊಡುವುದು. ಆ ನಂತರ ಅರ್ಜಿ ಹಾಕಿದವರಿಗೆ ಅದರ ನಂತರ ಕ್ರಮಪ್ರಕಾರ ನಂಬರ್ ಕೊಡುವುದು. ಹೀಗೆ ಸಿನಿಯಾರಿಟಿ ಪ್ರಕಾರ ನಂಬರ್ ಕೊಡುವಂತಹ ಪ್ರಕ್ರಿಯೆ ನಡೆಸುವುದು. ಒಂದು ವೇಳೆ ನಿಮ್ಮ ದಾಖಲೆಗಳಲ್ಲಿ ದೋಷ ಇದ್ದರೆ ಈ-ಖಾತಾ ಮಾಡಿಸಲು ಆ ತಪ್ಪುಗಳಿಂದ ತಾಂತ್ರಿಕವಾಗಿ ತೊಂದರೆ ಆದರೆ ಆಗ ನಿಮಗೆ ಹಿಂಬರಹ ಕೊಟ್ಟು ನಿಮ್ಮ ಈ-ಖಾತಾ ಯಾಕೆ ತಡವಾಗುತ್ತಿದೆ ಎನ್ನುವುದಕ್ಕೆ ಕಾರಣಗಳನ್ನು ನೀಡಬೇಕು. ಅದು ಬಿಟ್ಟು ಸಾಮಾನ್ಯ ಸಂದರ್ಭದಲ್ಲಿ ನಿಮಗೆ ನೀಡಿರುವ ನಂಬರ್ ಕಂಪ್ಯೂಟರ್ ನಲ್ಲಿ ಫೀಡ್ ಮಾಡಿ ಎಂಟರ್ ಒತ್ತಿದರೆ ನಿಮ್ಮ ಈ-ಖಾತಾ ಯಾವ ಹಂತದಲ್ಲಿ ಇದೆ ಎಂದು ನಿಮಗೆ ಗೊತ್ತಾಗುವಂತಹ ವ್ಯವಸ್ಥೆ ಸದ್ಯ ಮಾಡಲಾಗಿದೆ. ಹಾಗಂತ ನಿತ್ಯ ಮೇಯರ್ ಆಗಲಿ, ಪಾಲಿಕೆ ಕಮೀಷನರ್ ಆಗಲಿ ಅಲ್ಲಿ ಬಂದು ಏನು ಸಮಸ್ಯೆ ಇದೆ ಎಂದು ನೋಡಲು ಆಗುವುದಿಲ್ಲ. ನನ್ನ ಗಮನಕ್ಕೆ ಈ ಸಮಸ್ಯೆಗಳು ಬಂದ ಕಾರಣ ನಾನು ಇದನ್ನು ಕಮೀಷನರ್ ಹಾಗೂ ಮೇಯರ್ ಅವರ ಗಮನಕ್ಕೆ ತಂದು ಅವರಿಂದ ಪರಿಹಾರ ಕೊಡಿಸುವ ನನ್ನ ಪ್ರಯತ್ನ ಮಾಡಿದ್ದೇನೆ. ಇನ್ನು ನಮ್ಮ ನಾಗರಿಕರು ಕೂಡ ತಮಗೆ ಪಾಲಿಕೆಯಲ್ಲಿ ಇದು ಮಾತ್ರವಲ್ಲ, ಯಾವುದೇ ಸಮಸ್ಯೆಗಳು ಆಗುತ್ತಿದ್ದಲ್ಲಿ ಅದನ್ನು ಪಾಲಿಕೆಯ ಕಮೀಷನರ್ ಅಥವಾ ಮೇಯರ್ ಅವರ ಗಮನಕ್ಕೆ ತರಬೇಕು. ಸುಮ್ಮನೆ ನಮ್ಮ ನಮ್ಮಲ್ಲೇ ಗೊಣಗಿಕೊಂಡರೆ ಅದರಿಂದ ಏನೂ ಪ್ರಯೋಜನವಿಲ್ಲ. ಹಿಂದೆ ಮ್ಯಾನುವಲ್ ಆಗಿ ಈ-ಖಾತಾ ಮಾಡಿಸುವಾಗ ಮತ್ತು ಈಗ ಆನ್ ಲೈನ್ ನಲ್ಲಿ ಮಾಡುವಾಗ ಅನೇಕ ವ್ಯತ್ಯಾಸಗಳು ಬರುತ್ತವೆ. ಹಿಂದೆ ಮ್ಯಾನುವಲ್ ಆಗಿ ಮಾಡುವಾಗ ನಿಮಗೆ ಅಕ್ನೋಲೇಜ್ ಕೊಡುತ್ತಿದ್ದರು. ಈಗ ಹಾಗಿಲ್ಲ. ಇನ್ನು ನಂಬರ್ ಕೊಡುವ ವ್ಯವಸ್ಥೆ ಮಾಡಲಾಗಿದೆ. ಸರಿಯಾಗಿ ನೋಡಿದರೆ ಮ್ಯಾನುವಲ್ ಗಿಂತ ಕಂಪ್ಯೂಟರ್ ನಲ್ಲಿ ಆನ್ ಲೈನ್ ಕೆಲಸಗಳು ವೇಗವಾಗಿ ನಡೆಯಬೇಕಿತ್ತು. ಆದರೆ ಆಗುತ್ತಿಲ್ಲ. ಅದನ್ನು ಮುಂದಿನ ದಿನಗಳಲ್ಲಿ ಜನಪ್ರತಿನಿಧಿಗಳು ಸರಿ ಮಾಡಬೇಕಿದೆ
Leave A Reply