ಇನ್ನು ಎಲ್ಲರೂ ಅಕ್ಕಿ ಒಮ್ಮೆಲ್ಲೆ 25 ಕೆಜಿಯಷ್ಟು ಖರೀದಿಸಲೇಬೇಕಾ ನಿರ್ಮಲಕ್ಕಾ!!
ಪ್ರಧಾನಿ ಮೋದಿ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈಗ ಮಾತನಾಡುವುದನ್ನು ಬಿಟ್ಟಿದ್ದಾರಾ? ಇಲ್ಲವಾದರೆ ಮೋದಿಗೆ ಕೆಟ್ಟ ಹೆಸರು ತರಬೇಕೆಂದು ಹಠಕ್ಕೆ ನಿರ್ಮಲಾ ಬಿದ್ದಿದ್ದಾರಾ? ಅಥವಾ ಇವತ್ತಿನ ಕಾಲದಲ್ಲಿ ಸಾಮಾಜಿಕ ಜಾಲತಾಣಗಳು ಪ್ರಬಲವಾಗಿದೆ ಎಂದು ಗೊತ್ತಿದ್ದರೂ ಒಂದಷ್ಟರ ಮಟ್ಟಿಗೆ ಅದರ ಸಹಾಯದಿಂದಲೇ ಪ್ರಧಾನಿಯಾಗಿರುವ ಮೋದಿಯವರು ತಾವು ಒಂದು ಕಾಲದಲ್ಲಿ ಹೇಳಿದ ಮಾತನ್ನು ಮತ್ತು ಅದರ ವಿಡಿಯೋ ಕ್ಲಿಪ್ ಅನ್ನು ಜನ ಮರೆತಿದ್ದಾರೆ ಎಂದು ಅಂದುಕೊಂಡಿದ್ದಾರಾ? ಒಟ್ಟಿನಲ್ಲಿ ಏನಾದರೂ ಒಂದು ಆಗಲೇಬೇಕು. ನಿರ್ಮಲಕ್ಕನಿಗೆ ಕೋವಿಡ್ ಪಾಸಿಟಿವ್ ಆಗಿ ಐಸೋಲೇಶನ್ ನಲ್ಲಿ ಇದ್ದರೂ ಅವರು ಮೋದಿಯವರ ಬಳಿ ತಿಂಗಳುಗಳಿಂದ ಮಾತನಾಡಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಒಂದು ದೇಶದ ಪ್ರಧಾನಿಗೆ ರಕ್ಷಣಾ ಸಚಿವರು ಮತ್ತು ವಿತ್ತ ಸಚಿವರು ಎರಡು ಕಣ್ಣುಗಳಿದ್ದಂತೆ. ಆದ್ದರಿಂದ ಮೋದಿಯವರು ಆರ್ಥಿಕ ವಿಷಯ ಬಂದಾಗ ವಿತ್ತ ಸಚಿವರ ಬಳಿ ಕೇಳದೇ ಇರಲು ಸಾಧ್ಯವಿಲ್ಲ. ಇನ್ನು ಯಾವುದೇ ಕೇಂದ್ರ ಸಚಿವರು ಮೋದಿ ಹಾಕಿದ ಲಕ್ಷ್ಮಣ ರೇಖೆ ದಾಟಬೇಕು ಎಂದು ಕನಸಿನಲ್ಲಿಯೂ ಎಣಿಸಲಾರರು. ಅಷ್ಟಿರುವಾಗ ಕ್ಯಾಬಿನೆಟ್ ನಲ್ಲಿದ್ದು, ಮೋದಿ ಹೆಸರನ್ನು ಹಾಳು ಮಾಡುವ ಪ್ರಯತ್ನ ಆಗಲು ಸಾಧ್ಯವೇ ಇಲ್ಲ. ಹಾಗಾದರೆ ಮೂರನೇಯದ್ದು ಒಂದೋ ಮೋದಿಯವರು ತಾವೇ ಹಿಂದೆ ಹೇಳಿದ್ದ ಹೇಳಿಕೆಯನ್ನು ಮರೆತಿದ್ದಾರೆ ಅಥವಾ ಆ ಭಾಷಣದ ವಿಡಿಯೋ ತುಣುಕನ್ನು ಯಾರೂ ಇಟ್ಟುಕೊಂಡಿರಲಿಕ್ಕಿಲ್ಲ ಎನ್ನುವ ಭಾವನೆ ಇರಬಹುದು. ಯಾಕೆಂದರೆ ಜಿಎಸ್ ಟಿ ವಿಷಯದ ಒಂದು ಸಂವಾದದಲ್ಲಿ ಸ್ವತ: ಮೋದಿಯವರೇ ಜಿಎಸ್ ಟಿ ಬಂದ ಮೇಲೆ ಗೋಧಿ, ಅಕ್ಕಿ, ಮೊಸರು, ಮಜ್ಜಿಗೆ, ಲಸ್ಸಿಯ ಮೇಲೆ ಜಿಎಸ್ ಟಿ ಹಾಕಲಾಗುವುದಿಲ್ಲ, ಈಗ ಅದರ ಮೇಲೆ ತೆರಿಗೆ ಇದೆ. ಜಿಎಸ್ ಟಿ ಬಂದ ಮೇಲೆ ಅದು ಕೂಡ ಇರುವುದಿಲ್ಲ ಎನ್ನುವ ಅರ್ಥದ ಮಾತುಗಳನ್ನು ಹೇಳಿದ್ದಾರೆ. ಅದರ ವಿಡಿಯೋ ಕ್ಲಿಪ್ ಈಗ ಹರಿದಾಡುತ್ತಿದೆ. ಆದರೂ ಈಗ ಈ ವಸ್ತುಗಳ ಮೇಲೆ 5% ಜಿಎಸ್ ಟಿ ಹಾಕಲಾಗಿದೆ. ಅದರಿಂದ ಜನರಿಗೆ ಸಹಜವಾಗಿ ಒಂದು ಹಂತದಲ್ಲಿ ಮೋದಿಯವರ ಮೇಲಿನ ವಿಶ್ವಾಸಕ್ಕೆ ಕುಂದು ತಂದಿದೆ. ಆದರೆ ಮೋದಿ ಏನು ಮಾಡಿದರೂ ಅದರ ಪರ ವಹಿಸಿ ಮಾತನಾಡಲೇಬೇಕಾದ ಪರಿಸ್ಥಿತಿಯಲ್ಲಿ ರಾಜ್ಯದ ಬಿಜೆಪಿ ಮುಖಂಡರು ಇದ್ದಾರೆ. ಈ ದಿನೋಪಯೋಗಿ ಆಹಾರ ಪದಾರ್ಥಗಳ ಮೇಲಿನ ಜಿಎಸ್ ಟಿಯನ್ನು ಸಮರ್ಥಿಸುವ ಭರದಲ್ಲಿ ಭಾರತೀಯ ಜನತಾ ಪಾರ್ಟಿಯ ಮುಖಂಡರು 25 ಕೆಜಿಗಿಂತ ಕಡಿಮೆ ಇರುವ ಪ್ಯಾಕ್ಡ್ ಗೋಧಿ, ಅಕ್ಕಿ, ಮೊಸರಿನ ಮೇಲೆ ನಾವು ಜಿಎಸ್ ಟಿ ಹಾಕಿಲ್ಲ. ನಮ್ಮದೇನಿದ್ದರೂ ಅದರ ಕೆಳಗಿನ ತೂಕದ ವಸ್ತುಗಳ ಮೇಲೆ ಮಾತ್ರ ಜಿಎಸ್ ಟಿ ಎಂದು ಹೇಳುತ್ತಿದ್ದಾರೆ. ಇದಕ್ಕಿಂತ ನಾಚಿಕೆಗೇಡಿನ ಬೇರೆ ವಿಷಯ ಇದೆಯಾ ಎಂದು ಜನರು ಕೇಳುವ ಪರಿಸ್ಥಿತಿ ಬಂದಿದೆ.
ಈಗ ಈ ವಸ್ತುಗಳ ಬೆಲೆ ಏರಿರುವುದಕ್ಕೆ ಕಾರಣ ಜಿಎಸ್ ಟಿ. ಜಿಎಸ್ ಟಿ 25 ಕೆಜಿ ಮೇಲೆ ಇಲ್ಲದಿದ್ದರೂ, ಇದ್ದರೂ ಜನಸಾಮಾನ್ಯರಿಗೆ ಏನು ಪರಿಣಾಮ ಬೀರುತ್ತೆ? ಅದರಲ್ಲಿಯೂ ಕೂಲಿ ಮಾಡುವ ಕುಟುಂಬಗಳಲ್ಲಿ ಯಾರು ಕೂಡ ಒಮ್ಮೆಲ್ಲೆ 25 ಕೆಜಿಯಷ್ಟು ಅಕ್ಕಿ, ಗೋಧಿಯನ್ನು ಖರೀದಿಸುವುದಿಲ್ಲ. ಅದೇನಿದ್ದರೂ ಹೋಟೇಲಿನವರು,ಕ್ಯಾಟರಿಂಗ್, ದೊಡ್ಡ ಪ್ಯಾಕ್ಟರಿಯಲ್ಲಿರುವ ಕ್ಯಾಂಟಿನ್ ನವರು ಮಾತ್ರ ಖರೀದಿಸಬಹುದು. ಜನಸಾಮಾನ್ಯರಿಗೆ ಒಂದೇ ಸಲ ಅಷ್ಟು ಖರೀದಿಸುವ ಅಗತ್ಯವೂ ಇರುವುದಿಲ್ಲ, ಎಷ್ಟೋ ಸಲ ಶಕ್ತಿಯೂ ಇರುವುದಿಲ್ಲ. ಹಾಗಾದರೆ ಕೇಂದ್ರ ಸರಕಾರ ಯಾರ ಪರವಾಗಿದೆ. ದೊಡ್ಡ ಉದ್ಯಮಿಗಳ ಪರ ಇದೆ ಎಂದು ಇದರಿಂದ ಸಾಬೀತಾಗಲ್ವ? ಯಾಕೆಂದರೆ ನಿಮಗೆ ಹೋಟೇಲು, ಬೃಹತ್ ಕ್ಯಾಂಟೀನ್, ಕ್ಯಾಟರಿಂಗ್ ನವರಿಗೆ ಜಿಎಸ್ ಟಿ ಹಾಕಲು ಮನಸ್ಸಿಲ್ಲ. ಅದೇ ಎರಡು ರೋಟಿ, ಒಂದು ಮುಷ್ಟಿ ಅನ್ನ ತಿಂದು ಮಲಗುವ ಬಡವನ ಮೇಲೆ ಕನಿಕರವಿಲ್ಲ ಎಂದು ನೀವೆ ತೋರಿಸಿಕೊಟ್ಟಂತೆ ಆಗಲಿಲ್ಲವೇ?
ಇನ್ನು ಇದನ್ನೆಲ್ಲ ಕೇಂದ್ರ ಸರಕಾರ ಏಕಪಕ್ಷೀಯವಾಗಿ ಮಾಡುವುದಿಲ್ಲ. ಎಲ್ಲಾ ರಾಜ್ಯಗಳ ಬಳಿ ಕೇಳಿಯೇ ಮಾಡುತ್ತದೆ ಎಂದು ರವಿ ಸೀಟಿ ಊದಿದ್ದಾರೆ. ಒಂದು ವೇಳೆ ಎಲ್ಲಾ ರಾಜ್ಯಗಳ ಕೌನ್ಸಿಲ್ ಸಭೆಯಲ್ಲಿ ಕೇಳಿಯೇ ಮಾಡಿದಿದ್ದರೆ ಆ ಸಭೆಯಲ್ಲಿ ಒಂದೋ ಎಲ್ಲಾ ರಾಜ್ಯಗಳ ಪ್ರತಿನಿಧಿಗಳು ಮಲಗಿರುತ್ತಾರೆ, ಅದರಿಂದ ಯಾವ ನಿರ್ಧಾರ ಮಾಡಿದರೂ ಅವರಿಗೆ ಗೊತ್ತಾಗಲ್ಲ. ಇನ್ನೊಂದು ಜಿಎಸ್ ಟಿ ಸಭೆಯಲ್ಲಿ ಬಿಜೆಪಿ ಸರಕಾರ ಇದ್ದ ರಾಜ್ಯಗಳಿಗೆ ಮಾತನಾಡಲು ಧಮ್ ಇರುವುದಿಲ್ಲ, ಉಳಿದವರಿಗೆ ನಮ್ಮ ರಾಜ್ಯದಲ್ಲಿ ಜಾರಿಗೆ ಬಂದರೆ ತಮಗೂ ಲಾಭ ಅಥವಾ ಹೆಸರು ಹಾಳಾಗುವುದು ಮೋದಿಯವರದ್ದು ಎನ್ನುವ ನಿಲುವು ಇದೆ. ಈ ವಿಷಯದಲ್ಲಿ ಮೋದಿ ಹೆಸರು ಹಾಳಾದಂತೆ ಕೆಟ್ಟ ಹೆಸರು ಮೋದಿಗೆ ಬರಲಿಬಿಡಿ, ನಮಗೇನು ಎನ್ನುವ ಭಾವನೆ ಇರಬಹುದು. ಆದ್ದರಿಂದ ಬಿಜೆಪಿಯೇತರ ರಾಜ್ಯಗಳು ಕೂಡ ಮಾತನಾಡುವುದಿಲ್ಲ. ಒಟ್ಟಿನಲ್ಲಿ ಜಿಎಸ್ ಟಿ ಸಭೆಗಳು ನಿರರ್ಥಕವಾಗಿ ಹೋಗುತ್ತದೆಯೇನೋ ಎಂದು ಅನಿಸುತ್ತದೆ. ಕೊನೆಯದಾಗಿ ಸದ್ಯ ಬಸ್ಸು ಬೊಮ್ಮಾಯಿಯವರು ಕೆಎಂಎಫ್ ಗೆ ಹೇಳಿ ಮೊಸರು, ಮಜ್ಜಿಗೆ, ಲಸ್ಸಿ ದರ ಕಡಿಮೆ ಮಾಡಿಸಿದ್ದಾರೆ. ಹಿಂದಿನ ದರಕ್ಕಿಂತ ಸ್ವಲ್ಪ ಜಾಸ್ತಿಯೇ ಇದೆ ಆದರೂ ಒಮ್ಮೆಲ್ಲೆ ಹೊರೆ ಬಿದ್ದಂತೆ ಕಾಣುತ್ತಿಲ್ಲ. ಈ ಮೂಲಕ ಬೊಮ್ಮಾಯಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಂತೆ ಆಗಿರಬಹುದು. ಆದರೆ ಇಷ್ಟು ಎಷ್ಟು ದಿನ? ಮುಂದಿನ ದಿನಗಳಲ್ಲಿ ನಮಗೆ ಇದು ನಷ್ಟ ಎಂದು ಕೆಎಂಎಫ್ ಅಳಲು ಶುರು ಮಾಡಿದರೆ ಹೊರೆ ಜನರ ಮೇಲೆ ಹಾಕಲೇಬೇಕು. ಆದರೆ ಮುಂದಿನ ಎಪ್ರಿಲ್, ಮೇ ತನಕ ಹೇಗಾದರೂ ದಿನ ದೂಡುವ ತಯಾರಿಯಲ್ಲಿ ಬಸ್ಸು ಬೊಮ್ಮಾಯಿ ಇದ್ದಾರೆ. ವಿಪಕ್ಷಗಳು ಸರಕಾರಕ್ಕೆ ಮೊಳೆ ಹೊಡೆಯುತ್ತಿದ್ದಾರೆ!!
Leave A Reply