ರಮೇಶ್ ಮಾತಿನಿಂದಲಾದರೂ ಹಿರಿಯ ಕಾಂಗ್ರೆಸ್ಸಿಗರು ಮೈಚಳಿ ಬಿಡುತ್ತಾರಾ?
ರಮೇಶ್ ಕುಮಾರ್ ಒಬ್ಬರು ನಿಷ್ಟಾವಂತ ಕಾಂಗ್ರೆಸ್ಸಿಗ. ಕಾಂಗ್ರೆಸ್ ಪಕ್ಷಕ್ಕಾಗಿ ಏನನ್ನು ಕೂಡ ಮಾಡಲು ತಯಾರಿರುವವರು. ಅವರು ತಮ್ಮದೇ ಜಿಲ್ಲೆಯಲ್ಲಿ ಸ್ವಪಕ್ಷೀಯರಾದ ಮುನಿಯಪ್ಪನವರಿಂದ ವಿರೋಧ ಕಟ್ಟಿಕೊಂಡಿದ್ದಾರೆ ಎನ್ನುವುದು ಬಿಟ್ಟರೆ ಅವರಿಗೆ ಪಕ್ಷದಲ್ಲಿ ಉತ್ತಮ ಗೌರವ ಇದೆ. ಅದಕ್ಕೆ ಮುಖ್ಯ ಕಾರಣ ಅವರ ನೇರ ನಡೆ. ಆದರೆ ಅವರಿಗೆ ಇಷ್ಟು ರಾಜಕೀಯ ಅನುಭವಗಳ ಬಳಿಕವೂ ಗೊತ್ತಿಲ್ಲದೇ ಹೋಗಿರುವ ಸಂಗತಿ ಎಂದರೆ ಆಧುನಿಕ ತಂತ್ರಜ್ಞಾನ ಮುಂದುವರೆದಿದೆ. ರಮೇಶ್ ಕುಮಾರ್ ಮೊದಲ ಬಾರಿ ಶಾಸಕರಾದಾಗ ಕೇವಲ ಡಿಡಿ ನ್ಯೂಸ್ ಮಾತ್ರ ಇತ್ತು. ಅವರು ಪ್ರಮುಖ ಸುದ್ದಿಗಳನ್ನು ಮಾತ್ರ ನ್ಯೂಸ್ ಮಾಡಿ ಆಫೀಸ್ ಬಾಗಿಲು ಎಳೆದು ಮನೆಗೆ ಹೋಗಿ ಮಲಗುತ್ತಿದ್ದರು. ಈಗಿನ ತರಹ ಡಿಬೇಟ್, ಸಣ್ಣ ಪುಟ್ಟ ಪ್ರಯೋಜನಕ್ಕಿಲ್ಲದ ಉಪ್ಪಿನಕಾಯಿಯಂತಹ ನ್ಯೂಸ್ ಗಳ ಹಾವಳಿ ಇರಲಿಲ್ಲ. ಆದರೆ ಈಗ ರಮೇಶ್ ಕುಮಾರ್ ನಂತವರು ಕೆಮ್ಮಿದ್ರೂ ಇವತ್ಯಾಕೋ ರಮೇಶ್ ಕುಮಾರ್ ಎರಡು ಬಾರಿ ಕೆಮ್ಮಿದ್ದಾರೆ. ಏನಾದರೂ ಕಾಯಿಲೆ ಇರಬಹುದಾ ಎಂದು ಸುದ್ದಿ ಮಾಡುತ್ತಾರೆ. ರಮೇಶ್ ಕುಮಾರ್ ಒಂದು ಸಲ ಹೆಚ್ಚು ಮೂತ್ರಕ್ಕೆ ಹೋದರೂ ಅವರಿಗೆ ಡಯಾಬೀಟಿಸ್ ಇದೆ ಎನ್ನುವ ಸುದ್ದಿಯಿಂದ ಹಿಡಿದು ಅವರು ಹೋಗುವ ಆಸ್ಪತ್ರೆಯ ಸಚಿತ್ರ ವರದಿ ಮಾಡಿ ಡಿಬೇಟ್ ಕೂಡ ಮಾಡಿ ರಾತ್ರಿ ರಮೇಶ್ ಕುಮಾರ್ ಕೆಮ್ಮಲು ಮೂರು ಕಾರಣಗಳು ಎಂದು ಸ್ಪೆಶಲ್ ನ್ಯೂಸ್ ಕೂಡ ಮಾಡುತ್ತಾರೆ. ಈಗ ತಂತ್ರಜ್ಞಾನ ಬೆಳೆದಿದೆ ಮಾತ್ರವಲ್ಲ, ವಿಪರೀತವಾಗಿಯೂ ಬೆಳೆದಿದೆ. ಹೀಗಿರುವಾಗ ಇವತ್ತಿನ ಕಾಲದಲ್ಲಿ ರಾಜಕಾರಣದಲ್ಲಿ ನೇರ ನಡೆ, ನುಡಿ ಕೆಲವೊಮ್ಮೆ ಎದುರು ಪಕ್ಷಗಳಿಗೆ ಸುಲಭದ ಆಹಾರವಾಗುತ್ತದೆ. ಅದಕ್ಕೆ ತಾಜಾ ಉದಾಹರಣೆ ಇದೇ ರಮೇಶು.
ಮೇಶ್ ಕುಮಾರ್ ಅವರು ಪಕ್ಷದ ಬೃಹತ್ ಪ್ರತಿಭಟನೆಯೊಂದರಲ್ಲಿ ಬಿಟ್ಟ ಡೈಲಾಗ್ ಅನ್ನು ಅತ್ತ ಉಗುಳಕ್ಕೂ ಆಗದೇ, ಇತ್ತ ನುಂಗಕ್ಕೂ ಆಗದೇ ಕಾಂಗ್ರೆಸ್ ಅನುಭವಿಸಿದ ಏಳೂವರೆ ತಿಂಗಳ ಬಾಣಂತಿ ನೋವು ಆ ಪಕ್ಷದವರಿಗೆ ಮಾತ್ರ ಗೊತ್ತು. ಆವತ್ತು ಇದ್ದ ಪ್ರತಿಭಟನೆಯ ವಿಷಯ: ಸೋನಿಯಾ ಅವರನ್ನು ಈಡಿ ವಿಚಾರಣೆ ಮಾಡಬಾರದು ಎನ್ನುವುದು ಮಾತ್ರ. ಆ ಪ್ರತಿಭಟನೆಯಲ್ಲಿ ರಮೇಶ್ ಹೇಳಿದ್ದು ಒಂದೇ ಮಾತು, ಸೋನಿಯಾ, ರಾಹುಲ್ ಅವರಿಂದ ನಾವು 3-4 ತಲೆಮಾರಿಗೆ ಆಗುವಷ್ಟು ದುಡಿದಿದ್ದೇವೆ. ಈಗ ಋಣ ಸಂದಾಯ ಮಾಡುವ ಕಾಲ ಬಂದಿದೆ. ಸೋನಿಯಾ ಸಮಾಧಾನಕ್ಕಾದರೂ ಪ್ರತಿಭಟನೆ ಮಾಡಿ. ರಮೇಶ್ ಕುಮಾರ್ ಈ ವಾಕ್ಯ ಹೇಳಲು ಮೂರ್ನಾಕು ಕಾರಣಗಳಿರಬಹುದು. ಕಾರಣ ಒಂದು- ಅವರು ಹೇಳಿದ್ದು ಮಾಡುವಷ್ಟು ಮಾಡಿ ಇನ್ನು ಅಧಿಕಾರ ಸಿಗುವುದು ಡೌಟು ಎಂದು ಮನೆಯಲ್ಲಿ ಕುಳಿತಿರುವ ಅಥವಾ ತೋರಿಕೆಗೆ ಬಂದರೂ ಈ ಹೋರಾಟಕ್ಕೆ ಕಾಯಾ ವಾಚಾ ಮನಸಾ ಆರ್ಥಿಕವಾಗಿ ಬಿಡಿಗಾಸು ಬಿಡದ ಹಿರಿಯ ಮಾಜಿ ಸಚಿವರ ವಿರುದ್ಧ ಇದ್ದಂತೆ ಕಾಣುತ್ತದೆ. ಯಾಕೆಂದರೆ ಸರಿಯಾಗಿ ನೋಡಿದರೆ ಸೋನಿಯಾ ಪರ ಹೋರಾಟದಲ್ಲಿ ಎಲ್ಲವನ್ನು ತೊಡಗಿಸಿಕೊಂಡು ಹೋರಾಡುತ್ತಿರುವ ಏಕೈಕ ವ್ಯಕ್ತಿ ಅದು ಡಿಕೆಶಿ. ತಾವು ಸಿಎಂ ಆಗಬೇಕು ಎನ್ನುವ ಆಸೆ ಮತ್ತು ಭ್ರಮೆಯಿಂದ ಅವರು ತಾವು ಇಷ್ಟರವರೆಗೆ ಕೂಡಿಟ್ಟಿರುವ ತಿಜೋರಿಯನ್ನು ಮೆಲ್ಲಮೆಲ್ಲಗೆ ಖಾಲಿ ಮಾಡುತ್ತಿದ್ದಾರೆ. ಇದರಿಂದ ಸಿಕ್ಕಿದರೆ ಸಿಎಂ ಖುರ್ಚಿ. ಹೋದರೆ ಯಾರದ್ದೋ ಒಂದಿಷ್ಟು ಭ್ರಷ್ಟಾಚಾರದ ಹಣ. ಅದನ್ನು ನೋಡಿಯೇ ಉಳಿದ ಹಿರಿಯ ತಲೆಗಳು ನಾವು ಖರ್ಚು ಮಾಡಿದರೂ ಸಿಎಂ ಅಂತೂ ಆಗುವುದಿಲ್ಲ. ಯಾರೋ ಕಿರೀಟ ತೊಡಲು ನಾವು ಯಾಕೆ ಬ್ಯಾಂಡು ತಯಾರು ಮಾಡಬೇಕು ಎಂದು ಸುಮ್ಮನೆ ಕುಳಿತಿದ್ದಾರೆ. ಆ ನೋವನ್ನು ಡಿಕೆಶಿ ಎಲ್ಲಿಯೋ ರಮೇಶ್ ಕುಮಾರ್ ಮುಂದೆ ಹೇಳಿ ಅವಲತ್ತುಕೊಂಡಿದ್ದಾರೆ. ಅದೇ ನೆನಪಾಗಿ ಇದ್ದದ್ದನ್ನು ಇದ್ದ ಹಾಗೆ ರಮೇಶು ಬಹಿರಂಗ ಭಾಷಣದಲ್ಲಿ ಹೇಳಿದ್ದು. ಇದು ನಿಜವಾಗಿಯೂ ಹಿರಿಯ ಕಾಂಗ್ರೆಸ್ಸಿಗರ ತಲೆಗೆ ಹೋಯಿತೋ ಬಿಟ್ಟಿತೋ ಆದರೆ ಕಾಂಗ್ರೆಸ್ ಇಡೀ ರಾಜ್ಯದ ಜನರ ಮುಂದೆ ಬೆತ್ತಲಾಯಿತು.
ಹಾಗೆ ನೋಡಿದರೆ ಮೋದಿ ಬಿಟ್ಟು ಈ ವಿಷಯದ ಬಗ್ಗೆ ಟೀಕೆ, ವಿರೋಧ ಮಾಡುವಷ್ಟು ನೈತಿಕತೆಯನ್ನು ಭಾರತೀಯ ಜನತಾ ಪಾರ್ಟಿಯಲ್ಲಿ ಯಾರೂ ಉಳಿಸಿಲ್ಲ ಎನ್ನುವುದು ಬೇರೆ ವಿಷಯ. ಆದರೆ ಯಾರೂ ಈ ಪರಿ ಭ್ರಷ್ಟಾಚಾರದ ಹಣೆಪಟ್ಟಿಯನ್ನು ಮೆಡಲ್ ತರಹ ಮಾಡಿ ಕುತ್ತಿಗೆಗೆ ಹಾಕಿ ತಿರುಗಲು ಹೋಗಿಲ್ಲ. ಆದರೆ ರಮೇಶು ಆ ಕೆಲಸ ಮಾಡಿಬಿಟ್ಟರು. ಇನ್ನು ಸೋನಿಯಾ ಸಮಾಧಾನಕ್ಕೆ ಹೋರಾಟ ಮಾಡಬೇಕು ಎನ್ನಲು ಸೋನಿಯಾ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಯಾವುದೇ ವಿಚಾರಣೆ ಎದುರಿಸುತ್ತಿಲ್ಲ. ಅವರು ಮನಿ ಲಾಡ್ರಿಂಗ್ ಮಾಡಿದ್ದಾರೆ ಎಂದು ಸುಬ್ರಹ್ಮಣ್ಯಂ ಸ್ವಾಮಿ ಹಾಕಿದ ಕೇಸ್ ಬಗ್ಗೆ ತನಿಖೆ ಎದುರಿಸುತ್ತಿದ್ದಾರೆ. ಇನ್ನು ಸುಖಾಸುಮ್ಮನೆ ಸೋನಿಯಾ ವಿರುದ್ಧ ತನಿಖೆ ಮಾಡಲು ಯಾವ ಸಂಸ್ಥೆಯೂ ಮುಂದಾಗುವುದಿಲ್ಲ. ಹಾಗೆ ಮಾಡಿದ್ದರೆ ಅಂತಹ ಸಂಸ್ಥೆಗಳ ಬೆನ್ನು ಮೂಳೆ ಮುರಿಯಲು ದೇಶದ ಉನ್ನತ ನ್ಯಾಯಾಲಯಗಳಿವೆ. ಇಷ್ಟಾಗಿಯೂ ಈಡಿ ತನಿಖೆ ನಡೆಸಿ ಮೂರ್ನಾಕು ಸಲ ರಾಹುಲ್ ಹಾಗೂ ಎರಡು ಸಲ ಸೋನಿಯಾ ಅವರನ್ನು ಕರೆದಿದೆ ಎಂದರೆ ಅವರ ಬಳಿ ಸರಿಯಾದ ದಾಖಲೆ ಇದೆ ಎಂದೇ ಅರ್ಥ. ದೇಶದ ಮೊದಲ ಕುಟುಂಬದಂತಿದ್ದ ನೆಹರೂ-ಗಾಂಧಿ ಕುಟುಂಬದ ಸೊಸೆಯನ್ನು ಸುಳ್ಳು ಕೇಸಿನಲ್ಲಿ ಸಿಕ್ಕಿಸಿದ್ದು ಭವಿಷ್ಯದಲ್ಲಿ ಗೊತ್ತಾದರೆ ಮರ್ಯಾದೆ ಯಾರದ್ದೂ ಉಳಿಯಲ್ಲ ಎಂದು ಅದಕ್ಕೂ ಗೊತ್ತಿದೆ. ಹಾಗಿರುವಾಗ ದೇಶವ್ಯಾಪಿ ಕಾಂಗ್ರೆಸ್ ಪ್ರತಿಭಟನೆ ಮಾಡಿ ಸೋನಿಯಾ ಅವರನ್ನು ಸಮಾಧಾನ ಮಾಡಲು ಹೊರಡುವಾಗ ಒಂದಿಷ್ಟು ಆತ್ಮವಿಮರ್ಶೆ ಮಾಡಲು ಕೆಲವು ಕಾಂಗ್ರೆಸ್ಸಿಗರು ಪಕ್ಕದಲ್ಲಿ ನಿಂತರೆ ರಮೇಶ್ ಕುಮಾರ್ ಅವರು ಇಡೀ ಕಾಂಗ್ರೆಸ್ಸಿನ ಮರ್ಯಾದೆಯನ್ನು ಗಟಾರದಲ್ಲಿ ಚೆಲ್ಲಿಬಿಟ್ಟಿದ್ದಾರೆ!
Leave A Reply