ಸಂಜೆಯಿಂದ ಬಂದ್ ಮಾಡಿ ರೋಡ್ ಬ್ಲಾಕ್ ಮಾಡಿದರೆ ಆಗುತ್ತಾ?

ಸಂಜೆ 6 ಗಂಟೆಯಿಂದ ಮರುದಿನ ಬೆಳಿಗ್ಗೆ 6 ಗಂಟೆಯ ತನಕ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಅಂಗಡಿ, ಮುಗ್ಗಟ್ಟುಗಳು ಬಂದ್ ಎಂದು ವಾರದಿಂದ ಜಿಲ್ಲಾಧಿಕಾರಿಯವರ ಆದೇಶದಂತೆ ನಡೆಯುತ್ತಿದೆ. ಇದಕ್ಕೆ ಜಿಲ್ಲಾಡಳಿತ ಕೊಡುವ ಕಾರಣವೇನೆಂದರೆ ರಾತ್ರಿ ನಡೆಯುತ್ತಿರುವ ಹತ್ಯೆಗಳನ್ನು ತಡೆಯುವುದು. ಒಂದು ವೇಳೆ ಹತ್ಯೆಗಳನ್ನು ತಡೆಯಲು ಈ ರೀತಿ ಸಂಜೆಯ ನಂತರ ಬಂದ್ ಮಾಡಿಸುವುದೇ ಆಗಿದ್ದಲ್ಲಿ ಜೀವನಪೂರ್ತಿ ಬಂದ್ ಮಾಡಿಸಬೇಕಾದಿತೇನೋ. ಯಾಕೆಂದರೆ ಒಂದೆರಡು ವಾರ ಬಂದ್ ಮಾಡಿಸುವುದರಿಂದ ಎಲ್ಲವೂ ಸರಿಯಾಗುತ್ತದೆ ಎಂದು ಅದ್ಯಾವ ಲಾಜಿಕ್ ಇಷ್ಟು ಇವರು ಯೋಚಿಸುತ್ತಾರೆ ಎಂದು ದೇವರಿಗೆ ಗೊತ್ತು. ಈಗ ಮೂರು ಹತ್ಯೆಗಳು ಜಿಲ್ಲೆಯಲ್ಲಿ ನಡೆದಿವೆ. ಮಸೂದ್ ಹತ್ಯೆಯನ್ನು ತಡೆಯಬಹುದಾಗಿತ್ತು ಎನ್ನುವುದನ್ನು ಹೇಳುವುದು ಕಷ್ಟ. ಯಾಕೆಂದರೆ ಅದು ಯಾವುದೇ ಸಣ್ಣ ಕುರುಹು ಇಲ್ಲದೆ ನಡೆದ ಹತ್ಯೆ. ಆದರೆ ಅದರ ನಂತರ ನಡೆದ ಪ್ರವೀಣ್ ನೆಟ್ಟಾರು ಹತ್ಯೆಯ ಬಗ್ಗೆ ಕ್ಲೂಗಳು ಪೊಲೀಸರಿಗೆ ಸಿಕ್ಕಿದ್ದವು. ಅದನ್ನು ಪೊಲೀಸರು ಗಂಭೀರವಾಗಿ ತೆಗೆದುಕೊಂಡಿದ್ದರೆ ಪ್ರವೀಣ್ ಹತ್ಯೆಯನ್ನು ತಡೆಯಬಹುದಾಗಿತ್ತು. ಆದರೆ ಪೊಲೀಸರು ಅದನ್ನು ಮಾಡಲಿಲ್ಲ. ಅದರ ಬಳಿಕ ಫಾಜಿಲ್ ಹತ್ಯೆ ನಡೆಯಿತು. ಅದರ ಕ್ಲೂ ಕೂಡ ಪೊಲೀಸರಿಗೆ ಏನೂ ಇರಲಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಫಾಜಿಲ್ ಹತ್ಯೆಯ ಮೊದಲು ಮೂರ್ನಾಕು ದಿನಗಳಿಂದ ಸುರತ್ಕಲ್ ನಲ್ಲಿ ಹತ್ಯೆಗೆ ಸಂಚು ಹೂಡಲಾಗಿತ್ತು ಎಂದು ಕೂಡ ವರದಿಗಳು ಪೊಲೀಸರ ಬಳಿ ಇವೆ. ಆದರೂ ಸುರತ್ಕಲ್ ನಲ್ಲಿ ಒಂದು ಹತ್ಯೆ ನಡೆದೇ ಹೋಯಿತು. ಪೊಲೀಸರಿಗೆ ಅದನ್ನು ತಡೆಯಲು ಆಗಲಿಲ್ಲ. ಈಗ ಪೊಲೀಸ್ ಅಧಿಕಾರಿಗಳ ಮನವಿಯ ಮೇರೆಗೆ ಜಿಲ್ಲಾಧಿಕಾರಿಗಳು ಸಂಜೆ 6 ಗಂಟೆಯಿಂದ ಮರುದಿನ ಬೆಳಿಗ್ಗೆ 6 ಗಂಟೆಯ ತನಕ ಬಂದ್ ಮಾಡಿಸಿದ್ದಾರೆ.
ಅದರೊಂದಿಗೆ ಫಾಜಿಲ್ ಹತ್ಯೆಯ ನಂತರ ಕೆಲವು ದಿನಗಳು ಬಹಳ ನಿರ್ಣಾಯಕ ಎಂದು ಕೂಡ ಹೇಳಲಾಗುತ್ತಿದೆ. ಯಾವುದೇ ಒಂದು ಹತ್ಯೆ ಅದು ಕೋಮು ಸಂಬಂಧಿತ ಗಲಾಟೆಯ ಹಿನ್ನಲೆಯದ್ದು ಆಗಿದ್ದರೆ ಅದರ ಅಂದಾಜು ಗುಪ್ತಚರ ಇಲಾಖೆಗೆ ಸಣ್ಣ ಕುರುಹು ಸಿಗದೇ ನಡೆಯಲು ಸಾಧ್ಯವೇ ಇಲ್ಲ. ಅದನ್ನು ಕ್ಷಿಪ್ತಗತಿಯಲ್ಲಿ ಭೇದಿಸಿದರೆ ತಡೆಯಲು ಸಾಧ್ಯ. ಇರಲಿ, ಡಿಸಿಯವರು ತಮ್ಮ ವಿವೇಚನೆಯಂತೆ ಸಂಜೆಯ ನಂತರ ಬಂದ್ ಆದೇಶ ಹೊರಡಿಸಿದ್ದಾರೆ. ಅದರಿಂದ ಎಲ್ಲವೂ ಸುಲಲಿತವಾಗಿ ನಡೆದಿದೆಯಾ ಎಂದು ನೋಡಿದರೆ ಸಂಜೆ ಆರು ಆಗುತ್ತಿದ್ದಂತೆ ನಗರದ ಆಯಕಟ್ಟಿನ ಜಾಗಗಳಲ್ಲಿ ಅನಗತ್ಯ ಟ್ರಾಫಿಕ್ ಜಾಮ್ ಎನ್ನುವುದು ಗ್ಯಾರಂಟಿಯಾಗಿದೆ. ಕೊಟ್ಟಾರ, ಪಿವಿಎಸ್, ಕದ್ರಿ, ಲಾಲ್ ಭಾಗ್ ಸಹಿತ ಅನೇಕ ಕಡೆ ಸಂಜೆ ಆರು ಗಂಟೆಯಾಗುತ್ತಿದ್ದಂತೆ ರಸ್ತೆಗಳನ್ನು ಒಂದು ಸೈಡ್ ಬಂದ್ ಮಾಡಿ ಇನ್ನೊಂದು ಸೈಡಿನಿಂದ ಮಾತ್ರ ಹೋಗಿ ಬರುವ ವ್ಯವಸ್ಥೆ ಮಾಡಲಾಗುತ್ತದೆ. ಇದರಿಂದ ಏನಾಗುತ್ತದೆ? ಕೊಟ್ಟಾರಚೌಕಿಯಲ್ಲಿ ಹೀಗೆ ಮಾಡುವುದರಿಂದ ವಾಹನಗಳ ಬ್ಲಾಕ್ ಬಂಗ್ರಕೂಳುರು ತನಕ ಇರುತ್ತದೆ. ಒಬ್ಬ ವ್ಯಕ್ತಿ ಐದುವರೆಗೆ ಆಫೀಸಿನಿಂದ ಹೊರಟು ಇಲ್ಲಿ ಯಾವುದಾದರೂ ಒಂದು ಕಡೆ ಆರು ಗಂಟೆಗೆ ಸಿಕ್ಕಿಹಾಕಿಕೊಂಡರೆ ಆತ ಕನಿಷ್ಟ ಒಂದು ಗಂಟೆ ಅದರಲ್ಲಿ ಸಮಯ ವ್ಯಯ ಮಾಡಲೇಬೇಕಾಗುತ್ತದೆ. ಆ ಟ್ರಾಫಿಕ್ ಜಾಮ್ ಕ್ಲಿಯರ್ ಆಗುವಾಗ ಏಳರಿಂದ ಏಳೂವರೆ ತನಕ ನಡೆಯುತ್ತಲೇ ಇರುತ್ತದೆ. ಇದರಿಂದ ಬಸ್ಸಿನವರಿಂದ ಹಿಡಿದು ಎಲ್ಲರಿಗೂ ತೊಂದರೆ. ಇದರ ಉದ್ದೇಶ ಏನು ಎಂದು ಪೊಲೀಸ್ ಕಮೀಷನರ್ ಹೇಳಬೇಕು. ಈಗ ನೀವು ಅಂಗಡಿ-ಮುಗ್ಗಟ್ಟು ಬಂದ್ ಮಾಡಲು ಆರು ಗಂಟೆಯ ಡೆಡ್ ಲೈನ್ ಕೊಟ್ಟಿದ್ದೀರಿ. ಅವರು ಬಂದ್ ಮಾಡಿ ಮನೆಗೆ ಹಿಂತಿರುಗುವಾಗ ಹೀಗೆ ಗಂಟೆಗಟ್ಟಲೆ ರೋಡ್ ಬ್ಲಾಕ್ ಮಾಡಿ ಅವರು ಮನೆ ತಲುಪುವಾಗ ಇನ್ನಷ್ಟು ಕತ್ತಲಾಗುವುದಿಲ್ಲವೇ? ಈ ಒನ್ ಸೈಡ್ ರೋಡ್ ಬ್ಲಾಕ್ ಮಾಡುವುದನ್ನು ಆರು ಗಂಟೆಯ ಬದಲಿಗೆ ಎಂಟು ಗಂಟೆಯಿಂದ ಮಾಡಿದರೆ ಉತ್ತಮ. ಯಾಕೆಂದರೆ ಆರು ಗಂಟೆಗೆ ಹೊತ್ತಿಗೆ ನಗರದಲ್ಲಿ ವಿಪರೀತ ಟ್ರಾಫಿಕ್ ಜಾಮ್ ಇರುತ್ತದೆ. ಆ ಸಮಯದಲ್ಲಿ ರಸ್ತೆಯ ಎರಡೂ ಸೈಡನ್ನು ತೆರೆದಿರುವಾಗ ಆಗ ಸರಾಗವಾಗಿ ಹೋಗಿ ಬರುವುದೇ ಸಾಮಾನ್ಯ ದಿನಗಳಲ್ಲಿ ಕಷ್ಟ. ಹಾಗಿರುವಾಗ ಇವರು ನೈಟ್ ಕಫ್ಯೂ ರೀತಿಯಲ್ಲಿ ಬಂದ್ ಮಾಡಿ ಪೀಕ್ ಅವರ್ ನಲ್ಲಿ ಒನ್ ಸೈಡ್ ಎಂದರೆ ಅದರಿಂದ ತೊಂದರೆಯೇ ಜಾಸ್ತಿ ವಿನ: ಬೇರೆ ಏನೂ ಇಲ್ಲ. ಅದರ ಬದಲಿಗೆ ಈ ಸಿಕ್ಸ್ ಟು ಸಿಕ್ಸ್ ಬಿಟ್ಟು ಎಲ್ಲೆಲ್ಲಿ ಈ ಅಹಿತಕರ ಘಟನೆಗಳು ಆಗುವ ಸಾಧ್ಯತೆಗಳು ಹೆಚ್ಚಿವೆಯೋ ಆ ಸ್ಥಳಗಳಲ್ಲಿ ಹೆಚ್ಚುವರಿ ಪೊಲೀಸ್ ಸೆಕ್ಯೂರಿಟಿ ಗಟ್ಟಿ ಮಾಡಿದರೆ ಉತ್ತಮ ಅಲ್ಲವೇ?
ಇನ್ನು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ ಎನ್ನುವ ಕರ್ಮಕ್ಕೆ ಅರ್ಜೆಂಟಲ್ಲಿ ಮೊನ್ನೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಂತಿ ಸಭೆ ನಡೆಸಲಾಯಿತು. ಪೊಲೀಸ್ ಅಧಿಕಾರಿಗಳನ್ನು ಸೇರಿಸಿ ಕೆಲವು ಕಾಂಗ್ರೆಸ್ ನಾಯಕರು ಇದ್ದರು ಬಿಟ್ಟರೆ ಸಂಘಟನೆಗಳಿಂದ ಯಾವುದೇ ಪ್ರಮುಖ ನಾಯಕರು ಇರಲೇ ಇಲ್ಲ. ಇದರಿಂದ ಸಾಧಿಸಿದ್ದಾದರೂ ಏನು? ಸಿಎಂ ಹೇಳಿದ್ದಾರೆಂದು ಮಾಡಿ ಅದರ ವರದಿ ಕಳುಹಿಸಿ ಕೈ ತೊಳೆದುಕೊಂಡು ಬಿಡೋಣ ಎಂದು ಜಿಲ್ಲಾಡಳಿತ ಅಂದುಕೊಂಡರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥೆ ಸರಿಯಾಗುತ್ತಾ? ಶಾಂತಿ ಸಭೆಯಲ್ಲಿ ಭಾಗವಹಿಸುವ ನಾಯಕರಿಗೆ ಬಹುತೇಕ ಸಂದರ್ಭದಲ್ಲಿ ಈ ಗ್ರೌಂಡ್ ನಲ್ಲಿ ಇರುವ ಕಾರ್ಯಕರ್ತರ ಪರಿಚಯವೇ ಇರುವುದಿಲ್ಲ. ಅಂತಹ ನಾಯಕರೆನಿಸಿಕೊಂಡವರು ಶಾಂತಿ ಸಭೆಯಲ್ಲಿ ಬಂದು ಬೇರೆಯವರದ್ದು ಕೇಳಿ, ತಮ್ಮದು ಇರಲಿ ಎಂದು ಎರಡು ಮಾತು ಹೇಳಿದರೆ ಮುಗಿಯಿತು ಎಂದುಕೊಂಡು ಮನೆಗೆ ಹಿಂತಿರುಗಿ ಬಿಸಿ ಚಾ ಕುಡಿದು ಕಂಬಳಿ ಹೊದ್ದು ಮಲಗಿದರೆ ಆಗುತ್ತಾ? ಇನ್ನು ನಿಜವಾಗಿ ತಳಮಟ್ಟದಲ್ಲಿ ಕಾರ್ಯಕರ್ತರೊಂದಿಗೆ ಇರುವವರು ಇವರ ಶಾಂತಿ ಸಭೆಗಳಲ್ಲಿ ಬರುವುದಿಲ್ಲ. ಇನ್ನು ಇಂತಹ ಶಾಂತಿ ಸಭೆಗಳನ್ನು ನಿಯಮ ಪ್ರಕಾರ ಮೂರು ತಿಂಗಳಿಗೊಮ್ಮೆ ಮಾಡಬೇಕು ಎಂದು ಇದೆ. ಆದರೆ ಇದನ್ನು ಜಿಲ್ಲಾಡಳಿತದಿಂದ ರಮ್ಜಾನ್ ಹಾಗೂ ಗಲಭೆಯ ಸಂದರ್ಭದಲ್ಲಿ ಮಾತ್ರ ಮಾಡಲಾಗುತ್ತದೆ. ಅದರ ಬದಲಿಗೆ ಗ್ರಾಮಮಟ್ಟದಲ್ಲಿ ಮೂರು ತಿಂಗಳಿಗೊಮ್ಮೆ ಮಾಡಿದರೆ ಅದಕ್ಕಿಂತ ಉತ್ತಮ ಬೇರೆ ವಿಷಯ ಇಲ್ಲಾ!!
Leave A Reply