ಸಿದ್ದು,ಡಿಕೆಶಿ ಆಲಿಂಗಿಸಿದ್ದು ಖುಷಿ ಎಂದ ರಾಹುಲ್!
ಮಾಜಿ ಸಿಎಂ ಸಿದ್ದು ದಾವಣಗೆರೆಯಲ್ಲಿ 75 ಕೋಟಿ ರೂಪಾಯಿ ಖರ್ಚು ಮಾಡಿ ತಮ್ಮ 75 ನೇ ಜನ್ಮದಿನವನ್ನು ಆಚರಿಸಿದ ಕಾರಣ ರಾಜ್ಯಕ್ಕೆ ಆದ ಲಾಭ ಏನು? ಲಾಭ ಏನಾದರೂ ಆಗಿದಿದ್ದರೆ ಪೆಂಡಾಲು ಹಾಕಿದವರಿಗೆ, ಸ್ಟೇಜ್, ಮೈಕ್, ಬಸ್ಸು, ಟ್ಯಾಕ್ಸಿ ಮತ್ತು ಅಡುಗೆಯವರಿಗೆ ಬಿಟ್ಟರೆ ರಾಜ್ಯದ ಜನರಿಗೆ ಏನಾದರೂ ಉಪಕಾರ ಆಗಿದೆಯಾ? ಪಾಪದ ಜನರಿಗೆ ಡ್ರಿಂಕ್ಸ್ ಮತ್ತು ಬಾಡೂಟದ ಆಸೆ ತೋರಿಸಿ ಅಕ್ಕಪಕ್ಕದ ಜಿಲ್ಲೆಗಳಿಂದ ಕರೆದುಕೊಂಡು ಬಂದದ್ದು ಮುಂದಿನ ವಿಧಾನಸಭಾ ಚುನಾವಣೆಯ ಟಿಕೆಟ್ ಆಕಾಂಕ್ಷಿಗಳ ಸಾಧನೆ ಬಿಟ್ಟರೆ ಇನ್ನೇನಿತ್ತು. ಅಷ್ಟಕ್ಕೂ ಒಂದು ಅವಧಿಗೆ ಮುಖ್ಯಮಂತ್ರಿಯಾಗಿ ಕೇಂದ್ರದ ಅನುದಾನದಲ್ಲಿ ಅನ್ನಭಾಗ್ಯ ಕೊಟ್ಟದ್ದು ಹಾಗೂ ರಾಜ್ಯದ ಅನುದಾನದಲ್ಲಿ ಅಲ್ಪಸಂಖ್ಯಾತರ ಮಂಡಿಗೆ ಬೆಣ್ಣೆ ಹಚ್ಚಿದ್ದು ಬಿಟ್ಟರೆ ಸಿದ್ದು ಮಾಡಿದ ಘನಂದಾರಿ ಕೆಲಸ ಏನು? ಜೆಡಿಎಸ್ ನಲ್ಲಿ ಮುಖ್ಯಮಂತ್ರಿ ಮಾಡಿಲ್ಲ ಎಂದು ಕಾಂಗ್ರೆಸ್ಸಿಗೆ ಹಾರಿದ ಸಿದ್ದು, ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಮಾಡಿ ರೆಡ್ಡಿಗಳ ನೆಲದಲ್ಲಿ ಗರ್ಜಿಸಿದ್ದು ಅವರ ಏಕೈಕ ಹೆಗ್ಗಳಿಕೆ. ಅಷ್ಟಕ್ಕೂ ಅವರು ಪಾದಯಾತ್ರೆ ಮಾಡಿ ತಾವು ರೆಡ್ಡಿಗಳ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತೇವೆ ಎಂದು ರಾಜ್ಯಕ್ಕೆ ತೋರಿಸಿಕೊಟ್ಟರೆ ವಿನ: ತಾವು ಅಧಿಕಾರಕ್ಕೆ ಬಂದ ಬಳಿಕ ಎಲ್ಲಿಯೂ ತಮ್ಮ ಅವಧಿಯಲ್ಲಿ ಆದ ಭ್ರಷ್ಟಾಚಾರವನ್ನು ತಡೆಹಿಡಿಯಲು ಸಾಧ್ಯವಾಗಲಿಲ್ಲ. ಅವರು ತಡೆಹಿಡಿದದ್ದು ಡಿಕೆಶಿ ತಮ್ಮ ಸಚಿವ ಸಂಪುಟದಲ್ಲಿ ಮಂತ್ರಿಯಾಗಿ ಇರುವುದನ್ನು ಮಾತ್ರ. ಡಿಕೆಶಿಯನ್ನು ಸಚಿವ ಮಾಡಲು ಮೂರು ವರ್ಷ ಹಟ ಮಾಡಿ ತಡೆಹಿಡಿದುಬಿಟ್ಟಿದ್ದರು. ನಂತರ ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗಲು ಕೈಕಾಲು ಹೊಡೆಯುವಾಗ ಅದನ್ನು ತಡೆಯಲು ಕೂಡ ತುಂಬಾ ಪ್ರಯತ್ನಪಟ್ಟರು. ಇದು ಬಿಟ್ಟರೆ 83 ರಲ್ಲಿ ಮೊದಲ ಬಾರಿಗೆ ಶಾಸಕರಾಗಿದ್ದ ಸಿದ್ದು 2023 ರಲ್ಲಿ ಕೊನೆ ಬಾರಿ ಆಗುತ್ತೇನೆ ಎಂದು ಹೊರಟಿದ್ದಾರೆ. ಈ ಬಾರಿ ಸಿದ್ದು ಚುನಾವಣೆಗೆ ಸ್ಪರ್ಧಿಸಲಿಕ್ಕಿಲ್ಲ. ನಾನೇ ಸಿಎಂ ಎಂದು ಡಿಕೆಶಿ ಅಂದುಕೊಂಡಿದ್ದರು. ಆದರೆ ಯಾವಾಗ ಸಿದ್ಧರಾಮೋತ್ಸವ ಪ್ಲಾನ್ ಶುರುವಾಯಿತೋ ಅದನ್ನು ನಿಲ್ಲಿಸಲು ತುಂಬಾ ಪ್ರಯತ್ನಪಟ್ಟರೂ ಡಿಕೆಶಿಗೆ ಅದು ಸಾಧ್ಯವಾಗಲಿಲ್ಲ. ಈಗಂತೂ ಈ ಸಿದ್ಧರಾಮೋತ್ಸವ ನೋಡಿ ಸಿಎಂ ಆಸೆಯನ್ನು ಡಿಕೆಶಿ ಕೈಬಿಟ್ಟಿದ್ದಾರೆ. ಕನಿಷ್ಟ ಸಚಿವ ಸಂಪುಟದಲ್ಲಿ ಉತ್ತಮ ಮೇಯುವಂತಹ ಖಾತೆಯನ್ನಾದರೂ ನೀಡಲಿ ಎಂದು ದೇವರಿಗೆ ಬೇಡಿಕೊಳ್ಳುವ ಪರಿಸ್ಥಿತಿ ಬಂದಿದೆ. ನಾನು ಯಾವುದೇ ಜನ್ಮದಿನಾಚರಣೆಗೆ ಹೋಗುವುದಿಲ್ಲ. ಆದರೆ ಇವರ ಹುಟ್ಟಿದ ಹಬ್ಬಕ್ಕೆ ಬರಬೇಕಾಗಿದೆ ಎಂದು ರಾಹುಲ್ ಹೇಳಿದ್ದು ಅವರ ಪ್ರೀತಿ ಎನ್ನುವುದಕ್ಕಿಂತ ವೀಕನೆಸ್ ಎಂದು ಹೇಳುವುದೇ ಉತ್ತಮ. ಯಾಕೆಂದರೆ ಹುಟ್ಟಿದ ಹಬ್ಬದ ವೇದಿಕೆಯಲ್ಲಿ ಸಿದ್ದು ಹಾಗೂ ಡಿಕೆಶಿ ಆಲಿಂಗಿಸಿಕೊಂಡಿದ್ದು ಅವರ ನಡುವೆ ಏನೂ ಇಲ್ಲ ಎಂದು ತೋರಿಸಿಕೊಟ್ಟಂತೆ ಆಗಿದೆ. ಇದು ತನಗೆ ಖುಷಿ ನೀಡಿತು ಎಂದು ರಾಹುಲ್ ಹೇಳಿದ ಮಾತುಗಳನ್ನು ಇಡೀ ದೇಶ ನೋಡಿತು. ಅದರ ಅರ್ಥ ಅವರಿಗೆ ಎಲ್ಲಾ ಸಮಸ್ಯೆಗಳಿಗಿಂತ ಸಿದ್ದು ಮತ್ತು ಡಿಕೆಶಿ ಒಟ್ಟಿಗೆ ಹೋಗುವುದೇ ಮುಖ್ಯವಾಗಿತ್ತು ಎನ್ನುವುದನ್ನು ತೋರಿಸುತ್ತದೆ. ಇನ್ನು ಈ ಶಕ್ತಿಪ್ರದರ್ಶನದಲ್ಲಿ ರಾಮ ಮಂದಿರ ಬೇಕಾ ಎನ್ನುವಂತಹ ವಿಷಯಗಳನ್ನು ಸಿದ್ದು ಎತ್ತಿದ್ದಾರೆ. ದೇವರನ್ನು ನಂಬದ ನಾಸ್ತಿಕವಾದಿ ಸಿದ್ದುಗೆ ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರವನ್ನು ಕಟ್ಟುವುದಕ್ಕಿಂತ ಒಂದು ಆಸ್ಪತ್ರೆ ಕಟ್ಟಿಸಬಹುದಿತ್ತು ಎಂದು ಅನಿಸಬಹುದು. ಆದರೆ ಶ್ರೀರಾಮ ಮಂದಿರ ಹಿಂದೂಗಳ ಅಸ್ಮಿತೆಯ ಪ್ರತೀಕ. ಅಂತಹ ವಿಷಯದಲ್ಲಿ ಒಬ್ಬ ನಾಸ್ತಿಕ ಮಾತನಾಡಲೇಬಾರದು. ಹಾಗೆ ನೋಡಿದರೆ ಈ ಜನ್ಮದಿನಕ್ಕಾಗಿ ಅವರು ಮತ್ತು ಅವರ ಪಟಾಲಂ ಖರ್ಚು ಮಾಡಿದ 75 ಕೋಟಿ ರೂಪಾಯಿಗಳಲ್ಲಿ ಒಂದು ಸುಸಜ್ಜಿತ ಆಸ್ಪತ್ರೆ ಕಟ್ಟಬಹುದಿತ್ತು. ಅದಕ್ಕೆ ಸಿದ್ಧರಾಮಯ್ಯ ಜನ್ಮದಿನೋತ್ಸವ ನಿಮಿತ್ತ ಎಂದು ಹೆಸರಿಡಬಹುದಿತ್ತು. ಅದು ಶಾಶ್ವತವಾಗಿ ಇರುತ್ತಿತ್ತು. ಅದು ಬಿಟ್ಟು ಈಗ ಇವರು ಮಾಡಿದ ಕಾರ್ಯಕ್ರಮದಿಂದ ಒಂದಿಷ್ಟು ಸಾವಿರ ಕುಡುಕರಿಗೆ ಗಲಾಟೆ, ಪೆಟ್ಟು ಮಾಡಿ ನೈಂಟಿ ಸಿಕ್ಕಿದೆ ಬಿಟ್ಟರೆ ಎಷ್ಟೋ ಮಂದಿ ಊಟ ಸಿಗಲಿಲ್ಲ ಎಂದು ಟೇಬಲ್ ಮೇಲೆ ಹತ್ತಿ ಬೊಬ್ಬೆ ಹೊಡೆದಿದ್ದಾರೆ. ಅದರಿಂದ ಲಾಠಿಚಾರ್ಜ್ ಕೂಡ ಮಾಡಲಾಗಿದೆ. ಒಂದು ಪೀಸ್ ಚಿಕನ್ ಗಾಗಿ ಜನ ಮೈಮೇಲೆ ಬಿದ್ದು ಹೋರಾಟ ಮಾಡಿದ್ದಾರೆ. ಅದರ ಬದಲಿಗೆ ಎಷ್ಟೋ ಸಾವಿರ ಅಭಿಮಾನಿಗಳಿಗೆ ಜೀವಮಾನ ನೆನಪಿಡುವ ಏನಾದರೂ ಸಹಾಯವನ್ನು ಸಿದ್ದು ಮಾಡಬಹುದಿತ್ತು. ಇನ್ನು ಕೋರೊನಾ ಅವಧಿಯಲ್ಲಿ ಸರಕಾರ ವಿಫಲವಾಗಿದೆ ಎಂದು ಭಾಷಣ ಹೊಡೆದ ಸಿದ್ದು ಈ ಹಣದಲ್ಲಿ ಅಸಂಖ್ಯಾತ ಮನೆಗಳಿಗೆ ಅಕ್ಕಿ, ಬೇಳೆ ಕೊಟ್ಟು ತಮ್ಮ ಉದಾರತೆಯನ್ನು ಮೆರೆಯಬಹುದಿತ್ತಲ್ಲ. ಬೆಲೆಯೇರಿಕೆಯಿಂದ ಜನ ತತ್ತರಿಸಿದ್ದಾರೆ ಎಂದು ಹೇಳುವ ಸಿದ್ದು ಈ ಹಣದಿಂದ ಅಂತವರಿಗೆ ಸಹಾಯ ಮಾಡಬಹುದಿತ್ತಲ್ಲ. ಕೇವಲ ಶಕ್ತಿ ಪ್ರದರ್ಶನಕ್ಕಾಗಿ ರಾಜ್ಯವೇ ನೆರೆಯಲ್ಲಿ ಮುಳುಗಿ ಅನೇಕ ಜನರು ಸಾವಿಗೀಡಾಗಿರುವಾಗ, ಮನೆ, ಬೆಳೆ ಕಳೆದುಕೊಂಡು ಒದ್ದಾಡುತ್ತಿರುವಾಗ ಸಿದ್ದು ಭಾಷಣ ಯಾರಿಗೆ ಬೇಕು? ಬಂದವರು ಇವರ ಭಾಷಣ ಕೇಳಿ ಯಾವ ರಾಜ್ಯ ಉದ್ಧಾರ ಮಾಡಲಿದ್ದಾರೆ. ತಮ್ಮ ಬೆಂಬಲಿಗರಿಂದ ಶಿಳ್ಳೆ, ಚಪ್ಪಾಳೆಯನ್ನು ರಾಹುಲ್ ಕೇಳಲಿ ಎಂದು ಅವರನ್ನು ಕರೆದುಕೊಂಡು ಬರಲಾಗಿದೆ. ಅವರು ಬಂದ ಬಳಿಕ ಡಿಕೆಶಿ ಕೂಡ ಬರಲೇಬೇಕಾಗುತ್ತದೆ ಎನ್ನುವುದು ಸಿದ್ದುಗೆ ಗೊತ್ತಿತ್ತು. ಈ ಉತ್ಸವದಿಂದ ಪಕ್ಷಕ್ಕೆ ಲಾಭ ಆಗುತ್ತಾ, ಬಿಡುತ್ತಾ ಒಟ್ಟಿನಲ್ಲಿ ರೇಸ್ ನಲ್ಲಿ ಯಾರು ಓಡುವ ಕುದುರೆ ಎನ್ನುವುದು ರಾಹುಲ್ ಗೆ ಮನದಟ್ಟಾಯಿತ್ತಲ್ಲ. ಅದು ಬಿಟ್ಟು ಇದೆಲ್ಲ ಮಾಡದಿದ್ದರೆ ಕೊನೆಯ ಕ್ಷಣದಲ್ಲಿ ಅಪ್ಪಿತಪ್ಪಿ ಎಲ್ಲಿಯಾದರೂ ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬಿಟ್ಟಿತ್ತು ಎಂದೇ ಇಟ್ಟುಕೊಳ್ಳೋಣ, ಆಗ ಹೈಕಮಾಂಡ್ ಮುಂದೆ ಗೊಂದಲ ಇರದ ರೀತಿಯಲ್ಲಿ ಸಿದ್ದು ಆಡಿದ ಗೇಮ್ ಪ್ಲಾನ್ ಕುತೂಹಲಕಾರಿಯಾಗಿದೆ. ಸಮಾಜವಾದದ ಹಿನ್ನಲೆಯಿಂದ ಬಂದವರು ಹುಟ್ಟಿದಹಬ್ಬವನ್ನು ಆಚರಿಸುವುದು ಬಿಡಿ, ಅವರು ನೆನಪಿನಲ್ಲಿಯೂ ಇಟ್ಟುಕೊಳ್ಳುವುದಿಲ್ಲ. ಆದರೆ ಅಧಿಕಾರ ಎನ್ನುವುದು ಎಲ್ಲವನ್ನು ಮಾಡಿಸುತ್ತದೆ. ಅದಕ್ಕೆ ಸಿದ್ದು ಕೂಡ ಹೊರತಲ್ಲ ಎನ್ನುವುದು ಸಾಬೀತಾಗಿದೆ.
Leave A Reply