ನಾರಾಯಣ ಗುರುಗಳ ಜಯಂತಿ ಪ್ರತಿ ವರ್ಷ ಇಷ್ಟೇ ಅದ್ದೂರಿಯಾಗಿ ಆಚರಿಸಲಾಗುತ್ತದೆಯಾ?
ಇವತ್ತಿನ ತಲೆಮಾರಿಗೆ ಆವತ್ತು ಬ್ರಹ್ಮಶ್ರೀ ನಾರಾಯಣ ಗುರುಗಳು ಹಿಂದುಳಿದವರ, ಬಡವರ ಶ್ರೇಯೋಭಿವೃದ್ಧಿಗಾಗಿ ಮಾಡಿರುವ ಕೆಲಸದ ಯಾವ ಪರಿಚಯ ಕೂಡ ಇಲ್ಲ. ಮೇಲ್ವರ್ಗದವರ ದಬ್ಬಾಳಿಕೆ, ದೇವಸ್ಥಾನಗಳಿಗೆ ಪ್ರವೇಶ ಇಲ್ಲದ ಶೋಷಿತರ ಪರಿಸ್ಥಿತಿ ಇಂದಿನವರಿಗೆ ಅರ್ಥವಾಗುವುದಿಲ್ಲ. ಯಾಕೆಂದರೆ ಆವತ್ತು ಇದ್ದ ಪರಿಸ್ಥಿತಿ ಈಗಿಲ್ಲ. ಅದಕ್ಕಾಗಿ ಅಂತವರು ನಾರಾಯಣ ಗುರುಗಳನ್ನು ರಾಜಕೀಯವಾಗಿ ಬಳಸುತ್ತಿದ್ದಾರೆ. ನಾರಾಯಣ ಗುರುಗಳನ್ನು ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗೆ ಗುತ್ತಿಗೆಯಾಗಿ ತೆಗೆದುಕೊಳ್ಳುವ ಹಕ್ಕಿಲ್ಲ. ತಾನು, ತನ್ನದು ಎಂದು ಬೌಂಡರಿ ಹಾಕಿ ಬದುಕುವವರು ಮಾತ್ರ ನಾರಾಯಣ ಗುರುಗಳನ್ನು ಬಿಲ್ಲವ ಸಮಾಜದವರು ಎಂದು ಅಂದುಕೊಂಡು ಕಿತ್ತಾಡುತ್ತಾರೆ. ನಾರಾಯಣ ಗುರುಗಳು ಇಡೀ ಮನುಕುಲಕ್ಕೆ ಸೇರಿದವರು. ಅವರ ಮೂಲ ಕೇರಳವಾದರೂ ಅವರಿಗೆ ಕರ್ನಾಟಕದಲ್ಲಿಯೂ ಅತ್ಯಧಿಕ ಸಂಖ್ಯೆಯಲ್ಲಿ ಭಕ್ತರಿದ್ದಾರೆ. ಆ ಭಕ್ತರು ಎಲ್ಲಾ ಜಾತಿ, ಸಮುದಾಯಗಳಲ್ಲಿ ಹಂಚಿಹೋಗಿದ್ದಾರೆ. ನಾರಾಯಣ ಗುರುಗಳು ಕುದ್ರೋಳಿಯಲ್ಲಿ ದೇವಸ್ಥಾನವನ್ನು ಸ್ಥಾಪಿಸಿದಾಗ ಅದಕ್ಕೆ ಸಮಾಜದ ಶೋಷಿತರು, ಹಿಂದುಳಿದವರು ಬರಲಿ, ಅವರಿಗೂ ಒಂದು ಧಾರ್ಮಿಕ ಕೇಂದ್ರ ಇರಲಿ ಎಂದು ಬಯಸಿದರೇ ವಿನ: ಜಾತಿ, ಜಾತಿಗಳನ್ನು ಎತ್ತಿಕಟ್ಟಿ ಸಮಾಜವನ್ನು ಒಡೆಯುವ ಕೆಲಸ ಮಾಡಲಿಲ್ಲ. ಆದರೆ ಈಗ ಏನಾಗುತ್ತಿದೆ. ನಾರಾಯಣ ಗುರುಗಳನ್ನು ರಾಜಕೀಯ ಕಾರಣಗಳಿಗೆ ಬಳಸುವ ಕೆಲಸ ನಡೆಯುತ್ತಿದೆ. ಮೊನ್ನೆ ಅವರ ಜಯಂತಿಯನ್ನು ರಾಜ್ಯ ಸರಕಾರ ಮಂಗಳೂರಿನಲ್ಲಿ ಆಚರಿಸಲು ನಿರ್ಧರಿಸಿದಾಗ ಅದನ್ನು ಸಂಭ್ರಮಿಸಬೇಕಿದ್ದ ಕೆಲವರು ಇದನ್ನು ನಾಲ್ಕು ದಿನ ಇರುವಾಗ ಹೇಳುವುದಾ ಎಂದು ತಗಾದೆ ತೆಗೆದರು. ವಿಷಯ ಏನೆಂದರೆ ಈ ಬಾರಿ ಗುರುಗಳ ಜಯಂತಿಯನ್ನು ಸರಕಾರದ ವತಿಯಿಂದ ಮಂಗಳೂರಿನಲ್ಲಿಯೇ ಮಾಡುವುದು ಎಂದು ಮೇನಲ್ಲಿಯೇ ನಿರ್ಧಾರವಾಗಿತ್ತು. ಆದರೆ ಆಗಲೇ ಹೇಳಿದರೆ ಪಠ್ಯಪುಸ್ತಕದ ವಿವಾದ ಆಗಿತ್ತಲ್ಲ, ಅದರ ತೇಪೆ ಸಾರಿಸಲು ಈ ಪ್ಲಾನ್ ಎಂದು ಕಾಂಗ್ರೆಸ್ಸಿಗರು ಬೊಬ್ಬೆ ಹೊಡೆದಾರು ಎಂದು ಅಲ್ಲಿಯೇ ಅದನ್ನು ಘೋಷಿಸಲು ಹೋಗಿರಲಿಲ್ಲ. ಕೊನೆಗೆ ವಾರ ಇರುವಾಗ ಸಭೆಗಳನ್ನು ಮಾಡಿ ಎಲ್ಲಾ ಸಂಘ ಸಂಸ್ಥೆಗಳ ಅಭಿಪ್ರಾಯ ಪಡೆದು ಟಿಎಂಎ ಪೈ ಹಾಲ್ ನಲ್ಲಿ ಆಚರಿಸುವುದು ಎಂದು ನಿರ್ಧರಿಸಲಾಯಿತು. ಆಗಲೂ ಕುದ್ರೋಳಿಯಲ್ಲಿ ಆಚರಿಸಬೇಕು ಎಂದು ಸಭೆಯಲ್ಲಿ ಯಾರೋ ಅಭಿಪ್ರಾಯ ಹೇಳಿದರೂ ಇದು ಸರಕಾರಿ ಕಾರ್ಯಕ್ರಮವಾಗಿರುವುದರಿಂದ ದೇವಸ್ಥಾನದಲ್ಲಿ ಮಾಡುವುದಕ್ಕಿಂತ ತಟಸ್ಥ ಪ್ರದೇಶದಲ್ಲಿ ಮಾಡುವುದು ಒಳ್ಳೆಯದು ಎಂದು ಸ್ವತ: ಬಿಲ್ಲವರೇ ಆಗಿರುವ ಸಚಿವರುಗಳಿಬ್ಬರು ಒಮ್ಮತದ ನಿರ್ಧಾರಕ್ಕೆ ಬಂದು ಟಿಎಂಪೈ ಹಾಲ್ ನಲ್ಲಿ ಕಾರ್ಯಕ್ರಮ ಅಂತಿಮಗೊಳಿಸಿದರು.
ಆದರೆ ನಾರಾಯಣ ಗುರುಗಳು ಎಂದ ಕೂಡಲೇ ಕಾಂಗ್ರೆಸ್ಸಿನ ಕೆಲವು ಟಿಕೆಟ್ ಆಕಾಂಕ್ಷಿಗಳಿಗೆ ಮೈಮೇಲೆ ಬರುತ್ತದೆ. ಅವರು ಅದನ್ನು ಸ್ವಪ್ರತಿಷ್ಟೆಯನ್ನಾಗಿ ತೆಗೆದುಕೊಳ್ಳುತ್ತಾರೆ. ಅದರಲ್ಲಿ ಏನಾದರೂ ಒಂದು ಹುಳುಕು ತೆಗೆಯಲು ರಾತ್ರಿಯೀಡಿ ಯೋಚಿಸುತ್ತಾರೆ. ಆ ಬಳಿಕ ಬೆಂಕಿ ಕಡ್ಡಿಗೀರಿ ಬಿಡುತ್ತಾರೆ. ಇದೇ ಕಾಂಗ್ರೆಸ್ಸಿಗರು ಹಿಂದೂತ್ವದ ವಿಷಯ ಬಂದಾಗ ಕೇಸರಿ ಸಂಘಟನೆಗಳು ಪ್ರತಿಭಟನೆ ಮಾಡಿದರೆ ಹಿಂದೂತ್ವವನ್ನು ಭಾರತೀಯ ಜನತಾ ಪಾರ್ಟಿಯವರಿಗೆ ಗುತ್ತಿಗೆ ಕೊಟ್ಟಿಲ್ಲ ಎನ್ನುತ್ತಿದ್ದರು. ಹಾಗಾದರೆ ಬ್ರಹ್ಮಶ್ರೀ ನಾರಾಯಣ ಗುರುಗಳನ್ನು ಕಾಂಗ್ರೆಸ್ಸಿನ ಕೆಲವು ಸ್ವಯಂಘೋಷಿತ ಟಿಕೆಟ್ ಆಕಾಂಕ್ಷಿಗಳಿಗೆ ಗುತ್ತಿಗೆ ಕೊಡಲಾಗಿದೆಯೇ? ಒಂದು ವೇಳೆ ಮತಬ್ಯಾಂಕ್ ದೃಷ್ಟಿಯಲ್ಲಿ ಇಟ್ಟುಕೊಂಡು ಬಿಜೆಪಿ ಸರಕಾರ ನಾರಾಯಣ ಗುರುಗಳ ಜಯಂತಿಯನ್ನು ಮಂಗಳೂರಿನಲ್ಲಿ ಈ ಬಾರಿ ಆಚರಿಸಿರಬಹುದು. ಏನೇ ಆಗಲಿ, ಬಹಳ ಆದ್ದೂರಿಯಾಗಿಯೇ ಆಚರಿಸಲಾಗಿದೆ. ಈ ಭಕ್ತಿ, ಗೌರವ ಲೋಕಸಭಾ ಚುನಾವಣೆಯ ನಂತರವೂ ಇರಲಿ ಎನ್ನುವುದು ನಿರೀಕ್ಷೆ. ಯಾಕೆಂದರೆ ಚುನಾವಣೆ ಬಂದಾಗ ಇರುವ ಉತ್ಸಾಹ ನಂತರ ಅದೇ ಪ್ರಮಾಣದಲ್ಲಿ ಯಾವ ಪಕ್ಷ ಅಧಿಕಾರದಲ್ಲಿ ಬಂದರೂ ಇರುವುದು ಡೌಟು. ನಂತರ ಅಧಿಕಾರಿಗಳು ಮಾತ್ರ ಇರುತ್ತಾರೆ. ಸ್ಥಳೀಯ ಜನಪ್ರತಿನಿಧಿಗಳು ಅದೊಂದು ಕೆಲಸದ ತರಹ ಬಂದು ಹೋಗುತ್ತಾರೆ. ಹಾಗೆ ಆಗದಿರಲಿ. ಇನ್ನು ಜನರು ಕೂಡ ಇಷ್ಟೇ ವೈಭವದಿಂದ ಆಚರಿಸುವಂತೆ ಪಕ್ಷಾತೀತವಾಗಿ ಒತ್ತಡ ಹಾಕಬೇಕು. ಎಲ್ಲಾ ಸಂಘ ಸಂಸ್ಥೆಗಳು ಪ್ರತಿ ವರ್ಷ ಜೊತೆಯಾಗಬೇಕು. ಈಗ ನೋಡಿ, ಕುದ್ರೋಳಿಯ ದಸರಾ ಕೇವಲ ಜನಾರ್ಧನ ಪೂಜಾರಿಯವರಿಗೆ ಮತ್ತು ಅವರ ಕಮಿಟಿಗೆ ಮಾತ್ರ ಸೀಮಿತವಾಗಿಲ್ಲ. ಅದೀಗ ಮಂಗಳೂರು ದಸರಾ ಆಗಿದೆ. ಕೇವಲ ಬಿಲ್ಲವರು ಮಾತ್ರ ಬಂದಿದ್ದರೆ ಅದು ಅಷ್ಟು ಯಶಸ್ಸು ಕಾಣುತ್ತಿರಲಿಲ್ಲ. ಆದರೆ ಜನ ಹಾಗೆ ಅದನ್ನು ನೋಡಿಲ್ಲ. ಹಾಗಂತ ಜನಾರ್ದನ ಪೂಜಾರಿಯವರನ್ನು ಬರಿ ಬಿಲ್ಲವರು ಮಾತ್ರ ಮತ ಹಾಕಿ ಗೆಲ್ಲಿಸಿರಲಿಲ್ಲ. ಆದರೆ ಕೊನೆಗೆ ಬಿಲ್ಲವರು ಕೂಡ ಮತ ಹಾಕದೇ ತಮ್ಮ ಸಮುದಾಯದ ಮಹಾನ್ ನಾಯಕನನ್ನು ನಾಲ್ಕು ಚುನಾವಣೆಗಳಲ್ಲಿ ಸೋಲಿಸಿರುವುದು ಹೌದು. ಎಲ್ಲ ಬಿಲ್ಲವರು ಮತ ಹಾಕಿದರೂ ಪೂಜಾರಿ ಗೆಲ್ಲುತ್ತಿದ್ದರು. ಆದರೆ ಬಿಲ್ಲವರು ಜಾತಿ ನೋಡಿಲ್ಲ. ಅವರು ರಾಷ್ಟ್ರೀಯವಾದಿಗಳು. ಅವರಲ್ಲಿ ಇರುವುದು ಹಿಂದೂತ್ವ. ಆದರೆ ಅದ್ಯಾವುದೂ ಗೊತ್ತಿಲ್ಲದ ಪದ್ಮದಲ್ಲಿ ಕುಳಿತ ರಾಜರು ಕೆಲವು ಅತೃಪ್ತ ಬಿಲ್ಲವರ ಚೊಂಗು ಹಿಡಿದು ಶಾಸಕನಾಗುವ ಕನಸನ್ನು ಕಾಣುತ್ತಿದ್ದಾರೆ. ಕುದ್ರೋಳಿ ಶ್ರೀ ಗೋಕರ್ಣನಾಥ ಕೇತ್ರದ ಅಧ್ಯಕ್ಷರಾಗಿರುವ ಸಾಯಿರಾಂ ಅವರೇ ನಾರಾಯಣ ಗುರುಗಳ ಜಯಂತಿಯನ್ನು ಟಿಎಂಪೈ ಸಭಾಂಗಣದಲ್ಲಿ ಆಚರಿಸಲು ಬಹಿರಂಗ ಬೆಂಬಲ ನೀಡಿರುವಾಗ ಕಾಂಗ್ರೆಸ್ ಆಕಾಂಕ್ಷಿಯೊಬ್ಬರು ದೊಂಡೆ ಬಿಚ್ಚಿ ಹಾರಾಡುತ್ತಿರುವುದನ್ನು ನಾರಾಯಣ ಗುರುಗಳು ಒಪ್ಪುತ್ತಾರಾ ಎಂದು ಅವರೇ ಆತ್ಮಸಾಕ್ಷಿಯನ್ನು ಪರಿಶೀಲಿಸಿಕೊಳ್ಳಬೇಕು.
Leave A Reply