ಆಂಟೋನಿ ಎಂಬ ಬಿಳಿಯಾನೆಯ ಲದ್ದಿ ರುಚಿ ಇದೆಯಾ ಬಿಜೆಪಿಯವರೇ!
ಆಂಟೋನಿ ವೇಸ್ಟ್ ಮ್ಯಾನೇಜಮೆಂಟ್ ಸಂಸ್ಥೆಯವರು ಸರಿಯಾಗಿ ಮಂಗಳೂರು ನಗರದ ತ್ಯಾಜ್ಯ ಸಂಗ್ರಹವನ್ನು, ಸ್ವಚ್ಛತೆಯನ್ನು ಮಾಡದೇ ಇದ್ದರೂ ಅವರನ್ನು ತಮ್ಮ ಹತ್ತಿರದ ಸಂಬಂಧಿಯಂತೆ ಪಾಲಿಕೆಯ ಭಾರತೀಯ ಜನತಾ ಪಾರ್ಟಿಯ ಆಡಳಿತ ನೋಡಿಕೊಳ್ಳುತ್ತಿದೆ ಎಂದರೆ ಉಳಿದದ್ದು ಬುದ್ಧಿವಂತರಿಗೆ ಅರ್ಥವಾಗುತ್ತದೆ. ಇಬ್ಬರು ಸಿಕ್ಕಾಪಟ್ಟೆ ಬುದ್ಧಿವಂತ ಶಾಸಕರು, ಒಬ್ಬರು ಮೇಯರ್ ಆದಷ್ಟು ಬೇಗ ಒಂದು ಪರಿಹಾರವನ್ನು ಈ ವಿಷಯದಲ್ಲಿ ಕಂಡುಕೊಳ್ಳಲಿ ಎನ್ನುವ ಕಾರಣಕ್ಕೆ ಈ ಜಾಗೃತ ಅಂಕಣವನ್ನು ಬರೆಯಬೇಕಾದ ಅನಿವಾರ್ಯ ಪರಿಸ್ಥಿತಿ ಬಂದಿದೆ. ಪಾಲಿಕೆಯಲ್ಲಿ ಬಿಜೆಪಿ ಈ ಬಾರಿ ಅಧಿಕಾರಕ್ಕೆ ಬರುವ ಮೊದಲೇ ಅಂದರೆ ಕಾಂಗ್ರೆಸ್ ಅಧಿಕಾರದ ಮದದಲ್ಲಿ ಇದ್ದಾಗಲೇ ಆಂಟೋನಿ ವೇಸ್ಟ್ ಎಂಬ ಬಿಳಿಯಾನೆಯನ್ನು ತಂದು ಪಾಲಿಕೆ ಒಳಗೆ ಕಟ್ಟಲಾಗಿತ್ತು. ಅದು ಎಂತಹ ಮದವೇರಿದ ಆನೆ ಎಂದರೆ ಅದನ್ನು ಸಾಕುವುದು ತುಂಬಾ ಕಷ್ಟ ಎಂದು ಪಾಲಿಕೆಯ ಅಧಿಕಾರದಲ್ಲಿದ್ದ ಕಾಂಗ್ರೆಸ್ಸಿಗೆ ತಕ್ಷಣ ಗೊತ್ತಾಗಿ ಹೋಗಿತ್ತು. ಆದರೆ ಬಿಳಿಯಾನೆ ಕೊಡುತ್ತಿದ್ದ ಲದ್ದಿ ಕೈ ತುಂಬಾ ಸಿಗುತ್ತಿದ್ದ ಕಾರಣ ಜನರು ಕೊಡುತ್ತಿದ್ದ ತೆರಿಗೆಯ ಹಣದಲ್ಲಿ ಅದನ್ನು ಸಾಕುತ್ತಾ ಲದ್ದಿಯನ್ನು ಕೈ ತುಂಬಾ ಎತ್ತಿಕೊಂಡು ಕಾಂಗ್ರೆಸ್ಸಿಗರು ಚೆನ್ನಾಗಿದ್ದರು. ನಂತರ ಪಾಲಿಕೆಯಲ್ಲಿದ್ದ ಕಾಂಗ್ರೆಸ್ಸಿನ ಕಪಟತನ, ಭ್ರಷ್ಟಾಚಾರ, ಸ್ವಜನಪಕ್ಷಪಾತ ಕಂಡು ರೋಸಿ ಹೋದ ಜನ ಬುದ್ಧಿವಂತ ಶಾಸಕರಿಬ್ಬರ ಮಾತುಗಳನ್ನು ನಂಬಿ ಬಿಜೆಪಿಯನ್ನು ಪಾಲಿಕೆಯಲ್ಲಿ ಅಧಿಕಾರಕ್ಕೆ ತಂದರು. ಬಿಜೆಪಿ ಅಧಿಕಾರಕ್ಕೆ ಏರಿ ವರ್ಷವಾಗುವ ಅಷ್ಟೊತ್ತಿಗೆ ಆಂಟೋನಿಯ ಏಳು ವರ್ಷದ ಗುತ್ತಿಗೆ ಅವಧಿ ಕೂಡ ಮುಗಿಯುತ್ತಾ ಬಂತು. ಪಾಲಿಕೆಯಲ್ಲಿ ಬಿಜೆಪಿಗೆ ಇದು ಮೊದಲೇ ಗೊತ್ತಾಗಬೇಕಿತ್ತು. ಆದರೆ ಜೋರು ಆದಾಗ ಪಾಯಿಖಾನೆ ಹುಡುಕುವವರಂತೆ ಆಂಟೋನಿ ಗುತ್ತಿಗೆ ಮುಗಿಯುವಾಗ ಎದ್ದ ನಿಂತ ಇವರಿಗೆ ಸಡನ್ನಾಗಿ ಏನು ಮಾಡಬೇಕು ಎಂದೇ ಗೊತ್ತಾಗಿರಲಿಲ್ಲ. ಆಗ ಇವರು ಏನು ಮಾಡಿದರು ಎಂದರೆ ಆಂಟೋನಿಗೆ ಒಂದು ವರ್ಷ ಗುತ್ತಿಗೆಯನ್ನು ವಿಸ್ತರಿಸಿಬಿಟ್ಟರು. ಅದು ಪಾಲಿಕೆಯ ಬಿಜೆಪಿ ಮಾಡಿದ ಅತೀ ದೊಡ್ಡ ಮೂರ್ಖತನ. ಆದರೂ ಒಂದು ವರ್ಷ ಆಡಳಿತದಲ್ಲಿ ಏನೂ ಕಡಿಮೆ ಅವಧಿ ಅಲ್ಲ. ಮನಸ್ಸು ಮಾಡಿದರೆ ಏನಾದರೂ ಉತ್ತಮವಾಗಿರುವುದನ್ನು ಸಾಧಿಸಬಹುದು. ಆದರೆ ಕೆಳಗೆ, ಮೇಲೆ, ಮಧ್ಯ ಎಲ್ಲಾ ಕಡೆ ಬಿಜೆಪಿಯೇ ಅಧಿಕಾರದಲ್ಲಿದ್ದರೂ ಇವರಿಗೆ ಮಂಗಳೂರಿನ ತ್ಯಾಜ್ಯ ಸಂಗ್ರಹ, ಸ್ವಚ್ಛತೆ, ವಿಲೇವಾರಿಯ ವಿಷಯದಲ್ಲಿ ಯಾವುದೇ ಒಂದು ಗಟ್ಟಿ ನಿರ್ಧಾರ ತಳಿಯಲು ಸಾಧ್ಯವಾಗಲಿಲ್ಲ. ಈ ಮಧ್ಯೆ ಎರಡು ಪ್ಯಾಕೇಜು ಮಾಡಿ ನಗರಾಬಿವೃದ್ಧಿ ಇಲಾಖೆಗೆ ಕಳುಹಿಸಿಕೊಟ್ಟರೂ ಅವರು ಅದನ್ನು ಒಂದೇ ಮಾಡಿ ಇನ್ನೊಮ್ಮೆ ಕಳುಹಿಸಿಕೊಡಿ ಎಂದು ಹೇಳಿದರು. ಈ ನಡುವೆ ರಾಮಕೃಷ್ಣ ಮಿಶನ್ ನವರು ಒಂದು ರೂಪುರೇಶೆ ತಯಾರಿಸಿದರು. ಅದನ್ನು ಕೂಡ ಪಾಲಿಕೆಯವರು ದಡ ಸೇರಿಸಲೇ ಇಲ್ಲ. ಈಗ ಆಂಟೋನಿಯವರ ವಿಸ್ತರಿತ ಗುತ್ತಿಗೆ ಅವಧಿ ಮುಗಿಯಲು ಎರಡು ತಿಂಗಳು ಇದೆ. ಪಾಲಿಕೆಯಿಂದ ಏನೂ ಸಿದ್ಧತೆ ಆಗಲಿಲ್ಲ ಎಂದು ಆಂಟೋನಿಯವರಿಗೂ ಗೊತ್ತಿದೆ. ಆದ್ದರಿಂದ ಇವರಿಗೆ ನಾವೇ ಗತಿ ಎಂದು ಅವರಿಗೂ ಅನಿಸಿದೆ. ಪಾಲಿಕೆ ಕೂಡ ಗುತ್ತಿಗೆ ಇವರಿಗೆ ಕೊಟ್ಟು ಲದ್ದಿ ಪಡೆದುಕೊಳ್ಳುವ ಸಿದ್ಧತೆಯಲ್ಲಿ ಇದ್ದಂತೆ ಕಾಣುತ್ತದೆ.
ಈ ನಡುವೆ ಮೇಯರ್ ಜಯಾನಂದ ಅಂಚನ್ ರಾತ್ರಿ ವೇಳೆ ಮಂಗಳೂರಿನಲ್ಲಿ ಸ್ವಚ್ಛತೆಯನ್ನು ಪರಿಶೀಲಿಸಲು ಹೊರಟಿದ್ದಾರೆ. ಅದು ಮಾಧ್ಯಮಗಳಲ್ಲಿ ಸುದ್ದಿಯಾಗಿದೆ. ಮೇಯರ್ ರಾತ್ರಿ ಬಿಡಿ, ಬೆಳಿಗ್ಗೆ ಅವರ ಚೇಂಬರ್ ನಲ್ಲಿ ಕುಳಿತು ಇಂತಿಂತಹ ಡಿವೈಡರ್ ನಲ್ಲಿ ಧೂಳು ನಿಂತಿದೆ, ಮಣ್ಣು ತುಂಬಿದೆ, ತೆಗೆಯಿರಿ ಎಂದು ಸೂಚನೆ ಕೊಟ್ಟರೂ ಈ ಗುತ್ತಿಗೆ ಸಂಸ್ಥೆಯವರು ಕ್ಯಾರೇ ಎನ್ನುವುದಿಲ್ಲ. ಹಾಗಿರುವಾಗ ಮೇಯರ್ ರಾತ್ರಿ ಸಿಟಿ ರೌಂಡ್ ಮಾಡಿದರೆ ಕಸ, ತ್ಯಾಜ್ಯ ಕಾಣಬಹುದು. ಆದರೆ ಇದು ಎಷ್ಟು ದಿನ? ಇದು ಮೇಯರ್ ಅವರ ನಾಟಕದ ಮೊದಲ ಅಧ್ಯಾಯ ಎಂದು ನಾನು ಹೇಳುವುದಿಲ್ಲ. ಅವರಲ್ಲಿ ಮಂಗಳೂರು ಸ್ವಚ್ಛ ಆಗಬೇಕೆಂಬ ಕನಸು ಇರಬಹುದು. ಆದರೆ ಯಾರ ಮಾತುಗಳನ್ನು ಕೇಳದ ಜಡ್ಡು ಗುತ್ತಿಗೆ ಸಂಸ್ಥೆ ಇರುವಾಗ ಯಾವ ಮೇಯರ್ ತಾನೆ ಏನು ಮಾಡಬಲ್ಲರು? ಈಗ ನೋಡಿ, ಇತ್ತೀಚೆಗೆ ದಸರಾ ಆಯಿತು. ಮಂಗಳೂರು ಚೆಂದ ಕಾಣಲು ಡಿವೈಡರ್ ಗೆ ಬಣ್ಣ ಬಳಿಯಲಾಯಿತು. ಆಗ ಡಿವೈಡರ್ ಅತ್ತಿತ್ತ ನಿಂತಿರುವ ಮಣ್ಣು, ಧೂಳು ತೆಗೆಸಿರಿ ಎಂದು ಮೇಯರ್ ಸಂಬಂಧಪಟ್ಟ ಅಧಿಕಾರಿಯೊಬ್ಬರಿಗೆ ಸೂಚನೆ ನೀಡಿದರು. ಅವರು ಆಂಟೋನಿಯವರಿಗೆ ಹೇಳಿಯೇ ಇಲ್ವಾ ಅಥವಾ ಹೇಳಿದರೂ ಆಂಟೋನಿಯವರು ತೆಗೆದಿಲ್ವಾ, ಒಟ್ಟಿನಲ್ಲಿ ಡಿವೈಡರ್ ಬಳಿ ಇವರ ಒಂದು ಹಿಡಿಸೂಡಿ ಕೂಡ ಹತ್ತಿರಕ್ಕೆ ಸುಳಿಯಲಿಲ್ಲ. ಹಾಗಾದರೆ ಆಂಟೋನಿಯವರು ಆರೋಗ್ಯ ವಿಭಾಗದ ಅಧಿಕಾರಿಗಳನ್ನು ಕೂಡ ಗಣನೆಗೆ ತೆಗೆದುಕೊಳ್ಳುವುದಿಲ್ವಾ? ಆರೋಗ್ಯ ವಿಭಾಗದ ಅಧಿಕಾರಿಗಳು ಬೆಳಿಗ್ಗೆ ಪಾಲಿಕೆಗೆ ಬರಬೇಕಾಗಿಲ್ಲ. ಅವರು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಕೊಟ್ಟಿರುವ ವಾರ್ಡುಗಳಲ್ಲಿ ಪರಿಶೀಲನೆ ಮಾಡಿ ಎಲ್ಲೆಲ್ಲಿ ಎಷ್ಟೆಷ್ಟು ತ್ಯಾಜ್ಯದ ಸಮಸ್ಯೆ ಇದೆ, ಎಷ್ಟು ರಸ್ತೆಗಳನ್ನು ಆಂಟೋನಿಯವರು ಗುಡಿಸಿದ್ದಾರೆ, ಎಷ್ಟು ಒಂದು ಮೀಟರ್ ಅಗಲದ ತೋಡುಗಳನ್ನು ಸ್ವಚ್ಛ ಮಾಡಿದ್ದಾರೆ ಸಹಿತ ಅನೇಕ ವಿಷಯಗಳನ್ನು ಗಮನಿಸಬೇಕು. ಯಾಕೆಂದರೆ ಆಂಟೋನಿಯವರ ಸಿಬ್ಬಂದಿಗಳ ಕೆಲಸದ ಮೇಲೆ ಲೆಕ್ಕ ಹಾಕಿ ಅವರಿಗೆ ತಿಂಗಳಿಗೆ ಇಷ್ಟು ಕೋಟಿ ರೂಪಾಯಿ ಬಿಲ್ ಲೆಕ್ಕ ಹಾಕುವುದು. ಆದರೆ ಕೆಲಸವೇ ನಡೆಯದೇ ಮಂಗಳೂರು ಎಂಟು ವರ್ಷಗಳ ಹಿಂದೆ ಎಷ್ಟು “ಕ್ಲೀನ್” ಇತ್ತೋ ಈಗಲೂ ಅಷ್ಟೇ ಕ್ಲೀನ್ ಇದ್ದರೆ ಇವರಿಗೆ ನಮ್ಮ ತೆರಿಗೆಯ ಕೋಟಿ ಕೋಟಿ ಸುರಿಯುವುದು ಯಾಕೆ?
Leave A Reply