ನಕಲಿ ಕಾಂತಾರಗಳು ನಮ್ಮ ನಂಬಿಕೆಗೆ ಪೆಟ್ಟು ಕೊಡಬಾರದು!!
ಕಾಂತಾರಾ ಸಿನೆಮಾ ನಮ್ಮ ಜಿಲ್ಲೆ, ರಾಜ್ಯ, ದೇಶ, ಅಂತರಾಷ್ಟ್ರೀಯ ಮಟ್ಟದಲ್ಲಿ ತುಳುನಾಡಿನ ದೈವ ದೇವರುಗಳ ಶಕ್ತಿ, ಕಾರಣಿಕವನ್ನು ಜಗತ್ತಿಗೆ ತೋರಿಸಿದೆ. ಸಿನೆಮಾ ಯಶಸ್ವಿಯಾಗಿದೆ. ಆ ಸಿನೆಮಾ ನೋಡಿದ ಬಳಿಕ ದೈವಗಳ ವಿಷಯ, ಪವಾಡ ನಂಬದವರಿಗೆ ಅಥವಾ ಈ ವಿಷಯ ಗೊತ್ತೆ ಇಲ್ಲದವರಿಗೆ, ಇದರ ಲವಶೇಷವೂ ತಿಳಿಯದವರಿಗೂ ದೈವಗಳ ಬಗ್ಗೆ ಭಯಭಕ್ತಿ ಹೆಚ್ಚಾಗುವಂತೆ ಮಾಡಿತು. ಕರಾವಳಿ ಕರ್ನಾಟಕದಲ್ಲಿ ನಾವು ನಂಬುವ ದೈವಗಳು, ಗೋವಾದಲ್ಲಿ ಬೇರೆ ಹೆಸರುಗಳಿಂದ ಕರೆಯಲ್ಪಡುತ್ತವೆ. ತಮಿಳುನಾಡಿನಲ್ಲಿ ಇನ್ನೊಂದು ಹೆಸರಿನಲ್ಲಿ ನಂಬಲ್ಪಡುತ್ತದೆ. ಈಶಾನ್ಯ ಭಾರತದಲ್ಲಿ ಅದನ್ನು ಬೇರೆ ರೀತಿ, ರೂಪದಲ್ಲಿ ಆರಾಧಿಸಲಾಗುತ್ತದೆ. ದೇಶದ ಮೂಲೆ ಮೂಲೆಗಳಲ್ಲಿ ಪ್ರಕೃತಿಯಲ್ಲಿ ಮಿಳಿತವಾಗಿರುವ ದೈವಗಳ ಶಕ್ತಿಗೆ ಬೇರೆ ಬೇರೆ ವ್ಯಾಖ್ಯಾನಗಳಿವೆ. ಆದ್ದರಿಂದ ಸಿನೆಮಾ ನೋಡಿದ ಎಲ್ಲರೂ ಕೂಡ ಇದನ್ನು ತಮ್ಮದೇ ಊರಿನ ಕಥೆ ಎಂದು ಅಂದುಕೊಂಡರು. ಅದಕ್ಕಾಗಿ ಆ ಸಿನೆಮಾ ಎಲ್ಲರಿಗೂ ಹೃದಯಕ್ಕೆ ನಾಟಿತು. ಈಗ ವಿಷಯ ಇರುವುದು ಏನೆಂದರೆ ತುಳುನಾಡಿನ ಗುಳಿಗ, ಪಂಜುರ್ಲಿ, ಕೊರಗಜ್ಜ ದೈವಗಳನ್ನು ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ವಿಶೇಷವಾಗಿ ಸದ್ಯ ಮೈಸೂರಿನಲ್ಲಿ ವ್ಯವಹಾರಿಕವಾಗಿ ಬಳಕೆ ಮಾಡಲಾಗುತ್ತಿದೆ ಎಂಬ ಮಾಹಿತಿ ಬರುತ್ತಿದೆ. ಅಂದರೆ ಇಲ್ಲಿಂದ ಒಬ್ಬ ದೈವ ನರ್ತಕರನ್ನು ಒಂದು ನಿರ್ದಿಷ್ಟ ದಿನವನ್ನು ಗೊತ್ತು ಮಾಡಿ ಮೈಸೂರಿನ ಒಂದು ಹಳ್ಳಿಗೆ ಕರೆಸುವುದು. ಅಲ್ಲಿ ಮೊದಲೇ ಪ್ರಚಾರ ಮಾಡುವುದು. ದೈವಗಳ ಬಗ್ಗೆ ಈ ಕಾಂತಾರ ಸಿನೆಮಾ ನೋಡಿ ಅಲ್ಲಿನ ಜನರಲ್ಲಿಯೂ ಭಯ, ಭಕ್ತಿ ಜಾಸ್ತಿಯಾಗಿದೆ. ಆದ್ದರಿಂದ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕೊಡುವ ಎನ್ನುವ ಪ್ರಚಾರ ಮಾಡುವುದು. ಇದರಿಂದ ಬಂದವರಿಂದ ಹಣವನ್ನು ಸುಲಿಗೆ ಮಾಡುವುದು. ದೈವ ನರ್ತಕರನ್ನು ಮೊದಲೇ ಬುಕ್ ಮಾಡಿರುವುದರಿಂದ ಅವರು ಇಲ್ಲಿಂದ ಅಲ್ಲಿಗೆ ಹೋಗುತ್ತಾರೆ. ಅಲ್ಲಿ ಅವರನ್ನು ಬಳಸಿ ಕೋಲ, ನೇಮ, ಪ್ರಶ್ನೆ ಮುಂತಾದವುಗಳನ್ನು ಇಟ್ಟು ಪೂಜೆ, ಹವನ ಎಂದು ಅಮಾಯಕರಿಂದ ಹಣವನ್ನು ಪೀಕಿಸಿ ತಾವು ಜೇಬು ತುಂಬಿಸಿಕೊಳ್ಳುವ ಕೆಲಸ ಮಾಡಲು ಈಗಾಗಲೇ ಕೆಲವು ಶುರು ಮಾಡಿದ್ದಾರೆ. ಇದರಿಂದ ಏನಾಗುತ್ತದೆ. ದೈವಗಳನ್ನು ತಮ್ಮ ವೈಯಕ್ತಿಕ ಲೋಭಕ್ಕೆ ಬಳಸಿಕೊಂಡಂತೆ ಆಗುತ್ತದೆ. ಈ ಬೆಳವಣಿಗೆ ನಿಧಾನವಾಗಿ ಮೈಸೂರಿನಿಂದ ಶುರುವಾಗಿ ರಾಜ್ಯದ ಬೇರೆ ಬೇರೆ ಭಾಗಗಳಿಗೆ ಹರಡಿದರೆ ಏನಾಗುತ್ತದೆ ಎಂದರೆ ಮುಂದೊಂದು ದಿನ ದೈವಗಳು ನಮ್ಮ ವ್ಯಾಪಾರದ ಸರಕಾಗುತ್ತವೆ. ಒಂದು ವೇಳೆ ದೈವಗಳನ್ನು ವಾಣಿಜ್ಯಿಕರಣಗೊಳಿಸಲಾಯಿತೋ ಅದರ ನಂತರ ಅದರ ಮೇಲಿನ ನಮ್ಮ ನಿಜವಾದ ನಂಬಿಕೆಗಳು ಸಡಿಲಗೊಳ್ಳುತ್ತಾ ಹೋಗುತ್ತವೆ. ನಂತರ ಈ ತುಳುನಾಡಿನಲ್ಲಿಯೂ ಹೀಗೆ ದೈವಗಳನ್ನು ಬಳಸಲಾಗುತ್ತದೆಯಾ ಎಂಬ ಭಾವನೆ ಮುಂದಿನ ಪೀಳಿಗೆಗೆ ಬರುತ್ತದೆ. ಆಗ ಅವರು ಅದನ್ನು ತಮ್ಮ ಪೂರ್ವಜರು ಯಾವ ನಂಬಿಕೆಯಲ್ಲಿ ಉಳಿಸಿ ಬೆಳೆಸಿ ಮುಂದುವರೆಸಿಕೊಂಡು ಬಂದಿದ್ದರೋ ಅದನ್ನು ಹಾಗೆ ಉಳಿಸಿಕೊಳ್ಳಲು ಮುಂದಿನ ತಲೆಮಾರು ವಿಫಲವಾಗುತ್ತದೆ. ಯಾವುದೇ ಒಂದು ವಿಷಯ ಅಥವಾ ವಸ್ತು ಸಿಕ್ಕಾಪಟ್ಟೆ ಯಶಸ್ವಿಯಾದರೆ ಅದರ ನಕಲಿಗಳು ಹುಟ್ಟಿಕೊಳ್ಳುತ್ತವೆ ಎನ್ನುವುದು ವ್ಯಾಪಾರ ಸಾಮ್ರಾಜ್ಯದಲ್ಲಿ ನಡೆದುಕೊಂಡು ಬಂದ ಸಂಪ್ರದಾಯ. ಈಗ ಕಾಂತಾರ ಹಿಟ್ ಆದ ನಂತರ ಅದರ ಮುಂದಿನ ಭಾಗಗಳು ಬರಲಿವೆ. ಈಗಾಗಲೇ ಬೇರೆ ಬೇರೆ ಭಾಷೆಗಳಲ್ಲಿ ಸಿನೆಮಾ ತೆರೆಕಂಡು ಯಶಸ್ವಿ ಕೂಡ ಆಗಿದೆ. ಆದರೆ ದೈವ, ದೇವರ ವಿಷಯದಲ್ಲಿ ಒಂದು ಕ್ಷೇತ್ರದಲ್ಲಿ ತುಂಬಾ ಕಾರಣಿಕ ಇದೆ ಎಂದಾದರೆ ಭಕ್ತರು ಆ ಕ್ಷೇತ್ರವನ್ನು ಹುಡುಕಿಕೊಂಡು ಬರುತ್ತಾರೆ. ಅಲ್ಲಿ ಸೇವೆಗಳನ್ನು ಮಾಡುತ್ತಾರೆ. ಘಟ್ಟದ ಮೇಲಿನಿಂದ ಅಸಂಖ್ಯಾತ ಭಕ್ತರು ಇವತ್ತಿಗೂ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಹಲವಾರು ದೇವಸ್ಥಾನಗಳನ್ನು ಹುಡುಕಿ ಬರುತ್ತಿರುವುದೇ ಆ ಕಾರಣಕ್ಕೆ. ಅದೇ ರೀತಿಯಲ್ಲಿ ಈಗ ಒಂದು ವೇಳೆ ತುಳುನಾಡಿನಿಂದ ರಾಜ್ಯ, ದೇಶದ ಬೇರೆ ಬೇರೆ ಕಡೆ ಹೋಗಿ ಅಲ್ಲಿಯೇ ನೆಲೆಸಿದವರು ತಾವು ನೆಲೆಸಿದ ಊರಿನಲ್ಲಿ ಕೋಲ, ನೇಮ ಮಾಡಿಸಿದರೆ ಅದು ಬೇರೆ ವಿಷಯ. ಯಾಕೆಂದರೆ ತುಳುನಾಡಿನವರಾದ ನಾವು ಎಲ್ಲಿ ವಾಸಿಸಿದರೂ ನಮಗೆ ದೈವಗಳ ಮೇಲೆ ಅದೇ ಭಕ್ತಿ ಇರುತ್ತದೆ. ಆದರೆ ಯಾರೋ ನಮ್ಮ ಸಿನೆಮಾ, ನಾಟಕ ನೋಡಿ ಇದು ವ್ಯಾಪಾರಕ್ಕೆ ಬಳಸಿದರೆ ಅದು ಕ್ಲಿಕ್ ಆಗುತ್ತದೆ ಎಂದುಕೊಂಡು ವೇದಿಕೆ ಮೇಲೆ ದೈವಗಳಂತೆ ಹಾವಭಾವ ತೋರಿಸುತ್ತಾ ಅದನ್ನು ಪ್ರದರ್ಶನಕ್ಕೆ ಇಡುವುದು ನಾವು ಒಪ್ಪಿಕೊಳ್ಳುವಂತದ್ದಲ್ಲ. ಇದು ಮುಂದುವರೆದರೆ ಅಪಾಯ ಇದೆ. ಅದನ್ನು ಅರ್ಥ ಮಾಡಿಕೊಂಡು ಆ ಕ್ಷೇತ್ರದ ಹಿರಿಯರು ಒಂದು ಕ್ರಮ ತೆಗೆದುಕೊಂಡರೆ ಉತ್ತಮ. ಇಲ್ಲದಿದ್ದರೆ ದೈವಗಳನ್ನು ಯಾರಾದರೂ ತಮ್ಮ ಸ್ವಾರ್ಥಕ್ಕೆ ಬಳಸುತ್ತಾರೆ. ಕೊನೆಗೆ ದೈವಗಳೇ ಅಂತವರಿಗೆ ಉತ್ತರ ಕೊಡುತ್ತದೆ. ಆದರೆ ಆಗ ಕಾಲ ಮಿಂಚಿ ಹೋಗಿರುತ್ತದೆ!
Leave A Reply