ಪ್ಲಾಸ್ಟಿಕ್ ತ್ಯಾಜ್ಯದ ರಸ್ತೆಯನ್ನು ಇವರು ನೆಕ್ಕಲು ಆಗುತ್ತಾ?

ಪ್ಲಾಸ್ಟಿಕ್ ತ್ಯಾಜ್ಯ ಬಳಸಿ ರಸ್ತೆ ನಿರ್ಮಾಣ ಮಾಡಬಹುದು ಎಂಬುವುದನ್ನು ನಾವು ಮಾಧ್ಯಮಗಳಲ್ಲಿ ಓದಿದ್ದೇವೆ. ಕೇಳಿದ್ದೇವೆ. ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿಯವರು ಇದನ್ನು ಮಾಡಿ ತೋರಿಸಿದ್ದಾರೆ ಎನ್ನುವುದನ್ನು ಅವರದ್ದೇ ಪಕ್ಷದ ನಾಯಕತ್ವ ಇರುವ ರಾಜ್ಯ ಸರಕಾರಗಳು ಕೂಡ ಅರಿತಿವೆ. ಆದರೆ ಇದನ್ನು ಎಷ್ಟರಮಟ್ಟಿಗೆ ತಾವು ಕೂಡ ತಮ್ಮ ಜಿಲ್ಲೆ, ತಾಲೂಕು, ಗ್ರಾಮಗಳ ವ್ಯಾಪ್ತಿಯಲ್ಲಿ ಮಾಡಿ ತೋರಿಸಿದ್ದಾರೆ ಎನ್ನುವುದು ಈಗ ನೋಡಬೇಕಾಗಿರುವ ವಿಷಯ. ಮಾತನಾಡಿದರೆ ಮೋದಿ ಮಾದರಿ, ಯೋಗಿ ಮಾಡೆಲ್ ಎನ್ನುವವರು ಇಂತಹ ವಿಷಯಗಳಲ್ಲಿ ಮಾತ್ರ ಯಾಕೆ ಅಭಿವೃದ್ಧಿಯನ್ನು ಅನುಸರಿಸುವುದಿಲ್ಲ ಎನ್ನುವುದನ್ನು ಪತ್ತೆ ಹಚ್ಚಬೇಕು. ಈಗ ಸದ್ಯ ಸಮಾಧಾನದ ವಿಷಯವೇನೆಂದರೆ ಉಡುಪಿ ಜಿಲ್ಲೆಯ ಅಲೆವೂರು, ಮರವಂತೆ ಏರಿಯಾಗಳ ರಸ್ತೆಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಬಳಸಿ ರಸ್ತೆ ನಿರ್ಮಿಸಲಾಗಿದೆ. ಈ ಕುರಿತು ಅಲ್ಲಿನ ಸ್ಥಳಿಯಾಡಳಿತಕ್ಕೆ ತರಬೇತಿ ಕೂಡ ನೀಡಲಾಗಿದೆ. ಅಲ್ಲಿರುವ ವಂಡ್ಸೆ, ಸತ್ಯನಾರಾಯಣ ಹೀಗೆ ಹಲವು ಏರಿಯಾಗಳಿಂದ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಲು ಕ್ರಮ ಕೂಡ ಕೈಗೊಳ್ಳಲಾಗಿದೆ. ಈಗ ಅಲೆವೂರು, ಮರವಂತೆಯಲ್ಲಿ ಆಗುತ್ತದೆ ಎಂದಾದರೆ ಮಂಗಳೂರಿನಲ್ಲಿ ಯಾಕೆ ಆಗುವುದಿಲ್ಲ ಎನ್ನುವುದನ್ನು ನೋಡಬೇಕು.
ನಮ್ಮದು ಮಹಾನಗರ ಪಾಲಿಕೆ. ಇವರು ಮನಸ್ಸು ಮಾಡಿದರೆ ಇದನ್ನು ಇಲ್ಲಿ ಕೂಡ ಪ್ರಾಯೋಗಿಕವಾಗಿ ಜಾರಿಗೆ ತರಬಹುದಲ್ಲ. ಅದೇನು ಕಷ್ಟದ ಸಂಗತಿಯಲ್ಲ. ಉಡುಪಿ ಜಿಲ್ಲಾ ಪಂಚಾಯತ್ ನಲ್ಲಿ ಭಾರತ್ ಗ್ರಾಮೀಣ್ ಮಿಷನ್ ಅಡಿಯಲ್ಲಿ ಒಂದು ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಅಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮತ್ತು ಪ್ಲಾಸ್ಟಿಕ್ ಮ್ಯಾನ್ ಎಂದೇ ಖ್ಯಾತಿ ಪಡೆದ ತಮಿಳುನಾಡಿನ ಡಾ. ವಾಸುದೇವನ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಕರೆಸಿ ಅವರಿಂದ ಮಾಹಿತಿಯನ್ನು ಪಡೆದುಕೊಂಡು ದೂರದೃಷ್ಟಿಯ ಭಾರತದ ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಅವರು ಮುಕ್ತ ಮನಸ್ಸಿನಿಂದ ಸಹಕಾರ ನೀಡಿದ್ದಾರೆ. ನಾವು ಕೂಡ ಇಲ್ಲಿ ಅದನ್ನು ಜಾರಿಗೆ ತರಲು ಮನಸ್ಸು ಮಾಡಬೇಕು. ಈ ಯೋಜನೆ ಜಾರಿಗೆ ತಂದರೆ ಒಂದಕ್ಕಿಂತ ಹೆಚ್ಚು ಪ್ರಯೋಜನಗಳು ನಾಗರಿಕರಿಗೆ ಇದೆ. ಮೊದಲನೇ ಪ್ರಯೋಜನ ಏನೆಂದರೆ ಈಗಾಗಲೇ ನಮ್ಮ ಮಂಗಳೂರಿನಲ್ಲಿ ಹೆಚ್ಚಿರುವ ಪ್ಲಾಸ್ಟಿಕ್ ತ್ಯಾಜ್ಯದ ಮಹಾಬೆಟ್ಟವನ್ನು ಕಡಿಮೆ ಮಾಡಬಹುದು. ಎರಡನೇಯದಾಗಿ ಈ ವಿಧಾನದಿಂದ ತಯಾರಿಸಿದ ರಸ್ತೆಗಳು ಹೆಚ್ಚು ಬಾಳಿಕೆ ಬರುತ್ತದೆ ಎಂಬುದು ಸಾಬೀತಾಗಿದೆ. ಮೂರನೇಯದ್ದಾಗಿ ಇದರ ನಿರ್ಮಾಣಕ್ಕೆ ಡಾಮರು ರಸ್ತೆಯ ನಿರ್ಮಾಣಕ್ಕೆ ತಗಲುವ ಖರ್ಚಿಗಿಂತ ಕಡಿಮೆ ಬಂಡವಾಳ ಸಾಕು. ಹೀಗೆ ನಾನಾ ರೀತಿಯಲ್ಲಿ ಇಲ್ಲಿ ಪ್ರಯೋಜನಗಳನ್ನು ಕಾಣಬಹುದು.
ಆದರೆ ಇದನ್ನು ಜಾರಿಗೊಳಿಸಲು ನಮ್ಮ ಅತೀ ಬುದ್ಧಿವಂತರೆನಿಸಿಕೊಂಡಿರುವ ಜನಪ್ರತಿನಿಧಿಗಳು ಮತ್ತು ಭ್ರಷ್ಟರ ಕಸಿನ್ ಗಳಾಗಿರುವ ಅಧಿಕಾರಿಗಳು ಒಪ್ಪುವುದಿಲ್ಲ. ಮೂಲತ: ಇವರಿಗೆ ಯಾರಿಗೂ ಇಚ್ಚಾಶಕ್ತಿ ಇಲ್ಲ. ದೂರದೃಷ್ಟಿಯ ಕೊರತೆ ಇದೆ. ಎರಡನೇಯದಾಗಿ ಪ್ಲಾಸ್ಟಿಕ್ ತ್ಯಾಜ್ಯವನ್ನು ರಸ್ತೆಗೆ ಬಳಸಿದರೆ ಪಚ್ಚನಾಡಿಯಲ್ಲಿ ಬೆಂಕಿ ಬೀಳುವುದು ನಿಲ್ಲಬಹುದು. ಇದರಿಂದ ಅಧಿಕಾರಿಗಳ ಹೊಟ್ಟೆಗೆ ಬೆಂಕಿ ಬೀಳುತ್ತದೆ. ಅದರೊಂದಿಗೆ ಪ್ಲಾಸ್ಟಿಕ್ ತ್ಯಾಜ್ಯದಿಂದ ನಿರ್ಮಿಸಿರುವ ರಸ್ತೆಯ ಗುಣಮಟ್ಟ ಧೀರ್ಘ ಬಾಳಿಕೆ ಬರುವುದರಿಂದ ಇವರಿಗೆ ಆಗಾಗ ಗುಂಡಿ ಮುಚ್ಚುವುದು ಮತ್ತು ತೇಪೆ ಹಚ್ಚುವುದು ಎಂದು ಬಿಲ್ ಮಾಡಲು ಸಾಧ್ಯವಿಲ್ಲ. ಇನ್ನು ರಸ್ತೆಗಳು ತುಂಬಾ ಕಾಲ ಚೆನ್ನಾಗಿ ಇದ್ದರೆ ಇವರೆಲ್ಲ ತಿನ್ನುವುದು ಏನನ್ನು. ರಸ್ತೆಯನ್ನು ನೆಕ್ಕಿ ಹೊಟ್ಟೆ ತುಂಬಿಸಿಕೊಳ್ಳಲು ಆಗಲ್ಲ. ಆದ್ದರಿಂದ ಇವರು ಅಂತಹ ಯೋಜನೆಗಳಿಗೆ ಜೈ ಹೇಳಲು ಹೋಗುವುದಿಲ್ಲ.
ಸಿಗುವ ಒಣಕಸದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಬೇರೆ ಮಾಡಿ ಅದನ್ನು ರಸ್ತೆ ನಿರ್ಮಾಣಕ್ಕೆ ಬಳಸುವುದರಿಂದ ಪಚ್ಚನಾಡಿಯ ಸಮಸ್ಯೆಗೂ ಒಂದು ಪರಿಹಾರದ ದಾರಿ ಸಿಗುತ್ತದೆ. ಅದರೊಂದಿಗೆ ಆ ತ್ಯಾಜ್ಯದಿಂದ ರಸ್ತೆಗಳನ್ನು ಅಲ್ಲಿಯೇ ನಿರ್ಮಿಸಿ ಪ್ರಾಯೋಗಿಕವಾಗಿ ಪರೀಕ್ಷೆಗಳನ್ನು ನಡೆಸಬಹುದು. ಬಿಟುಮಿನ್ ಬಳಕೆಗಿಂತ ಇದನ್ನು ಬಳಸುವುದರಿಂದ ಹೆಚ್ಚು ಲಾಭವೂ ಇದೆ. ನಮ್ಮ ಪಾಲಿಕೆಯಲ್ಲಿ ನಿಜಕ್ಕೂ ಚರ್ಚೆಯಾಗಬೇಕಿರುವುದು ಇಂತಹ ವಿಚಾರಗಳು. ಅದು ಬಿಟ್ಟು ಶೀರಾ, ಅಂಬಡೆ ತಿಂದು ಕಾಫಿ ಕುಡಿದು ಟಿವಿ ಕ್ಯಾಮೆರಾದವರು ಬಂದು ಅವರು ಆನ್ ಮಾಡಿ ಕೆಲವು ಪೇಮೆಂಟ್ ಸದಸ್ಯರ ಮುಂದೆ ಹಿಡಿದ ಕೂಡಲೇ ಆಕ್ರೋಶದ ನಾಟಕ ಮಾಡುವುದು ಇದೆಯಲ್ಲ, ಅದರಿಂದ ಏನೂ ಪ್ರಯೋಜನವಿಲ್ಲ. ಒಂದು ಕಿ.ಮೀ ರಸ್ತೆ ನಿರ್ಮಿಸಲು 100 ಕೆಜಿ ಪ್ಲಾಸ್ಟಿಕ್ ತ್ಯಾಜ್ಯ ಸಾಕು. ನಮ್ಮಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಹೇಗೂ ಇದೆ. ಬೇಕಿರುವುದು ಅನುಷ್ಟಾನ ಮಾಡಬೇಕಾದ ಶುದ್ಧ ಮನಸ್ಸು. ಅದು ಸಿಗುತ್ತಾ
Leave A Reply