ಜನರ ಪರ ಮಾತನಾಡಿದರೆ ಪೊಲೀಸರ ಸಮಯ ವೇಸ್ಟ್ ಆಗುತ್ತದೆಯಂತೆ!!
ನಾವು ನಮಗೆ ಆದ ಅನ್ಯಾಯವನ್ನು ಮಾತ್ರ ಹೇಳಿದರೆ ನಾವು ಸ್ವಾರ್ಥಿಗಳು, ನಮ್ಮ ಬಗ್ಗೆ ಮಾತ್ರ ಯೋಚಿಸುತ್ತೇವೆ ಎಂದು ಸಮಾಜ ಹೇಳುತ್ತದೆ. ಅದೇ ನಾವು ಸಮಾಜದ ಪರ ಮಾತನಾಡಿದರೆ ನೀವು ನಿಮಗೆ ಏನಾದರೂ ಅನ್ಯಾಯ ಆಗಿದ್ದರೆ ಮಾತ್ರ ಹೇಳಿ. ಜನರಲ್ ಆಗಿ ಮಾತನಾಡಬೇಡಿ, ನಮ್ಮ ಸಮಯ ಹಾಳು ಮಾಡಬೇಡಿ ಎಂದು ಹೇಳಲಾಗುತ್ತದೆ. ನಮ್ಮ ಸಮಯ ಹಾಳು ಮಾಡಬೇಡಿ ಎಂದು ಯಾವಾಗ ಎಡಿಜಿಪಿ ಅಲೋಕ್ ಕುಮಾರ್ ಹೇಳಿದರೋ ಒಬ್ಬ ಸಾಮಾಜಿಕ ಕಾರ್ಯಕರ್ತನಾಗಿ ನನಗೂ ಒಮ್ಮೆ ಆಕ್ರೋಶ ಬಂದು ಬಿಟ್ಟಿತ್ತು. ಅಷ್ಟಕ್ಕೂ ಪೊಲೀಸ್ ಅಧಿಕಾರಿಗಳೊಂದಿಗೆ ಸಾರ್ವಜನಿಕರ ಕುಂದುಕೊರತೆ ಸಭೆಯನ್ನು ಮೊನ್ನೆ ಮಂಗಳೂರಿನಲ್ಲಿ ಆಯೋಜಿಸಲಾಗಿತ್ತು. ನಮಗೆ ಸಮಯ ಕೊಟ್ಟಿದ್ದು ಬೆಳಿಗ್ಗೆ 11 ಗಂಟೆಗೆ. ನಾವು ಅಷ್ಟೊತ್ತಿಗೆ ಅಲ್ಲಿಗೆ ಹೋದಾಗ ಸಾಹೇಬ್ರು ಮೀಟಿಂಗ್ ನಲ್ಲಿದ್ದಾರೆ ಎಂಬ ಮಾಹಿತಿ ನೀಡಲಾಯಿತು. ಸರಿ, ಇರಲಿ ಸ್ವಲ್ಪ ಹೊತ್ತು ಕಾಯೋಣ ಎಂದು ಅಂದುಕೊಂಡೆವು. ನಂತರ ಹಾಸ್ಟೆಲ್ ವಾರ್ಡ್ನ್ ಮತ್ತು ಮಾಲೀಕರೊಂದಿಗೆ ಸಭೆ ಎಂದು ಆಯಿತು. ಹಾಸ್ಟೆಲ್ ಗಳಲ್ಲಿ ಡ್ರಗ್ಸ್ ಹಾವಳಿಗಳ ಬಗ್ಗೆ ಮೀಟಿಂಗ್ ಎಂದು ಹೇಳಿದ್ದರಿಂದ ಮಕ್ಕಳ ಸುರಕ್ಷತೆಯ ವಿಷಯದಲ್ಲಿ ಉತ್ತಮ ನಿರ್ಧಾರ ಎಂದು ಮತ್ತೆ ಸ್ಚಲ್ಪ ಹೊತ್ತು ಕಾಯಲು ಮುಂದಾದೆವು. ಕೊನೆಗೆ ನಮ್ಮನ್ನು ಕರೆದದ್ದು 12.45 ನಿಮಿಷಕ್ಕೆ. ನನಗೆ ಮೂರನೇಯವನಾಗಿ ಮಾತನಾಡಲು ಅವಕಾಶ ಸಿಕ್ಕಿತ್ತು. ನಾನು ಲಿಖಿತವಾಗಿ ಮನವಿ ಬರೆದುಕೊಂಡು ಹೋದ ಕಾರಣ ಅದನ್ನು ಓದಲು ಆರಂಭಿಸಿದೆ.
“ಮಂಗಳೂರು ನಗರದಲ್ಲಿ 95% ರಸ್ತೆಗಳು ಈಗ ಅಗಲವಾಗಿದೆ. ಆದರೆ ಹಿಂದೆ ಎಷ್ಟು ಅಗಲ ಇತ್ತೋ ಅಷ್ಟು ಕೂಡ ಪ್ರಯೋಜನ ಈಗ ಆಗುತ್ತಿಲ್ಲ. ವಾಹನಗಳನ್ನು ಎಲ್ಲಾ ಕಡೆ ಅಡ್ಡಾದಿಡ್ಡಿ ನಿಲ್ಲಿಸಲಾಗಿರುತ್ತೆ. ಪೊಲೀಸರು ಹೆಲ್ಮೆಟ್ ಧರಿಸದವರನ್ನು, ತ್ರಿಬಲ್ ರೈಡ್ ಹೋದವರನ್ನು ಹಿಡಿಯುವಲ್ಲಿ ಇಡೀ ದಿನ ಕಳೆಯುತ್ತಾರೆ ವಿನ: ಎಲ್ಲಿಯೂ ಇಂತಹ ಅನಧಿಕೃತ ಪಾರ್ಕಿಂಗ್ ಕಡೆ ಗಮನ ಹರಿಸುತ್ತಿಲ್ಲ” ಎಂದು ಹೇಳಿದೆ. ಎಲ್ಲೆಲ್ಲಿ ಎಂದು ಕೇಳಿದರು. ಹೇಳಿದೆ. ಅದರ ನಂತರ ಮಂಗಳೂರಿನಲ್ಲಿ ಐದು ರಿಕ್ರೀಯೇಶನ್ ಕ್ಲಬ್ ಗಳಿಗೆ ಅನುಮತಿ ನೀಡಲಾಗಿದೆ. ಆದರೆ ರಿಕ್ರಿಯೇಶನ್ ಕ್ಲಬ್ ಗಳ ಹೆಸರಿನಲ್ಲಿ ನೂರಕ್ಕೂ ಹೆಚ್ಚು ಅನಧಿಕೃತ ಇಸ್ಪೀಟ್ ಕೇಂದ್ರಗಳು ತಲೆ ಎತ್ತಿವೆ. ನ್ಯಾಯಾಲಯ ರಿಕ್ರೀಯೇಶನ್ ಕ್ಲಬ್ ಗಳಿಗೆ ಅನುಮತಿ ಕೊಟ್ಟಿದ್ದರೂ ಅದಕ್ಕೆ ಕಂಡೀಶನ್ ಹಾಕಿದೆ. ಕೇರಂ, ಟೇಬಲ್ ಟೆನ್ನಿಸ್ ಇರುವುದು ಬಿಟ್ಟು ಅಂದರ್ ಬಾಹರ್ ಆಡಲು ರಾತ್ರಿಯೀಡಿ ಅನುಮತಿ ನೀಡಿದಂತೆ ಆಗಿದೆ. ಇದನ್ನು ಪೊಲೀಸ್ ಇಲಾಖೆ ಗಮನಿಸುತ್ತಿಲ್ಲ ಎಂದೆ. ಅಷ್ಟರಲ್ಲಿ ಅಲೋಕ್ ಕುಮಾರ್ ಅವರು ತಮ್ಮದೇ ಪೊಲೀಸ್ ಧಾಟಿಯಲ್ಲಿ ನೀವು ವಿಕ್ಟಿಮ್ ( ಅನ್ಯಾಯಕ್ಕೆ ಒಳಗಾದವ) ಆದರೆ ಮಾತ್ರ ಮಾತನಾಡಿ. ಅದು ಬಿಟ್ಟು ಜನರಲ್ ಆಗಿ ಮಾತನಾಡಿ ನಮ್ಮ ಸಮಯ ಹಾಳು ಮಾಡಬೇಡಿ ಎಂದರು. ಇದು ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಉನ್ನತ ಸ್ಥಾನದಲ್ಲಿರುವ ಆಫೀಸರ್ ಒಬ್ಬರು ಮಾತನಾಡುವ ರೀತಿ ಅಲ್ಲ. ನಾನು ನನ್ನ ಸಮಸ್ಯೆ ಹಿಡಿದುಕೊಂಡು ಮಾತ್ರ ಹೋರಾಡುತ್ತಿದ್ದರೆ ನಾನು ಸಾಮಾಜಿಕ ಹೋರಾಟಗಾರ ಹೇಗೆ ಆಗುತ್ತೇನೆ. ನಮ್ಮ ನಾಗರಿಕ ಹಿತರಕ್ಷಣಾ ಸಮಿತಿ ಜನರ ಸಂಕಷ್ಟಗಳನ್ನು ಅಧಿಕಾರಿಗಳ ಮೂಲಕ ಸರಿಪಡಿಸಲು ಕೆಲಸ ಮಾಡುತ್ತದೆ. ನಾನು ಪತ್ರಿಕೆಗಳಲ್ಲಿ, ಟಿವಿಗಳಲ್ಲಿ ಜನರ ಮೇಲೆ ಆಗುತ್ತಿರುವ ಅನ್ಯಾಯದ ವಿರುದ್ಧ ಮಾತನಾಡುತ್ತೇನೆ ಹೊರತು ನನ್ನ ವೈಯಕ್ತಿಕ ಕೆಲಸಗಳಿಗೆ ಮಾಧ್ಯಮಗಳನ್ನು ಬಳಸಿಲ್ಲ. ಹಾಗೆ ಮಾಡಿದರೆ ಮೀಡಿಯಾದವರು ನನ್ನ ಹತ್ತಿರಕ್ಕೂ ಬರುತ್ತಿರಲಿಲ್ಲ. ನಗರದಲ್ಲಿ ವೇಶ್ಯಾವಾಟಿಕೆ ಹೆಚ್ಚಾಗುತ್ತಿದೆ, ಇಸ್ಪೀಟ್ ಅಡ್ಡೆಗಳು ಹೆಚ್ಚಾಗುತ್ತಿವೆ ಎಂದು ಹೇಳಿದರೆ ನಿಮಗೆ ನಿಮ್ಮ ಸಮಯ ವ್ಯರ್ಥ ಮಾಡುತ್ತಿದ್ದೇನೆ ಎಂದು ಅನಿಸಿದರೆ ಇದಕ್ಕೆ ಏನು ಹೇಳುವುದು ಅಲೋಕ್ ಕುಮಾರ್ ಅವರೇ?
ಇತ್ತೀಚೆಗೆ ಮಂಗಳೂರು ಪೊಲೀಸರು ಲಕ್ಷಾಂತರ ಮೌಲ್ಯದ ಗಾಂಜಾ ಹಿಡಿದ ಸುದ್ದಿಗಳು ಬರುತ್ತಿವೆ. ಗಾಂಜಾ ಸೇವಿಸುತ್ತಿದ್ದವರನ್ನು, ಮಾರಾಟ ಮಾಡಿದವರನ್ನು ಬಂಧಿಸಿದ ಪ್ರಕರಣಗಳು ಕೂಡ ವರದಿಯಾಗಿವೆ. ಆದರೆ ಇಲ್ಲಿಯ ತನಕ ಗಾಂಜಾ ಪೂರೈಕೆದಾರರಲ್ಲಿ ಎಷ್ಟು ಮಂದಿಯನ್ನು ಬಂಧಿಸಿದ್ದಾರೆ. ಪೊಲೀಸರು ಎಷ್ಟು ಮೂಲಕ್ಕೆ ಹೋಗಿ ಗಾಂಜಾ ಮಾಫಿಯಾವನ್ನು ನಾಶ ಮಾಡಿದ್ದಾರೆ. ಅದನ್ನು ಕೂಡ ನೋಡಬೇಕಲ್ಲ. ಈಗ ವಾಹನಗಳನ್ನು ಟೋ ಮಾಡುವ ಕ್ರಮ ನಿಂತಿದೆ. ಪಾರ್ಕಿಂಗ್ ಇಲ್ಲದ ಕಡೆ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಅಂತಹ ವಾಹನಗಳಿಗೆ ವೀಲ್ ಲಾಕ್ ಮಾಡುವ ಕ್ರಮ ಯಾಕಿಲ್ಲ. ಅಗಲವಾದ ರಸ್ತೆಗಳ ಎರಡು ಬದಿಗಳಲ್ಲಿ ವಾಹನ ಪಾರ್ಕ್ ಮಾಡುವುದು ಹೀಗೆ ಮುಂದುವರೆದರೆ ನಮ್ಮ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ರಸ್ತೆ ಅಗಲ ಮಾಡಿದ್ದು ವಾಹನ ನಿಲ್ಲಿಸಲಾ? ಇದೆಲ್ಲಾ ನಾನು ಮಾತನಾಡಿದರೆ ಅದು ಪೊಲೀಸ್ ಅಧಿಕಾರಿಗಳ ಸಮಯ ಹೇಗೆ ವ್ಯರ್ಥವಾಗುತ್ತದೆ?
Leave A Reply