ಸೆಕ್ಸ್ ಗೆ ಕರೆದ ಪೊಲೀಸ್ ಅಧಿಕಾರಿ ಯಾರೆಂದು ಗೊತ್ತಾಗುವುದು ಬೇಡ್ವಾ?
ಲೈಂಗಿತ್ವ ಅಲ್ಪಸಂಖ್ಯಾತರನ್ನು ರಾತ್ರಿ ಸೆಕ್ಸಿಗೆ ಕರೆದಿರುವ ಪೊಲೀಸ್ ಅಧಿಕಾರಿಗೆ ಏನೂ ಶಿಕ್ಷೆ ಇಲ್ವಾ? ಅಥವಾ ಜನರಿಗೆ ಗೊತ್ತಾಗದೇ ಏನಾದರೂ ವರ್ಗಾವಣೆಯ ಶಿಕ್ಷೆ ಆಗಿದೆಯಾ? ಅಥವಾ ಕಾನೂನಿನಲ್ಲಿ ಒಬ್ಬ ಸಂತ್ರಸ್ತ/ಸ್ತೆ ಬಂದು ತನಗೆ ಸೆಕ್ಸ್ ಗೆ ಕರೆಯಲಾಗಿದೆ ಎಂದು ದೂರು ಕೊಟ್ಟರೆ ಅದಕ್ಕೆ ಏನೂ ಶಿಕ್ಷೆ ಇರುವುದಿಲ್ವಾ? ಶಿಕ್ಷೆ ದೇವರು ಕೊಡುವುದು ಗ್ಯಾರಂಟಿ. ಆದರೆ ಆ ಪೊಲೀಸ್ ಮಹಾನುಭಾವ ಯಾರು ಎಂದು ಗೊತ್ತಾಗಬೇಕಲ್ವಾ? ಅದನ್ನು ಪೊಲೀಸ್ ಇಲಾಖೆ ಹೇಳಬೇಕು. ಬೇರೆ ಯಾರಾದರೂ ಸರಗಳ್ಳತನ ಮಾಡಿದ್ರೂ ಅವರ ಫೋಟೋ ನೀವು ಹಾಕುತ್ತೀರಿ. ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿ ನಿಮ್ಮಿಂದ ಬಂಧಿತರಾದವರ ಮುಖಗಳನ್ನು ಎಷ್ಟು ಬೇಗ ಆಗುತ್ತದೋ ಅಷ್ಟು ಬೇಗ ಬಿಡುಗಡೆ ಮಾಡುತ್ತೀರಿ. ಸುದ್ದಿಗೋಷ್ಟಿ ಮಾಡುವಾಗ ಎದೆಯುಬ್ಬಿಸಿ ಇಂತಿಂತವರನ್ನು ಬಂಧಿಸಿದ್ದೇವೆ ಎಂದು ಹೇಳುತ್ತೀರಿ. ನಂತರ ಆ ಕೇಸು ಬಿದ್ದು ಹೋದರೂ ಆರೋಪಿಯ ಹೆಸರು ಮತ್ತು ಮುಖ ಅವನ ಸಂಬಂಧಿಕರಲ್ಲಿ, ಗೆಳೆಯರಲ್ಲಿ ದಾಖಲಾಗಿ ಅವನ ಮಾನ ಮರ್ಯಾದೆ ಹೊರಟುಹೋಗಿರುತ್ತದೆ. ಇರಲಿ, ಅದು ನಿಮ್ಮ ಪೊಲೀಸ್ ಇಲಾಖೆಯ ಕೆಲಸ ಎಂದೇ ಇಟ್ಟುಕೊಳ್ಳೋಣ. ಹಾಗಾದರೆ ನೀವು ಅಸಹ್ಯವಾಗಿರುವುದನ್ನು ಮಾಡಿದ್ರೆ ಆಗ ನೀವು ಅದನ್ನು ಕದ್ದುಮುಚ್ಚಿ ಜಾರಿಸಿಕೊಳ್ಳುವುದು ಯಾಕೆ? ಒಬ್ಬ ವ್ಯಕ್ತಿಯನ್ನು ಲೈಂಗಿಕ ಕ್ರಿಯೆಗೆ ಬಳಸಲು ಆಹ್ವಾನ ನೀಡುವ ಮೂಲಕ ಆ ವ್ಯಕ್ತಿಯ ಮಾನಸಿಕ ದೌರ್ಜನ್ಯ ಎಸಗುವುದು ತಪ್ಪು. ಈ ಬಾರಿ ಆ ಪೊಲೀಸ್ ಅಧಿಕಾರಿಯ ಗ್ರಹಚಾರ ಕೆಟ್ಟುಹೋಗಿತ್ತು. ಕನಿಷ್ಟ ಒಬ್ಬ ಲೈಂಗಿಕ ಅಲ್ಪಸಂಖ್ಯಾತರೊಬ್ಬರಾದರೂ ಕುಂದುಕೊರತೆ ಮತ್ತು ಮಾಹಿತಿ ನೀಡುವ ಸಭೆಯಲ್ಲಿ ತಮ್ಮ ಮೇಲೆ ಆದ ಅನ್ಯಾಯವನ್ನು ಹೇಳಿದ್ದಾರೆ. ಅದರಿಂದ ಹೊರಪ್ರಪಂಚಕ್ಕೆ ಇದು ಗೊತ್ತಾಯ್ತು. ಅದರಿಂದ ಪೊಲೀಸ್ ಇಲಾಖೆಯಲ್ಲಿ ಆಂತರಿಕ ತನಿಖೆ ಆಯಿತು. ಹೀಗೆ ದೂರು ಕೊಡದ, ತಮ್ಮನ್ನು ಹೀಗೆ ಅರ್ಪಿಸಿಕೊಂಡ, ನೋವು ನುಂಗಿಕೊಂಡ ಎಷ್ಟು ಲೈಂಗಿಕ ಅಲ್ಪಸಂಖ್ಯಾತರು ನಮ್ಮಲ್ಲಿ ಇರಬಹುದು. ಅವರಲ್ಲಿ ದೂರು ಕೊಡುವ ಧೈರ್ಯ ಯಾರೂ ಮಾಡಲು ಹೋಗುವುದಿಲ್ಲ. ಯಾಕೆಂದರೆ ದೂರು ಕೊಟ್ಟರೆ ಆ ಪೊಲೀಸ್ ಅಧಿಕಾರಿ ತಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂಬ ಹೆದರಿಕೆ ಸಹಜವಾಗಿ ಇರುತ್ತದೆ. ತಮ್ಮ ಪೊಲೀಸ್ ಇಲಾಖೆಯ ಯೂನಿಫಾರ್ಮಂ ತೋರಿಸಿಯೇ ಹೆದರಿಸಿ ಲೈಂಗಿಕವಾಗಿ ಬಳಸಿಕೊಳ್ಳುವುದು ಹೇಸಿಗೆ ತಿನ್ನುವ ಪರಾಕಾಷ್ಟೆ ಅಲ್ಲದೇ ಮತ್ತೇನು?
ಇವತ್ತಿಗೂ ಲೈಂಗಿಕ ಅಲ್ಪಸಂಖ್ಯಾತರನ್ನು ಸಮಾಜ ಗೌರವದಿಂದ ಕಾಣುವುದು ಕಡಿಮೆ. ಅವರು ಭಿಕ್ಷೆ ಬೇಡುತ್ತಾರೆ ಎಂದೋ ಅಥವಾ ಒತ್ತಾಯ ಮಾಡಿ ಹಣ ಕೇಳುತ್ತಾರೆ ಎಂದೋ ಅವರನ್ನು ಕನಿಷ್ಟವಾಗಿ ನೋಡಲಾಗುತ್ತದೆ. ಅವರನ್ನು ಎಷ್ಟೋ ಬಾರಿ ಕೆಟ್ಟ ಕೆಲಸಗಳಿಗೆ ಬಳಸುವುದು ನಡೆಯುತ್ತದೆ. ಅವರ ಮೇಲೆ ಅತ್ಯಾಚಾರಗಳು ಕೂಡ ನಡೆಯುತ್ತದೆ. ಅಂತಹ ಸಂದರ್ಭದಲ್ಲಿ ಅವರು ಯಾರಿಗೆ ದೂರು ಕೊಡುವುದು. ನೀವಾ ಎಂದು ಹೇಳಿ ಪೊಲೀಸ್ ಠಾಣೆಗಳಲ್ಲಿ ದೂರು ಕೊಡಲು ಹೋದರೆ ಅವರನ್ನು ನಿರ್ಲಕ್ಷಿಸುವವರು ಜಾಸ್ತಿ. ಅಂತಹ ಸಂದರ್ಭದಲ್ಲಿ ಅವರು ಉನ್ನತ ಪೊಲೀಸ್ ಅಧಿಕಾರಿಗಳಿಗೆ ದೂರು ಕೊಡಬೇಕಾಗುತ್ತದೆ. ಅಂತವರೇ ರಾತ್ರಿ ಮಂಚಕ್ಕೆ ಕರೆದರೆ ಏನಾಗುತ್ತದೆ? ನಾವು ಕೆಲಸ ಕೊಟ್ಟರೆ ದುಡಿಯಲು ತಯಾರಾಗಿದ್ದೇವೆ ಎಂದು ಅವರು ಅದೇ ಸಭೆಯಲ್ಲಿ ಹೇಳಿದ್ದಾರೆ. ಕಸ ಗುಡಿಸುವ ಕೆಲಸಕ್ಕೂ ನಾವು ರೆಡಿ. ನಮಗೂ ಬೇಡಿ ತಿನ್ನುವುದು ಸಾಕಾಗಿದೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ. ಯಾರೂ ಕೂಡ ತಾನು ಹಾಗೆ ಹುಟ್ಟಲಿ ಎಂದು ಅಪೇಕ್ಷೆ ಮಾಡಿ ಹುಟ್ಟುವುದಿಲ್ಲ. ಕೆಲವರು ಹಾಗೆ ಹುಟ್ಟಿದ ನಂತರ ಕೊರಗಿ ಕೊರಗಿ ಜೀವನವನ್ನೇ ಅಂತ್ಯ ಮಾಡುತ್ತಾರೆ. ಬಹುತೇಕ ಸಂದರ್ಭದಲ್ಲಿ ಮನೆಯವರೇ ಹೊರಗೆ ಹಾಕುತ್ತಾರೆ. ಕೆಲಸ ಕೊಡಲು ಯಾರೂ ಸಿದ್ಧರಾಗಿರುವುದಿಲ್ಲ. ಹಾಗಿರುವಾಗ ಅವರಿಗೆ ಕಾನೂನು ರಕ್ಷಕರೇ ಭಕ್ಷಕರಾದರೆ ಏನು ಗತಿ? ಆ ಅಧಿಕಾರಿ ಯಾರೇ ಆಗಿರಲಿ, ಅವರಿಗೆ ಮಾನವೀಯತೆ ಎನ್ನುವುದು ಸತ್ತ ಹೋಗಿರುವುದರಿಂದ ಅವರು ಯಾವ ಊರಿನಲ್ಲಿದ್ದರೂ ಅದು ಡೇಂಜರ್. ಅಂತವರು ಮಟ್ಕಾ, ಇಸ್ಪೀಟ್, ಜೂಜು, ವೇಶ್ಯಾವಾಟಿಕೆಗೆ ಪ್ರೋತ್ಸಾಹ ಕೊಟ್ಟು ಅದರಿಂದ ಕಮೀಷನ್ ಪಡೆದು ಅದರಿಂದ ಸಮಾಜದ ಸ್ವಾಸ್ಥವನ್ನು ಹಾಳು ಮಾಡುತ್ತಾರೆ. ಅಂತವರನ್ನು ಎಲ್ಲಿಯಾದರೂ ಮನುಷ್ಯರ ಸುಳಿವೇ ಇಲ್ಲದ ಸ್ಥಳಕ್ಕೆ ಎತ್ತಂಗಡಿ ಮಾಡಬೇಕು. ಒಟ್ಟಿನಲ್ಲಿ ಈಗ ವರ್ಗಾವಣೆಗಳು ಆಗುತ್ತಿವೆ. ಆ ಅಧಿಕಾರಿ ಮಂಗಳೂರಿನಿಂದ ಆಚೆ ಹೋದರೆ ನಮ್ಮ ಊರಿಗೂ ಕ್ಷೇಮ. ಹಾಗೆ ಆಗಲಿ ಎಂಬುದು ನಮ್ಮ ನಿರೀಕ್ಷೆ. ಕೆಲವರು ಈಗ ವರ್ಗಾವಣೆಯಾಗಿರುವ ಪೊಲೀಸ್ ಕಮೀಷನರ್ ಅವರ ಮೇಲೆ ಸಂಶಯ ಪಡುತ್ತಿದ್ದಾರೆ. ಅದು ಹೌದಾ ಅಲ್ಲವಾ ಎನ್ನುವುದು ಪೊಲೀಸ್ ಇಲಾಖೆ ಸ್ಪಷ್ಟೀಕರಿಸಬೇಕು. ಇಲ್ಲದಿದ್ದರೆ ಎಲ್ಲರ ಮೇಲೆ ಡೌಟು. ಅವರಿರಬಹುದಾ, ಇವರಿರಬಹುದಾ ಎಂದೇ ಇದ್ದ ಎಲ್ಲರ ಮೇಲೆ ಅನಾವಶ್ಯಕ ಸಂಶಯ ಮೂಡುವುದು ಸಹಜ!
Leave A Reply