ನಾವು ಅಂಡರ್ ಸ್ಟ್ಯಾಂಡಿಂಗ್ ಮಾಡಿಕೊಂಡಿದ್ದೇವು ಎಂದು ಒಪ್ಪಿದ ಎಸ್ ಡಿಪಿಐ!!
2018 ರ ವಿಧಾನಸಭಾ ಚುನಾವಣೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಹಾಗೂ ಉಳ್ಳಾಲದಲ್ಲಿ ಎಸ್ ಡಿಪಿಐ ಅಭ್ಯರ್ಥಿಯನ್ನು ನಿಲ್ಲಿಸಿತ್ತು. ಇನ್ನೇನೂ ಚುನಾವಣೆಗೆ ಎರಡ್ಮೂರು ದಿನಗಳು ಇರುವಾಗ ಅದರ ಅಭ್ಯರ್ಥಿಗಳು ಕಣದಿಂದ ನಿವೃತ್ತರಾದರು. ಅವರು ಯಾಕೆ ಸ್ಪರ್ಧಿಸಲು ಮುಂದೆ ಬರಲಿಲ್ಲ ಎಂದು ಆವತ್ತು ತುಂಬಾ ವಿಶ್ಲೇಷಣೆ ಆಗಿತ್ತು. ಅದೆಲ್ಲಾ ಆಗಿ ಈಗ ಬಹುತೇಕ ಐದು ವರ್ಷಗಳಾಗುತ್ತಿವೆ. ಈಗ ಎಸ್ ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ತುಂಬೆ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಾ, ಮಾಧ್ಯಮದವರು ಕೇಳಿದ್ದ ಒಂದು ಪ್ರಶ್ನೆಗೆ ಆವತ್ತಿನ ಸತ್ಯವನ್ನು ಅಧಿಕೃತವಾಗಿ ಒಪ್ಪಿಕೊಂಡಿದ್ದಾರೆ. ವಿಷಯ ಏನೆಂದರೆ ನೀವು ಅಭ್ಯರ್ಥಿಗಳ ಘೋಷಣೆ ಮಾಡುತ್ತೀರಿ. ಕೊನೆಗೆ ನಾಮಪತ್ರ ಹಿಂದೆಗೆದುಕೊಳ್ಳುತ್ತಿರಿ. ಇದರಿಂದ ಏನು ಪ್ರಯೋಜನ ಎಂದು ಮಾಧ್ಯಮದವರೊಬ್ಬರು ಕೇಳಿದ್ದಾರೆ. ಅದಕ್ಕೆ ಇಲ್ಯಾಸ್ ತುಂಬೆ ಕಳೆದ ಬಾರಿ ತಮ್ಮ ಪಕ್ಷ ಮಾಡಿದ್ದು ಐತಿಹಾಸಿಕ ತಪ್ಪು ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ. ತಮ್ಮದೇ ಸಮುದಾಯದ ಕೆಲವು ಮುಸ್ಲಿಂ ಮುಖಂಡರು ಮತ್ತು ಕಾಂಗ್ರೆಸ್ಸಿನ ಕೆಲವು ಉನ್ನತ ಮುಖಂಡರು ಎಸ್ ಡಿಪಿಐ ಅಭ್ಯರ್ಥಿ ಸ್ಪರ್ಧಿಸಿದರೆ ಅದರಿಂದ ಭಾರತೀಯ ಜನತಾ ಪಾರ್ಟಿಗೆ ಲಾಭವಾಗುತ್ತೆ. ಅದಕ್ಕಾಗಿ ನೀವು 25 ಕಡೆ ಸ್ಪರ್ಧೆ ಮಾಡಬೇಡಿ. ಬೇಕಾದರೆ ಮೂರು ಕಡೆ ಸ್ಪರ್ಧೆ ಮಾಡಿ. ಅಲ್ಲಿ ಕಾಂಗ್ರೆಸ್ ಕಡೆಯಿಂದ ನಿಮಗೆ ಪೂರ್ಣ ಸಹಕಾರ ಮಾಡಿ ದುರ್ಬಲ ಅಭ್ಯರ್ಥಿ ಹಾಕುತ್ತೇವೆ ಎನ್ನುವ ಭರವಸೆ ಸಿಕ್ಕಿತು. ಬಿಜೆಪಿ ಗೆಲ್ಲಬಾರದು ಎನ್ನುವ ಉದ್ದೇಶದಿಂದ ಅಭ್ಯರ್ಥಿಯನ್ನು ಹಿಂದೆಗೆದುಕೊಳ್ಳಲಾಗಿತ್ತು ಎಂದು ಹೇಳಿದ್ದಾರೆ. ಹಾಗಾದರೆ ಎಸ್ ಡಿಪಿಐ ಪಕ್ಷ ಕಾಂಗ್ರೆಸ್ ಹೇಳಿದ ಹಾಗೆ ಕೇಳುತ್ತದೆ ಎನ್ನುವ ಸಂದೇಶ ಈಗ ಹೋಗಿದೆ. ನಾವು ಯಾರ ಬಿ ಟೀಮ್ ಕೂಡ ಅಲ್ಲ. ನಮ್ಮದು ಸ್ವತಂತ್ರ ಅಸ್ತಿತ್ವ ಎಂದು ಹೇಳಿಕೊಂಡು ಬಂದಿರುವ ಎಸ್ ಡಿಪಿಐ ಒಂದು ವೇಳೆ ಯಾವುದಾದರೂ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡರು ಮನವಿ ಮಾಡಿದರೆ ತಮ್ಮ ಅಭ್ಯರ್ಥಿಯನ್ನು ಹಾಕುವುದಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಹಾಗಾದರೆ ಇಲ್ಲಿಯ ತನಕ ಎಸ್ ಡಿಪಿಐಯನ್ನು ನಿಲ್ಲಿಸುತ್ತಿರುವುದೇ ಬಿಜೆಪಿ ಎಂದು ಕಾಂಗ್ರೆಸ್ ಹೇಳುತ್ತಿದ್ದ ವಿಷಯದಲ್ಲಿ ಸತ್ಯ ಇಲ್ಲ ಎನ್ನುವುದು ಸಾಬೀತಾಗಿದೆ. ಇಲ್ಯಾಸ್ ತುಂಬೆ ಹೇಳಿಕೆ ರಾಜಕಾರಣದಲ್ಲಿ ದೂರಗಾಮಿ ಪರಿಣಾಮ ಬೀರಲಿದೆ.
ಹೇಳಿ, ಕೇಳಿ ಎಸ್ ಡಿಪಿಐ ಒಂದು ರಾಜಕೀಯ ಪಕ್ಷ. ಅದರ ಮುಖಂಡರು ಯಾವ ನಿರ್ಧಾರ ತೆಗೆದುಕೊಳ್ಳುವುದಕ್ಕೂ ಸ್ವತಂತ್ರರಿದ್ದಾರೆ. ಅವರು ಸ್ಪರ್ಧಿಸಿದರೆ ಅದರಿಂದ ಕಾಂಗ್ರೆಸ್ಸಿಗೆ ನಷ್ಟ ಎನ್ನುವ ಅಭಿಪ್ರಾಯ ಇದೆ. ಯಾಕೆಂದರೆ ಎಸ್ ಡಿಪಿಐ ನವರು ಸೆಳೆಯುವುದು ಅಲ್ಪಸಂಖ್ಯಾತರ ಮತಗಳನ್ನು. ಇನ್ನು ಮುಸ್ಲಿಮರು ಕಾಂಗ್ರೆಸ್ಸಿನ ಮತಬ್ಯಾಂಕ್. ಮುಸ್ಲಿಮರ ಮತಗಳು ವಿಭಜನೆಯಾದರೆ ಬಿಜೆಪಿ ಸುಲಭವಾಗಿ ಗೆಲ್ಲುತ್ತದೆ ಎಂಬ ಲೆಕ್ಕಚಾರ ಸಹಜವಾಗಿ ರಾಜಕೀಯ ಪಂಡಿತರಲ್ಲಿದೆ. ಆದರೆ ಬಂಟ್ವಾಳದಲ್ಲಿ ಎಸ್ ಡಿಪಿಐ ಅಭ್ಯರ್ಥಿಯನ್ನು ಹಿಂದೆಗೆದುಕೊಂಡ ಬಳಿಕವೂ ಅಲ್ಲಿ ಬಿಜೆಪಿ ಗೆದ್ದಿತ್ತು. ಯಾಕೆಂದರೆ “ಎಸ್ ಡಿಪಿಐ ಅಭ್ಯರ್ಥಿಯನ್ನು ಹಿಂದೆಗೆದುಕೊಂಡಿದೆ. ಅವರು ಕಾಂಗ್ರೆಸ್ಸಿಗೆ ಸಹಾಯ ಮಾಡಲು ಹೀಗೆ ಮಾಡಿದ್ದಾರೆ” ಎಂಬ ವಾತಾವರಣವನ್ನು ಬಿಜೆಪಿ ಸೃಷ್ಟಿಸಿತ್ತು. ಹಿಂದೂ ಮತಗಳು ಧ್ರುವಿಕರಣಗೊಂಡವು. ಅಲ್ಲಿಗೆ ಹಿಂದೂಮತಗಳು ಸಾರಾಸಗಟಾಗಿ ಬಿಜೆಪಿಗೆ ಬಿದ್ದವು. ರಾಜೇಶ್ ನಾಯ್ಕ್ ಗೆದ್ದುಬಿಟ್ಟರು.
ಈಗ ಮತ್ತೆ ಚುನಾವಣೆ ಬಂದಿದೆ. ನಾವು ಆವತ್ತು ಹೀಗೆ ಮಾಡಿದ್ದು ರಾಜಕೀಯ ದಿವಾಳಿತನ ಎಂದು ಎಸ್ ಡಿಪಿಐಗೆ ಅನಿಸಿದೆ. ಅದಕ್ಕೆ ಈ ಬಾರಿ ಏನೇ ಆದರೂ ಅಭ್ಯರ್ಥಿಯನ್ನು ಹಾಕಿಯೇ ಹಾಕುತ್ತೇವೆ ಎಂದು ಘೋಷಿಸಿದ್ದು ಎಸ್ ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಬಂಟ್ವಾಳ ಅಭ್ಯರ್ಥಿಯೂ ಆಗಿರುವ ಇಲ್ಯಾಸ್ ತುಂಬೆ. ಈಗ ವಿಷಯ ಇರುವುದು ಕಳೆದ ಬಾರಿ ಯಾವ ಲಾಜಿಕ್ ಇಟ್ಟುಕೊಂಡು ಕಾಂಗ್ರೆಸ್ ಮತ್ತು ಎಸ್ ಡಿಪಿಐ ಮಧ್ಯೆ ಅಪವಿತ್ರ ಆಂತರಿಕ ಒಳ ಮೈತ್ರಿಯಾಗಿತ್ತೋ ಅದು ಈ ಬಾರಿ ಆಗಲ್ವಾ? ಅದೇ ಲಾಜಿಕ್ ಈ ಬಾರಿಯೂ ಸೇಮ್ ಅಲ್ವಾ? ಅಷ್ಟೇ ಅಲ್ಲ, ಎಸ್ ಡಿಪಿಐ ಇರುವ ತನಕ ಅವರು ಸೆಳೆಯುವುದು ಕಾಂಗ್ರೆಸ್ ಮತಗಳನ್ನು ಎಂದಾದರೆ ಚುನಾವಣೆ ಬಂದಾಗ ಎಸ್ ಡಿಪಿಐ ಸ್ಪರ್ಧಿಸಲೇಬಾರದು ಎನ್ನುವ ವಾತಾವರಣ ಕಾಂಗ್ರೆಸ್ಸಿನವರ ಮನಸ್ಸಿನಲ್ಲಿ ಬರುತ್ತದೆ. ಇನ್ನು ಸರಿ ನೋಡಿದರೆ ಎಸ್ ಡಿಪಿಐ ಕಳೆದ ಬಾರಿ ಸ್ಪರ್ಧಿಸದಿದ್ದರೂ ಬಂಟ್ವಾಳದಲ್ಲಿ ಬಿಜೆಪಿ ಗೆಲ್ಲಲು ಹಿಂದೂಗಳ ಹತ್ಯೆಗಳಿಂದ ಆದ ಮತ ಧ್ರುವೀಕರಣವೂ ಇತ್ತು. ಈಗ ಐದು ವರ್ಷಗಳ ಹಿಂದಿದ್ದ ವಾತಾವರಣ ಇಲ್ಲ. ಹಿಂದೂ ಕಾರ್ಯಕರ್ತರ ಹತ್ಯೆ, ಅನ್ನ ಕಸಿದ ಪ್ರಕರಣ, ಅಲ್ಲಾನ ಮತಗಳಿಂದ ಗೆದ್ದ ಹೇಳಿಕೆ ಇದು ಯಾವುದೂ ಇಲ್ಲ. ಈಗಂತೂ ಒಂದಿಷ್ಟು ಆಡಳಿತ ವಿರೋಧಿ ಗಾಳಿಯೂ ಸಣ್ಣದಾಗಿ ರಾಜ್ಯದಲ್ಲಿ ಬೀಸುತ್ತಾ ಇದೆ. ಈಗ ಒಂದು ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ನೇರ ಸ್ಪರ್ಧೆಗೆ ಇಳಿದರೆ “ಮೈದಾನ್ ಬಿ ಹೇ, ಗೋಡಾ ಬಿ ಹೇ” ಎನ್ನುವಂತಹ ಸನ್ನಿವೇಶ ಇದೆ. ಆದರೂ ಎಸ್ ಡಿಪಿಐ ಸ್ಪರ್ಧಿಸಿಯೇ ಸಿದ್ಧ ಎನ್ನುತ್ತಿದೆ. ಆದರೆ ಕಳೆದ ಬಾರಿ ಸ್ಪರ್ಧಿಸದೇ ಹೋಗಿರುವುದು ಕಾಂಗ್ರೆಸ್ ನಾಯಕರ ಮನವಿಯಿಂದ ಎಂದು ಎಸ್ ಡಿಪಿಐ ಮುಖಂಡರು ಹೇಳಿದ್ದು ಕಾಂಗ್ರೆಸ್ಸಿಗೆ ಇರಿಸುಮುರುಸು ತಂದಿದೆ. ನಾವು ಹಾಗೇನೂ ಮಾಡಿಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಆದರೆ ಸತ್ಯ ಹೊರಗೆ ಬಂದಾಗಿದೆ. ಈ ಬಾರಿ ಮತ್ತೆ ಎಸ್ ಡಿಪಿಐ ಸ್ಪರ್ಧೆಯಿಂದ ತಮಗೆ ನಷ್ಟವೋ, ಇಲ್ವೋ ಎನ್ನುವ ಗೊಂದಲದಲ್ಲಿ ಕಾಂಗ್ರೆಸ್ ಇದೆ!
Leave A Reply