ಗುಳಿಗನಿಗೆ ತಮಾಷೆ ಮಾಡಿ ಬದುಕುವುದುಂಟೆ!!
ಅರಗ ಜ್ಞಾನೇಂದ್ರ ಅವರಿಗೆ ಆ ಹೆಸರನ್ನು ಇಡುವಾಗ ಒಂದಿಷ್ಟು ಅವರ ಹೆತ್ತವರು ಯೋಚಿಸಿದ್ದರೆ ಚೆನ್ನಾಗಿತ್ತು. ಯಾಕೆಂದರೆ ಇತ್ತೀಚೆಗೆ ಜ್ಞಾನೇಂದ್ರ ತಮ್ಮ ಹೆಸರಿಗೆ ವಿರುದ್ಧವಾಗಿ ಮಾತನಾಡುತ್ತಿದ್ದಾರೆ. ಜ್ಞಾನ ಅವರಲ್ಲಿ ಒಂದು ಗುಲಗಂಜಿಯಷ್ಟು ಉಳಿದಿದೆಯಾ ಎನ್ನುವುದು ಸಂಶಯ. ಒಂದು ವೇಳೆ ಅವರು ರಾಜಕೀಯದ ಹೇಳಿಕೆಯನ್ನು ಎಷ್ಟೇ ಅಸಹ್ಯಕರವಾಗಿ ನೀಡಿದ್ದರೂ ಅದು ಅವರ ಕರ್ಮ ಎಂದು ಸುಮ್ಮನೆ ಬಿಡಬಹುದಿತ್ತು. ಯಾಕೆಂದರೆ ಚುನಾವಣೆಯ ಸಮಯದಲ್ಲಿ ರಾಜಕಾರಣಿಗಳು ಬಾಯಿಗೆ ಬಂದಂತೆ ಮಾತನಾಡುವುದು ಹೊಸತಲ್ಲ. ಆದ್ದರಿಂದ ಅದಕ್ಕೆ ಯಾರೂ ವಿಶೇಷವಾದ ಒತ್ತನ್ನು ಕೊಡುವುದಿಲ್ಲ. ಆ ಬಗ್ಗೆ ಗಮನವನ್ನು ಕೂಡ ನೀಡುವುದಿಲ್ಲ. ಆದರೆ ಜ್ಞಾನೇಂದ್ರ ನಮ್ಮ ತುಳುನಾಡಿನ ದೈವಗಳ ವಿಷಯದಲ್ಲಿ ಮಾತನಾಡುವಾಗ ನಾಲಿಗೆಯನ್ನು ಹತೋಟಿಯಲ್ಲಿ ಇಟ್ಟುಕೊಂಡು ಮಾತನಾಡಬೇಕು. ಯಾಕೆಂದರೆ ತುಳುನಾಡಿನಲ್ಲಿ ದೈವಗಳಿಗೆ ನಾವು ವಿಶೇಷವಾದ ಪ್ರಾಧ್ಯಾನತೆಯನ್ನು ನೀಡುತ್ತೇವೆ. ದೇವಸ್ಥಾನಗಳಿಗೆ ನೀಡುವಷ್ಟೇ ಮತ್ತು ಕೆಲವೊಮ್ಮೆ ಒಂದು ಮುಷ್ಟಿ ಹೆಚ್ಚೇ ಮಾನಾದಿಗೆಯನ್ನು ನಾವು ದೈವಗಳ ವಿಷಯದಲ್ಲಿ ನೀಡುತ್ತೇವೆ. ಇತ್ತೀಚಿನ ಕಾಂತಾರ ಸಿನೆಮಾ ಈ ದೈವಗಳ ಪವಾಡ, ಶಕ್ತಿಯನ್ನು ಇಡೀ ಜಗತ್ತಿಗೆ ಪರಿಚಯಿಸಿದೆ. ಇಂತಹ ಕಾಲಘಟ್ಟದಲ್ಲಿ ಜ್ಞಾನೇಂದ್ರ ನಾವು ಆರಾಧಿಸುವ ಗುಳಿಗ ದೈವವನ್ನು ಅವಮಾನಿಸುವ ರೀತಿಯಲ್ಲಿ ಮಾತನಾಡಿದ್ದಾರೆ.
ಗುಳಿಗ ಎನ್ನುವ ಶಬ್ದವನ್ನು ಉಚ್ಚರಿಸುವಾಗಲೇ ನಮ್ಮ ತುಳುನಾಡಿನಲ್ಲಿ ನಮ್ಮ ದೇಹ, ಮನಸ್ಸಿನಲ್ಲಿ ಭಯ, ಭಕ್ತಿ ಮೂಡುತ್ತದೆ. ಯಾಕೆಂದರೆ ಆ ಶಬ್ದದಲ್ಲಿಯೇ ಸಕರಾತ್ಮಕ ಶಕ್ತಿ ಇದೆ. ಒಂದು ಪವರ್ ಇದೆ. ಅದನ್ನು ತಮಾಷೆಗೆ ಇಲ್ಲಿ ಬಳಸುವ ಕ್ರಮ ಇಲ್ಲ. ಅದರಲ್ಲಿ ಹಾಸ್ಯ ಮಾಡಿದರತೂ ಆತನ ಜೀವನವೇ ಮುಂದೊಂದು ದಿನ ಯಾವ ವಿನಾಶದತ್ತ ಸಾಗುತ್ತದೆ ಎನ್ನುವುದನ್ನು ಇಲ್ಲಿನವರು ಕಲ್ಪಿಸಲು ಹೋಗುವುದಿಲ್ಲ. ಅಷ್ಟು ಭಕ್ತಿ ನಮ್ಮ ದೇಹದ ಕಣಕಣದಲ್ಲಿಯೂ ಇದೆ. ಅಂತಹ ಜ್ಞಾನೇಂದ್ರ ಗುಳಿಗ ಎಂದು ಹೇಳುತ್ತಾ ಗುಳಿಗೆ, ಜಾಪಾಲ ಮಾತ್ರೆ ಎಂದು ತಮಾಷೆ ಮಾಡಿದ್ದಾರೆ. ಅವರು ಗುಳಿಗ ಹೆಸರಿನಲ್ಲಿ ಕಾಂಗ್ರೆಸ್ಸಿಗರು ನಾಟಕ ಮಾಡುತ್ತಿದ್ದಾರೆ ಎಂದು ಹಂಗಿಸುತ್ತಿದ್ದಾರೆ.
ಶಿವದೂತೆ ಗುಳಿಗ ನಾಟಕಕ್ಕೂ ಕಾಂಗ್ರೆಸ್ಸಿಗೂ ಯಾವುದೇ ಸಂಬಂಧ ಇಲ್ಲ. ಇನ್ನು ಆ ನಾಟಕದಲ್ಲಿ ರಾಜಕೀಯ ಇಲ್ಲ. ಅದರೊಂದಿಗೆ ಅದು ಚುನಾವಣಾ ಸಂದರ್ಭದಲ್ಲಿ ಮಾಡಿದ ನಾಟಕವೂ ಇಲ್ಲ. ಆ ನಾಟಕ ನೋಡಿದವರಿಗೆ ಅದರಲ್ಲಿ ಯಾವುದೇ ಪಕ್ಷಕ್ಕೆ ಬೆಂಬಲಿಸಿದ ಯಾವುದೇ ಕುರುಹು ಕಾಣಿಸುವುದಿಲ್ಲ. ಒಂದು ಶುದ್ಧ ದೈವಾತೀತ ಅನುಭೂತಿಯನ್ನು ನೀಡುವ ನಾಟಕದ ಬಗ್ಗೆ ಜ್ಞಾನೇಂದ್ರ ಕೇವಲವಾಗಿ ಮಾತನಾಡುವಾಗ ತಾವು ಬಳಸುವ ಶಬ್ದದ ಬಗ್ಗೆ ಎಚ್ಚರಿಕೆ ವಹಿಸಬೇಕು.
ದೈವಗಳಿಗೆ ಪ್ರತಿ ವರ್ಷ ತುಳುವರ ಮನೆಗಳಲ್ಲಿ ಕೋಲ, ನೇಮ, ಅಗೆಲ ಸಹಿತ ವಿವಿಧ ವಿಧಿವಿಧಾನಗಳ ಮೂಲಕ ಆರಾಧಿಸಲಾಗುತ್ತದೆ. ಬಹಳ ಶುದ್ಧರಾಗಿ ತುಳುವರು ಇದರಲ್ಲಿ ಭಾಗವಹಿಸುತ್ತಾರೆ. ಆದರೆ ಅಶುದ್ಧ ನಾಲಗೆಯಿಂದ ಜ್ಞಾನೇಂದ್ರ ಈ ರೀತಿ ಮಾತನಾಡುವ ಮೂಲಕ ತಮ್ಮ ಅಜ್ಞಾನವನ್ನು ಪ್ರದರ್ಶಿಸಿದ್ದಾರೆ. ಜ್ಞಾನೇಂದ್ರ ಏನೂ ಸಾಮಾನ್ಯ ರಾಜಕಾರಣಿ ಅಲ್ಲ. ಈ ರಾಜ್ಯದ ಗೃಹಸಚಿವರು. ಅವರು ಮೈಕಿನ ಮುಂದೆ ನಿಂತ ಕೂಡಲೇ ಬಾಯಿಗೆ ಬಂದಂತೆ ಒದರುವುದನ್ನು ಹೀಗೆ ಮುಂದುವರೆಸಿದರೆ ಅವರ ಕ್ಷೇತ್ರದಲ್ಲಿ ಅದಕ್ಕೆ ಪ್ರತಿಕ್ರಿಯೆ ಸಿಗುತ್ತೋ ಬಿಡುತ್ತೋ ಆದರೆ ಅದರಿಂದ ಕರಾವಳಿಯ ಶಾಸಕರಿಗೆ ಅದರಲ್ಲಿಯೂ ಮುಖ್ಯವಾಗಿ ದಕ್ಷಿಣ ಕನ್ನಡ, ಉಡುಪಿಯ ಭಾರತೀಯ ಜನತಾ ಪಾರ್ಟಿಯ ಶಾಸಕರಿಗೆ ಮುಜುಗರವಾಗುತ್ತದೆ. ಕಾಂಗ್ರೆಸ್ಸಿನ ನಾಯಕರು ಹೀಗೆ ಹೇಳಿದ್ರೆ ಇಷ್ಟೊತ್ತಿಗೆ ಬಿಜೆಪಿಯವರು ಅದನ್ನು ಒಂದು ದೊಡ್ಡ ಸುದ್ದಿ ಮಾಡಿ ಹೋರಾಟ ನಡೆಸುತ್ತಿದ್ದರು. ಆದರೆ ಗ್ರಹಚಾರ, ಈ ಬಾರಿ ಹೇಳಿದ್ದು ತಮ್ಮದೇ ಪಕ್ಷದ ಮುಖಂಡರು. ಅವರಿಗೆ ಈ ಬಗ್ಗೆ ಮಾಹಿತಿ ಕೊಡೋಣ ಎಂದರೆ ಈ ವಿಡಿಯೋ ಈಗಾಗಲೇ ವೈರಲ್ ಆಗಿದೆ. ಹಾಗಂತ ಕಾಂಗ್ರೆಸ್ಸಿಗರು ಇಂತಹ ವಿಷಯದಲ್ಲಿ ಎಡವಿಲ್ಲ ಎಂದರ್ಥವಲ್ಲ. ಆದರೆ ಅದರಿಂದ ಪಾಠ ಕಲಿತು ಇತ್ತೀಚೆಗೆ ಆದಷ್ಟು ಸಂಯಮದಿಂದ ಹೇಳಿಕೆ ನೀಡುತ್ತಿದ್ದಾರೆ. ಮಿಥುನ್ ಅಂತವರು ಉಡುಪಿ ಮಠದ ಭೂಮಿ ಮುಸ್ಲಿಂ ಅರಸರು ಕೊಟ್ಟಿದ್ದು ಎಂದು ಹೇಳಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು. ಆದರೆ ಈಗ ಜ್ಞಾನೇಂದ್ರ ಹೀಗೆ ಹೇಳಿದ್ದನ್ನು ಇತ್ತ ಅರಗಿಸಲು ಬಿಜೆಪಿ ಕಷ್ಟವಾಗುತ್ತಿದೆ. ತುಳುವರು ಯಾವತ್ತೂ ಶಾಂತಿಪ್ರಿಯರು. ತಮ್ಮ ದೇವರು, ದೈವಗಳ ಮೇಲೆ ಟೀಕೆಗಳಾದಾಗ, ಯಾರೂ ಅಸಹ್ಯ ಪೋಸ್ಟ್ ಮಾಡಿದಾಗ, ಕೆಟ್ಟದಾಗಿ ಬರೆದಾಗ ಆದಷ್ಟು ಸಂಯಮದಿಂದ ವರ್ತಿಸಿದ್ದಾರೆ. ಪಾದಯಾತ್ರೆಯ ಮೂಲಕ ದೈವಸ್ಥಾನಕ್ಕೆ ತೆರಳಿ ಅಲ್ಲಿ ಮೌನವಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ತಪ್ಪು ಮಾಡಿದವರನ್ನು ನೀನೆ ಶಿಕ್ಷಿಸು ಎಂದು ಬೇಡಿಕೊಂಡಿದ್ದಾರೆ. ಅದರ ನಂತರ ಪರಿಣಾಮ ಏನಾಗಿದೆ ಎನ್ನುವುದನ್ನು ಈ ನೆಲ ಕಂಡಿದೆ. ನ್ಯಾಯಾಲಯಗಿಂತ ವೇಗವಾಗಿ ತೀರ್ಪು ಎಲ್ಲಿಂದ ಬರಬೇಕೋ ಅಲ್ಲಿಂದ ಬಂದಿದೆ. ಇನ್ನು ನಾವು ಇಷ್ಟೇ ಹೇಳಬಹುದು. ಜ್ಞಾನೇಂದ್ರ ಬೊಗಳಿ ಆಗಿದೆ. ಗುಳಿಗ ದೈವದ ಶಿಕ್ಷೆ ಖಂಡಿತ ಬಂದೇ ಬರುತ್ತದೆ. ತಡೆಯಲು ಆಗುತ್ತದೆ ತಡೆದುಕೊಳ್ಳಲಿ. ಗುಳಿಗ ನೀನೆ ಜ್ಞಾನೇಂದ್ರನಿಗೆ ಏನು ಮಾಡಬೇಕೋ ಮಾಡಪ್ಪ!!!
Leave A Reply