ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!
ಚುನಾವಣೆ ಬಂದಾಗ ರಾಜಕೀಯವೇ ಬೇರೆ. ಆಡಳಿತ ಪಕ್ಷವನ್ನು ಹೇಗೆಲ್ಲಾ ಮಣಿಸಬಹುದು ಎಂದು ವಿಪಕ್ಷದವರು ಲೆಕ್ಕ ಹಾಕುತ್ತಾ ಇರುತ್ತಾರೆ. ಅದಕ್ಕೆ ಮಂಗಳೂರು ಕೂಡ ಹೊರತಲ್ಲ. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ತ್ಯಾಜ್ಯ ಸಂಗ್ರಹಣೆಗಾಗಿ ಆಂಟೋನಿ ವೇಸ್ಟ್ ಮ್ಯಾನೇಜಮೆಂಟ್ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ. ಈಗ ಪಾಲಿಕೆಯ ತ್ಯಾಜ್ಯ ಸಂಗ್ರಹಣೆ, ವೆಟ್ ವೆಲ್ ಅಂದರೆ ಒಳಚರಂಡಿ, ಪಂಪ್ ಹೌಸ್, ವಿದ್ಯುತ್ ನಿರ್ವಹಣೆ ಸೇರಿದಂತೆ ಸುಮಾರು ಮುನ್ನೂರಷ್ಟು ಸಿಬ್ಬಂದಿಗಳು ಪ್ರತಿಭಟನೆಗೆ ಇಳಿದಿದ್ದಾರೆ. ಇದರಿಂದ ಮಂಗಳೂರಿನಲ್ಲಿ ಕಸ ಸಂಗ್ರಹಣೆ ಸರಿಯಾಗಿ ನಡೆಯದೆ ಜನರಲ್ಲಿ ಕೋಪ ಮಡುಗಟ್ಟಿದೆ. ಮುನ್ನೂರು ಜನರು ಪ್ರತಿಭಟನೆಗೆ ಇಳಿದರೆ ಅವರ ಕುಟುಂಬದವರು ಎಲ್ಲಾ ಸೇರಿ ಸುಮಾರು ಒಂದು ಸಾವಿರ ಮತಗಳು. ಆದ್ದರಿಂದ ಅವರನ್ನು ಸಮಾಧಾನಪಡಿಸಲು ಆಡಳಿತ ಪಕ್ಷದ ಜನಪ್ರತಿನಿಧಿಗಳು ಪ್ರಯತ್ನ ಮಾಡುತ್ತಲೇ ಇದ್ದಾರೆ. ಕೆಲವು ಸಮಯದ ಹಿಂದೆ ಪಾಲಿಕೆ ಆಂಟೋನಿ ವೇಸ್ಟ್ ನಲ್ಲಿದ್ದ 111 ಪೌರ ಕಾರ್ಮಿಕರನ್ನು ರಾಜ್ಯ ಸರಕಾರ ಪರ್ಮನೆಂಟ್ ಮಾಡಿತ್ತು. ಇದರಿಂದ ಏನಾಯಿತು ಎಂದರೆ ಪಾಲಿಕೆಯಲ್ಲಿ ಸುಮಾರು 20 ರಿಂದ 25 ವರ್ಷಗಳಿಂದ ಹೊರಗುತ್ತಿಗೆಯಲ್ಲಿದ್ದ ಕಾರ್ಮಿಕರಿಗೆ ಬೇಸರವಾಗಿತ್ತು. ಇದನ್ನೇ ರಾಜಕೀಯದಾಳ ಮಾಡಿಕೊಂಡ ಪಾಲಿಕೆಯ ವಿಪಕ್ಷ ಕಾಂಗ್ರೆಸ್ ಹಾಗೆ ಅಸಮಾಧಾನಗೊಂಡಿರುವ ಕಾರ್ಮಿಕರನ್ನು ಸರಕಾರದ ವಿರುದ್ಧ ಎತ್ತಿಕಟ್ಟಿದೆ. ನೀವು ಈಗ ಪ್ರತಿಭಟನೆ ಮಾಡಿ. ಕಬ್ಬಿಣ ಬಿಸಿಯಾದಾಗಲೇ ಅದನ್ನು ಹೊಡೆದರೆ ನಮಗೆ ಬೇಕಾದ ರೂಪ ಕೊಡಬಹುದು ಎಂದು ಅವರನ್ನು ಪುಸಲಾಯಿಸಲಾಗಿದೆ. ಕಾಂಗ್ರೆಸ್ಸಿಗರ ಮಾತನ್ನು ನಂಬಿ ಹೊರಗುತ್ತಿಗೆ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಅದಕ್ಕೆ ಸರಿಯಾಗಿ ಪಾಲಿಕೆಯ ಎದುರು ಕಾಂಗ್ರೆಸ್ಸಿನ ಟಿಕೆಟ್ ಆಕಾಂಕ್ಷಿಗಳಲ್ಲಿ ಕೆಲವರು ಪ್ರತಿಭಟನೆ ಮಾಡಿದ್ದಾರೆ. ಏನು ಪ್ರತಿಭಟನೆ ಮಾಡಿದರೂ ಸೇರಿದ ಕಾಂಗ್ರೆಸ್ಸಿಗರ ಸಂಖ್ಯೆ ಮೂರಂಕಿ ಕೂಡ ದಾಟಿಲ್ಲ.
ಪ್ರತಿಭಟನೆಗೆ ಇಳಿದಿರುವ ಪೌರ ಕಾರ್ಮಿಕರ ಪ್ರಮುಖ ಬೇಡಿಕೆಗಳು ಕೇವಲ ಮಂಗಳೂರು ಪಾಲಿಕೆಗೆ ಸೇರಿದ್ದಲ್ಲ. ಅದು ರಾಜ್ಯ ಸರಕಾರಕ್ಕೆ ಸೇರಿದ್ದು. ನಾಲ್ಕು ತಿಂಗಳ ಹಿಂದೆ ರಾಜ್ಯ ಸರಕಾರ ಪರ್ಮನೆಂಟ್ ಮಾಡಿರುವ 111 ಜನರು ಮಂಗಳೂರಿನ ಸ್ಥಳೀಯರಲ್ಲ. ಅವರು ರಾಜ್ಯದ ಬೇರೆ ಬೇರೆ ಭಾಗದವರು. ಅವರು ಕಳೆದ ಏಳೆಂಟು ವರ್ಷಗಳಿಂದ ಆಂಟೋನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಪರ್ಮನೆಂಟ್ ಮಾಡಲಾಗಿದೆ. ಅದೇ 20 – 25 ವರ್ಷಗಳಿಂದ ಹೊರಗುತ್ತಿಗೆಯಲ್ಲಿ ಕೆಲಸ ಮಾಡುತ್ತಿರುವ ನಮಗೆ ಪರ್ಮನೆಂಟ್ ಮಾಡಿ ಎನ್ನುವ ಪೌರ ಕಾರ್ಮಿಕರ ಬೇಡಿಕೆಯನ್ನು ಕಾಂಗ್ರೆಸ್ ಎನ್ ಕ್ಯಾಶ್ ಮಾಡಿಕೊಳ್ಳುತ್ತಿದೆ. ಈಗ ವಿವಾದ ಮಾಡುತ್ತಿರುವ ಕಾಂಗ್ರೆಸ್ಸಿಗೆ ತಾವು ಅಧಿಕಾರದಲ್ಲಿರುವಾಗ ಅದನ್ನು ಮಾಡಬಹುದಿತ್ತಲ್ಲ ಎಂದು ಪೌರ ಕಾರ್ಮಿಕರು ಕೇಳಬೇಕಿದೆ. ಈಗ ರಾಜ್ಯ ಸರಕಾರ 111 ಸಿಬ್ಬಂದಿಗಳನ್ನು ಪರ್ಮನೆಂಟ್ ಮಾಡಿರಬಹುದು. ಹಾಗಂತ ಒಮ್ಮೆಲ್ಲೆ ಎಲ್ಲರನ್ನು ಪರ್ಮನೆಂಟ್ ಮಾಡಲು ಆಗುವುದಿಲ್ಲ. ಆದರೆ ಅವರಿಗಿಂತ ನಮ್ಮನ್ನು ಮೊದಲು ಪರ್ಮನೆಂಟ್ ಮಾಡಬಹುದಿತ್ತಲ್ಲ ಎಂದು ಪ್ರತಿಭಟನಾ ನಿರತರ ಬೇಡಿಕೆ. ಅದನ್ನು ಕಾಂಗ್ರೆಸ್ಸಿನ ಮಾಜಿ ಜನಪ್ರತಿನಿಧಿಗಳು ಪಾಲಿಕೆ ಆಡಳಿತ, ರಾಜ್ಯ ಸರಕಾರದೊಂದಿಗೆ ಸೇರಿ ಸಮಾಲೋಚಿಸಿ ಏನಾದರೂ ಕ್ರಮ ಕೈಗೊಳ್ಳಬಹುದಿತ್ತು. ಆದರೆ ಅದನ್ನು ಕಾಂಗ್ರೆಸ್ಸಿಗರು ಮಾಡಿಲ್ಲ. ಈಗ ಖಾದರ್ ಕೂಡ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಅದು ಮಾಡಿದ್ದೇವೆ, ಇದು ಮಾಡಿದ್ದೇವೆ ಎಂದು ಹೇಳುತ್ತಾರೆ. ಹಾಗಾದರೆ ಅವರು ಈ ಪ್ರತಿಭಟನೆ ಮಾಡುತ್ತಿರುವ ಪೌರ ಕಾರ್ಮಿಕರಿಗೆ ತಾವು ಅಧಿಕಾರದಲ್ಲಿದ್ದಾಗ ಯಾಕೆ ಪರ್ಮನೆಂಟ್ ಮಾಡಿರಲಿಲ್ಲ. ಭಾರತೀಯ ಜನತಾ ಪಾರ್ಟಿಯ ರಾಜ್ಯ ಸರಕಾರ ಪೌರ ಕಾರ್ಮಿಕರನ್ನು ಪರ್ಮನೆಂಟ್ ಮಾಡುವ ಮೂಲಕ ಉತ್ತಮ ಹೆಜ್ಜೆ ಇಟ್ಟಿತ್ತು.
ಮಂಗಳೂರಿನಲ್ಲಿ ಪೌರ ಕಾರ್ಮಿಕರ ಪ್ರತಿಭಟನೆಯ ಬಿಸಿ ಜನರಿಗೆ ಅಷ್ಟಾಗಿ ಪರಿಣಾಮ ಬೀರಬಾರದೆಂಬ ಕಾರಣಕ್ಕೆ ಶಾಶ್ವತ ಉದ್ಯೋಗದಲ್ಲಿರುವ 111 ಜನ, ಪಚ್ಚನಾಡಿಯ ಡಂಪಿಂಗ್ ಯಾರ್ಡ್ ನಲ್ಲಿರುವ 40 ರಷ್ಟು ಕಾರ್ಮಿಕರನ್ನು ಒಟ್ಟು ಸೇರಿಸಿ ಮನೆಮನೆ ಕಸ ಸಂಗ್ರಹ ನಡೆಯುತ್ತಿದೆ. ಕೆಲವು ಕಾರ್ಪೋರೇಟರ್ ಗಳು ಸ್ವಯಂ ಮುಂದೆ ಬಂದು ತಮ್ಮ ವಾರ್ಡಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಕೆಲವು ಕಡೆ ವೆಟ್ ವೆಲ್ ಸಿಬ್ಬಂದಿಗಳು ತಮ್ಮ ಸ್ಲಿಟ್ ರಿಮೂವಿಂಗ್ ಮಿಶಿನ್ ಹೊಂದಿರುವ ವಾಹನಕ್ಕೆ ಕೀ ಹಾಕಿ ಪ್ರತಿಭಟನೆಗೆ ಇಳಿದಿರುವುದು ಸರಿಯಲ್ಲ. ಯಾಕೆಂದರೆ ಸ್ಲಿಟ್ ರಿಮೂವಿಂಗ್ ಮಿಶಿನ್ ಪಾಲಿಕೆದ್ದು. ಅಂದರೆ ಜನರ ತೆರಿಗೆಯ ಹಣದ್ದು. ಅದನ್ನು ಗುತ್ತಿಗೆದಾರರಿಗೆ ಕೊಟ್ಟರೆ ಅದು ಅವರ ವೈಯಕ್ತಿಕ ಸೊತ್ತಲ್ಲ. ಪ್ರತಿಭಟನೆಗೆ ಹೋದರೆ ಅದರ ಕೀಯನ್ನು ಪಾಲಿಕೆಗೆ ಹಸ್ತಾಂತರಿಸಬೇಕು. ಹಾಗೆ ಜೆಟ್ ಸೆಕ್ ವಾಹನ ಕೂಡ ಹೀಗೆ ಕೀಲಿ ಕೈ ಗುತ್ತಿಗೆದಾರರ ಸಿಬ್ಬಂದಿಗಳ ಕೈಯಲ್ಲಿ ಇದೆ. ಅವರು ಅದನ್ನು ಇಟ್ಟುಕೊಂಡು ಆಟ ಆಡಬಾರದು. ಅವರು ಹೀಗೆ ಮಾಡುತ್ತಾ ಇರುವುದರಿಂದ ಮೇಯರ್ ಮತ್ತು ಪಾಲಿಕೆಯ ಕಮೀಷನರ್ ತುರ್ತಾಗಿ ಹಾಗೆ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಒಟ್ಟಿನಲ್ಲಿ ರಣಾಂಗಣದಲ್ಲಿ ಏನೂ ಮಾಡಲು ಸಾಧ್ಯವಿಲ್ಲದೇ ಇರುವ ಕಾಂಗ್ರೆಸ್ ಬೇರೆಯವರ ಹೆಗಲ ಮೇಲೆ ಕೋವಿ ಇಟ್ಟು ಗುಂಡು ಹೊಡೆಯುತ್ತಿದೆ!!
Leave A Reply