ಚುನಾವಣೆ ಪ್ರಜಾಪ್ರಭುತ್ವದ ಹಬ್ಬ ಬೆಟ್ಟಿಂಗ್ ನವರಿಗೆ!!
ಎಲ್ಲರೂ ಭವಿಷ್ಯ ನುಡಿಯುತ್ತಿರುವಾಗ ನಮ್ಮದು ಒಂದು ಇರಲಿ ಎಂದು ಚುನಾವಣಾ ಪೂರ್ವ ಸಮೀಕ್ಷೆಯನ್ನು ಮಾಡಿರುವ ನ್ಯೂಸ್ ಏಜೆನ್ಸಿಗಳು ತಮ್ಮ ಅಂಕಿಅಂಶಗಳನ್ನು ಹೇಳುತ್ತಾ ಬರುತ್ತಿವೆ. ಇದೇನೂ ಈ ಬಾರಿ ಹೊಸದಲ್ಲ. ಪ್ರತಿ ಬಾರಿ ಮತದಾನ ಆದ ನಂತರ ಸಮೀಕ್ಷೆಗಳು ಟಿವಿ ಪರದೆ ಮೇಲೆ ಕಾಣಿಸಲು ಶುರು ಆಗುತ್ತವೆ. ಇದನ್ನು ಯಾರು ನಂಬುತ್ತಾರೋ, ಬಿಡ್ತಾರೋ ಅವರಿಗೆ ಬಿಟ್ಟಿದ್ದು. ತಮಗೆ ಖುಷಿಯಾಗುವ ಎಕ್ಸಿಟ್ ಪೋಲ್ ಬಂದರೆ ಸಂಭ್ರಮಿಸುವ, ವಿರೋಧ ಬಂದರೆ ಅಂತಿಮ ಫಲಿತಾಂಶಕ್ಕಾಗಿ ಕಾಯುತ್ತೇವೆ ಎಂದು ಹೇಳುವುದು ಆಯಾ ರಾಜಕೀಯ ಪಕ್ಷದ ಮುಖಂಡರ ಖಾಯಂ ಹೇಳಿಕೆ. ಆದರೆ ಈ ಮತಗಟ್ಟೆ ಸಮೀಕ್ಷೆಯ ಹಿಂದೆ ಸತ್ಯಾಂಶ ಇರುತ್ತೋ ಇಲ್ಲವೋ ಎಂದು ಯಾರು ನೋಡಲು ಹೋಗಲ್ಲ. ಒಂದು ರೀತಿಯಲ್ಲಿ ಗಿಣಿ ಭವಿಷ್ಯದ ತರಹ ಇದು ನಡೆಯುತ್ತದೆ. ಒಂದು ವೇಳೆ ಈ ನ್ಯೂಸ್ ಏಜೆನ್ಸಿಗಳು ನೀಡುವ ಭವಿಷ್ಯ ಸುಳ್ಳಾದರೂ ಯಾರೂ ಫಲಿತಾಂಶ ಬಂದ ಬಳಿಕ ತಲೆಕೆಡಿಸಿಕೊಳ್ಳುವುದಿಲ್ಲ. ಯಾಕೆಂದರೆ ಈ ಪೋಲ್ ಗಳು ಕೇವಲ ಎರಡು ದಿನಗಳ ಗ್ಯಾಪ್ ತುಂಬಿಸಿ ನಮಗೆ ಚರ್ಚೆಗೆ ಒಂದು ಅವಕಾಶ ಮಾಡಿಕೊಡುತ್ತವೆ ಬಿಟ್ಟರೆ ಬೇರೆ ಏನೂ ಇಲ್ಲ. ಇಂತಹ ಎಕ್ಟಿಟ್ ಪೋಲ್ ಗಳು ಯಾವತ್ತೂ ನಿಜವೇ ಆಗುತ್ತೆ ಎಂದು ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಗುಜರಾತಿನಲ್ಲಿ ಕಳೆದ ಚುನಾವಣೆಯಲ್ಲಿ ಹೀಗೆ ಆಗಿತ್ತು. ಭಾರತೀಯ ಜನತಾ ಪಾರ್ಟಿಯ ಸರಕಾರ ಬರುವುದಿಲ್ಲ, ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದೇ ಹೇಳಲಾಗಿತ್ತು. ಆದರೆ ಎಲ್ಲವನ್ನು ದಾಟಿ ಫಲಿತಾಂಶದ ದಿನ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಯಾಕೆಂದರೆ ಯಾವುದೇ ಸಮೀಕ್ಷೆಗೆ ವೈಜ್ಞಾನಿಕ ತಳಹದಿಗಳು ಇರುವುದಿಲ್ಲ. ಈಗಂತೂ ಸಮೀಕ್ಷೆ ಮಾಡುವ ಏಜೆನ್ಸಿಗಳು ಚುನಾವಣೆಯಿಂದ ಚುನಾವಣೆಗೆ ಹೆಚ್ಚಾಗುತ್ತಾ ಬಂದಿವೆ. ಈ ಬಾರಿಯಂತೂ 11 ಸಮೀಕ್ಷೆಯ ಏಜೆನ್ಸಿಗಳು ಭವಿಷ್ಯ ನುಡಿದಿವೆ. ಅದರಲ್ಲಿ ಎಂಟು ಏಜೆನ್ಸಿಗಳು ಕಾಂಗ್ರೆಸ್ ಪಕ್ಷ ಅಧಿಕಾರದ ದಡ ಸೇರುತ್ತದೆ ಎಂದು ಉಲ್ಲೇಖಿಸಿವೆ. ಹಾಗಾದ್ರೆ ಈ ಸಮೀಕ್ಷೆಗಳನ್ನು ಮಾಡುವವರಿಗೆ ಲಾಭ ಏನು?
ಲಾಭ ಇದೆ. ಒಂದು ಚುನಾವಣೆ ಎಂದರೆ ಅದು ಪಕ್ಕಾ ವ್ಯಾಪಾರ. ಅದರ ಒಂದು ಅಂಗ ಬೆಟ್ಟಿಂಗ್. ಚುನಾವಣೆಯಲ್ಲಿ ಮತದಾನದ ಬಳಿಕ ಇರುವ ಎರಡು ದಿನಗಳಲ್ಲಿ ಕೋಟ್ಯಾಂತರ ರೂಪಾಯಿ ಬೆಟ್ಟಿಂಗ್ ವ್ಯವಹಾರ ನಡೆಯುತ್ತದೆ. ಈ ಬೆಟ್ಟಿಂಗ್ ಗೆ ಮಾರುಕಟ್ಟೆಯೇ ಟಿವಿ ಮಾಧ್ಯಮ. ಟಿವಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಪದೇ ಪದೇ ಸಮೀಕ್ಷೆಗಳನ್ನು ತೋರಿಸುತ್ತಿದ್ದರೆ ಬಹುತೇಕರು ಕಾಂಗ್ರೆಸ್ ಪರವಾಗಿ ಬೆಟ್ಟಿಂಗ್ ಹಾಕುತ್ತಾರೆ. ಆಗ ಬಿಜೆಪಿಯನ್ನು ಕೇಳುವವರೇ ಇಲ್ಲ. ಆದರೆ ವಾಸ್ತವದಲ್ಲಿ ಬೆಟ್ಟಿಂಗ್ ಬಜಾರ್ ಅವರ ಬಳಿ ಇರುವ ಸಮೀಕ್ಷೆಯ ಪ್ರಕಾರ ಬಿಜೆಪಿಯೇ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತದೆ. ಹಾಗಾದರೆ ಲಾಭ ಯಾರಿಗೆ? ಇಲ್ಲದೇ ಹೋದರೆ ಯಾವುದೇ ಬೋರ್ಡಿಗೆ ಇಲ್ಲದ ಏಜೆನ್ಸಿಗಳು
ಮಳೆಗಾಲದಲ್ಲಿ ಹುಟ್ಟಿಕೊಳ್ಳುವ ಅಣಬೆಗಳಂತೆ ಹುಟ್ಟಿಕೊಂಡು ಜ್ಯೋತಿಷಿಗಳಾಗುವುದು ಯಾಕೆ? ಅದು ಕೂಡ ವ್ಯವಹಾರದ ಒಂದು ಭಾಗ. ಬೆಟ್ಟಿಂಗ್ ನವರಿಗೂ, ಏಜೆನ್ಸಿಯವರಿಗೂ, ಮಾಧ್ಯಮದವರಿಗೂ ಇರುವ ಅಪವಿತ್ರ ಮೈತ್ರಿಯನ್ನು ಇದು ಹೊರಗೆ ಹಾಕುತ್ತದೆ.
ಸಾವಿರಾರು ಕೋಟಿ ವ್ಯವಹಾರ ಇರುವ ಬೆಟ್ಟಿಂಗ್ ಉದ್ಯಮದವರು ಈ ನ್ಯೂಸ್ ಏಜೆನ್ಸಿಯವರೊಂದಿಗೆ ಡೀಲ್ ಮಾಡಿಕೊಂಡು ಇಂತಹುದೇ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಪ್ರಾಜೆಕ್ಟ್ ಮಾಡಿಕೊಳ್ಳುತ್ತಾರೆ. ಹೇಗೂ ಟಿವಿಯವರು ಸ್ಪರ್ಧೆಗೆ ಬಿದ್ದು ಇದನ್ನು ತಮ್ಮ ವಾಹಿನಿಯಲ್ಲಿ ತೋರಿಸುತ್ತಾರೆ. ಬೆಟ್ಟಿಂಗ್ ಕುದುರುತ್ತದೆ. ಲಕ್ಷಾಂತರ ಜನ ಮಾಧ್ಯಮದವರನ್ನು ನಂಬಿ ಹಣ ಹೂಡುತ್ತಾರೆ. ಆ ಬಳಿಕ ಅಂತಿಮ ಫಲಿತಾಂಶ ಬಂದಾಗ ಹಣವನ್ನು ಕಳೆದುಕೊಳ್ಳುತ್ತಾರೆ. ಹಾಗಂತ ಯಾರೂ ಕೂಡ ತಾನು ಇಂತಿಂತಹ ಬೆಟ್ಟಿಂಗ್ ಸಟ್ಟಾ ಬಜಾರಿನಲ್ಲಿ ಹಣ ಹಾಕಿದೆ. ಹಣ ಕಳೆದುಕೊಳ್ಳಲು ಕಾರಣ ಮಾಧ್ಯಮಗಳು. ಅವುಗಳನ್ನು ನಂಬಿ ಹಣ ಹೂಡಿದೆ ಎಂದು ಯಾವ ಪೊಲೀಸ್ ಠಾಣೆಯಲ್ಲಿಯೂ ದೂರು ಕೊಡಲು ಹೋಗುವುದಿಲ್ಲ. ಯಾಕೆಂದರ ಇಡೀ ಜಾಲವೇ ಅಕ್ರಮ. ಹಣ ಮಾಡಿದವ, ಹಣ ಕಳೆದುಕೊಂಡವ ತೆರೆಯ ಮರೆಯಲ್ಲಿ ಅಡಗಿಯೇ ಕುಳಿತುಕೊಂಡಿರುತ್ತಾನೆ.
ಇನ್ನು ಬಿಜೆಪಿ ಯಾಕೆ ಕಾಂಗ್ರೆಸ್ಸಿಗಿಂತ ಕಡಿಮೆ ಸೀಟುಗಳನ್ನು ಪಡೆದುಕೊಳ್ಳಲಿದೆ ಎನ್ನುವುದಕ್ಕೆ ಲಾಜಿಕ್ ಇಲ್ಲ. ಮೋದಿಯವರು ಇಷ್ಟು ವ್ಯಾಪಕವಾಗಿ ಪ್ರಚಾರ ಮಾಡಿದ ಬಳಿಕ ಮೂರು ಡಿಜಿಟ್ ಬರದೇ ಇದ್ದರೆ ಹೇಗೆ? ಕರ್ನಾಟಕದಲ್ಲಿ ಬಿಜೆಪಿಯ ವರ್ಚಸ್ಸು ಹಾಳಾಗಿರುವುದು ನೋಡಿಯೇ ಮೋದಿ, ಶಾ, ಯೋಗಿ ಆ ಪರಿ ಬಂದು ಹೋಗಿದ್ದು. ಹೀಗಿದ್ದ ಮೇಲೆಯೂ ಜನ ಕಾಂಗ್ರೆಸ್ಸಿಗೆ ಮತ ಹಾಕುತ್ತಾರೆ ಎಂದರೆ ಅದರ ಅರ್ಥ ಏನು? ಒಂದೋ ಈ ಸಮೀಕ್ಷೆಗಳು ಮೇ ಮೊದಲು ಮಾಡಿದ್ದು, ಕಾಂಗ್ರೆಸ್ ನವರು ಪ್ರಣಾಳಿಕೆ ಬಿಡುಗಡೆ ಮಾಡಿದ ನಂತರ ಪರಿಸ್ಥಿತಿ ಬದಲಾಗಿದೆ. ಇನ್ನು ಮೋದಿ ಪ್ರಚಾರಕ್ಕೆ ಬಂದು ಹೋದ ಬಳಿಕ ಕೊನೆಯ ಘಳಿಗೆಯ ಲೆಕ್ಕಾಚಾರ ಬದಲಾಗಿದೆ. ಆದರೂ ಏಕೋ ಬಿಜೆಪಿ ಪಾಳಯದಲ್ಲಿ ಸೂತಕದ ಮೌನ. ಅತ್ತ ಜಾತ್ಯಾತೀತ ಜನತಾದಳ ತನ್ನ ದಾಳ ಉರುಳಿಸಲು ತಯಾರಾಗಿದೆ. ಏನೇ ಆಗಲಿ, ಇನ್ನಿರುವ ಕೆಲವೇ ಗಂಟೆಗಳ ತನಕ ಮಾತ್ರ ಸಮೀಕ್ಷೆಗಳಿಗೆ ಜೀವ. ಅಷ್ಟು ಒಳಗೆ ಎಷ್ಟೋ ಕೋಟಿ ಕೈಬದಲಾಗುತ್ತದೆ. ಚುನಾವಣೆ ಅನೇಕರಿಗೆ ಹಬ್ಬ ಎನ್ನುವುದು ಆ ದೃಷ್ಟಿಯಲ್ಲಿ ನಿಜ!
Leave A Reply