ಮೇ ಮಳೆ ತೆರೆದಿಟ್ಟಿತ್ತು ಹಣೆಬರಹ!
ಮೇ ಮಳೆ ಮಂಗಳೂರಿನಲ್ಲಿ ತೋರಿಸಿದ್ದು ಒಂದು ಸ್ಯಾಂಪಲ್. ಮಳೆ ಬಂದು ಹೋದ ನಂತರ ಮಂಗಳೂರು ನಗರದ ಕೆಲವು ಜಾಗಗಳಳ್ಲಿ ಚರಂಡಿಗಳು ಬ್ಲಾಕ್ ಆದವು. ಮ್ಯಾನ್ ಹೋಲ್ ಗಳು ತೆರೆದವು. ಮನುಷ್ಯನ ತ್ಯಾಜ್ಯ ಹೊರಗೆ ಬಂತು. ಇದನ್ನು ನಮ್ಮ ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಕ್ಯಾರ್ ಲೆಸ್ ಮಾಡಿದರೆ ಮಳೆಗಾಲದಲ್ಲಿ ನಮ್ಮ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ. ನಗರದ ಜನರು ವೋಟು ಹಾಕಲಿಕ್ಕೂ ಬರುವುದಿಲ್ಲ. ಅದೇ ರೀತಿಯಲ್ಲಿ ಏನು ಸಮಸ್ಯೆ ಇದ್ದರೂ ಪ್ರತಿಭಟನೆ ಮಾಡುವುದಿಲ್ಲ ಎಂದು ಗೊತ್ತಿರುವುದರಿಂದ ಹೀಗೆ ಆಗುತ್ತಿದೆ. ಹಾಗಂತ ಅಧಿಕಾರಿಗಳು ತಾವು ಏನೂ ಮಾಡಿದರೂ ನಡೆಯುತ್ತೆ ಎಂದು ಅಂದುಕೊಳ್ಳಬಾರದು. ಅವರು ಜನರ ತೆರಿಗೆಯ ಹಣದಿಂದ ಸಂಬಳವನ್ನು ಎಣಿಸುತ್ತಾರೆ. ಆದ್ದರಿಂದ ಜನರಿಗೆ ಏನು ಸೌಲಭ್ಯ ಕೊಡಬೇಕೊ ಅದನ್ನು ಕೊಡಲೇಬೇಕು. ಮೊದಲನೇಯದಾಗಿ ಮಳೆಗಾಲದ ಮೊದಲು ಒಂದು ಮೀಟರ್ ಅಗಲದ ತೋಡಲ್ಲಿರುವ ಹೂಳನ್ನು ಆಂಟೋನಿ ವೇಸ್ಟ್ ನವರು ತೆಗೆದರಾ ಎಂದು ಅಧಿಕಾರಿಗಳು, ಸಿಬ್ಬಂದಿಗಳು ಯಾಕೆ ನೋಡುತ್ತಿಲ್ಲ. ಅವರು ನೋಡದಿದ್ದರೆ ಅವರವರ ವಾರ್ಡುಗಳಲ್ಲಿ ಕಾರ್ಪೋರೇಟರ್ ಗಳು ಯಾಕೆ ನೋಡುತ್ತಿಲ್ಲ.
ಕಾರ್ಪೋರೇಟರ್ ಗಳಿಗೆ ಆಂಟೋನಿಯವರ ಕವರ್ ಖುಷಿ ಕೊಡುತ್ತಿದ್ದರೆ ಅವರು ಯಾವ ಆಧಾರದ ಮೇಲೆ ಕೆಲಸ ಮಾಡಿ ಎಂದು ನೈತಿಕತೆ ಇಟ್ಟು ಹೇಳುತ್ತಾರೆ? ಅವರು ಆಂಟೋನಿ ವೇಸ್ಟಿನವರಿಗೆ ಪ್ರಶ್ನಿಸದೇ ಇದ್ದ ಕಾರಣ ಮುಂದಿನ ದಿನಗಳಲ್ಲಿ ಕೃತಕ ನೆರೆ ಮಂಗಳೂರನ್ನು ಭಾದಿಸಲಿದೆ. ಜೂನ್ ತಿಂಗಳಲ್ಲಿ ಕೃತಕ ನೆರೆ ಬಂತು ಎಂದೇ ಇಟ್ಟುಕೊಳ್ಳೋಣ. ಲಾಭ ಯಾರಿಗೆ? ಸಂಶಯವೇ ಇಲ್ಲ. ಮತ್ತೆ ಇದೇ ಕಾರ್ಪೋರೇಟರ್ ಗಳಿಗೆ ಮತ್ತು ಪಾಲಿಕೆಯ ಅಧಿಕಾರಿಗಳಿಗೆ. ಅದಕ್ಕಾಗಿ ಅವರು ಒಂದು ಮೀಟರ್ ಅಗಲದ ತೋಡುಗಳನ್ನು ಸ್ವಚ್ಚ ಮಾಡಲು ಆಂಟೋನಿಯವರ ಮೇಲೆ ಈಗ ಒತ್ತಡ ಹಾಕಲ್ಲ. ಯಾಕೆಂದರೆ ಒಂದು ಮೀಟರ್ ತೋಡುಗಳು ಕ್ಲೀನ್ ಆಗಿ ಕೃತಕ ನೆರೆ ಸೃಷ್ಟಿಯಾಗದೇ ಇದ್ದರೆ ಕಾರ್ಪೋರೇಟರ್ ಗಳು ಹೊಟ್ಟೆಯ ಮೇಲೆ ತಣ್ಣನೆಯ ಬಟ್ಟೆ ಇಟ್ಟು ಮಲಗಬೇಕಾಗುತ್ತದೆ. ಕೃತಕ ನೆರೆ ಬಂದರೆ ಕಾರ್ಪೋರೇಟರ್ ಗಳಿಗೆ ಮತ್ತು ಅಧಿಕಾರಿಗಳಿಗೆ ಏನು ಲಾಭ ಎಂದು ನಿಮಗೆ ಅನಿಸಬಹುದು. ಲಾಭ ಇದೆ. ಸ್ಪೆಶಲ್ ಗ್ಯಾಂಗ್. ಈ ಗ್ಯಾಂಗ್ ಹೆಸರಿನಲ್ಲಿ ಇವರುಗಳು ಮಾಡುವ ಹಣ ಒಂದಿಷ್ಟಾ? ಪಾಲಿಕೆಯ ಕಮೀಷನರ್ ಅವರಿಗೆ ಈ ಕೃತಕ ನೆರೆಯ ಗುಮ್ಮ ತೋರಿಸಿಯೇ ಸ್ಪೆಶಲ್ ಗ್ಯಾಂಗ್ ಆದೇಶ ಹೊರಡಿಸುವಲ್ಲಿ ಪಾಲಿಕೆಯ ಒಳಗಿನ ಹಳೆ ಹುಲಿಗಳು ದಶಕದಿಂದ ಪರಿಣಿತರಾಗಿದ್ದಾರೆ. ಮೂರ್ನಾಕು ಸಲ ಗೆದ್ದವರು ಕಮೀಷನರ್ ಅವರ ಚೇಂಬರಿಗೆ ಹೋಗಿ “ಸರ್, ಸ್ಪೆಶಲ್ ಗ್ಯಾಂಗ್ ಮಾಡದಿದ್ದರೆ ಸುಮ್ಮನೆ ಸಮಸ್ಯೆ ಆಗುತ್ತದೆ” ಎಂದು ಹೇಳಿ ಹೇಳಿಯೇ ಪಾಲಿಕೆಯ ತಿಜೋರಿಗೆ ಕೈ ಹಾಕಿಬಿಡುತ್ತಾರೆ. ಕಮೀಷನರ್ ಅವರು ಇಲ್ಲಿ ಹೆಚ್ಚೆಂದರೆ ಎರಡ್ಮೂರು ವರ್ಷ ಇರುವವರು. ಇಲ್ಲಿನವರ ಮಾತು ಕೇಳದೇ ಹೆಚ್ಚು ಕಡಿಮೆ ಆದರೆ ಸುಮ್ಮನೆ ತಮ್ಮ ವೃತ್ತಿ ಅವಧಿಯಲ್ಲಿ ಕಪ್ಪುಚುಕ್ಕೆ ಯಾಕೆ ಎಂದು ಮಂಜೂರು ಮಾಡಿಬಿಡುತ್ತಾರೆ. ಅವರಿಗೆ ನೆಮ್ಮದಿ. ಇವರಿಗೆ ಖುಷಿ. ನಾಗರಿಕರ ಕೋಟ್ಯಾಂತರ ರೂಪಾಯಿ ಹಣ ಪೋಲು.
ಇನ್ನು ಪಾಲಿಕೆಯಲ್ಲಿ ಸ್ಲಿಟ್ ರಿಮೂವಿಂಗ್ ಮಿಶಿನ್ ಎನ್ನುವ ಹೆಸರಿನ ನಾಲ್ಕು ಯಂತ್ರಗಳು ಇವೆ. ಅದನ್ನು ಒಳಚರಂಡಿಯಲ್ಲಿರುವ ಮರಳನ್ನು ತೆಗೆಸಲು ಗುತ್ತಿಗೆದಾರರಿಗೆ ಗುತ್ತಿಗೆ ನೀಡಲಾಗುತ್ತದೆ. ಅದಕ್ಕಾಗಿ ಅವರಿಗೆ ತಿಂಗಳ ಬಿಲ್ ಕೂಡ ಪಾಸಾಗುತ್ತದೆ. ಆದರೆ ಇಂತಹ ಕೆಲಸ ಇದೆ ಎಂದು ಎಷ್ಟು ಜನರಿಗೆ ಗೊತ್ತಿದೆ. ಈ ಕೆಲಸವನ್ನು ಅಧಿಕಾರಿಗಳು ಗುತ್ತಿಗೆದಾರರಿಂದ ಮಾಡಿಸಲ್ವಾ ಅಥವಾ ಮಾಡಿಸಲು ಗೊತ್ತಿಲ್ವಾ? ಯಾವಾಗ ಮ್ಯಾನ್ ಹೋಲ್ ಓವರ್ ಫ್ಲೋ ಆಗಿ ಹೊರಗೆ ಬಂದಾಗಲೇ ಇದು ಯಾಕೆ ಹೀಗೆ ಎಂದು ತಲೆಕೆಡಿಸಿಕೊಳ್ಳುವ ನಾವು ಇಂತಹ ಕೆಲಸವನ್ನು ಮೊದಲೇ ಮಾಡಿಸಿಡಿ ಎಂದು ಕಾರ್ಪೋರೇಟರ್ ಗಳಿಗೆ ಯಾಕೆ ಹೇಳುವುದಿಲ್ಲ. ಕಾರ್ಪೋರೇಟರ್ ಗಳು ಜನರಿಗೆ ಸಮಸ್ಯೆ ಆಗುವ ತನಕ ಕಾಯದೇ ಮೊದಲೇ ಯಾಕೆ ಮಾಡಿಸುವುದಿಲ್ಲ. ಇಷ್ಟು ದಿನ ಚುನಾವಣೆ, ಮತದಾನ, ಮತಎಣಿಕೆ ಎಂದು ಸಮಯ ಹೋಗಿದೆ. ಸೋಮವಾರದಿಂದ ಕಾರ್ಪೋರೇಟರ್ ಗಳು, ಪಾಲಿಕೆಯ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು. ಅದರೊಂದಿಗೆ ಇವತ್ತು ನಾನು ಕೆಲವು ಫೋಟೋಗಳನ್ನು ಪೋಸ್ಟ್ ಮಾಡಿದ್ದೇನೆ. ಅದನ್ನು ನೋಡುವಾಗಲೇ ಎಂತವರಿಗಾದರೂ ಮಂಗಳೂರಿನಲ್ಲಿ ಕೃತಕ ನೆರೆ ಗ್ಯಾರಂಟಿ ಎನ್ನುವುದು ಪಕ್ಕಾ. ಆ ಜಾಲಿಗಳ ಮೇಲಿನ ಮರಳು ತೆಗೆಯದೇ ಹೋದರೆ ಮಳೆಯ ನೀರು ಎಲ್ಲಿಗೆ ಹೋಗುವುದು. ನಗರ ಸೇವಕರಾಗುತ್ತೇವೆ ಎಂದು ಮತ ಕೇಳಿದ ಕಾರ್ಪೋರೇಟರ್ ಗಳು ಈ ಬಗ್ಗೆ ತಕ್ಷಣ ಗಮನ ಹರಿಸಬೇಕು. ಇಲ್ಲದಿದ್ದರೆ ನೀವು ಕಾರ್ಪೋರೇಟರ್ ಆಗಿರುವುದೇ ನುಂಗಲು ಎಂದು ಅಂದುಕೊಳ್ಳಬೇಕಾಗುತ್ತದೆ.!
Leave A Reply