ಕಾಂಗ್ರೆಸ್ಸಿಗೆ ಮುಸ್ಲಿಂ ಹಾಗೂ ದಲಿತರಲ್ಲಿ ಆಯ್ಕೆ ಯಾರು?
ಕೆಜಿ ಹಳ್ಳಿ – ಡಿಜೆ ಹಳ್ಳಿಯನ್ನು ಯಾರು ತಾನೆ ಮರೆಯಲು ಸಾಧ್ಯ. ಕಾಂಗ್ರೆಸ್ಸಿನ ದಲಿತ ಶಾಸಕನ ಮನೆಯನ್ನು ಮತಾಂಧರು ಸುಟ್ಟು ಹಾಕಿದ್ದರಲ್ಲ, ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲು ಪ್ರಯತ್ನಿಸಿದರಲ್ಲ, ಅಕ್ಷರಶ: ದೊಂಬಿ, ಗಲಭೆ ನಡೆಸಿ ಭಯೋತ್ಪಾದಕರಂತೆ ವರ್ತಿಸಿದವರನ್ನು ಏನು ಮಾಡಬೇಕು ಎಂದು ಯಾವುದೇ ವ್ಯಕ್ತಿಯ ಬಳಿ ಕೇಳಿದರೂ ಅಂತವರಿಗೆ ಮರೆಯಬಾರದ ಶಿಕ್ಷೆಯನ್ನು ನೀಡಬೇಕು ಎಂದು ಹೇಳಿಯಾರು? ಆದರೆ ಕಾಂಗ್ರೆಸ್ ಸರಕಾರ ಅಂತಹ ಮೂಲಭೂತವಾದಿ ಯುವಕರನ್ನು ಕೆಲವೇ ದಿನಗಳ ಒಳಗೆ ಬಿಡುಗಡೆ ಮಾಡಿದರೂ ಯಾರೂ ಆಶ್ಚರ್ಯಪಡಬೇಕಾಗಿಲ್ಲ. ಯಾಕೆಂದರೆ ಈಗ ರಾಜ್ಯದಲ್ಲಿ ಇರುವುದು ಕಾಂಗ್ರೆಸ್ ಸರಕಾರ. ಅಲ್ಪಸಂಖ್ಯಾತರ ಋಣದ ಮೇಲೆ ಅಕ್ಷರಶ: ನಿಂತಿರುವ ಸರಕಾರಕ್ಕೆ ಮುಸ್ಲಿಮರನ್ನು ಸಂತೃಪ್ತಿಗೊಳಿಸುವ ಅನಿವಾರ್ಯತೆ ಇದೆ. ಅದರ ಇನ್ನೊಂದು ಭಾಗವೇ ಕೆಜೆ ಹಳ್ಳಿ, ಡಿಜಿ ಹಳ್ಳಿಯಲ್ಲಿ ಅಕ್ಷರಶ: ದೊಂಬಿ ನಡೆಸಿದ ಅಷ್ಟೂ ಆರೋಪಿಗಳನ್ನು ಬಿಡುಗಡೆಗೊಳಿಸಬೇಕು ಎನ್ನುವ ಚಿಂತನೆ ನಡೆದಿದೆ. ಇಂತಹ ಯೋಚನೆ ಕಾಂಗ್ರೆಸ್ಸಿಗೆ ಬರುತ್ತದೆಯಲ್ಲ ಎನ್ನುವ ಆಶ್ಚರ್ಯ ಯಾರಿಗೂ ಆಗಬೇಕಾಗಿಲ್ಲ. ಅಧಿಕಾರಕ್ಕೆ ಬಂದರೆ ಉಚಿತ ಘೋಷಣೆ ಮಾತ್ರವಲ್ಲ, ಇಂತಹುಗಳನ್ನು ಕೂಡ ಮಾಡುತ್ತೇವೆ ಎಂದು ಕೂಡ ಭರವಸೆ ನೀಡಿರಬಹುದು.
ಕಾಂಗ್ರೆಸ್ಸಿಗೆ ಮುಸ್ಲಿಂ ಹಾಗೂ ದಲಿತರಲ್ಲಿ ಆಯ್ಕೆ ಯಾರು?
ಹೀಗೆ ಈ ಪ್ರಕರಣವನ್ನು ಮತ್ತೆ ಜನರಿಗೆ ನೆನಪಿಸಿದ ಮಹಾನುಭಾವನ ಹೆಸರು ಶಾಸಕ ತನ್ವೀರ್ ಸೇಠ್. ಯಾರಿಗೆಲ್ಲಾ ಈ ಬಾರಿ ಸಚಿವ ಸ್ಥಾನ ಸಿಗಲಿಲ್ಲವೋ ಅಂತವರೆಲ್ಲ ಸರಕಾರದ ಬುಡಕ್ಕೆ ಬತ್ತಿ ಇಡಲು ಬೇರೆ ಬೇರೆ ಬೇಡಿಕೆಗಳನ್ನು ಸರಕಾರದ ಮುಂದೆ ಇಡುತ್ತಿದ್ದಾರೆ. ಹೀಗೆ ಗೃಹ ಸಚಿವ ಪರಮೇಶ್ವರ್ ಮುಂದೆ ಪ್ರಸ್ತಾಪ ಇಟ್ಟ ತನ್ವೀರ್ ಸೇಠ್ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಒಂದು ವೇಳೆ ಕೇಸುಗಳನ್ನು ಹಿಂದಕ್ಕೆ ಪಡೆದರೆ ಕಾಂಗ್ರೆಸ್ ಪಕ್ಕಾ ಅಲ್ಪಸಂಖ್ಯಾತರ ಪರ ಎನ್ನುವುದು ಸಾಬೀತಾಗುತ್ತದೆ. ಅಷ್ಟೇ ಆಗಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಬೇಸರ ಇಲ್ಲ. ಹೌದು, ನಾವು ಮುಸ್ಲಿಮರ ಬಗ್ಗೆ ಕಮಿಟೆಡ್ ಆಗಿದ್ದೇವೆ. ನಮ್ಮ ಪಕ್ಷದ ತತ್ವ, ಸಿದ್ಧಾಂತದಂತೆ ನಡೆಯುತ್ತೇವೆ ಎಂದು ಹೇಳಿಬಿಡಬಹುದು. ಆದರೆ ಈ ನಡುವೆ ದಲಿತ ಶಾಸಕನ ಮನೆಗೆ ಬೆಂಕಿ ಹಾಕಿದವರನ್ನು ಹಾಗೆ ಬಿಡುವುದು ಸರಿನಾ ಎನ್ನುವ ಪ್ರಶ್ನೆ ಸರಕಾರದ ಮುಂದಿದೆ. ಬೆಂಕಿ ಕೊಟ್ಟವರು ಮುಸ್ಲಿಮರು ಎನ್ನುವ ಕಾರಣಕ್ಕೆ ದಲಿತರಿಗಿಂತ ಕಾಂಗ್ರೆಸ್ಸಿಗೆ ಅಲ್ಪಸಂಖ್ಯಾತರ ಮೇಲೆ ಹೆಚ್ಚು ಪ್ರೀತಿ ಎನ್ನುವ ವಾತಾವರಣ ಸೃಷ್ಟಿಯಾದರೆ ಏನು ಮಾಡುವುದು? ಇದನ್ನು ಕಾಂಗ್ರೆಸ್ ಜೀರ್ಣಿಸಿಕೊಳ್ಳುತ್ತದಾ ಎನ್ನುವುದು ಮೊದಲ ಪ್ರಶ್ನೆ.
ಯಾಕೆಂದರೆ ಮೊನ್ನೆ ವಿಧಾನಸಭೆಯಲ್ಲಿ ಭಾರತೀಯ ಜನತಾ ಪಾರ್ಟಿಯವರು ದಲಿತ ಉಪಸಭಾಧ್ಯಕ್ಷರ ಮೇಲೆ ಕಾಗದ ಹರಿದು ಚೂರು ಎಸೆದರು. ಡೆಪ್ಯೂಟಿ ಸ್ಪೀಕರ್ ದಲಿತರಾಗಿರುವುದರಿಂದ ಹೀಗೆ ಮಾಡಿದರು ಎಂದು ಕಾಂಗ್ರೆಸ್ ಇಡೀ ದಿನ ಎಲ್ಲೆಡೆ ಕೂಗೆಬ್ಬಿಸಿತ್ತು. ಅದನ್ನೇ ಮರು ಟೀಕಾಸ್ತ್ರವಾಗಿ ಎಸೆಯಲಿರುವ ಬಿಜೆಪಿ ಒಬ್ಬ ದಲಿತ ಶಾಸಕನ ಮನೆಗೆ ಬೆಂಕಿ ಕೊಟ್ಟರೂ ಕಾಂಗ್ರೆಸ್ ಆವತ್ತು ತಮ್ಮದೇ ಪಕ್ಷದ ಶಾಸಕನ ಬೆನ್ನಿಗೆ ನಿಂತಿರಲಿಲ್ಲ. ಈಗಲೂ ಆ ಮಾಜಿ ದಲಿತ ಶಾಸಕನ ಬೆಂಬಲಕ್ಕೆ ನಿಲ್ಲುತ್ತಿಲ್ಲ. ಇವರಿಗೆ ದಲಿತರ ಮೇಲೆ ಗೌರವ ಇಲ್ಲ ಎಂದು ಹೇಳುವ ಸಾಧ್ಯತೆ ಇದೆ.
ಸಿದ್ದು ಹಿಂದಿನ ಬಾರಿ ಏನು ಮಾಡಿದ್ದರು!
ಇನ್ನು ಗೃಹಸಚಿವರಾಗಿರುವ ಪರಮೇಶ್ವರ್ ದಲಿತರು. ತಮ್ಮದೇ ಪಾರ್ಟಿಯಲ್ಲಿದ್ದ ದಲಿತ ಶಾಸಕನ ಮನೆಗೆ ಆ ಪರಿ ಬೆಂಕಿ ಕೊಟ್ಟವರನ್ನು ಹಾಗೆ ಬಿಟ್ಟರೆ ದಲಿತರು ಪರಮೇಶ್ವರ್ ಅವರನ್ನು ಕ್ಷಮಿಸುತ್ತಾರಾ? ತನ್ವೀರ್ ಆದರೆ ಹೋಗಲಿ ಬಿಡಿ, ಅವರಿಗೆ ತಮ್ಮ ಮುಸ್ಲಿಂ ಸಮುದಾಯದವರನ್ನು ಖುಷಿಗೊಳಿಸುವ ಅನಿವಾರ್ಯತೆ ಇದೆ. ಅವರು ಕಳೆದ ಬಾರಿ ಮುಸ್ಲಿಮರನ್ನು ಸರಿಯಾಗಿ ಗಮನಿಸಲಿಲ್ಲ, ಕ್ಯಾರ್ ಲೆಸ್ ಗುಣ ಹೊಂದಿದ್ದರು ಎನ್ನುವ ಕಾರಣಕ್ಕೆ ಅವರಿಗೆ ಮತಾಂಧರು ಚೂರಿ ಹಾಕಿದ್ದರು. ಆದ್ದರಿಂದ ಈ ಬಾರಿ ತನ್ವೀರ್ ನಿರೀಕ್ಷೆಗಿಂತ ಹೆಚ್ಚೇ ಮತ್ತು ಬಹಳ ಬೇಗ ಮುಸ್ಲಿಮರ ಮೇಲೆ ಪ್ರೀತಿ ತೋರಿಸುತ್ತಿದ್ದಾರೆ. ಆದರೆ ಮುಸ್ಲಿಮರು ಬೆಂಕಿ ಹಚ್ಚಿದ್ದು ದಲಿತ ಶಾಸಕನಾಗಿದ್ದವರ ಮನೆಗೆ. ಆದರೆ ಕಾಂಗ್ರೆಸ್ ತನ್ನ ಸ್ವಭಾವದಂತೆ ಆ ಪ್ರಕರಣದಲ್ಲಿರುವ ಮುಸ್ಲಿಮರನ್ನು ಬಿಡುಗಡೆ ಮಾಡಲೂ ಬಹುದು. ಸಿದ್ದು ಹಿಂದಿನ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಪಿಎಫ್ ಐ ಗೂಂಡಾಗಳ ಮೇಲಿದ್ದ ಪ್ರಕರಣವನ್ನು ಹಿಂದಕ್ಕೆ ಪಡೆದುಕೊಂಡಿದ್ದರು. ಅದರ ನಂತರ ರಾಜ್ಯದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗಿತ್ತು. ಅಂತಹ ಇತಿಹಾಸ ಮತ್ತೆ ಮರುಕಳಿಸಿದರೂ ಆಶ್ಚರ್ಯ ಇಲ್ಲ. ಯಾಕೆಂದರೆ ಕಾಂಗ್ರೆಸ್ ಇರುವುದೇ ಹಾಗೆ. ಅವರು ಹೇಳಿದ ಹಾಗೆ ಮುಸ್ಲಿಮರ ಪರ ಇರುತ್ತಾರೆ. ಆದರೆ ಬಿಜೆಪಿ ಎದೆ ತಟ್ಟಿ ಹಿಂದೂಪರ ಎನ್ನುತ್ತದೆ. ಆದರೆ ಹಿಂದೂಗಳಿಗೆ ಕಷ್ಟ ಬಂದಾಗ??
Leave A Reply