ಲೋಕಸಭಾ ಟಿಕೆಟಿಗೆ ಪ್ರಬಲ ಅಕಾಂಕ್ಷಿ ಎಂದ ಪ್ರಮೋದ್!
ಕಳೆದ ವಿಧಾನಸಭಾ ಚುನಾವಣೆಯ ಮೊದಲು ಕಾಂಗ್ರೆಸ್ಸಿನಿಂದ ಭಾರತೀಯ ಜನತಾ ಪಾರ್ಟಿಗೆ ಸೇರ್ಪಡೆಗೊಂಡಿದ್ದ ಕಾಂಗ್ರೆಸ್ಸಿನ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ತಾವು ಲೋಕಸಭಾ ಟಿಕೆಟ್ ಆಕಾಂಕ್ಷಿ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ತಮಗೆ ಟಿಕೆಟ್ ಸಿಗಬಹುದು ಎನ್ನುವ ವಿಶ್ವಾಸ ಇದೆ ಎಂದು ಕೂಡ ಸೇರಿಸಿದ್ದಾರೆ. ಅದರೊಂದಿಗೆ ಉಡುಪಿ – ಚಿಕ್ಕಮಗಳೂರು ಕ್ಷೇತ್ರದಿಂದ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ಖಚಿತವಾಗಿಲ್ಲ ಎಂದು ಕೂಡ ತಿಳಿಸಿದ್ದಾರೆ. ಈ ಮೂಲಕ ಬಿಜೆಪಿಯಲ್ಲಿ ಬಹಿರಂಗವಾಗಿ ತಾನು ಆಕಾಂಕ್ಷಿ ಹೇಳುವವರ ಚಾಳಿ ಆರಂಭವಾಗಿದೆ.
ಪ್ರಮೋದ್ ಮಧ್ವರಾಜ್ ಅವರು ಬಿಜೆಪಿಗೆ ಸೇರ್ಪಡೆಗೊಂಡಾಗ ಅವರು ಉಡುಪಿ ವಿಧಾನಸಭಾ ಕ್ಷೇತ್ರದ ಅಭ್ಯರ್ತಿ ಆಗುತ್ತಾರೆ ಎನ್ನುವ ಊಹಾಪೋಹ ಹಬ್ಬಿತ್ತು. ಆ ಬಗ್ಗೆ ಆಗ ಶಾಸಕರಾಗಿದ್ದ ರಘುಪತಿ ಭಟ್ ಅವರನ್ನು ಮಾಧ್ಯಮದವರು ಕೇಳಿದಾಗ ತಮಗೆ ಆ ಬಗ್ಗೆ ಯಾವುದೇ ಹೆದರಿಕೆ ಇಲ್ಲ. ತಾವು ಪಕ್ಷದಲ್ಲಿ ಹಿಂದಿಗಿಂತ ಹೆಚ್ಚು ಬಲಿಷ್ಟರಾಗಿದ್ದೇನೆ ಎಂದು ಹೇಳಿದ್ದರು. ಟಿಕೆಟ್ ಘೋಷಣೆಯಾಗುವ ತನಕ ರಘುಪತಿ ಭಟ್ ಅವರಿಗೆ ತಮ್ಮ ಶಾಲಾ ಸಹಪಾಠಿ ಪ್ರಮೋದ್ ಮಧ್ವರಾಜ್ ಬಗ್ಗೆ ಸಣ್ಣ ಆತಂಕ ಇತ್ತಾದರೂ ಯಶಪಾಲ್ ಸುವರ್ಣ ಅವರ ಬಗ್ಗೆ ಯಾವುದೇ ಅನುಮಾನಗಳಿರಲಿಲ್ಲ. ಆದರೆ ಚುನಾವಣೆಗೆ ಕೆಲವೇ ದಿನಗಳಿರುವಾಗ ಯಾವಾಗ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಚುನಾವಣಾ ರಾಜಕೀಯದಿಂದ ಹಿಂದೆ ಸರಿದರೋ ಉಡುಪಿ ರಾಜಕೀಯ ಕಣವೇ ಬದಲಾಗಿ ಹೋಯಿತು. ಅದರೊಂದಿಗೆ ಕಾಂಗ್ರೆಸ್ಸಿನಿಂದ ಮೊಗವೀರ ಸಮುದಾಯದ ವ್ಯಕ್ತಿಯನ್ನು ಅಭ್ಯರ್ಥಿಯಾಗಿ ಘೋಷಿಸಿದ್ದ ಕಾರಣ ಬಿಜೆಪಿಯಿಂದ ಕೂಡ ಪ್ರಬಲ ಮೊಗವೀರ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಚಿಂತನೆ ನಡೆಯಿತು. ಅದರೊಂದಿಗೆ ಕಾಪು ಕ್ಷೇತ್ರಕ್ಕೆ ಗುರ್ಮೆ ಸುರೇಶ್ ಶೆಟ್ಟಿಯವರಿಗೆ ಟಿಕೆಟ್ ಕೊಟ್ಟು ಬ್ರಾಹ್ಮಣ ಅಭ್ಯರ್ಥಿಗೆ ಕುಂದಾಪುರದಿಂದ ಟಿಕೆಟ್ ಕೊಡುವ ಚಿಂತನೆ ಜಾರಿಗೆ ಬಂದಿತ್ತು. ಒಟ್ಟಿನಲ್ಲಿ ಇಡೀ ಜಿಲ್ಲೆಯಲ್ಲಿ ಎಲ್ಲಿಯಾದರೂ ಒಂದು ಕ್ಷೇತ್ರದಿಂದಲಾದರೂ ಟಿಕೆಟ್ ದೊರಕಬಹುದು ಎಂಬ ಪ್ರಮೋದ್ ನಿರೀಕ್ಷೆ ಹುಸಿಯಾಗಿತ್ತು.
ಒಂದು ವೇಳೆ ಇವತ್ತಿಗೂ ಕಾಂಗ್ರೆಸ್ಸಿನಲ್ಲಿ ಇದ್ದಿದ್ದರೆ ಕಡೆಯ ಪಕ್ಷ ಯಾವುದಾದರೂ ನಿಗಮ, ಮಂಡಳಿಯಾದರೂ ಸಿಗುತ್ತಿತ್ತು. ಈಗ ಅದು ಕೂಡ ಇಲ್ಲ ಎಂದು ಪ್ರಮೋದ್ ಅವರಿಗೆ ಅನಿಸುತ್ತಿರಬಹುದು. ಅದಕ್ಕಾಗಿ ಅವರು ತಮ್ಮ ಅಸ್ತಿತ್ವವನ್ನು ಸಾಬೀತುಪಡಿಸಲು ಹೊಸ ವರಸೆ ತೋರಿಸಿದ್ದಾರೆ. ತಾವು ಲೋಕಸಭಾ ಟಿಕೆಟ್ ಆಕಾಂಕ್ಷಿ ಎಂದು ಸಾರಿದ್ದಾರೆ. ಅವರು ಉಡುಪಿ ಜಿಲ್ಲೆಯವರಾಗಿರುವುದರಿಂದ ಅದೇ ಜಿಲ್ಲೆಯಿಂದ ಸ್ಪರ್ಧಿಸಬೇಕಾದ ಅನಿವಾರ್ಯತೆ ಇದೆ. ಆದರೆ ಈಗಿರುವ ಹಾಲಿ ಸಂಸದೆ ಶೋಭಾ ಕರಂದ್ಲಾಜೆಯವರು ಅದಕ್ಕೆ ಸುಲಭವಾಗಿ ಅವಕಾಶ ಮಾಡಿಕೊಡುತ್ತಾರಾ ಎನ್ನುವ ಮಾತುಗಳು ರಾಜಕೀಯ ವಲಯದಿಂದ ಕೇಳಿಬರುತ್ತಿವೆ. ಯಾಕೆಂದರೆ ಅವರು ಕೇಂದ್ರದಲ್ಲಿ ಕೃಷಿ ರಾಜ್ಯ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಯಡಿಯೂರಪ್ಪ ತಂಡದ ಆಸ್ಥಾನ ಸಚಿವೆ. ಅವರಿಗೆ ಟಿಕೆಟ್ ತಪ್ಪಲು ಬಿಎಸ್ ವೈ ಬಿಡುತ್ತಾರಾ ಎನ್ನುವುದು ಪ್ರಶ್ನೆ. ಇಷ್ಟೆಲ್ಲ ಇರುವಾಗ ಧೈರ್ಯದಿಂದ ಪ್ರಮೋದ್ ಹೇಳಿರುವುದು ಹಲವರ ಹುಬ್ಬೇರಿಸುವಂತೆ ಮಾಡಿದೆ.
Leave A Reply